ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಮಾಜಿ ಕಾರ್ಪೊರೇಟರ್ ಪುತ್ರ ಅನುಮಾನಾಸ್ಪದವಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಅತ್ತಿಗುಪ್ಪೆಯಲ್ಲಿ ನಡೆದಿದೆ.
ಬೆಂಗಳೂರಿನ ಅತ್ತಿಗುಪ್ಪೆ ವಾರ್ಡ್‌ನ ಮಾಜಿ ಕಾರ್ಪೊರೇಟರ್ ದೊಡ್ಡಯ್ಯ ಅವರ ಮಗ ಗೌತಮ್(29) ಆತ್ಮಹತ್ಯೆ ಮಾಡಿಕೊಂಡವರು.
ಬೆಂಗಳೂರಿನ ಅತ್ತಿಗುಪ್ಪೆಯಲ್ಲಿರುವ ಮನೆಯಲ್ಲಿ ಗೌತಮ್ ನೇಣು ಬಿಗಿದುಕೊಂಡು ಗುರುವಾರ ಸಾವನ್ನಪ್ಪಿದ್ದಾರೆ. ಯಾವ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ದೊಡ್ಡಯ್ಯ ಬೆಂಗಳೂರು ಮಹಾನಗರ ಪಾಲಿಕೆಗೆ ಕಾರ್ಪೊರೇಟರ್ ಆಗಿದ್ದರು. ಅವರ ಕಿರಿಯ ಪುತ್ರನಾಗಿರುವ ಗೌತಮ್ ಅವರಿಗೆ ಮದುವೆ ಮಾಡಲು ಮನೆಯವರು ಕಳೆದ ಎರಡು ತಿಂಗಳಿನಿಂದ ಹೆಣ್ಣು ಹುಡುಕುತ್ತಿದ್ದರು ಎಂದು ತಿಳಿದುಬಂದಿದೆ.
ಗೌತಮ್ ಯಾವುದೇ ಗುತ್ತಿಗೆದಾರನಲ್ಲ. ಆತನ ಹೆಸರಿನಲ್ಲಿ ಯಾವುದೇ ಗುತ್ತಿಗೆದಾರರ ಪರವಾನಗಿ ಕೂಡ ಇಲ್ಲ. ವೈಯಕ್ತಿಕ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು. ಗುತ್ತಿಗೆದಾರರಿಗೆ ಹಣವನ್ನು ಕೊಟ್ಟಿದ್ದರು ಎಂದು ಹೇಳಲಾಗುತ್ತಿದೆ. ಇದೆಲ್ಲ ಸುಳ್ಳು ಎಂದು ಗೌತಮ್ ಅವರ ತಂದೆ ಪೊಲೀಸರಿಗೆ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಅಲ್ಲದೇ, ದೃಶ್ಯ ಮಾಧ್ಯಮಗಳಲ್ಲಿ ಬಾಕಿ ಬಿಲ್ ಪಾವತಿ ಮಾಡದ ಹಿನ್ನೆಲೆ ಗುತ್ತಿಗೆದಾರ ಆತ್ಮಹತ್ಯೆ ಎಂದು ಬರುತ್ತಿದೆ. ಇದು ಸಂಪೂರ್ಣ ಸುಳ್ಳು ಸುದ್ದಿಯಾಗಿದೆ. ಬಿಜೆಪಿಯವರು ಪಿತೂರಿ ಮಾಡಿ ಈ ರೀತಿಯ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಮೃತ ಗೌತಮ್ ಮಾವ ಆನಂದ್ ಹೇಳಿಕೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮನೆ ಬಾಡಿಗೆ ಹಣ ಕೇಳಿದಕ್ಕೆ ಚಾಕುವಿನಿಂದ ಹಲ್ಲೆ
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ಆರೋಗ್ಯ ಸಹಾಯವಾಣಿ 104.