ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಎಷ್ಟು ಮುಖ್ಯವೋ ಕ್ರೀಡೆಗಳಲ್ಲಿ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆ ಕೂಡ ಅಷ್ಟೇ ಮುಖ್ಯ. ಕ್ರೀಡೆಯಲ್ಲಿ ಸೋಲು-ಗೆಲುವಿಗಿಂತ ಭಾಗವಹಿಸುವಿಕೆ ಮುಖ್ಯವಾಗುತ್ತದೆ ಎಂದು ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆಯ ಚಿಕ್ಕಬಳ್ಳಾಪುರ ಉಪನಿರ್ದೇಶಕ ಎಂ ಮರಿಸ್ವಾಮಿ ಅಭಿಪ್ರಾಯಪಟ್ಟರು.
“ದಿ ಗೋಲ್ಡನ್ ಗ್ಲೀಮ್ಸ್” ಪದವಿ ಪೂರ್ವ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ನಗರದ ಸರ್.ಎಂ.ವಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ 2025-26ನೇ ಸಾಲಿನ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
“ನಿರಂತರವಾಗಿ ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ಹೆಚ್ಚಿಸಲು ಸಾಧ್ಯ. ಸೋಲು ಗೆಲುವನ್ನು ಲೆಕ್ಕಿಸದೆ ಸಕ್ರಿಯವಾಗಿ ದೈಹಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಕ್ರೀಡಾಭಿಮಾನ ಪ್ರದರ್ಶಿಸಿ ಸತತ ಪ್ರಯತ್ನದಿಂದ ಸಾಧನೆ ಮಾಡಲು ಸಾಧ್ಯ. ತಾಲೂಕು ಮಟ್ಟದ ಈ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿಸಬೇಕು” ಎಂದರು.
ಕಾಲೇಜಿನ ಪ್ರಾಂಶುಪಾಲ ಸಿ.ಎಂ. ಮುನಿಕೃಷ್ಣ ಮಾತನಾಡಿ, “ಪದವಿ ಪೂರ್ವ ವಿಧ್ಯಾರ್ಥಿಗಳಿಗೆ ಕೇವಲ ಶೈಕ್ಷಣಿಕ ವಿಷಯಗಳಿಗೆ ಸೀಮಿತಗೊಳಿಸದೆ ದೈಹಿಕ ಚಟುವಟಿಕೆಗಳನ್ನು ಆಯೋಜಿಸಿ ಅವರ ಉತ್ತಮ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಬೇಕು. ಹಾಗಾಗಿ ಇಂದು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ಕ್ರೀಡಾಕೂಟ ಆಯೋಜಿಸಿ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿದೆ” ಎಂದರು.
ಚಿಕ್ಕಬಳ್ಳಾಪುರ ತಾಲ್ಲೂಕಿನ ಒಟ್ಟು 29 ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಇಂದಿನ ಕ್ರೀಡೆಗಳಲ್ಲಿ ಭಾಗವಹಿಸಿದ್ದು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಕ್ರೀಡೆಗಳಲ್ಲಿ ಭಾಗವಹಿಸಿ ಕ್ರೀಡಾ ಮನೋಭಾವ ಬೆಳೆಸಿಕೊಂಡು ಕ್ರೀಡಾ ಸ್ಪೂರ್ತಿ ಮೆರೆಯಬೇಕೆಂದರು.
ಇದನ್ನೂ ಓದಿ: ಚಿಕ್ಕಬಳ್ಳಾಪುರ | ಸಿವಿವಿ ದತ್ತಿ ದಿನಾಚರಣೆ: ರಕ್ತದಾನ ಶಿಬಿರಕ್ಕೆ 1500 ವಿದ್ಯಾರ್ಥಿಗಳಿಂದ ಜಾಗೃತಿ
ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಮುನಿಯಪ್ಪ ಹಾಗೂ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಕೆ.ಸತ್ಯೇಂದ್ರ ಅವರು ಮಾತನಾಡಿ “ಕೇವಲ ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರಾಮುಖ್ಯತೆ ನೀಡಬೇಡಿ ಜೊತೆಗೆ ಕ್ರೀಡೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಜೀವನದಲ್ಲಿ ಶಿಸ್ತು ಸಮಯ ಪಾಲನೆ ಮಾಡಿ ಸಾಧನೆ ಮಾಡುವ ಭಾವನೆಯೊಂದಿಗೆ ಮುಂದೆ ಸಾಗಬೇಕೆಂದರು”. ಈ ಸಂದರ್ಭದಲ್ಲಿ ದಿ ಗೋಲ್ಡನ್ ಗ್ಲೀಮ್ಸ್ ಕಾಲೇಜ್ ವತಿಯಿಂದ ಎಲ್ಲ ಅತಿಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಪ್ರಾಂಶುಪಾಲ ಸಂಘದ ಕಾರ್ಯದರ್ಶಿ ಆದಿಶೇಷರಾವ್, ಅಂತರರಾಷ್ಟ್ರೀಯ ಕ್ರೀಡಾಪಟು ಮಂಚನಬೆಲೆ ಶ್ರೀನಿವಾಸ್, ಬೆಸ್ಟ್ ಡಿಗ್ರಿ ಕಾಲೇಜಿನ ಪ್ರಾಂಶುಪಾಲ ರಘುನಾಥ್ ಸಹಿತ ವಿವಿಧ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗ ಹಾಗೂ ಇತರರು ಉಪಸ್ಥಿತರಿದ್ದರು.