30 ವರ್ಷಗಳಿಂದ ಒಳ ಮೀಸಲಾತಿ ಜಾರಿ ಕುರಿತ ಬೇಡಿಕೆ ನಿರ್ಣಾಯಕ ಘಟ್ಟ ತಲುಪಿದ್ದು, ತೆಲಂಗಾಣ ರಾಜ್ಯದಂತೆ ರಾಜ್ಯ ಸರ್ಕಾರವೂ ದಿಟ್ಟ ಹೆಜ್ಜೆ ಇಟ್ಟಿದೆ. ಆ.7ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ವರದಿ ಮಂಡನೆಯಾಗುತ್ತಿದ್ದು, ಸಹಜವಾಗಿಯೇ ಆಯೋಗವು ಜಾತಿಗಳನ್ನು ಹೇಗೆ ವಿಂಗಡಿಸಿ, ಮೀಸಲಾತಿ ಹಂಚಿಕೆ ಮಾಡಿದೆ ಎಂಬುದರ ಬಗ್ಗೆ ಕುತೂಹಲ ಸೃಷ್ಟಿಯಾಗಿದೆ.
ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸುವ ಕುರಿತು ರಾಜ್ಯ ಸರ್ಕಾರ ರಚಿಸಿದ್ದ ನಿವೃತ್ತ ನ್ಯಾಯಮೂರ್ತಿ ಎಚ್ ಎನ್ ನಾಗಮೋಹನ್‌ದಾಸ್ ನೇತೃತ್ವದ ಏಕಸದಸ್ಯ ಆಯೋಗವು 60 ದಿನಗಳ ಕಾಲ ಸಮೀಕ್ಷೆ ನಡೆಸಿ, ತನ್ನ ಶಿಫಾರಸುಗಳನ್ನು ಒಳಗೊಂಡ ವರದಿಯನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದೆ. ಆ.7ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ವರದಿ ಮಂಡಿಸಿ ಜಾರಿ ಬಗ್ಗೆ ಸರ್ಕಾರ ತೀರ್ಮಾನಿಸುವ ಸಾಧ್ಯತೆ ದಟ್ಟವಾಗಿದೆ.
ಈ ಮೂಲಕ 30 ವರ್ಷಗಳಿಂದ ಒಳ ಮೀಸಲಾತಿ ಜಾರಿ ಕುರಿತ ಬೇಡಿಕೆ ನಿರ್ಣಾಯಕ ಘಟ್ಟ ತಲುಪಿದ್ದು, ತೆಲಂಗಾಣ ರಾಜ್ಯದಂತೆ ರಾಜ್ಯ ಸರ್ಕಾರವೂ ದಿಟ್ಟ ಹೆಜ್ಜೆ ಇಟ್ಟಿದೆ.
ತೆಲಂಗಾಣದಲ್ಲಿ ಎಸ್ಸಿ ಒಳ ಮೀಸಲು ಜಾರಿ ಮಾಡಬೇಕು ಎನ್ನುವ ಕೂಗು ಬಹಳ ವರ್ಷಗಳಿಂದ ಇತ್ತು. ಆದರೆ ಸರ್ಕಾರಗಳು ಮೀಸಲಾತಿ ಮರು ಹಂಚಿಕೆ ಸಾಹಸಕ್ಕೆ ಕೈಹಾಕಿರಲಿಲ್ಲ. ಕಾರಣ ಎಲ್ಲಿ ರಾಜಕೀಯವಾಗಿ ತಿರುಗೇಟು ಬೀಳುತ್ತದೋ ಎನ್ನುವ ಭಯವಿತ್ತು. ಆದರೆ, ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರು ಸರ್ವೇ ಮಾಡಿಸಿ, ಎಸ್ಸಿ ಕೆಟಗರಿಯಲ್ಲಿ ಎಷ್ಟು ಜಾತಿಗಳು ಬರುತ್ತವೆ? ಅದರಲ್ಲಿ ಯಾವ ಸಮುದಾಯದವರು ಮೀಸಲಾತಿ ಲಾಭ ಪಡೆಯುತ್ತಿದ್ದಾರೆ? ಯಾರಿಗೆ ಅನ್ಯಾಯ ಆಗುತ್ತಿದೆ? ಎಂಬುದನ್ನು ಸರ್ವೇ ಮೂಲಕ ಖಚಿತ ಪಡಿಸಿಕೊಂಡು ಅಂತಿಮವಾಗಿ ವಿವಿಧ ಪಂಗಡಗಳಾಗಿ ವಿಂಗಡಿಸಿ ಒಳಮೀಸಲು ಜಾರಿ ಮಾಡಿ ಬಿಟ್ಟರು. ಇದೀಗ ಅದೇ ಹಾದಿಯಲ್ಲಿ ಸಿದ್ದರಾಮಯ್ಯ ಸಾಗುತ್ತಿದ್ದಾರೆ.
