ಹೊಸದಾಗಿ ಬರುವಂತಹ ಆಟೋಗಳಿಗೆ ಆರ್‌ಟಿಒ ಇಲಾಖೆ ಪರವಾನಗಿ(ಪರ್ಮಿಟ್) ನೀಡಬಾರದು. ಆಟೋ ಚಾಲಕರಿಗಾಗಿಯೇ ಆಟೋ ಚಾಲಕರ ನಿಗಮ ಮಂಡಳಿ ರಚನೆಯಾಗಬೇಕು ಎಂದು ಆಗ್ರಹಿಸಿ ಆಟೋ ಚಾಲಕರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿ ಮತ್ತು ಪ್ರಾದೇಶಿಕ ಕಚೇರಿ ಮುಂದೆ ಪ್ರತಿಭಟನೆಯನ್ನು ನಡೆಸಿದರು.
ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಿಂದ ವಾಸವಿ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಸಾಗಿದ, ದಾರಿಯುದ್ದಕ್ಕೂ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
“ಪರವಾನಗಿ ಇಲ್ಲದಿರುವ ಹೊರ ಪರವಾನಗಿ ಹೊಂದಿರುವ ಆಟೋಗಳನ್ನು ಹಿಡಿದು ಹಾಕಬೇಕು. ಆಟೋ ಚಾಲಕರ ಸಂಘಟನೆಗಳು ನಿಗದಿ ಪಡಿಸಿರುವ ಸ್ಥಳಗಳಿಗೆ ಆಟೋ ನಿಲ್ದಾಣಗಳನ್ನು ಜಿಲ್ಲಾ ಆಡಳಿತ ಈ ಕೂಡಲೇ ನಿರ್ಮಿಸಿಕೊಡಬೇಕು. ಹಳ್ಳಿಗಳಿಗೆ ಸೀಟು ಹೊಡೆಯುವ ಆಪೇ ಆಟೋಗಳನ್ನು ಈ ಕೂಡಲೇ ನಗರದಿಂದ ಬಹಿಷ್ಕರಿಸಬೇಕು, ರಾಜ್ಯಸರ್ಕಾರದಿಂದ ಬರುವ ಆಶ್ರಯ ಮನೆ ಯೋಜನೆಯಡಿಯಲ್ಲಿ ನಿರ್ಗತಿಕ ಆಟೋಚಾಲಕರಿಗೆ ಕಡ್ಡಾಯವಾಗಿ ಆಶ್ರಯ ಮನೆ ನೀಡಬೇಕು. ನಗರಸಾರಿಗೆ ಬಸ್ಸುಗಳಿಗೆ ನಿಗಧಿತ ಸಮಯ, ಸ್ಥಳ ಕಡ್ಡಾಯವಾಗಿ ಕೂಡಲೇ ನಿಗಧಿಪಡಿಸಬೇಕು” ಎಂದು ಒತ್ತಾಯಿಸಿದರು
“ಕಳೆದ 20 ವರ್ಷಗಳಿಂದ ಹಲವು ಆಟೋ ಸಂಘಟನೆಗಳು ಹೋರಾಟ ಮಾಡುತ್ತಾ ಮನವಿ ಸಲ್ಲಿಸಿದ್ದರೂ ಕೂಡ ಈ ಹಿಂದೆ ಇದ್ದ ಅಧಿಕಾರಿಗಳು ಬೇಡಿಕೆಗಳನ್ನು ಈಡೇರಿಸಿಲ್ಲ. ಹಾಗಾಗಿ ತಾವು ಮುಂದಿನ 15 ದಿನಗಳೊಳಗಾಗಿ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು” ಎಂದು ಜಿಲ್ಲಾಧಿಕಾರಿಗೆ ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ವ್ಯವಸಾಯಗಾರರ ಪರಿವರ್ತನಾ ಕೈಗಾರಿಕಾ, ವ್ಯಾಪಾರೋದ್ಯಮ ಸಹಕಾರ ಸಂಘದಲ್ಲಿಅಕ್ರಮ: ತನಿಖೆಗೆ ಆಗ್ರಹ
“ಒಂದು ವೇಳೆ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು” ಎಂದು ಎಚ್ಚರಿಕೆಯನ್ನು ನೀಡಿದರು.
ಈ ವೇಳೆ ಆಟೋ ಚಾಲಕ ಸಂಘಟನೆ ಒಕ್ಕೂಟದ ಬಹುತೇಕ ಕಾರ್ಯಕರ್ತರು ಇದ್ದರು.