ಈಗಾಗಲೇ ವರ್ಗಾವಣೆ ಆದೇಶವಿದ್ದರೂ ಉಡುಪಿ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಸರ್ಜನ್ ಆಗಿರುವ ಹೆಚ್.ಎಸ್.ಅಶೋಕ್ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡದಿರುವ ಕ್ರಮದ ವಿರುದ್ಧ ಇಂದು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಜಿಲ್ಲಾ ಸಮಿತಿಯು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಮತ್ತು ಅಪರ ಜಿಲ್ಲಾಧಿಕಾರಿ ಅಬಿದ್ ಗದ್ಯಾಲ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿತು.
ಸ್ಪಷ್ಟ ಆದೇಶ ಇದ್ದರೂ ಮಂಗಳೂರು ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿ ಇರುವಾಗ ದಲಿತ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ತನಿಖೆಯಲ್ಲಿ ಸಾಬಿತಾಗಿ ಶಿಕ್ಷೆಯ ರೂಪದಲ್ಲಿ 5 ಇಂಕ್ರಿಮೆಂಟ್ ಗಳನ್ನು ಕಡಿತಗೊಳಿಸಿಕೊಂಡ ಒಬ್ಬ ಅಶಿಸ್ತಿನ ಜಿಲ್ಲಾ ಸರ್ಜನ್ ಹೆಚ್.ಎಸ್.ಅಶೋಕ್ ಅವರನ್ನು ವರ್ಗಾವಣೆ ಮಾಡಲು ಮೀನಾಮೇಷ ಎಣಿಸುತ್ತಿರುವ ಜಿಲ್ಲಾಧಿಕಾರಿಯವರ ನಡೆ ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತದೆ ಎಂದು ದ.ಸಂ.ಸ.ರಾಜ್ಯ ಸಂಘಟನಾ ಸಂಚಾಲಕರಾದ ಸುಂದರ ಮಾಸ್ತರ್ ವಿಷಾದ ವ್ಯಕ್ತಪಡಿಸಿದ್ದಾರೆ.

ಇಂದು ದ.ಸಂ.ಸ.ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಮತ್ತು ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ ಗಿಳಿಯಾರು ಅವರ ಸಮ್ಮುಖದಲ್ಲಿ ಜಿಲ್ಲಾಧಿಕಾರಿಯವರಿಗೆ ವಾಸ್ತವದ ಅರಿವು ಮೂಡಿಸಿತು. ಜಿಲ್ಲಾಧಿಕಾರಿಯವರ ಭೇಟಿಯ ನಂತರ ಚರ್ಚಿಸಿದ ದ.ಸಂ.ಸ.ನಿಯೋಗ ಕರ್ನಾಟಕ ಆಡಳಿತಾತ್ಮಕ ನ್ಯಾಯಲಯದ ಸ್ಪಷ್ಟ ಆದೇಶವಿರುವಾಗ ಇನ್ನು ಸಹ ವರ್ಗಾವಣೆ ಮಾಡದೇ ಇದ್ದರೆ ಉಸ್ತುವಾರಿ ಸಚಿವರು ಬಂದಾಗ ಕಪ್ಪು ಬಾವುಟ ತೋರಿಸಿ ಘೇರಾವ್ ಹಾಕುವ ಕಾರ್ಯಕ್ರಮ ಹಾಕಿಕೊಳ್ಳುವ ನಿರ್ಧಾರಕ್ಕೆ ಬಂದಿತು.
ಇಂದು ಜಿಲ್ಲಾಧಿಕಾರಿಯವರನ್ನು ಭೇಟಿಯಾದ ನಿಯೋಗದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕರಾದ ಬಾಸ್ಕರ ಮಾಸ್ಟರ್ ಕುಂಜಿಬೆಟ್ಟು, ಅಣ್ಣಪ್ಪ ನಕ್ರೆ, ತಾಲೂಕು ಸಂಚಾಲಕರಾದ ಶಿವರಾಜ್ ಬೈಂದೂರು, ಕೆ.ಸಿ.ರಾಜು ಬೆಟ್ಟಿನಮನೆ, ಹರೀಶ್ಚಂದ್ರ ಬಿರ್ತಿ, ರಾಘವ ಕುಕುಜೆ, ರಾಜೇಂದ್ರ ಮಾಸ್ಟರ್ ಬೆಳ್ಳೆ, ಪದಾಧಿಕಾರಿಗಳಾದ ಕೀರ್ತಿ ಕುಮಾರ್ ಪಡುಬಿದ್ರಿ, ರಾಘವ ಕೋಟ್ಯಾನ್, ಶೇಖರ ಕೊಡಂಕೂರು, ಚಂದ್ರ ಕೊರ್ಗಿ, ಶಂಕರ ಕೊಡಂಕೂರು, ಕ್ರಷ್ಣ ಬೆಳ್ಳೆ, ಶ್ರೀಕಾಂತ್ ಹಿಜಾಣ, ಭಾಸ್ಕರ್ ಕುಂಟೋಳಿ ಉಪಸ್ಥಿತರಿದ್ದರು.