2024 ಆ.1 ರಂದು ದವಿಂದರ್‌ಸಿಂಗ್ ಪ್ರಕರಣದಲ್ಲಿ ತೀರ್ಪು ನೀಡಿದ ಸುಪ್ರೀಂ ಕೋರ್ಟ್, “ಉಪ ವರ್ಗೀಕರಣ ಮಾಡಲು ಸಂವಿಧಾನದ ಅನುಚ್ಛೇದ 14ರಲ್ಲಿ ಅವಕಾಶವಿದೆ. ಉಪ ವರ್ಗೀಕರಣ ಸಾಮಾಜಿಕ ನ್ಯಾಯದ ವಿಸ್ತರಣೆಯಾಗಿದೆ” ಎಂದು ಹೇಳಿತ್ತು. ಜತೆಗೆ ಅಗತ್ಯ ದತ್ತಾಂಶ ಸಂಗ್ರಹಿಸಿ ಒಳಜಾತಿಗಳ ವರ್ಗೀಕರಣ ಮಾಡಬೇಕು ಎಂದಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನ್ಯಾ. ನಾಗಮೋಹನ್‌ದಾಸ್ ನೇತೃತ್ವದ ಏಕಸದಸ್ಯ ಆಯೋಗ ರಚಿಸಿತ್ತು.
ರಾಜ್ಯದಲ್ಲಿ ನಿಖರವಾದ ದತ್ತಾಂಶ ಇಲ್ಲದ ಕಾರಣ ಹೊಸತಾಗಿ ಸಮೀಕ್ಷೆ ನಡೆಸಬೇಕೆಂದು 2025ರ ಮಾರ್ಚ್ 27ರಂದು ಆಯೋಗವು ಮಧ್ಯಂತರ ವರದಿ ಸಲ್ಲಿಸಿತ್ತು. ಅದೇ ದಿನ ನಡೆದ ಸಚಿವ ಸಂಪುಟ ಅಭೆಯಲ್ಲಿ ಮಧ್ಯಂತರ ವರದಿಯನ್ನು ಒಪ್ಪಿ, ಪರಿಶಿಷ್ಟ ಜಾತಿಗಳ ಸಮೀಕ್ಷೆ ನಡೆಸಲು ನಿರ್ಣಯ ಕೈಗೊಂಡಿತ್ತು. ಆಯೋಗವು ಪರಿಶಿಷ್ಟ ಜಾತಿಯ ಸಮಗ್ರ ಸಮೀಕ್ಷೆ ನಡೆಸಿ ದತ್ತಾಂಶ ಸಹಿತ ಇದೀಗ ವರದಿ ಸಲ್ಲಿಕೆ ಮಾಡಿದೆ. ಮೇ 5ರಿಂದ ರಾಜ್ಯಾದ್ಯಂತ ಸಮೀಕ್ಷೆಯಲ್ಲಿ ದತ್ತಾಂಶಗಳನ್ನು ಸಂಗ್ರಹ ಮಾಡಲಾಗಿದ್ದು, ಈ ದತ್ತಾಂಶಗಳನ್ನು ಇ. ಆಡಳಿತ ಇಲಾಖೆಯ ಸಹಯೋಗದಲ್ಲಿ ವಿಶ್ಲೇಷಣೆ ಮಾಡಲಾಗಿದೆ.
