ಒಂದೇ ಗ್ರಾಮ ಪಂಚಾಯಿತಿಯಲ್ಲಿ ಇಬ್ಬರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದು, ಹೊಂದಾಣಿಕೆಯ ಕೊರತೆಯಿಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಳ್ಳಿಗಳಲ್ಲಿ ಅಭಿವೃದ್ಧಿಗೆ ಹಿನ್ನಡೆಯಾಗಿ ಸಾರ್ವಜನಿಕರಿಗೆ ಯಾರು ಅಧಿಕೃತ ಅಧಿಕಾರಿ ಎನ್ನುವ ಗೊಂದಲ ಸೃಷ್ಟಿಯಾಗಿದ್ದು ಇದರ ವಿರುದ್ಧ ಕ್ರಮ ಕೈಗೊಂಡು ಸೂಕ್ತ ಅಧಿಕಾರಿಯನ್ನು ನೇಮಿಸುವಂತೆ ಒತ್ತಾಯಿಸಿ, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಮನ್ನೇಕೋಟೆ ಗ್ರಾಮ ಪಂಚಾಯಿತಿಯ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಕಾರ್ಯಕರ್ತರು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಮುಖಂಡರು “ಮನ್ನೇಕೋಟೆ ಗ್ರಾಮ ಪಂಚಾಯಿತಿಯಲ್ಲಿ ಒಂದೇ ಹುದ್ದೆಗೆ ಇಬ್ಬರೂ ಪಂಚಾಯತ್ ಅಧಿಕಾರಿಗಳನ್ನು ನೇಮಿಸಿ ಗೊಂದಲ ಉಂಟಾಗಿದೆ. ತಾಲೂಕಿನಲ್ಲಿ ಬೇರೆ ಎರಡು ಮೂರು ಪಂಚಾಯಿತಿಗಳಿಗೆ ಒಬ್ಬರು ಪಿಡಿಒಗಳನ್ನು ನೇಮಿಸಿ ಪ್ರಭಾರ ವಹಿಸಿದ್ದು, ಅವರುಗಳು ಪಂಚಾಯತಿಗಳಿಗೆ ವಾರಕ್ಕೊಮ್ಮೆ ಬಂದು ಹೋಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ” ಎಂದು ಆರೋಪಿಸಿದರು.
ಬೇಡ ರೆಡ್ಡಿಹಳ್ಳಿ, ದೇವರೆಡ್ಡಿಹಳ್ಳಿ ಗಳಂತಹ ಅನೇಕ ಗ್ರಾಮ ಪಂಚಾಯಿತಿಗಳಲ್ಲಿ ಪ್ರಭಾರಿಗಳನ್ನು ನೇಮಿಸಿದ್ದು ಮನ್ನೇಕೋಟೆಯಲ್ಲಿ ಮಾತ್ರ ಒಂದೇ ಹುದ್ದೆಗೆ ಇಬ್ಬರನ್ನು ನೇಮಿಸಿದ್ದು ಇದನ್ನು ಸೂಕ್ತವಾಗಿ ಸರಿಪಡಿಸಬೇಕು” ಎಂದು ಒತ್ತಾಯಿಸಿದರು.

“ಮನ್ನೇಕೋಟೆ ಗ್ರಾಮ ಪಂಚಾಯಿತಿಯ ಖಾಯಂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಜೆಯಿಂದ ಮರಳಿದ್ದು 25 ದಿನಗಳಾದರೂ ಹಂಗಾಮಿ, ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿ ಅಧಿಕಾರ ಹಸ್ತಾಂತರಿಸದೆ ಸಮಸ್ಯೆ ಆಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಇವರಿಬ್ಬರ ಗೊಂದಲದಿಂದಾಗಿ ನರೇಗಾ ಯೋಜನೆ, ಇ-ಸ್ವತ್ತು, ಶೌಚಾಲಯ ನಿರ್ಮಾಣ, ಕಾಮಗಾರಿ ಹಣ ಬಿಡುಗಡೆ, ಸ್ವಚ್ಛತೆ, ಬೀದಿ ದೀಪ, ಕುಡಿಯುವ ನೀರು ಸೇರಿದಂತೆ ಪಂಚಾಯಿತಿಯ ಅನೇಕ ನಾಗರಿಕರ ಸಮಸ್ಯೆಗಳಿಗೆ ಪರಿಹಾರಕ್ಕೆ ತೊಂದರೆಯಾಗಿದ್ದು, ಜಿಲ್ಲೆಯ ಹಿರಿಯ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಂಡು ಒಬ್ಬರು ಖಾಯಂ ಅಧಿಕಾರಿಯನ್ನು ನೇಮಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಕಳಪೆ ಬೀಜ-ನಕಲಿ ಗೊಬ್ಬರದ ಹಾವಳಿ; ರೈತರ ನೆರವಿಗೆ ನಿಲ್ಲದ ಇಲಾಖೆ
ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಬೇಡ ರೆಡ್ಡಿಹಳ್ಳಿ ಬಸವ ರೆಡ್ಡಿ, ಜಿಲ್ಲಾಧ್ಯಕ್ಷರಾದ ಮರ್ಲಹಳ್ಳಿ ರವಿಕುಮಾರ್, ಮುಖಂಡರಾದ ಪ್ರಶಾಂತ ರೆಡ್ಡಿ, ಮಲ್ಲಸಮುದ್ರ ಗಂಗಾಧರ್, ಚಂದ್ರಶೇಖರ ನಾಯಕ, ಮೀಟೇ ನಾಯ್ಕ, ಓಬನಾಯ್ಕ, ರಾಮನಾಯ್ಕ, ಕಪಿಲ್ ಕೆಟಿ ತಿಪ್ಪೇಸ್ವಾಮಿ ಸೇರಿದಂತೆ ಹಲವು ರೈತರು ಗ್ರಾಮಸ್ಥರು ಭಾಗವಹಿಸಿದ್ದರು.