ಇಂಫಾಲ ಕಣಿವೆಯಲ್ಲಿ ಮೈತೇಯಿಗಳಿಗಾಗಿ ತೆರೆದಿರುವ ನಿರಾಶ್ರಿತ ಶಿಬಿರಗಳಿಗೆ ಹೋಲಿಸಿದರೆ ಕುಕಿಗಳ ನಿರಾಶ್ರಿತ ಶಿಬಿರಗಳು ಅತ್ಯಂತ ನಿಕೃಷ್ಟವಾಗಿವೆ. ಯಾವುದಾದರೂ ಚರ್ಚ್‌ನಲ್ಲಿಯೋ ಹಳೆಯದೊಂದು ಪಾಳುಬಿದ್ದ ಕಟ್ಟಡದಲ್ಲಿಯೋ, ಶಾಲಾ ಕೊಠಡಿಗಳಲ್ಲಿಯೋ ನಿರಾಶ್ರಿತ ಶಿಬಿರಗಳು ನಡೆಯುತ್ತಿವೆ. ಜುಲೇಮನ್ ಎಂಬ ಹಳ್ಳಿಯಲ್ಲಿ ಆರಂಭಿಸಲಾಗಿರುವ ಕುಕಿ ಶಿಬಿರದಲ್ಲಿ ಮೂವರು ಗರ್ಭಿಣಿಯರಿದ್ದಾರೆ.
ಆಕೆಯ ಹೆಸರು ನಗೋಯಿ ರಿಚಾಂಗ್. ಎಂಟು ತಿಂಗಳ ಗರ್ಭಿಣಿ. ಎರಡೂವರೆ ವರ್ಷದ ಗಂಡು ಮಗು ಕೂಡ ಇದೆ. ವಿಶೇಷವೆಂದರೆ ಆಕೆ ಕುಕಿ, ಗಂಡ ಮೈತೇಯಿ. ಶಾಲಾ ದಿನಗಳಲ್ಲಿ ಅರಳಿದ ಪ್ರೀತಿ ಇಬ್ಬರನ್ನೂ ಬಾಳ ಸಂಗಾತಿಗಳಾಗಿ ಬೆಸೆಯಿತು. ಈ ದಂಪತಿ ಈಗ ಮೈತೇಯಿ, ಕುಕಿಗಳ ನಡುವಿನ ಜನಾಂಗೀಯ ಕಾಳಗದಲ್ಲಿ ಅನಿವಾರ್ಯವಾಗಿ ಎರಡು ತೀರಗಳಾಗಿ ಅಗಲಿದ್ದಾರೆ. ಭುಗಿಲೆದ್ದ ಬಿಷ್ಣುಪುರ ಹಿಂಸಾಚಾರ ಈ ದಂಪತಿಯನ್ನು ಪರಸ್ಪರ ದೂರ ಮಾಡಿದೆ.
ಲಮ್ಕಾದ ಜುಲೇಮನ್ ನಿರಾಶ್ರಿತ ಶಿಬಿರದಲ್ಲಿ ಪತ್ನಿ ಇದ್ದರೆ, ಪತಿ ಜೋತಿನ್ ಲೈಶ್ರಾಮ್ ಸಿಂಗ್ ಮೈತೇಯಿ ಇಂಫಾಲ ಕಣಿವೆಯ ನಿರಾಶ್ರಿತ ಶಿಬಿರದ ಪಾಲಾಗಿದ್ದಾರೆ. ಆಧಾರ್ ಕಾರ್ಡಿನ ತಪಾಸಣೆಯಿಂದ ಈಕೆ ಕುಕಿ ಎಂದು ಪತ್ತೆ ಮಾಡಿದ ಮೈತೇಯಿಗಳು ನಗೋಯಿ ಮತ್ತು ಆಕೆಯ ಮಕ್ಕಳನ್ನು ಕುಕಿಗಳ ಶಿಬಿರಕ್ಕೆ ಅಟ್ಟಿದ್ದಾರೆ. ಪರಸ್ಪರ ಫೋನಿನ ಸಂಪರ್ಕ ಕೂಡ ಸಾಧ್ಯವಿಲ್ಲವಾಗಿದೆ. ದುಡಿಯುವ ವರ್ಗದ ಈ ದಂಪತಿ ಮತ್ತೆ ಒಂದಾಗಲು ಕಾತರಿಸಿದ್ದಾರೆ. ಅತ್ಯಂತ ಶೋಚನೀಯ ಶಿಬಿರದಲ್ಲಿ ದಿನಗಳನ್ನು ದೂಡುತ್ತಿದ್ದಾರೆ ನಗೋಯಿ. ಕದನ- ದ್ವೇಷ- ಹಿಂಸೆ- ಸಾವು ನೋವುಗಳು ಆಕೆಯ ಮಾತನ್ನು ಕಸಿದುಕೊಂಡಂತಿದೆ. ಈ ಮಿತಭಾಷಿಯ ಮುಖವನ್ನು ದುಗುಡ ವಿಷಾದದ ಛಾಯೆ ಕವಿದಿದೆ.
