ಭಾರತದ ಒಟ್ಟು ಸಂಪತ್ತಿನಲ್ಲಿ 60% ಮತ್ತು ದೇಶದ ಒಟ್ಟು ಹಣಕಾಸು ಆಸ್ತಿಗಳಲ್ಲಿ 70% ಸಂಪತ್ತನ್ನು ಭಾರತದ ಕೇವಲ 1% ಕುಟುಂಬಗಳು ನಿಯಂತ್ರಿಸುತ್ತಿವೆ. ಭಾರತದ ಬಹುತೇಕ ಆರ್ಥಿಕ ಆಸ್ತಿಯು 1% ಕುಟುಂಬಗಳ ಬಳಿ ಇದೆ ಎಂದು ಬರ್ನ್‌ಸ್ಟೈನ್ ವರದಿ ಹೇಳಿದೆ.
ಖಾಸಗಿ ಹಣಕಾಸು ನಿರ್ವಹಣೆ ಸಂಸ್ಥೆಯಾಗಿರುವ ‘ಬರ್ನ್‌ಸ್ಟೈನ್’ ತನ್ನ ಹೊಸ ವರದಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಅದರಲ್ಲಿ; ಭಾರತದ ಅತ್ಯಂತ ಶ್ರೀಮಂತ ಕುಟುಂಬಗಳನ್ನು ‘ಉಬರ್ ರಿಚ್’ (ಕುಬೇರರು) ಎಂದು ಕರೆದಿದೆ. ಈ 1% ಇರುವ ಕುಬೇರರು ಭಾರತದ ಒಟ್ಟು ಸಂಪತ್ತಿನಲ್ಲಿ 60% ಪಾಲು ಹೊಂದಿದ್ದಾರೆ. ಇವರ ಬಹುತೇಕ ಹೂಡಿಕೆಗಳು ರಿಯಲ್ ಎಸ್ಟೇಟ್ ಮತ್ತು ಚಿನ್ನದಲ್ಲಿವೆ ಎಂದು ವಿವರಿಸಿದೆ.
ಭಾರತದ ಒಟ್ಟು ಸಂಪತ್ತು 19.6 ಲಕ್ಷ ಕೋಟಿ ಡಾಲರ್ ಎಂದು ಅಂದಾಜಿಸಲಾಗಿದೆ. ಇದರಲ್ಲಿ, 59% (11.6 ಲಕ್ಷ ಕೋಟಿ ಡಾಲರ್) ಸಂಪತ್ತು ಕೇವಲ 1% ಶ್ರೀಮಂತರ ಬಳಿ ಕೇಂದ್ರೀಕರಣಗೊಂಡಿದೆ ಎಂದು ವರದಿ ಹೇಳಿದೆ.
ಈ ಕುಬೇರರು ತಮ್ಮ ಒಟ್ಟು ಆಸ್ತಿಗಳ ಪೈಕಿ ಸುಮಾರು 55%ಗೂ (8.9 ಲಕ್ಷ ಕೋಟಿ ಡಾಲರ್) ಸಂಪತ್ತನ್ನು ರಿಯಲ್ ಎಸ್ಟೇಟ್, ಚಿನ್ನ ಹಾಗೂ ಪ್ರವರ್ತಕರ ಶೇರು ಬಂಡವಾಳ ಅಥವಾ ನಗದು ಹಿಡುವಳಿಗಳಂತಹ ಬಂಡವಾಳಗಳಲ್ಲಿವೆ ಹೂಡಿಕೆ ಮಾಡಿವೆ ಎಂದು ವರದಿ ತಿಳಿಸಿದೆ.
ಈ ಲೇಖನ ಓದಿದ್ದೀರಾ?: ಭಯೋತ್ಪಾದನಾ ಆರೋಪಿಯನ್ನು ಹಿಂದುತ್ವದ ನಾಯಕಿ ಮಾಡಿದ ಬಿಜೆಪಿ
ಶ್ರೀಮಂತ ಕುಟುಂಬಗಳು ಹೂಡಿಕೆ ಮಾಡಿರುವ ಒಟ್ಟು ಬಂಡವಾಳ 8.9 ಲಕ್ಷ ಕೋಟಿ ಡಾಲರ್‌ಗಳ ಪೈಕಿ, ಕೇವಲ 2.7 ಲಕ್ಷ ಕೋಟಿ ಡಾಲರ್‌ಗಳು ಮಾತ್ರವೇ ಮ್ಯೂಚ್ಯುವಲ್ ಫಂಡ್‌ಗಳು, ಶೇರುಗಳು, ವಿಮೆ, ಬ್ಯಾಂಕ್ ಹಾಗೂ ಸರ್ಕಾರಿ ಠೇವಣಿ ರೀತಿಯ ನಿರ್ವಹಿಸಬಹುದಾದ ಅಥವಾ ಮರುಹಂಚಿಕೆ ಮಾಡಬಹುದಾದ ಹಣಕಾಸು ಸ್ವತ್ತುಗಳಲ್ಲಿ ಹೂಡಿಕೆಯಾಗಿದೆ ಎಂಬುದನ್ನು ವರದಿ ಬಹಿರಂಗಪಡಿಸಿದೆ.
ಸಂಪತ್ತಿನ ಕ್ರೋಢೀಕರಣದಿಂದಾಗಿ ಅಸಮಾನತೆ ಹೆಚ್ಚಾಗಿದ್ದು, ಭಾರತದಲ್ಲಿನ ವ್ಯಾಪಕ ರಚನಾ ಪ್ರವೃತ್ತಿಯನ್ನು ಈ ವರದಿಯು ಎತ್ತಿ ತೋರಿಸಿದೆ. ದೇಶದ 99% ಕುಟುಂಬಗಳು ಆದಾಯ ಮತ್ತು ಆಸ್ತಿಯಲ್ಲಿ ಸಣ್ಣ ಪಾಲನ್ನು ಮಾತ್ರವೇ ಹೊಂದಿವೆ ಎಂದು ಈ ವರದಿಯು ಒತ್ತಿ ಹೇಳಿದೆ.