ನಾಗಮೋಹನ್‌ದಾಸ್ ಆಯೋಗವು ಹೊಸದಾಗಿ ನಡೆಸಿರುವ ಸಮೀಕ್ಷೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಉಲ್ಲೇಖಿಸಿದ್ದ ಮಾನದಂಡಗಳ ಆಧಾರದಲ್ಲಿಯೇ ವೈಜ್ಞಾನಿಕವಾಗಿ ಜಾತಿಗಳನ್ನು ವರ್ಗೀಕರಿಸಿದೆ ಎನ್ನುವ ಮಾಹಿತಿ ಇದೆ. ಸಹಜವಾಗಿಯೇ ಆಯೋಗವು ಜಾತಿಗಳನ್ನು ಯಾವ ರೀತಿ ಗುಂಪುಗಳಾಗಿ ವಿಂಗಡಿಸಿ, ಮೀಸಲಾತಿ ಹಂಚಿಕೆ ಮಾಡಿದೆ ಎಂಬುದರ ಬಗ್ಗೆ ಕುತೂಹಲ ಮೂಡಿದೆ.
ಸಿದ್ದರಾಮಯ್ಯ ಅವರಿಗೆ ಸಲ್ಲಿಕೆಯಾಗಿರುವ 1,765 ಪುಟಗಳ ವರದಿಯಲ್ಲಿ ಎಡಗೈ ಸಮುದಾಯಗಳಿಗೆ ಶೇ.6, ಬಲಗೈ ಸಮುದಾಯಗಳಿಗೆ ಶೇ.5, ಸ್ಪೃಶ್ಯ ಸಮುದಾಯಗಳಿಗೆ ಶೇ.4 ಹಾಗೂ ಇತರೆ ಉಪಜಾತಿಗಳಿಗೆ ಶೇ.1 ರಷ್ಟು ಮೀಸಲಾತಿ ನಿಗದಿ ಮಾಡಲು ಆಯೋಗ ಶಿಫಾರಸು ಮಾಡಿದೆ ಎಂದು ತಿಳಿದುಬಂದಿದೆ. ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ 101 ಜಾತಿಗಳನ್ನು ಐದು ಗುಂಪುಗಳಾಗಿ ವರ್ಗೀಕರಿಸಿರುವ ಆಯೋಗವು ಲಭ್ಯವಿರುವ ಶೇ.17 ಮೀಸಲಾತಿಯನ್ನು ಸುಪ್ರೀಂ ಕೋರ್ಟ್ ಮಾನದಂಡಗಳ ಅನ್ವಯ ಹಂಚಿಕೆ ಮಾಡಿದೆ ಎಂದು ಮೂಲಗಳು ಹೇಳಿವೆ.
ಮೊದಲನೇ ಗುಂಪು
ಮೊದಲ ಗುಂಪಿನಲ್ಲಿ ಅತೀ ಹಿಂದುಳಿದ ಜಾತಿಗಳನ್ನು ಸೇರಿಸಿ ಪಟ್ಟಿ ಮಾಡಲಾಗಿದ್ದು, ಶೇ 1ರಷ್ಟು ಮೀಸಲಾತಿ ಹಂಚಿಕೆ ಮಾಡಲಾಗಿದೆ. ಇದರಲ್ಲಿನ ಜಾತಿಗಳ ಒಟ್ಟು ಜನಸಂಖ್ಯೆ ಸುಮಾರು 5 ಲಕ್ಷ ಇದೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ತೀರಾ ವಂಚಿತ ಜಾತಿಗಳಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಜಾತಿಗಳನ್ನು ಮೊದಲ ಗುಂಪಿಗೆ ಸೇರಿಸಲಾಗಿದೆ.
ಎರಡನೇ ಗುಂಪು
ಎರಡನೇ ಗುಂಪಿನಲ್ಲಿ ಎಡಗೈ ಜಾತಿಗಳನ್ನು ಪಟ್ಟಿ ಮಾಡಲಾಗಿದೆ. ಅದಕ್ಕೆ ಶೇ.6ರಷ್ಟು ಮೀಸಲಾತಿ ಕಲ್ಪಿಸಲಾಗಿದೆ.
ಮೂರನೇ ಗುಂಪು
ಮೂರನೇ ಗುಂಪಿನಲ್ಲಿ ಬಲಗೈ ಜಾತಿಗಳನ್ನು ಪಟ್ಟಿ ಮಾಡಲಾಗಿದೆ. ಅದಕ್ಕೆ ಶೇ.5ರಷ್ಟು ಮೀಸಲಾತಿ ಕಲ್ಪಿಸಲಾಗಿದೆ.