ಕುಕಿ ಮತ್ತು ಮೈತೇಯಿ ಸಮುದಾಯಗಳ ನಡುವೆ ವಿವಾಹ ಸಂಬಂಧಗಳು ಸಾಮಾನ್ಯ. ಕುಕಿ ಜೋಷುವಾ ಮತ್ತು ಮೈತೇಯಿ ಮೀನಾ ಅವರೂ ಇಂತಹುದೇ ಅಂತರಧರ್ಮೀಯ ಜೋಡಿ. ಪತ್ನಿ ಮೀನಾ ಮತ್ತು ಗುಂಡೇಟಿನಿಂದ ಗಾಯಗೊಂಡಿದ್ದ ಮಗ ಚಿಕಿತ್ಸೆಗೆಂದು ಪಯಣಿಸುತ್ತಿದ್ದ ಆಂಬುಲೆನ್ಸ್ ನ್ನು ನಿಲ್ಲಿಸಿ ಬೆಂಕಿ ಹಚ್ಚಿದ್ದಾರೆ ದುಷ್ಕರ್ಮಿಗಳು. ಪತ್ನಿ ಮತ್ತು ಮಗನನ್ನು ಕಳೆದುಕೊಂಡಿರುವ ದುಃಖತಪ್ತ ಜೋಷುವಾ ಶಾಂತಿಗಾಗಿ ಕನವರಿಸಿರುವ ದುರಂತ ಕತೆಯೂ ಉಂಟು. ಕಲಹವು ಇಂತಹ ದಂಪತಿಗಳ ಬದುಕುಗಳನ್ನು ಬುಡಮೇಲು ಮಾಡಿದೆ.

ಮೈತೇಯಿ ಪ್ರಾಬಲ್ಯದ ಇಂಫಾಲ ಕಣಿವೆಯಲ್ಲಿ ಮೇ 3ರಂದು ಹಿಂಸಾಚಾರ ಆರಂಭವಾದಾಗ ಕುಕಿಗಳು ಅನಿವಾರ್ಯವಾಗಿ ಗುಡ್ಡುಗಾಡು ಜಿಲ್ಲೆ ಲಮ್ಕಾ /ಚೂರಚಾಂದ್ಪುರ ಕಡೆಗೇ ಬರಬೇಕಾಯಿತು. ಕಣಿವೆಯಲ್ಲಿನ ಮೈತೇಯಿ ಕ್ಯಾಂಪುಗಳಿಗೆ ಹೋಲಿಸಿದರೆ, ಕುಕಿಗಳ ಶಿಬಿರಗಳು ಅತ್ಯಂತ ಶೋಚನೀಯ ಸ್ಥಿತಿಯಲ್ಲಿವೆ. ಸಾಂಕ್ರಾಮಿಕ ರೋಗರುಜಿನಗಳನ್ನು ಆಹ್ವಾನಿಸುವಂತಿವೆ.
“ಕುಕಿಗಳ ಪ್ರಾಬಲ್ಯವಿರುವ ಲಮ್ಕಾ/ ಚೂರಚಾಂದ್ಪುರ ಜಿಲ್ಲೆಯಲ್ಲಿ ಸದ್ಯಕ್ಕೆ 105 ನಿರಾಶ್ರಿತ ಶಿಬಿರಗಳು ಇವೆ. ಆದರೆ ಯಾವುದಕ್ಕೂ ಸರ್ಕಾರದಿಂದ ಸಹಕಾರ ದೊರಕುತ್ತಿಲ್ಲ. ಸಮುದಾಯವನ್ನು ರಕ್ಷಿಸುವ ಕೆಲಸವನ್ನು ಶಕ್ತ್ಯಾನುಸಾರ ನಾವೇ ಮಾಡುತ್ತಿದ್ದೇವೆ” ಎನ್ನುತ್ತಾರೆ ಕುಕಿ ಮುಖಂಡರು.
