2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ತನ್ನ ಐದು ಗ್ಯಾರಂಟಿಗಳ ಪೈಕಿ ಶಕ್ತಿ ಯೋಜನೆಯನ್ನು ಜೂನ್ 11ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾರಿಗೆ ತಂದರು. ಇದೇ ವೇಳೆ, ಕೆಲವು ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್‌ಗಳನ್ನು ನೀಡಲಾಗಿತ್ತು. ಇನ್ನುಳಿದಂತೆ ರಾಜ್ಯದ ಮಹಿಳೆಯರಿಗೆ ಉಚಿತವಾಗಿ ಬಸ್‌ನಲ್ಲಿ ಪ್ರಯಾಣ ಮಾಡಲು ಮುಂದಿನ ದಿನಗಳಲ್ಲಿ ಸ್ಮಾರ್ಟ್ ಕಾರ್ಡ್ ನೀಡಲಾಗುವುದು ಎಂದು ಹೇಳಲಾಗಿತ್ತು. ಇದೀಗ, ಸ್ಮಾರ್ಟ್ ಕಾರ್ಡ್‌ಗಳ ಬದಲಿಗೆ ಸಾಮಾನ್ಯ ಬಸ್ ಪಾಸ್ ನೀಡಲು ನಿಗಮ ಯೋಜಿಸಿದೆ ಎಂದು ತಿಳಿದು ಬಂದಿದೆ.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ನೀಡಿದ ನಂತರ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ನಿಗಮಗಳಿಗೆ ಅಧಿಕ ಆದಾಯ ಬರುತ್ತಿದೆ. ನಾಲ್ಕು ನಿಗಮದ ಬಸ್‌ಗಳಲ್ಲಿ ನಿತ್ಯ 56 ಸಾವಿರಕ್ಕೂ ಹೆಚ್ಚು ಮಹಿಳೆಯರು ಸಂಚರಿಸುತ್ತಿದ್ದಾರೆ.
ಸುಮಾರು ಮೂರು ಕೋಟಿ ಸ್ಮಾರ್ಟ್ ಕಾರ್ಡ್‌ಗಳನ್ನು ತಯಾರಿಸುವ ಕುರಿತು ಸೆಂಟರ್ ಫಾರ್ ಇ-ಆಡಳಿತ (ಸಿಇಜಿ)ವನ್ನು ಸಾರಿಗೆ ನಿಗಮ ಸಂಪರ್ಕಿಸಿತ್ತು. ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿತ್ತು. ಇಷ್ಟು ಪ್ರಮಾಣದ ಸ್ಮಾರ್ಟ್ ಕಾರ್ಡ್‌ಗಳನ್ನು ತಯಾರಿಸಲು ಸಿಇಜಿ ಹಿಂದೇಟು ಹಾಕಿದೆ. ಹಾಗಾಗಿ, ಸಾರಿಗೆ ನಿಗಮಗಳು ಸಾಮಾನ್ಯ ಬಸ್ ಪಾಸ್‌ಗಳನ್ನು ಹೋಲುವ ಶಕ್ತಿ ಪಾಸ್‌ಗಳನ್ನು ಪರಿಚಯಿಸಲು ನಿರ್ಧರಿಸಿವೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, “ಸ್ಮಾರ್ಟ್ ಕಾರ್ಡ್ ಅಭಿವೃದ್ಧಿಯ ಪ್ರಸ್ತಾವನೆಯನ್ನು ಸಿಇಜಿ ತಿರಸ್ಕರಿಸಿದೆ. ಹಾಗಾಗಿ, ಶಕ್ತಿ ಯೋಜನೆಯ ಸಾಮಾನ್ಯ ಬಸ್ ಪಾಸ್ ಪರಿಚಯಿಸಲು ನಿರ್ಧರಿಸಲಾಗಿದೆ. ಪಾಸ್ ಪ್ರಿಂಟಿಂಗ್ ಮತ್ತು ವಿತರಣೆಗೆ ಅಸ್ತಿತ್ವದಲ್ಲಿರುವ ವ್ಯವಸ್ಥೆ ಬಳಸಿಕೊಳ್ಳಬೇಕು” ಎಂದು ಸೂಚನೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಿಟ್ ಕಾಯಿನ್ ಪ್ರಕರಣ | ತನಿಖೆ ನಡೆಸಿದ್ದ ಸಿಸಿಬಿ ಅಧಿಕಾರಿಗಳ ವಿರುದ್ಧವೇ ಎಫ್‌ಐಆರ್ ದಾಖಲು
“ಈ ಬಸ್‌ಪಾಸ್‌ಗಳು ಸಾಮಾನ್ಯ ಬಸ್‌ಪಾಸ್‌ಗಳಂತೆ ಇರುತ್ತವೆ. ಈಗಾಗಲೇ ಪಾಸ್‌ಗಳನ್ನು ನೀಡುವ ವ್ಯವಸ್ಥೆಯನ್ನು ಹೊಂದಿರುವುದರಿಂದ ಈ ಕಾರ್ಯ ಸುಲಭವಾಗಲಿದೆ. ಈ ಯೋಜನೆಯ ಲಾಭ ಪಡೆಯಲು ಮಹಿಳೆಯರು ಅಧಿಕೃತ ಪೋರ್ಟಲ್‌ನಲ್ಲಿ ಅರ್ಜಿ ಹಾಕಬೇಕು. ನಂತರ ಈ ಪಾಸ್‌ಗಳನ್ನು ಬಸ್ ನಿಲ್ದಾಣಗಳು ಮತ್ತು ಡಿಪೋಗಳಲ್ಲಿ ವಿತರಣೆ ಮಾಡಲಾಗುವುದು” ಎಂದು ಹೇಳಿದ್ದಾರೆ.
ಈಗ ಗೃಹಜ್ಯೋತಿ ಮತ್ತು ಗೃಹಲಕ್ಷ್ಮಿ ಯೋಜನೆಗಳಿಗೆ ನೋಂದಣಿ ನಡೆಯುತ್ತಿರುವುದರಿಂದ ಶಕ್ತಿ ಸಾಮಾನ್ಯ ಕಾರ್ಡ್‌ಗಳ ನೋಂದಣಿ ಪ್ರಾರಂಭಕ್ಕೆ ವಿಳಂಬವಾಗಿದೆ.