ಅಲ್ಪಸಂಖ್ಯಾತರು ಮತ್ತು ದಲಿತರ ಮೇಲೆ ನಿರಂತರವಾಗಿ ಆಗುತ್ತಿರುವ ದೌರ್ಜನ್ಯಗಳು ಹಾಗೂ ಅವರ ಮೇಲಿನ ಸುಳ್ಳು ಆರೋಪಗಳನ್ನು ಖಂಡಿಸಿ ವಿಜಯಪುರ ನಗರದಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.
ವಿಜಯಪುರ ಜನರ ವೇದಿಕೆ, ಬಿಜಾಪುರ ನಗರ ಸ್ಲಂ ಅಭಿವೃದ್ಧಿ ಸಮಿತಿ ಒಕ್ಕೂಟ, ಬಿಜಾಪುರ ನಗರ ಸ್ಲಂ ಮಹಿಳಾ ಸ್ವ-ಸಹಾಯ ಸಂಘಗಳ ಒಕ್ಕೂಟ, ವಿಜಯಪುರ ನಗರ ಗೃಹ ಕಾರ್ಮಿಕರ ಯೂನಿಯನ್ ಹಾಗೂ ಸಹ ಸಂಘಟನೆಗಳ ಕಾರ್ಯಕರ್ತರು ಡಾ.ಬಾಬಾಸಾಹೇಬ್ ಅಂಬೇಡ್ಕರ್ ವೃತ್ತದಿಂದ ಪ್ರತಿಭಟನೆ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಅಪರ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು.
“ಛತ್ತೀಸ್‌ಗಢದಲ್ಲಿ ಕಳೆದ ತಿಂಗಳು ರೈಲಿನಲ್ಲಿ ಪ್ರಯಾಣಿಸಿದ್ದ ಕ್ರೈಸ್ತ ಸಮುದಾಯದ ಇಬ್ಬರು ಸಿಸ್ಟರ್‌ಗಳನ್ನು ಮತಾಂತರಕ್ಕೆ ಯತ್ನ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದರು. ಎರಡ್ಮೂರು ದಿನ ಜೈಲಿನಲ್ಲಿಟ್ಟು ಅವರಿಗೆ ಕಿರುಕುಳ ನೀಡಲಾಗಿತ್ತು. ಆದರೆ, ಯಾವುದೇ ಪುರಾವೆಗಳು ಇಲ್ಲ ಮತ್ತು ಸುಳ್ಳು ದೂರಿನಡಿ ಬಂಧಿಸಿ ನಂತರ ಬಿಡುಗಡೆ ಮಾಡಿದ್ದಾರೆ. ಹೀಗಾಗಿ ಬಂಧನಕ್ಕೆ ಕುಮ್ಮಕ್ಕು ನೀಡಿದ ಹಾಗೂ ಸುಳ್ಳು ದೂರ ನೀಡಿದ ದುಷ್ಟಶಕ್ತಿಗಳ ಮೇಲೆ ಕಾನೂನಿನ ಕ್ರಮ ಕೈಗೊಳ್ಳಬೇಕು” ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಅರೇಬಿಕ್ ಮದ್ರಸಾಗಳ ಶಿಕ್ಷಕರಿಗೆ ಕನ್ನಡ ಬೋಧನೆ: ಅಭಿಯಾನಕ್ಕೆ ಚಾಲನೆ
“ಇತ್ತೀಚಿನ ದಿನಗಳಲ್ಲಿ ಅಲ್ಪಸಂಖ್ಯಾತರು, ದಲಿತ, ಹಿಂದುಳಿದ ವರ್ಗದವರ ಮೇಲೆ ದೌರ್ಜನ್ಯ ಹಾಗೂ ಪದೇ ಪದೆ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ. ಇವುಗಳನ್ನು ಸಹಿಸಲಾಗುವುದಿಲ್ಲ. ಮುಂದಿನ ದಿನದಲ್ಲಿ ತೀವ್ರ ಹೋರಾಟ ಮಾಡಬೇಕಾಗುತ್ತದೆ” ಎಂದು ಪ್ರತಿಭಟನಾನಿರತರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಸುನೀಲ ಫರ್ನಾಂಡಿಸ್, ಕೇವಿನ್ ಸಿಕ್ವೆರಾ, ನಿರ್ಮಲಾ ಹೊಸಮನಿ, ಅಕ್ರಂ ಮಾಶ್ಯಾಳಕರ, ಸುನೀಲ ಅಂದ್ರಾದೆ, ಪೀಠರ್ ಅಲೆಕ್ಸಾಂಡರ್, ಫರ್ಜಾನಾ ಜಮಾದಾರ, ರಾಜೇಶ್ವರಿ ಮಠಪತಿ ಸೇರಿದಂತೆ ಹಲವರು ಇದ್ದರು.