‘ಈ ದಿನ.ಕಾಂ’, ’ನ್ಯೂಸ್ ಮಿನಿಟ್’ ತಂಡವು ಲಮ್ಕಾದ ಕೆಲ ನಿರಾಶ್ರಿತ ಶಿಬಿರಗಳಿಗೆ ಭೇಟಿ ನೀಡಿತು. ಅಲ್ಲಿನ ಪರಿಸ್ಥಿತಿ ಕರುಣಾಜನಕವಾಗಿತ್ತು. ಇಂಫಾಲ ಕಣಿವೆಯಲ್ಲಿ ಮೈತೇಯಿಗಳಿಗಾಗಿ ತೆರೆದಿರುವ ನಿರಾಶ್ರಿತ ಶಿಬಿರಗಳಿಗೆ ಹೋಲಿಸಿದರೆ ಕುಕಿಗಳ ನಿರಾಶ್ರಿತ ಶಿಬಿರಗಳು ಅತ್ಯಂತ ನಿಕೃಷ್ಟ. ಗುಡ್ಡಗಾಡು ಜಿಲ್ಲೆಯ ಯಾವುದಾದರೂ ಚರ್ಚಿನಲ್ಲಿಯೋ, ಹಳೆಯ ಪಾಳುಬಿದ್ದ ಕಟ್ಟಡದಲ್ಲಿಯೋ, ಶಾಲಾ ಕೊಠಡಿಗಳಲ್ಲಿಯೋ ನಿರಾಶ್ರಿತ ಶಿಬಿರಗಳು ನಡೆಯುತ್ತಿವೆ.
ಜುಲೇಮನ್ ಎಂಬ ಹಳ್ಳಿಯಲ್ಲಿ ಆರಂಭಿಸಲಾಗಿರುವ ಕುಕಿ ಶಿಬಿರದಲ್ಲಿ ಮೂವರು ಗರ್ಭಿಣಿಯರಿದ್ದಾರೆ. ಒಬ್ಬ ಹೆಣ್ಣುಮಗಳು ಇತ್ತೀಚೆಗೆ ಜನ್ಮ ನೀಡಿದ್ದಾಳೆ. ಇಂತಹ ಮಹಿಳೆಯರಿಗೆ ಆರೋಗ್ಯ ತಪಾಸಣೆ ಅಗತ್ಯವಿದೆ. ಆದರೆ ವೈದ್ಯರ ಸುಳಿವಿಲ್ಲ. ಇಂಫಾಲದಲ್ಲಿ ಬಿಬಿಜೆ ಘಟಕದಿಂದ ಪ್ರತ್ಯೇಕವಾಗಿ ಗರ್ಭಿಣಿ ಮೈತೇಯಿಗಳಿಗೆ ಶಿಬಿರವಿದೆ. ದಿನಕ್ಕೊಮ್ಮೆ ವೈದ್ಯರು ಬಂದು ಆರೋಗ್ಯ ತಪಾಸಣೆಗಳನ್ನೂ ಮಾಡುತ್ತಿದ್ದಾರೆ. ಆದರೆ ಕುಕಿ ಗರ್ಭಿಣಿಯರು ಈ ಸೌಲಭ್ಯವಂಚಿತರು.
ಸುಮಾರು 120 ಕುಕಿಗಳು ವಾಸವಿರುವ ಜುಲೇಮನ್ ಶಿಬಿರದಲ್ಲಿ ಅನ್ನ, ದಾಲ್ ಮತ್ತು ಆಲೂಗಡ್ಡೆ- ಇಷ್ಟೇ ಆಹಾರ. ಮೇಲೆ ಸೂರು ಇರುವುದರಿಂದ ಮಳೆ ಬಂದರೆ ನೆನೆಯುವುದಿಲ್ಲ ಎಂಬುದನ್ನು ಬಿಟ್ಟರೆ ಸೊಳ್ಳೆಗಳ ಕಾಟ ತಪ್ಪದು. “ಬಿರೇನ್ ಸರ್ಕಾರ ಕುಕಿಗಳನ್ನು ರಕ್ಷಿಸುವುದಿಲ್ಲ ಬಿಡಿ” ಎಂದು ನೋವು ತೋಡಿಕೊಂಡರು ಮಾಂಗ್ತಾಗ್ ಓಕಿ.

‘ಈ ದಿನ’ದೊಂದಿಗೆ ಮಾತನಾಡಿದ ಕುಕಿ ವಿದ್ಯಾರ್ಥಿ ರೈಸಿನಾ ನೈಲಂಬೈತೇ, “ಮೇ 27ರಂದು ಕೆಲವು ಕಮಾಂಡೊಗಳು ನಮ್ಮ ಹಳ್ಳಿಯನ್ನು ಪ್ರವೇಶಿಸಿದರು. ಬಂದೂಕುಗಳನ್ನು ಹಿಡಿದಿದ್ದರು. ನಮ್ಮ ತಾಯಿ ಅವರನ್ನು ತಡೆಯಲು ಯತ್ನಿಸಿದರು. ಮಾರನೇ ದಿನ ನಾವು ಹಳ್ಳಿಯನ್ನು ಬಿಟ್ಟು ಕಾಡಿನತ್ತ ಹೋದೆವು. ಈಗ ಈ ನಿರಾಶ್ರಿತ ಶಿಬಿರದಲ್ಲಿದ್ದೇವೆ. ಕೆಲವು ಖಾಸಗಿ ಸಂಗತಿಗಳ ವಿಚಾರದಲ್ಲಿ ನಾವು ತುಂಬಾ ಸಂಕಷ್ಟವನ್ನು ಎದುರಿಸುತ್ತಿದ್ದೇವೆ” ಎಂದರು.
