ಯೂರಿಯ ರಸಗೊಬ್ಬರದ ಅಭಾವದಿಂದ ಕಂಗೆಟ್ಟಿರುವ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ರೈತರಿಗೆ
ವಿವಿಧ ಭಾಗಗಳಲ್ಲಿ ಇಂದು ಕೃಷಿ ಅಧಿಕಾರಿಗಳು, ರೈತ ಸಂಘ ಮತ್ತು ಪೊಲೀಸರ ಬಂದೋಬಸ್ತ್ ನಲ್ಲಿ ಯೂರಿಯಾ ಗೊಬ್ಬರ ವಿತರಣೆ ಮಾಡಲಾಯಿತು. ಆದರೂ ಬಹುತೇಕ ರೈತರು ಗೊಬ್ಬರ ಖಾಲಿಯಾದ ಹಿನ್ನಲೆಯಲ್ಲಿ ನಿರಾಸೆಯಿಂದ ಬರಿ ಕೈಯಲ್ಲಿ ಹಿಂದಿರುಗಿದರು.

ಬಹುತೇಕ ದಿನಗಳಿಂದ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆ ಹಾಗೂ ಜಗಳೂರು ತಾಲೂಕಿನ ವಿವಿಧ ಭಾಗಗಳಲ್ಲಿ ರೈತರು ಮೆಕ್ಕೆಜೋಳ ಸೇರಿದಂತೆ ಹಲವು ಬೆಳೆಗಳನ್ನು ಬಿತ್ತನೆ ಮಾಡಿದ್ದು, ಮಳೆ ಹೆಚ್ಚಿರುವ ಕಾರಣ ಬೆಳೆಗಳಿಗೆ ಶೀತ ತಪ್ಪಿಸಲು ಮತ್ತು ಬೆಳವಣಿಗೆಗೆ ಪೋಷಕಾಂಶಗಳನ್ನು ನೀಡಲು ಯೂರಿಯಾ ಅಭಾವ ಉಂಟಾಗಿತ್ತು. ಈ ಹಂತದಲ್ಲಿ ತಿಂಗಳಿನಿಂದಲೂ ರೈತ ಸಂಘ ಮತ್ತು ರೈತರು ಪ್ರತಿಭಟನೆಗೆ ಇಳಿದಿದ್ದರು.

ಸಮರ್ಪಕವಾಗಿ ಗೊಬ್ಬರ ವಿತರಿಸದ ಮತ್ತು ತಾಲೂಕಿನ ಅಗತ್ಯಕ್ಕೆ ಸಾಕಷ್ಟು ಗೊಬ್ಬರ ಸರಬರಾಜು ಮಾಡದ ಕೃಷಿ ಇಲಾಖೆಯ ವೈಫಲ್ಯವನ್ನು ವಿರೋಧಿಸಿ ಗುರುವಾರವಷ್ಟೇ ವಾಸುದೇವ ಮೇಟಿ ಬಣದ ತಾಲೂಕು ಅಧ್ಯಕ್ಷ ಕುಮಾರ್ ಭರಮಸಮುದ್ರ ಸೇರಿದಂತೆ ರೈತ ಸಂಘಟನೆಗಳ ಮುಖಂಡರು, ರೈತರು ಕೃಷಿ ಇಲಾಖೆ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸಿದ್ದರು.

ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಚಳ್ಳಕೆರೆ ರೈಲ್ವೇ ನಿಲ್ದಾಣದಲ್ಲಿ ಅದಿರು ಸಾಗಾಣಿಕೆಯಿಂದ ಜೀವಭಯ, ಮಾಲಿನ್ಯ; ತಾತ್ಕಾಲಿಕ ಸ್ಥಗಿತಕ್ಕೆ ಜಿಲ್ಲಾಧಿಕಾರಿ ಸೂಚನೆ
ಈ ಹಿನ್ನೆಲೆಯಲ್ಲಿ ದಾವಣಗೆರೆ ಕೃಷಿ ಜಂಟಿ ನಿರ್ದೇಶಕರು ಮತ್ತು ತಾಲೂಕು ಸಹಾಯಕ ನಿರ್ದೇಶಕರು ಶುಕ್ರವಾರ ತಾಲೂಕಿಗೆ 170 ಮೆಟ್ರಿಕ್ ಟನ್ ಯೂರಿಯಾ ರಸಗೊಬ್ಬರವನ್ನು ಸರಬರಾಜು ಮಾಡಿ ಜಗಳೂರು ಎಪಿಎಂಸಿ ಆವರಣದಲ್ಲಿ 80 ಟನ್ ಸೇರಿದಂತೆ ತಾಲೂಕಿನ ಬಿದರೇಕೆರೆ, ಹೊಸಕೆರೆ, ಮುಸ್ಟೂರು ಅಣಬೂರು ಗ್ರಾಮಗಳಲ್ಲಿ ಯೂರಿಯಾ ವಿತರಣೆ ಮಾಡಲಾಯಿತು. ಗೊಬ್ಬರಕ್ಕಾಗಿ ಜಾತಕ ಪಕ್ಷಿಯಂತೆ ಕಾದಿದ್ದ ರೈತರು ಬೆಳಗ್ಗಿನಿಂದಲೂ ಸರತಿ ಸಾಲಿನಲ್ಲಿ ನಿಂತು ಗೊಬ್ಬರವನ್ನು ಕೊಂಡುಕೊಂಡರು. ಮಹಿಳೆಯರು ಕೂಡ ಸರತಿಯಲ್ಲಿ ನಿಂತು ಗೊಬ್ಬರವನ್ನು ಕೊಂಡುಕೊಂಡರು. ತಾಲೂಕಿನ ವಿವಿಧ ಭಾಗಗಳಿಂದಲೂ ಸೇರಿ ಒಟ್ಟು ನಾಲ್ಕರಿಂದ ಐದು ಸಾವಿರ ರೈತರು ಗೊಬ್ಬರಕ್ಕಾಗಿ ಆಗಮಿಸಿದ್ದರು. ಮಧ್ಯಾಹ್ನದ ವೇಳೆಗೆ ಯೂರಿಯಾ ಖಾಲಿಯಾದ ಹಿನ್ನೆಲೆಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ರೈತರು ಗೊಬ್ಬರವಿಲ್ಲದೆ ಖಾಲಿ ಕೈಯಲ್ಲಿ ನಿರಾಸೆಯಿಂದ ಹಿಂದಿರುಗಿದರು.