ನಾಲ್ಕನೇ ಗುಂಪು
ನಾಲ್ಕನೇ ಗುಂಪಿನಲ್ಲಿ ಸ್ಪೃಶ್ಯ ಸಮುದಾಯಗಳಾದ ಬಂಜಾರ, ಬೋವಿ, ಕೊರಚ, ಕೊರಮ ಜಾತಿಗಳಿದ್ದು, ಅದಕ್ಕೆ ಶೇ.4 ಮೀಸಲಾತಿ ಕಲ್ಪಿಸಲಾಗಿದೆ.
ಐದನೇ ಗುಂಪು
ಐದನೇ ಗುಂಪಿನಲ್ಲಿ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂದು ಪಟ್ಟಿ ಮಾಡಲಾಗಿದ್ದು, ಈ ಗುಂಪಿಗೆ ಶೇ.1ರಷ್ಟು ಮೀಸಲಾತಿಯನ್ನು ಹಂಚಿಕೆ ಮಾಡಲಾಗಿದೆ. ಒಳಮೀಸಲಾತಿ ಹಂಚಿಕೆ ವಿಚಾರದಲ್ಲಿ ಸಾಕಷ್ಟು ಗೊಂದಲ ಮೂಡಿಸಿದ್ದೇ ಈ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಸಮುದಾಯದ ವಿಚಾರ. ಸದ್ಯಕ್ಕೆ ನಾಗಮೋಹನ್ ದಾಸ್ ಸಮೀಕ್ಷೆಯಲ್ಲಿ ಈ ಗೊಂದಲ ಬಗೆಹರಿದಿದೆ ಎನ್ನಲಾಗಿದೆ.
ಈ ಸಮೀಕ್ಷೆಯಲ್ಲಿ 27.24 ಲಕ್ಷಕ್ಕೂ ಹೆಚ್ಚು ಕುಟುಂಬಗಳ ಪರಿಶೀಲನೆ ನಡೆಸಿದ್ದು, 1,07,01,982 ರಷ್ಟು ಜನ ಸಮೀಕ್ಷೆಯಲ್ಲಿ ದಾಖಲಾಗಿದ್ದಾರೆ. ಮೇ 5 ರಿಂದ ಜುಲೈ 6ರವರೆಗೆ ಸುಮಾರು 60 ದಿನಗಳ ಕಾಲ ಮನೆ-ಮನೆ ಸಮೀಕ್ಷೆ ನಡೆದಿದೆ. ದೇಶದಲ್ಲಿ ಮೊದಲ ಬಾರಿಗೆ ಮೊಬೈಲ್ ಆ್ಯಪ್ ಬಳಸಿ ಸಮೀಕ್ಷೆ ನಡೆಸಲಾಗಿದೆ. ಬೆಂಗಳೂರು ಹೊರತುಪಡಿಸಿ, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಮೀಕ್ಷೆಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಿದೆ ಎಂದು ತಿಳಿದುಬಂದಿದೆ. 12 ಜಿಲ್ಲೆಗಳಲ್ಲಿ ಶೇ.100 ಮತ್ತು ಅದಕ್ಕಿಂತ ಹೆಚ್ಚು ಜನರು ಸಮೀಕ್ಷೆಯಲ್ಲಿ ಭಾಗಿಯಾಗಿದ್ದಾರೆ. ಕೆಲವು ಕುಟುಂಬಗಳಿಗೆ ಮೂಲ ಜಾತಿ ಗೊತ್ತಿದ್ದರೂ ಆ ಜಾತಿಗಳು ಪರಿಶಿಷ್ಟ 101 ಜಾತಿ ಪಟ್ಟಿಯಲ್ಲಿ ಇಲ್ಲದ ಕಾರಣ ಸಮೀಕ್ಷೆಯಲ್ಲಿ ನಮೂದಿಸಲು ಸಾಧ್ಯವಾಗಿಲ್ಲ.
