“ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಹಕ್ಕು ಅಭಿವೃದ್ಧಿ ಇಲಾಖೆಯ ಮುತುವರ್ಜಿಯಿಂದ, ರಾಜ್ಯದಲ್ಲಿ ಸಾಮಾಜಿಕ ದೌರ್ಜನ್ಯದ ದೇವದಾಸಿ ಪದ್ಧತಿ ನಿರ್ಮೂಲನೆ ಮಾಡುವ ಮತ್ತು ದೇವದಾಸಿ ಮಹಿಳೆಯರ ಮಕ್ಕಳ ತಂದೆಯನ್ನು ಗುರುತಿಸುವ ಹಕ್ಕು ಸೇರಿದಂತೆ ಸಮಗ್ರ ಪುನರ್ವಸತಿ ಕಲ್ಪಿಸುವ ಕರ್ನಾಟಕ ದೇವದಾಸಿ ಪದ್ಧತಿ (ತಡೆಗಟ್ಟುವಿಕೆ, ನಿಷೇಧ, ಪರಿಹಾರ ಮತ್ತು ಪುನರ್ವಸತಿ) ಮಸೂದೆ – 2025 ಸ್ವಾಗತ” ಎಂದು ವಿಮೋಚನಾ ಸಂಘ ಗೌರವಧ್ಯಕ್ಷ ಬಾಲು ರಾಠೋಡ ಹೇಳಿದರು.
ಗದಗ ಜಿಲ್ಲೆಯಲ್ಲಿ ಗಜೇಂದ್ರಗಡ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಹಾಗು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ಮಕ್ಕಳ ಹೋರಾಟ ಸಮಿತಿಗಳ ಗದಗ ಜಿಲ್ಲಾ ಸಮಿತಿ ಗೌರವಧ್ಯಕ್ಷ ಬಾಲು ರಾಠೋಡ ಪತ್ರಿಕಾ ಹೇಳಿಕೆ ನೀಡಿದರು
“ಸದರಿ ಕಾಯ್ದೆಯನ್ನು ರೂಪಿಸ ಬೇಕೆಂಬುದು ನಮ್ಮೆರಡು ಸಂಘಗಳ ಬಹು ವರ್ಷಗಳ ಹಕ್ಕೊತ್ತಾಯ ಮತ್ತು ಹೋರಾಟವಾಗಿತ್ತು. 2007 ರಿಂದಲೆ ಈ ಹಕ್ಕೊತ್ತಾಯವನ್ನು ಸರಕಾರದ ಮುಂದೆ ಮಂಡಿಸುತ್ತಾ ಬರಲಾಗಿದೆ. 15 ವರ್ಷಗಳ ಕಾಲ ವಿಳಂಬವಾಗಿಯಾದರೂ ಈ ಮಸೂದೆ ಈಗ ಹೊರಬರುತ್ತಿರುವುದು ಸಂತಸದ ವಿಷಯವಾಗಿದೆ” ಎಂದು ಎರಡು ಸಂಘಗಳು ಹರ್ಷ ವ್ಯಕ್ತಪಡಿಸಿವೆ ಎಂದರು.
“ಸಾಮಾಜಿಕ ದೌರ್ಜನ್ಯ ಹಾಗು ತಾರತಮ್ಯದ ಭಾಗವಾಗಿ ಬಲವಂತವಾಗಿ ಜಾರಿಯಲ್ಲಿರುವ ಈ ಪದ್ಧತಿಯನ್ನು ತಡೆಯಲು ಹಾಲಿ ಕಾಯ್ದೆಗಳು ಹಾಗು ಪುನರ್ವಸತಿ ಯೋಜನೆಗಳು ಅಸಮರ್ಪಕವಾಗಿವೆ. ಪರಿಶಿಷ್ಢ ಜಾತಿ ಹಾಗು ಪಂಗಡದ ಕುಟುಂಬಗಳ ಬಾಲಕಿಯರು ಮತ್ತು ದೇವದಾಸಿ ಮಹಿಳೆಯರ ಮಕ್ಕಳು ಈ ದೌರ್ಜನ್ಯಕ್ಕೆ ಬಲಿಯಾಗುವುದನ್ನು ತಡೆಯುವಲ್ಲಿ ಇವು ಪರಿಣಾಮಕಾರಿಯಾಗಿಲ್ಲ ಎಂಬುದನ್ನು ನಮ್ಮ ಸಂಘಗಳು ನಿರಂತರವಾಗಿ ರಾಜ್ಯ ಸರಕಾರದ ಗಮನಕ್ಕೆ ತರುತ್ತಾ ಬಂದಿವೆ” ಎಂದು ತಿಳಿಸಿದರು.