ಇದನ್ನು ಓದಿ ಮಣಿಪುರದಿಂದ ‘ಈ ದಿನ’ ವರದಿ-1 | ಬಿಜೆಪಿ ಆರಂಭಿಸಿರುವ ’ಮೈತೇಯಿ ಗರ್ಭಿಣಿಯರ ಶಿಬಿರ’ದಲ್ಲಿ…
ಗುಡ್ಡಗಾಡು ಜಿಲ್ಲೆಯಾದ ’ಲಮ್ಕಾ’ದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ ಎಂಬುದು ಮೊದಲ ನೋಟಕ್ಕೇ ಕಣ್ಣಿಗೆ ರಾಚುತ್ತದೆ. ಆದರೆ ಕುಕಿಗಳ ಪಾಲಿಗೆ ’ಲಮ್ಕಾ’ ಜೀವ ಉಳಿಸಿಕೊಳ್ಳುವ ಸುರಕ್ಷಿತ ತಾಣ. ಮೈತೇಯಿ ಹಿಡಿತದಲ್ಲಿರುವ ಮಣಿಪುರ ಸರ್ಕಾರ ಕುಕಿಗಳಿಗೆ ನಿರಾಶ್ರಿತ ಕೇಂದ್ರಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ತೆರೆದಿಲ್ಲ ಎಂಬುದು ಕುಕಿಗಳ ಆರೋಪ.
ಇಂಫಾಲದಲ್ಲಿ ನಾವು ನೋಡಿದ ಶಿಬಿರಗಳಿಗೂ, ಕುಕಿಗಳು ಇರುವ ಶಿಬಿರಗಳಿಗೂ ಅಜಗಜಾಂತರವಿದೆ. ಕನಿಷ್ಠ ಜೀವಿಸಲು ಯೋಗ್ಯವಾದ ನಿರಾಶ್ರಿತ ಶಿಬಿರಗಳನ್ನು ಇಂಫಾಲದಲ್ಲಿ ಕಾಣಬಹುದು.
ಇದನ್ನು ಓದಿ ಮಣಿಪುರದಿಂದ ’ಈ ದಿನ’ ವರದಿ-2 | ಕುಕಿ ಪ್ರಾಬಲ್ಯದ ’ಲಮ್ಕಾ’- ಚೂರಚಾಂದ್ಪುರ ಹೆದ್ದಾರಿಯಲ್ಲಿ…
ಜುಲೇಮನ್ ಶಿಬಿರಕ್ಕೆ ಸಮೀಪದ ಮತ್ತೊಂದು ಶಿಬಿರ ಇಕಾ ಚರ್ಚ್ ಕೋಲ್ಮನ್. ಅಲ್ಲಿಯ ಪರಿಸ್ಥಿತಿ ಇನ್ನೂ ಕಠಿಣ. ಕೊಟ್ಟಿಗೆಯಂತಹ ಕೊಠಡಿಗಳಲ್ಲಿ ನಿರಾಶ್ರಿತರು ಬದುಕುತ್ತಿದ್ದಾರೆ. ಶಾಲೆಗಳು ನಡೆಯದೆ ಮಕ್ಕಳ ಭವಿಷ್ಯ ಡೋಲಾಯಮಾನ. ವೈದ್ಯಕೀಯ ಸೌಲಭ್ಯ ಮರೀಚಿಕೆ.
“ಇವು ಕೆಲವು ಉದಾಹರಣೆಗಳಷ್ಟೇ. ಕುಕಿಗಳ ಎಲ್ಲ ನಿರಾಶ್ರಿತ ಶಿಬಿರಗಳದೂ ದುಸ್ಥಿತಿಯೇ. ಸರಿಯಾದ ಊಟದ ವ್ಯವಸ್ಥೆ ಕೂಡ ಇಲ್ಲ. ಮಕ್ಕಳಿಗೆ ಶಾಲೆಗಳು ಮತ್ತೆ ಆರಂಭವಾಗಬೇಕಿದೆ” ಎನ್ನುತ್ತಾರೆ ಓಕಿ.
(ಮುಂದುವರಿಯುತ್ತದೆ)

ಚಿತ್ರಗಳು: ಯತಿರಾಜ್

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.