ಇನ್ನೂ ಕೆಲವರಿಗೆ ತಮ್ಮ ಮೂಲ ಜಾತಿ ಗೊತ್ತಿದ್ದರೂ ಉಪ ಜಾತಿಯ ಹೆಸರು ಸಾಮಾಜಿಕವಾಗಿ ಅವಮಾನ ಹುಟ್ಟಿಸುವ ಪದಗಳು ಎನ್ನುವುದೂ ಸೇರಿದಂತೆ ನಾನಾ ಕಾರಣಗಳಿಗೆ ಹೇಳಿಕೊಳ್ಳಲು ನಿರಾಕರಿಸಿದ್ದಾರೆ. ಕೆಲವರು ಆದಿ ದ್ರಾವಿಡ, ಆದಿ ಆಂಧ್ರ, ಆದಿ ಕರ್ನಾಟಕ ಎಂದು ನಮೂದಿಸಿದ್ದಾರೆ. ಆಯೋಗವು ವರದಿ ನೀಡುವ ಜೊತೆಗೆ ನಾಲ್ಕು ಶಿಫಾರಸುಗಳನ್ನು ಮಾಡಿದೆ. ಈಗ ಚೆಂಡು ಸರ್ಕಾರದ ಅಂಗಳದಲ್ಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ಸಚಿವ ಸಂಪುಟದಲ್ಲಿ ಹೇಗೆ ತೀರ್ಮಾನ ಕೈಗೊಳ್ಳುತ್ತಾರೆ? ಸಮುದಾಯಗಳ ಸಚಿವರ ಅಭಿಪ್ರಾಯ ಏನಿರಲಿದೆ? ಈ ಎಲ್ಲ ಹಿನ್ನೆಲೆಯಲ್ಲಿ ವರದಿ ಜಾರಿ ಬಗ್ಗೆ ಕುತೂಹಲ ಹೆಚ್ಚಾಗಿದೆ.
ಆಯೋಗದ ಶಿಫಾರಸುಗಳು
1 ಪಟ್ಟಿಯಲ್ಲಿ ಗುರುತಿಸಿಕೊಳ್ಳದ ಜಾತಿಗಳ ಕುಲಶಾಸ್ತ್ರೀಯ ಅಧ್ಯಯನ ನಡೆಸಿ, ಜಾತಿ ಪಟ್ಟಿಯಲ್ಲಿ ಸೇರಿಸಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು
2 ಆದಿ, ದ್ರಾವಿಡ, ಆದಿ ಕರ್ನಾಟಕ, ಆದಿ ಆಂಧ್ರ ಎಂದು ನಮೂದಿಸಿದವರಿಗೆ ಅದೇ ಹೆಸರಿನಲ್ಲಿ ಜಾತಿ ಪ್ರಮಾಣಪತ್ರ ನೀಡಬೇಕು
3 ಉದ್ಯೋಗದಲ್ಲಿ ರೋಸ್ಟರ್ ಬಿಂದುಗಳನ್ನು ‘ಗುಂಪು’ಗಳ ಆಧಾರದಲ್ಲಿ ಗುರುತಿಸಬೇಕು. ಅದೇ ಆಧಾರದಲ್ಲಿ ಮೀಸಲಾತಿ ನೀಡಬೇಕು
4 ಆದಿ, ದ್ರಾವಿಡ, ಆದಿ ಕರ್ನಾಟಕ, ಆದಿ ಆಂಧ್ರ ಎಂದು ನಮೂದಿಸುವ ಜೊತೆಗೆ ಮೂಲ ಜಾತಿಯನ್ನೂ ಗುರುತಿಸಿದ್ದರೆ, ಅಂಥವರಿಗೆ ಅವರ ಮೂಲ ಜಾತಿಯ ಹೆಸರಿನಲ್ಲಿಯೇ ಜಾತಿ ಪ್ರಮಾಣಪತ್ರ ನೀಡಬೇಕು