“ನಮ್ಮ ಹಕ್ಕೊತ್ತಾಯ ಹಾಗು ಬಲವಾದ ಆಂದೋಲನದ ನಂತರವೆ, 2007 ರಲ್ಲಿ ಮತ್ತೊಂದು ಸಮೀಕ್ಷೆ ನಡೆಸಿ 46,650 ಮಹಿಳೆಯರನ್ನು ಗುರುತಿಸಿತಲ್ಲದೆ ಅದರಲ್ಲಿ ಕೇವಲ 24,284 ಜನರಿಗೆ ಮಾತ್ರ ಅಸಮರ್ಪಕ ಪುನರ್ವಸತಿ ಕಲ್ಪಿಸಿದೆ. ಗಣತಿಯಾಚೆ ಇರುವ ಸುಮಾರು 20,000 ಕ್ಕೂ ಅಧಿಕ ಮಹಿಳೆಯರು ಪರಿಗಣನೆಯಲ್ಲಿಲ್ಲ. ಗಣತಿಯಲ್ಲಿ ಉಳಿದ 22,376 ಮಹಿಳೆಯರಿಗೆ ಪುನರ್ವಸತಿ ಒದಗಿಸಲಿಲ್ಲ ! ಹಾಗಿದ್ದರೆ ಇವರೆಲ್ಲ
ಹೇಗೆ ಬದುಕ ಬೇಕು? ನಾವು ಪ್ರತಿಭಟನೆ ನಡೆಸಿ ಒತ್ತಾಯಿಸದ ನಂತರವೇ ಮಕ್ಕಳ ಮದುವೆಗೆ ಪ್ರೋತ್ಸಾಹ ಧನವನ್ನು ಕಳೆದ 4 ವರ್ಷಗಳಿಂದ ನೀಡಲಾಗುತ್ತಿದೆ” ಎಂದರು.
ಇದುವರೆಗಿನ ಕಾಯ್ದೆಗಳಲ್ಲಿ ಬಲವಂತದ ದೇವದಾಸಿ ಪದ್ಧತಿಯ ಫಲಾನುಭವಿಗಳನ್ನು ಬಂದಿಸದೆ ಕೇವಲ ದೌರ್ಜನ್ಯಕ್ಕೆ ತುತ್ತಾದ ಕುಟುಂಬದವರನ್ನೆ ಬಂದಿಸಲಾಗುತ್ತಿತ್ತು. ಅಷ್ಟೇ ಅಲ್ಲದೇ ಈ ಫಲಾನುಭವಿಗೆ ಯಾವುದೇ ಹೊಣೆಗಾರಿಕೆ ಇರಲಿಲ್ಲ. ಈಗಲೂ ರಾಜ್ಯ ಸರಕಾರ ಸಾಮಾಜಿಕ ದೌರ್ಜನ್ಯಕ್ಕೆ ತುತ್ತಾದ ಎಲ್ಲ ಪರಿಶಿಷ್ಟ ಜಾತಿ ಹಾಗು ಪಂಗಡಗಳ ಎಲ್ಲ ಸದಸ್ಯರ ಗಣತಿ ನಡೆಸಿ ಅವರೆಲ್ಲರ ಸ್ವಾವಲಂಬಿ ಬದುಕಿಗೆ ಪರಿಣಾಮಕಾರಿಯಾದ ಪುನರ್ವಸತಿಯನ್ನು ಕೈಗೊಳ್ಳುವುದು ದೌರ್ಜನ್ಯದ ದೇವದಾಸಿ ಪದ್ಧತಿ ತಡೆಯಲು ಹಾಗು ಮಸಣ ಕಾರ್ಮಿಕರ ಬಿಟ್ಟಿ ಚಾಕರಿತಡೆಯಲು, ಮತ್ತು ಒಳಚರಂಡಿ, ಮಲಗುಂಡಿ ಶುಚಿ ಕೆಲಸಗಾರರನ್ನು ರಕ್ಷಿಸಲು ಇರುವ ಏಕೈಕ ದಾರಿಯಾಗಿದೆ” ಎಂದು ಹೇಳಿದರು.
“ಈ ಕೂಡಲೆ ಮಸೂದೆಯನ್ನು ಸಾರ್ವಜನಿಕ ಚರ್ಚೆಗೆ ಇಡಬೇಕು ಮತ್ತು ಅಲ್ಲಿನ ಅಭಿಪ್ರಾಯಗಳನ್ನು ಗಮನಿಸಿ, ಮತ್ತಷ್ಠು ವಿಳಂಬವಾಗುವುದನ್ನು ತಪ್ಪಿಸಿ, ಬೇಗನೆ ಕಾಯ್ದೆಯಾಗಿಸಬೇಕು” ಎಂದು ನಮ್ಮೆರಡು ಸಂಘಗಳು ಮನವಿ ಮಾಡುತ್ತವೆ ಎಂದು ಹೇಳಿದರು.