ಆಂಧ್ರ ಪ್ರಶದ ಉಕ್ಕು ಕ್ಷೇತ್ರದ ಬೆಳವಣಿಗೆ ಕುರಿತಂತೆ ಆ ರಾಜ್ಯದ ತೆಲುಗು ದೇಶಂ ಪಕ್ಷದ ಎಲ್ಲ ಸಂಸದರು ಸಂಸತ್ತಿನ ಕಚೇರಿಯಲ್ಲಿ ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಕೇಂದ್ರ ಸಚಿವ ಕೆ. ರಾಮ್ ಮೋಹನ್ ನಾಯ್ಡು ಅವರ ನೇತೃತ್ವದಲ್ಲಿ ಸಂಸತ್ ಭವನದ ಕಚೇರಿಯಲ್ಲಿ ಸಚಿವರನ್ನು ಭೇಟಿಯಾದ ತೆಲುಗು ದೇಶಂ ಸಂಸದರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಪುನಶ್ಚೇತನ ಪ್ಯಾಕೇಜ್ ನೀಡಿದ ನಂತರ ವಿಶಾಖಪಟ್ಟಣದ ರಾಷ್ಟ್ರೀಯ ಉಕ್ಕು ಸ್ಥಾವರದ (RINL) ಕಾರ್ಯನಿರ್ವಹಣೆ, ಅಭಿವೃದ್ಧಿ, ಉದ್ಯೋಗ ಸೃಷ್ಟಿ ಸೇರಿದಂತೆ ರಾಜ್ಯದ ಹಲವಾರು ಅಭಿವೃದ್ಧಿಪರ ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಿದರು.
ಉಕ್ಕು ಕ್ಷೇತ್ರದತ್ತ ಆಂಧ್ರ ಪ್ರದೇಶ ಸರ್ಕಾರ ತೋರುತ್ತಿರುವ ಉತ್ಸುಕತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವ ಕುಮಾರಸ್ವಾಮಿ, “ಪ್ರಧಾನಿಗಳು ಪುನಶ್ಚೇತನ ಪ್ಯಾಕೇಜ್ ನೀಡಿದ ನಂತರ ವೈಜಾಗ್ ಸ್ಟೀಲ್ ಕಾರ್ಖಾನೆ ಉತ್ತಮವಾಗಿ ಕೆಲಸ ಮಾಡುತ್ತಿದೆ. ನಿರೀಕ್ಷಿತ ಪ್ರಮಾಣಕ್ಕೂ ಮೀರಿ ಉಕ್ಕು ಉತ್ಪಾದನೆ ಮಾಡುತ್ತಿದೆ. 2030ರ ವೇಳೆಗೆ ದೇಶದಲ್ಲಿ ವಾರ್ಷಿಕ 300 ಮಿಲಿಯನ್ ಟನ್ ಉಕ್ಕು ಉತ್ಪಾದನೆ ಮಾಡುವ ಪ್ರಧಾನಿಗಳ ಸಂಕಲ್ಪದಂತೆ ಕಾರ್ಖಾನೆ ಕಾರ್ಯ ನಿರ್ವಹಣೆ ಮಾಡುತ್ತಿದೆ” ಎಂದು ನಿಯೋಗಕ್ಕೆ ತಿಳಿಸಿದರು.
ಆಂಧ್ರ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಉಕ್ಕು ಕ್ಷೇತ್ರದ ಪಾತ್ರ ಹಿರಿದಾಗಿದ್ದು, ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಸಹಕಾರ ಅತ್ಯಗತ್ಯವಾಗಿದೆ ಎಂದು ನಿಯೋಗವು ಸಚಿವರಲ್ಲಿ ಮನವಿ ಮಾಡಿತು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಕುಮಾರಸ್ವಾಮಿ ಅವರು; ಆಂಧ್ರ ಪ್ರದೇಶದ ಅಭಿವೃದ್ಧಿಗೆ ರಾಜ್ಯ ಸರ್ಕಾರದ ಜತೆ ನಿಕಟವಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ತೆಲುಗು ದೇಶಂ ಸಂಸದರಾದ ಶ್ರೀ ಭರತ್, ಲಾವು ಶ್ರೀಕೃಷ್ಣ ದೇವರಾಯಲು, ಬಿ.ಕೆ. ಪಾರ್ಥಸಾರಥಿ, ಮಾಗುಂಟ ಶ್ರೀನಿವಾಸಲು ರೆಡ್ಡಿ, ದಗ್ಗುಮಳ್ಳ ಪ್ರಸಾದರಾವು, ಸಾನಾ ಸತೀಶ್ ಬಾಬು, ಬೀದಾ ಮಸ್ತಾನ್ ರಾವು ಮುಂತಾದವರು ನಿಯೋಗದಲ್ಲಿ ಇದ್ದರು.