ಇನ್ನು ಸಮೀಕ್ಷೆಯ ಸಂದರ್ಭದಲ್ಲಿ ಕೆಲವು ವಿಶೇಷ ಸಂಗತಿಗಳು ಬೆಳಕಿಗೆ ಬಂದಿವೆ. ಈವರೆಗೂ ಸರ್ಕಾರದ ಯಾವುದೇ ಸೌಲಭ್ಯಗಳು ತಲುಪದ, ವಂಚಿತವಾದ ಜಾತಿಗಳನ್ನು ವರದಿಯಲ್ಲಿ ಆಯೋಗ ಪಟ್ಟಿ ಮಾಡಿದೆ. ಐದು ಸಾವಿರಕ್ಕಿಂತ ಕಡಿಮೆ ಜನಸಂಖ್ಯೆ ಇರುವ 70 ಜಾತಿಗಳನ್ನು ಗುರುತಿಸಲಾಗಿದೆ. 1 ಲಕ್ಷ ಜನಸಂಖ್ಯೆ ಇರುವ ಏಳೆಂಟು ಜಾತಿಗಳನ್ನು ವರದಿಯಲ್ಲಿ ಪಟ್ಟಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಒಳ ಮೀಸಲಾತಿ ಹಿನ್ನೆಲೆ
ಪರಿಶಿಷ್ಟ ಜಾತಿಯಲ್ಲಿನ ಎಡಗೈ ಸಮುದಾಯಗಳು ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ತೀರಾ ಹಿಂದುಳಿದಿದ್ದು ಸರ್ಕಾರಿ ಸವಲತ್ತುಗಳ ವಂಚನೆಗೆ ಒಳಗಾಗಿವೆ ಎಂದು 30 ವರ್ಷಗಳಿಂದ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಜಾರಿಗೆ ಆಗ್ರಹ ಕೇಳಿ ಬಂದಿತ್ತು.
ಈ ಹಿನ್ನೆಲೆಯಲ್ಲಿ 2005ರಲ್ಲಿ ನ್ಯಾ.ಎ.ಜೆ. ಸದಾಶಿವ ಆಯೋಗ ರಚನೆಯಾಗಿ ಡಿ.ವಿ. ಸದಾನಂದ ಗೌಡ ಅವರ ಸರ್ಕಾರಕ್ಕೆ 2012ರಲ್ಲಿ ವರದಿ ಸಲ್ಲಿಕೆಯಾಗಿತ್ತು. ಸದಾಶಿವ ವದಿಯಲ್ಲಿ ಪರಿಶಿಷ್ಟ ಜಾತಿಗಳಿಗೆ ಇದ್ದ ಶೇ.15ರ ಮೀಸಲಾತಿಯನ್ನು ಎಡಗೈಗೆ ಶೇ.6, ಬಲಗೈಗೆ ಶೇ. 5, ಸ್ಪೃಶ್ಯ ಉಪಜಾತಿಗಳಿಗೆ ಶೇ.3 ಹಾಗೂ ಈ ಮೂರೂ ಗುಂಪುಗಳಿಗೆ ಸೇರದ ಜಾತಿಗಳವರಿಗೆ ಶೇ.1ರಷ್ಟು ಮೀಸಲಾತಿ ನೀಡಬಹುದು ಎಂದು ಶಿಫಾರಸು ಮಾಡಿತ್ತು. ಆದರೆ ವರದಿಯನ್ನು ಹಿಂದಿನ ಬಿಜೆಪಿ ಸರ್ಕಾರ ವಿವಿಧ ಕಾರಣ ನೀಡಿ ತಿರಸ್ಕಾರ ಮಾಡಿತ್ತು. ಆದರೂ ಒಳ ಮೀಸಲಾತಿ ಆಗ್ರಹಿಸಿ ನ್ಯಾಯಾಲಯಗಳ ಒಳಗೆ ಮತ್ತು ಹೊರಗೆ ದಲಿತ ಸಂಘಟನೆಗಳು ಹೋರಾಟ ಮುಂದುವರೆಸಿದ್ದವು.
ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು ಒಳಮೀಸಲಾತಿ ಕುರಿತು ಪರಿಶೀಲಿಸಿ ಶಿಫಾರಸು ಮಾಡಲು ಅಂದಿನ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿ ರಚಿಸಿತ್ತು. ಈ ಸಮಿತಿಯು 2011ರ ಜನಗಣತಿಯಂತೆ ಒಟ್ಟು 101 ಪರಿಶಿಷ್ಟ ಜಾತಿಗಳ ಜಾತಿವಾರು ಜನಸಂಖ್ಯೆಯನ್ನು ಪರಿಗಣಿಸಿ ನಾಲ್ಕು ಗುಂಪುಗಳಾಗಿ ವರ್ಗೀಕರಿಸಿತ್ತು. ಆಗ ಪರಿಶಿಷ್ಟ ಜಾತಿಗಳಿಗೆ ಇದ್ದ ಮೀಸಲಾತಿಯನ್ನು ಶೇ. 17ಕ್ಕೆ ಹೆಚ್ಚಿಸುವ ತೀರ್ಮಾನ ತೆಗೆದುಕೊಂಡಿತ್ತು. ಎಡಗೈಗೆ ಶೇ. 6, ಬಲಗೈಗೆ ಶೇ. 5.5, ಲಂಬಾಣಿ, ಬೋವಿ, ಕೊರಮ, ಕೊರಚ ಜಾತಿಗಳಿರುವ ಗುಂಪಿಗೆ ಶೇ. 4.5 ಹಾಗೂ ಈ ಮೇಲಿನ ಗುಂಪುಗಳಿಗೆ ಸೇರದ ಜಾತಿಗಳಿಗೆ ಶೇ. 1 ಮೀಸಲಾತಿ ಹಂಚಿಕೆ ಮಾಡಲಾಗಿತ್ತು.
ಪರಿಶಿಷ್ಟ ಜಾತಿಗಳಿಗೆ (ಎಸ್‌ಸಿ) ಒಳಮೀಸಲಾತಿ ಜಾರಿಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ 2024 ನವೆಂಬರ್ 14ರಂದು ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್ ಎನ್ ನಾಗಮೋಹನ್ ದಾಸ್ ನೇತೃತ್ವದಲ್ಲಿ ಏಕಸದಸ್ಯ ಆಯೋಗ ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ರಾಜ್ಯದಲ್ಲಿ ಶಿಕ್ಷಣ ಮತ್ತು ಸರಕಾರಿ ಸೇವೆಗಳಲ್ಲಿ ಪರಿಶಿಷ್ಟ ಜಾತಿಯ ವಿವಿಧ ಉಪಜಾತಿಗಳಿಗೆ ಸೇರಿದವರ ಪ್ರಾತಿನಿಧ್ಯ ಕುರಿತು ಪ್ರಾಯೋಗಿಕ ಅಂಕಿಅಂಶ ಪಡೆದು ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಬಗ್ಗೆ ಸೂಕ್ತ ಶಿಫಾರಸಿನೊಂದಿಗೆ ಆಯೋಗವು 2 ತಿಂಗಳ ಒಳಗಾಗಿ ವರದಿ ಸಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿತ್ತು.
ರಾಜ್ಯದಲ್ಲಿ ನಿಖರವಾದ ದತ್ತಾಂಶ ಇಲ್ಲದ ಕಾರಣ ಹೊಸತಾಗಿ ಸಮೀಕ್ಷೆ ನಡೆಸಬೇಕೆಂದು 2025ರ ಮಾರ್ಚ್ 27ರಂದು ಆಯೋಗವು ಮಧ್ಯಂತರ ವರದಿ ಸಲ್ಲಿಸಿತ್ತು. ಅದೇ ದಿನ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಧ್ಯಂತರ ವರದಿಯನ್ನು ಒಪ್ಪಿ, ಪರಿಶಿಷ್ಟ ಜಾತಿಗಳ ಸಮೀಕ್ಷೆ ನಡೆಸಲು ನಿರ್ಣಯ ಕೈಗೊಂಡಿತ್ತು. ಆಯೋಗವು ಪರಿಶಿಷ್ಟ ಜಾತಿಯ ಸಮಗ್ರ ಸಮೀಕ್ಷೆ ನಡೆಸಿ ದತ್ತಾಂಶ ಸಹಿತ ಇದೀಗ ವರದಿ ಸಲ್ಲಿಕೆ ಮಾಡಿದೆ.
