ಬಣಜಿಗ ಸಮಾಜದ ಮಕ್ಕಳಿಗೆ ಶಿಕ್ಷಣ ಕ್ಷೇತ್ರದಲ್ಲಿ ಈಗಾಗಲೇ ನೀಡಿರುವ ಪ್ರವರ್ಗ 2ಎ ಮೀಸಲಾತಿಯನ್ನು ಉದ್ಯೋಗಾವಕಾಶಗಳಿಗೂ ವಿಸ್ತರಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ ಶೆಟ್ಟರ ತಿಳಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಚೆನ್ನಮ್ಮನ ಕಿತ್ತೂರಿನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, “ಬಣಜಿಗ ಸಮಾಜದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸರ್ಕಾರ ಈಗಾಗಲೇ 2ಎ ಮೀಸಲಾತಿ ನೀಡಿದೆ. ಈ ಮೀಸಲಾತಿ ಕೇವಲ ಶಿಕ್ಷಣಕ್ಕೆ ಮಾತ್ರ ಸೀಮಿತವಾಗದೇ, ಸರ್ಕಾರಿ ಉದ್ಯೋಗಗಳ ನೇಮಕಾತಿಗಳಲ್ಲಿಯೂ ಅನ್ವಯವಾಗುವಂತೆ ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ಕೇಂದ್ರ ಸರ್ಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಿದೆ” ಎಂದು ಭರವಸೆ ನೀಡಿದರು.

2012ರಲ್ಲೇ ಕಿತ್ತೂರು ತಾಲ್ಲೂಕಿನ ಘೋಷಣೆ
ತಮ್ಮ ಮುಖ್ಯಮಂತ್ರಿ ಅಧಿಕಾರದ ಅವಧಿಯ ಸಾಧನೆಗಳನ್ನು ವಿವರಿಸಿದ ಶೆಟ್ಟರ್, “ನಾನು 2012ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಹೊಸ ಚನ್ನಮ್ಮನ ಕಿತ್ತೂರು ತಾಲ್ಲೂಕು ಘೋಷಿಸಿ ಅಭಿವೃದ್ಧಿಗೆ ದಿಕ್ಕು ನೀಡಿದ್ದೆ. ಈಗ ಕಿತ್ತೂರಿಗೆ ರೈಲು ಮಾರ್ಗ ಮೂಲಕ ಸಂಪರ್ಕ ಕಲ್ಪಿಸುವ ಕಾರ್ಯವೂ ಚುರುಕುಗೊಂಡಿದೆ. ಈ ಸಂಬಂಧ ಅನೇಕ ಇಲಾಖೆಗಳೊಂದಿಗೆ ಸಭೆ ನಡೆಸಲಾಗಿದೆ” ಎಂದು ಹೇಳಿದರು.

ಬಣಜಿಗರ ಕೊಡುಗೆ ಸ್ಮರಣೀಯ: ಮಡಿವಾಳ ಸ್ವಾಮೀಜಿ
ಕಾರ್ಯಕ್ರಮದಲ್ಲಿ ಮಾತನಾಡಿದ ರಾಜಗುರು ಸಂಸ್ಥಾನ ಕಲ್ಮಠದ ಪೀಠಾಧಿಪತಿ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, “ಕಿತ್ತೂರು ಸಂಸ್ಥಾನದ ಮೂಲ ಸ್ಥಾಪಕರಾಗಿದ್ದ ಹಿರೇಮಲ್ಲ ಮತ್ತು ಚಿಕ್ಕಮಲ್ಲಶೆಟ್ಟಿ ಬಣಜಿಗ ಸಮುದಾಯದವರು. ಅವರ ಕೊಡುಗೆ ಇತಿಹಾಸದಲ್ಲಿ ಸ್ಮರಣೀಯವಾಗಿದೆ. ಇಂತಹ ಮಹಾನ್ ಸಮುದಾಯದ ಪ್ರಗತಿಗೆ ಸರ್ಕಾರ ನಿಜವಾದ ನ್ಯಾಯ ಮಾಡಬೇಕು” ಎಂದು ಹೇಳಿದರು.