- ಕಡ್ಡಾಯವಾಗಿ ಟಿಕೆಟ್ ಪಡೆದು ಬಸ್ನಲ್ಲಿ ಪ್ರಯಾಣ ಬೆಳೆಸಿ: ಬಿಎಂಟಿಸಿ
- ಆದಾಯದ ಸೋರಿಕೆ ತಡೆಗಟ್ಟುವ ನಿಟ್ಟಿನಲ್ಲಿ ತನಿಖೆ ನಡೆಸಿದ ಬಿಎಂಟಿಸಿ
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್ಗಳಲ್ಲಿ ಅನಧಿಕೃತವಾಗಿ ಪ್ರಯಾಣಿಸಿದ ಪ್ರಯಾಣಿಕರಿಂದ ಜುಲೈನಲ್ಲಿ ಒಟ್ಟು ₹6,20,510 ದಂಡ ವಸೂಲಿ ಮಾಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಬಿಎಂಟಿಸಿ, “ಸಂಸ್ಥೆಯ ಆದಾಯವನ್ನು ಸೋರಿಕೆ ಮಾಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಂಸ್ಥೆಯ ತನಿಖಾ ತಂಡ ಜುಲೈ ತಿಂಗಳಿನಲ್ಲಿ ಕಾರ್ಯಾಚರಣೆ ನಡೆಸಿದೆ. ಒಟ್ಟು 15,198 ಟ್ರಿಪ್ಗಳನ್ನು ತಪಾಸಣೆ ಮಾಡಲಾಗಿದೆ. ಇದರಲ್ಲಿ 2953 ಟಿಕೆಟ್ ರಹಿತ ಪ್ರಯಾಣಿಕರನ್ನು ಪತ್ತೆ ಹಚ್ಚಲಾಗಿದ್ದು, ಅವರಿಂದ ಒಟ್ಟು ₹5,87,310 ದಂಡ ವಸೂಲಿ ಮಾಡಲಾಗಿದೆ. ಸಂಸ್ಥೆಯ ನಿರ್ವಾಹಕರ ವಿರುದ್ಧ 925 ಪ್ರಕರಣ ದಾಖಲಿಸಲಾಗಿದೆ” ಎಂದು ಹೇಳಿದೆ.
“ಮೋಟಾರು ವಾಹನ ಕಾಯ್ದೆ 1988ರ ಕಾಲಂ 177 ಮತ್ತು 94ರ ಪ್ರಕಾರ ಮಹಿಳಾ ಪ್ರಯಾಣಿಕರಿಗೆ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸಿರುವ 332 ಪುರುಷ ಪ್ರಯಾಣಿಕರಿಂದ ಒಟ್ಟು ₹33,200 ದಂಡ ಸಂಗ್ರಹಿಸಲಾಗಿದೆ. ಒಟ್ಟಾರೆಯಾಗಿ ಜುಲೈನಲ್ಲಿ 3285 ಪ್ರಯಾಣಿಕರಿಂದ ಒಟ್ಟು ₹6,20,510 ದಂಡ ವಸೂಲಿ ಮಾಡಲಾಗಿದೆ” ಎಂದು ಸಂಸ್ಥೆ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ತರಾತುರಿ ಸಿಐಡಿ ಬದಲು ನ್ಯಾಯಾಂಗ ತನಿಖೆ ಆಗಬೇಕು: ಮುಖ್ಯಮಂತ್ರಿ ಚಂದ್ರು
“ಪ್ರಯಾಣಿಕರು ಬಸ್ನಲ್ಲಿ ಪ್ರಯಾಣಿಸುವಾಗ ಅಧಿಕೃತ ಟಿಕೆಟ್ / ದಿನದ ಪಾಸು / ಮಾಸಿಕ ಪಾಸುಗಳನ್ನು ಹೊಂದಿರಬೇಕು. ಇದರಿಂದ ಅನಗತ್ಯ ದಂಡ ಕಟ್ಟುವುದನ್ನು ತಡೆಯಬಹುದು. ಇಂತಹ ಪ್ರವೃತ್ತಿಯಿಂದ ಸಂಸ್ಥೆಯು ಉತ್ತಮ ಸೇವೆಯನ್ನು ಪ್ರಯಾಣಿಕರಿಗೆ ನೀಡಲು ಸಹಾಯವಾಗುತ್ತದೆ. ಮಹಿಳಾ ಪ್ರಯಾಣಿಕರಿಗೆಂದು ಮೀಸಲಾಗಿರುವ ಆಸನಗಳಲ್ಲಿ ಪುರುಷ ಪ್ರಯಾಣಿಕರು ಕುಳಿತುಕೊಳ್ಳಬಾರದು. ಮಹಿಳೆಯರಿಗೆ ಆಸನವನ್ನು ಬಿಟ್ಟುಕೊಡಬೇಕು” ಎಂದು ಹೇಳಿದೆ.