“ಒಳ ಮೀಸಲಾತಿ ವರ್ಗೀಕರಣಕ್ಕೆ ಜಾತಿಗಳ ಶೈಕ್ಷಣಿಕ ಹಿಂದುಳಿದಿರುವಿಕೆ, ಸರ್ಕಾರಿ ಉದ್ಯೋಗದಲ್ಲಿ ಅಗತ್ಯ ಪ್ರಾತಿನಿಧ್ಯದ ಕೊರತೆ, ಸಾಮಾಜಿಕ ಹಿಂದುಳಿದಿರುವಿಕೆಯ ಮಾನದಂಡ ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆ ಮಾನದಂಡಗಳ ಆಧಾರದಲ್ಲಿಯೇ ಮೀಸಲಾತಿ ಹಂಚಿಕೆ ಮಾಡಲಾಗಿದೆ” ಎಂದು ನ್ಯಾ. ನಾಗಮೋಹನ್ ದಾಸ್ ಆಯೋಗವು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ಜೊತೆಗೆ ಎಚ್.ಎನ್. ನಾಗಮೋಹನ್‌ದಾಸ್ ಅವರು ಯಾವುದೇ ಸಂಭಾವನೆ ಅಥವಾ ಗೌರವಧನ ಪಡೆದಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ.
ಹೆಚ್ಚಿನ ಮಾಹಿತಿ ಪಡೆಯಲು ನ್ಯಾ. ನಾಗಮೋಹನ್ ದಾಸ್ ಅವರಿಗೆ ಈ ದಿನ.ಕಾಂ ಕರೆ ಮಾಡಿದಾಗ, “ಗುರುವಾರ (ಆ.7) ಸಚಿವ ಸಂಪುಟ ಸಭೆ ಇರುವುದರಿಂದ ನಾನು ಈ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳುವುದಿಲ್ಲ. ಸಭೆಯ ನಿರ್ಧಾರದ ಬಳಿಕ ವಿಚಾರ ಅಭಿಪ್ರಾಯ ಹೇಳುವೆ” ಎಂದಷ್ಟೇ ಹೇಳಿದರು.
“ಐತಿಹಾಸಿಕ ವರದಿಯಲ್ಲಿ ಪ್ರಮುಖ ಸಂಗತಿಗಳು ಮೂಲಗಳನ್ನಾಧರಿಸಿ ಹೊರಬಂದಿವೆ. ವರದಿಯಲ್ಲಿ ಏನೆಲ್ಲ ಅಂಶಗಳಿವೆ ಎಂಬುದು ಸ್ಪಷ್ಟವಾಗಿಲ್ಲ. ಸಚಿವ ಸಂಪುಟ ಸಭೆಯಲ್ಲಿ ವರದಿ ಮಂಡಿಸಿದಾಗಲೇ ನಮಗೆ ವಿಷಯ ಗೊತ್ತಾಗಲಿದೆ. ಬಳಿಕ ಚರ್ಚಿಸಿ ಸಂಪುಟದಲ್ಲಿ ತೀರ್ಮಾನ ಮಾಡುತ್ತೇವೆ” ಎಂದಿದ್ದಾರೆ ಗೃಹ ಸಚಿವ ಪರಮೇಶ್ವರ್.
ಇತ್ತೀಚೆಗೆ ಒಳ ಮೀಸಲಾತಿ ಜಾರಿ ಕುರಿತು ಸಚಿವ ಡಾ.ಜಿ. ಪರಮೇಶ್ವರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಿಫಾರಸಿನ ಸ್ವರೂಪ ತಿಳಿದುಕೊಂಡ ನಂತರ ಈ ವರದಿ ಬಗ್ಗೆ ಮತ್ತೊಮ್ಮೆ ಚರ್ಚಿಸೋಣ ಎಂಬ ನಿಲುವು ತೆಗೆದುಕೊಳ್ಳಲಾಗಿದೆ. ಹೀಗಾಗಿ ಆಯೋಗದ ಮೀಸಲಾತಿ ಹಂಚಿಕೆ ಮತ್ತು ಶಿಫಾರಸು ಗಮನಿಸಿದ ಬಳಿಕ ಒಳ ಮೀಸಲಾತಿ ಜಾರಿ ವಿಚಾರದಲ್ಲಿ ಕಾಂಗ್ರೆಸ್‌ನ ಎಡಗೈ ಹಾಗೂ ಬಲಗೈ ನಾಯಕರ ಮುಂದಿನ ನಡೆ ಏನಾಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ.