ಹೊಸನಗರದ ರಿಪ್ಪನ್ ಪೇಟೆಯಲ್ಲಿ, ಕಾರ್ಯಕ್ರಮದಲ್ಲಿ ಮಾತನಾಡಿದ ನ್ಯಾಯಧೀಶರು ಆತ್ಮಸಾಕ್ಷಿಗಿಂತ ಶ್ರೇಷ್ಠವಾದ ಸಾಕ್ಷ್ಯ ಇನ್ನೊಂದು ಇಲ್ಲ. ಏಕೆಂದರೆ ಅದು ಮಾನವನ ಒಡಲಾಳದ ಧ್ವನಿ, ನೈತಿಕ ಬುದ್ಧಿವಂತಿಕೆಯ ಪ್ರತಿಬಿಂಬ”, ಎಂದು ಶಿವಮೊಗ್ಗದ ಹಿರಿಯ ವ್ಯವಹಾರಗಳ ಜಿಲ್ಲಾ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ನ್ಯಾಯಮೂರ್ತಿ ಎಂ.ಎಸ್. ಸಂತೋಷ್ ಅವರು ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆ ಸಮೀಪದ ಅಮೃತ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ “ಕಾನೂನು ಅರಿವು ಮತ್ತು ಸಂವಿಧಾನ ಪರಿಚಯ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಮೃತ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ, ಮತದಾರ ಸಾಕ್ಷರತಾ ಸಂಘ, ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ, ಸಮಾಜದಲ್ಲಿ ನಡೆಯುವ ಕಾನೂನು ಬಾಹಿರ ಕ್ರಿಯೆಗಳು—ಪರವಾನಿಗೆ ಇಲ್ಲದೆ ವಾಹನ ಚಾಲನೆ, ಸಾಮಾಜಿಕ ಮಾಧ್ಯಮ ದುರುಪಯೋಗ, ಸಾಮಾಜಿಕ ಶಿಷ್ಟಾಚಾರಗಳಿಗೆ ಧಕ್ಕೆಯುಂಟುಮಾಡುವ ಅಭ್ಯಾಸಗಳು—ಇವುಗಳಿಂದ ಯುವವರ್ಗ ಜಾಗೃತರಾಗಬೇಕು.”ಕಾನೂನು ಎನ್ನುವುದು ಕೇವಲ ಶಾಸನಪೂರ್ವಕ ಮೌಲ್ಯವಲ್ಲ; ಅದು ನಿತ್ಯಜೀವನದ ದಿಕ್ಕುದೀಪವಾಗಿದೆ ಎಂದರು.
ಪ್ರತಿಯೊಬ್ಬ ನಾಗರಿಕನು ತನ್ನ ಕರ್ತವ್ಯ ಮತ್ತು ಹಕ್ಕುಗಳ ಅರಿವಿನಿಂದ ಮುಂದೆ ಸಾಗಬೇಕು. ಈ ಪ್ರಜಾಪ್ರಭುತ್ವ ವ್ಯವಸ್ಥೆಯ ರಕ್ಷಣೆಗೆ ಆತ್ಮಸಾಕ್ಷಿಯ ಅನುಸರಣೆ ಅತ್ಯಂತ ಮುಖ್ಯ” ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಮಹಮ್ಮದ್ ನಜಹತ್ ಉಲ್ಲಾ ಮಾತನಾಡಿ”ಕಾನೂನು ಅರಿವು ಎಂಬುದು ವಿದ್ಯಾರ್ಥಿ ಬದುಕಿನ ಮೂಲಾಧಾರ. ಪಠ್ಯಜ್ಞಾನಕ್ಕಿಂತಲೂ ಮೌಲ್ಯಾಧಾರಿತ ಶಿಕ್ಷಣ, ಸಾಮಾಜಿಕ ಜವಾಬ್ದಾರಿಯ ಅರಿವು ಹಾಗೂ ಸಂವಿಧಾನಪರ ಕಾಳಜಿಯು ಉತ್ತಮ ನಾಗರಿಕರ ನಿರ್ಮಾಣಕ್ಕೆ ಮಾರ್ಗದರ್ಶಿಯಾಗುತ್ತದೆ” ಎಂದು ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗರಕೊಡಿಗೆ ಗಣೇಶ್ ಮೂರ್ತಿ ಅವರು, ಪ್ರಾಸ್ತವಿಕವಾಗಿ ಮಾತನಾಡಿ “ಡಾ. ಬಿ.ಆರ್. ಅಂಬೇಡ್ಕರ್ ಅವರ ಮಾರ್ಗದರ್ಶನದಂತೆ, ಜಿಲ್ಲೆಯಾದ್ಯಂತ ಎಲ್ಲ ಪದವಿ ಪೂರ್ವ ಕಾಲೇಜುಗಳಲ್ಲಿ ಸಂವಿಧಾನ ಜಾಗೃತಿ ಕಾರ್ಯಕ್ರಮಗಳು ಹಮ್ಮಿಕೊಳ್ಳಲ್ಪಡುತ್ತಿವೆ. ಇದು ಯುವಜನತೆಯಲ್ಲಿ ಕಾನೂನು ಅರಿವು ಮೂಡಿಸಲು ಪ್ರಮುಖ ಹಂತವಾಗಿದೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಂಡಿ ರಾಮಚಂದ್ರ,ಎನ್ಎಸ್ಎಸ್ ಅಧಿಕಾರಿ ಹಾಲಪ್ಪ ಸಂಕೂರು,ಗ್ರಾ.ಪಂ. ಅಧ್ಯಕ್ಷ ಸಚಿನ್ ಗೌಡ,ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸೋಮಶೇಖರ ಟಿ.ಡಿ,ಪ್ರೌಢಶಾಲಾ ಮುಖ್ಯಶಿಕ್ಷಕಿ ಪ್ರಭಾವತಿ ಹೆಗಡೆ,ಕಸಾಪ ಕಾರ್ಯದರ್ಶಿ ಕೆ.ಜಿ. ನಾಗೇಶ್,ಅಶ್ವಿನಿ ಪಂಡಿತ್ ಇನ್ನಿತರರಿದ್ದರು.
ಹುಂಚ ಹೋಬಳಿ ಕಸಾಪ ಘಟಕದ ಅಧ್ಯಕ್ಷ ಹೆಚ್.ಎಂ. ಬಷೀರ್ ಅಹಮ್ಮದ್ ಸ್ವಾಗತಿಸಿ,ಫ್ರಾನ್ಸಿಸ್ ಬೆಂಜಮಿನ್ ನಿರೂಪಣೆ ಮಾಡಿ.ಶಂಕರಪ್ಪ ಕೆ.ಎಸ್. ವಂದಿಸಿದರು ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಎಂ.ಎಸ್. ಸಂತೋಷ್ ಅವರನ್ನು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಮತದಾರ ಸಾಕ್ಷರತಾ ಸಂಘ ಕಾಲೇಜು ಅಭಿವೃದ್ಧಿ ಸಮಿತಿ ಮತ್ತು ಕಸಾಪ ವತಿಯಿಂದ ಸನ್ಮಾನಿಸಿ ಗೌರವಿಸಿದರು.