- ಜಾನುವಾರುಗಳ ಆರೋಗ್ಯ ರಕ್ಷಣೆಯ ಜತೆಗೆ ಕೃಷಿ ಅಭಿವೃದ್ಧಿಗೆ ಪೂರಕ: ಸಿಎಂ
- ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಎಲ್ಲ ರೀತಿಯ ನೆರವು ನೀಡುವೆ: ಡಿಸಿಎಂ
ರಾಜ್ಯದಲ್ಲಿ ಪಶು ಸಂಪತ್ತು ಅಧಿಕವಾಗಿದೆ. ಪಶು ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆಯಿಂದ ಜಾನುವಾರುಗಳ ಆರೋಗ್ಯ ರಕ್ಷಣೆಯ ಜತೆಗೆ ಕೃಷಿ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅಥಣಿ ತಾಲ್ಲೂಕಿನ ಕೊಕಟನೂರಿನಲ್ಲಿ ಶುಕ್ರವಾರ ಪಶುವೈದ್ಯಕೀಯ ಮಹಾವಿದ್ಯಾಲಯ ಲೋಕಾರ್ಪಣೆಗೊಳಿಸಿ, ವಿವಿಧ ಅಭಿವೃದ್ಧಿ ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಅಥಣಿ ಮತಕ್ಷೇತ್ರಕ್ಕೆ ಶಾಸಕ ಲಕ್ಷ್ಮಣ ಸವದಿ ಅವರು ಕೊಡುಗೆ ಅಪಾರ. ಆಯಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದು ಜನಪ್ರತಿನಿಧಿಗಳ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಸವದಿ ಅವರ ಸಾಧನೆ ಅಭಿನಂದನಾರ್ಹ. ನೀರಾವರಿ ಯೋಜನೆ ಅನುಷ್ಠಾನ ಸೇರಿದಂತೆ ಎಲ್ಲ ಬೇಡಿಕೆ ಹಂತ ಹಂತವಾಗಿ ಈಡೇರಿಸಲಾಗುವುದು ಎಂದರು.
ಅಥಣಿ ಹಾಗೂ ಕಾಗವಾಡ ಮತಕ್ಷೇತ್ರದ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಎಲ್ಲ ರೀತಿಯ ನೆರವು ನೀಡಲಾಗುವುದು. ಅಥಣಿ ಶಾಸಕರ ನೀರಾವರಿ ಯೋಜನೆಗಳ ಕನಸು ದೊಡ್ಡದಾಗಿವೆ. ಇಡೀ ಕ್ಷೇತ್ರದ ಜನರ ಬದುಕು ಹಸನಾಗಿಸಲು ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಅವರು ಬಯಸಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭರವಸೆ ನೀಡಿದರು.
ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಲೋಕಾರ್ಪಣೆಗೊಂಡಿರುವ ಪಶು ವೈದ್ಯಕೀಯ ಮಹಾವಿದ್ಯಾಲಯವು ಮುಂಬರುವ ದಿನಗಳಲ್ಲಿ ರೈತ ಸಮುದಾಯ, ವಿದ್ಯಾರ್ಥಿಗಳು ಹಾಗೂ ಈ ಭಾಗದ ಜಾನುವಾರುಗಳಿಗೆ ಅನುಕೂಲವಾಗಲಿದೆ. ಮಹಾವಿದ್ಯಾಲಯಕ್ಕೆ ಅಗತ್ಯ ಮೂಲಸೌಕರ್ಯವನ್ನು ಒದಗಿಸಲಾಗುವುದು. ಅಥಣಿ ಭಾಗದ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನವನ್ನು ಸರ್ಕಾರ ನೀಡಲಿದೆ ಎಂದು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಶಕ್ತಿ ಯೋಜನೆ | ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ಬದಲಿಗೆ ಸಾಮಾನ್ಯ ಬಸ್ ಪಾಸ್ ವಿತರಣೆ
ನಾಲ್ಕು ಟಿಎಂಸಿ ನೀರು ವಿನಿಮಯ ಒಪ್ಪಂದಕ್ಕೆ ಮನವಿ
ಮಹಾರಾಷ್ಟಕ್ಕೆ ಮಳೆಗಾಲದಲ್ಲಿ ನಾಲ್ಕು ಟಿಎಂಸಿ ನೀಡಿ ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಮಹಾರಾಷ್ಟ್ರದಿಂದ ನಮ್ಮ ರಾಜ್ಯಕ್ಕೆ ನಾಲ್ಕು ಟಿಎಂಸಿ ನೀರು ವಿನಿಮಯ ಮಾಡಿಕೊಳ್ಳುವ ಒಪ್ಪಂದಕ್ಕೆ ಸರ್ಕಾರ ಮುಂದಾಗಬೇಕು. ಈ ರೀತಿಯ ಒಪ್ಪಂದದಿಂದ ಸರಕಾರಕ್ಕೆ ಯಾವುದೇ ರೀತಿಯ ಆರ್ಥಿಕ ಹೊರೆಯಾಗುವುದಿಲ್ಲ ಎಂದರು.
ಈ ಭಾಗದ ವಿದ್ಯಾರ್ಥಿಗಳು ಮತ್ತು ಜಾನುವಾರುಗಳನ್ನು ಸಾಕಿಕೊಂಡಿರುವ ರೈತ ಸಮುದಾಯಕ್ಕೆ ಪಶು ವೈದ್ಯಕೀಯ ಮಹಾವಿದ್ಯಾಲಯವು ಅನುಕೂಲವಾಗಲಿದೆ. ವೈದ್ಯರು, ಔಷಧಿಗಳ ಕೊರತೆಯ ಮಧ್ಯೆಯೂ ಪಶುಸಂಗೋಪನೆ ಇಲಾಖೆಯ ಉತ್ತಮ ಸೇವೆ ಒದಗಿಸುತ್ತಿದೆ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರಾದ ಕೆ.ವೆಂಕಟೇಶ್ ತಿಳಿಸಿದರು.
ಅಥಣಿ ಶಾಸಕ ಲಕ್ಷ್ಮಣ ಸವದಿ ಪ್ರಾಸ್ತಾವಿಕವಾಗಿ ಮಾತನಾಡಿ, 70 ಸಾವಿರ ಎಕರೆ ಜಮೀನು ನೀರಾವರಿಯಿಂದ ವಂಚಿತಗೊಂಡಿದ್ದು, ಇದಕ್ಕೆ ಅವಕಾಶ ಕಲ್ಪಿಸಬೇಕು. ಅದೇ ರೀತಿ ಒಂಬತ್ತು ಹಳ್ಳಿಗಳು ಮತ್ತು ಜಮೀನು ಸವಳು-ಜವಳು ಸಮಸ್ಯೆಯಿಂದ ಬಾಧಿತಗೊಂಡಿರುತ್ತವೆ ಇದಕ್ಕೆ ಪರಿಹಾರ ಕಲ್ಪಿಸಬೇಕು. ಕೃಷಿ ಮಹಾವಿದ್ಯಾಲಯ ಸ್ಥಾಪನೆಗೆ ತಕ್ಷಣಕ್ಕೆ 20 ಕೋಟಿ ಒದಗಿಸಬೇಕು. ಅಥಣಿ ಭಾಗದ ಒಣ ದ್ರಾಕ್ಷಿಯನ್ನು ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಪೌಷ್ಟಿಕಾಹಾರ ತಯಾರಿಕೆಗೆ ಖರೀದಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ವಿನಂತಿಸಿದರು.

ಜಗಜ್ಯೋತಿ ಬಸವೇಶ್ವರರ ಪ್ರತಿಮೆ ಅನಾವರಣ
ಬೆಳಗಾವಿಯ ಅಥಣಿಯಲ್ಲಿ ಜಗಜ್ಯೋತಿ ಬಸವೇಶ್ವರರ ಪ್ರತಿಮೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅನಾವರಣಗೊಳಿಸಿದರು. ಬಳಿಕ ಮಾತನಾಡಿ, “ಬಸವಣ್ಣನವರು 12ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿಯನ್ನು ತಂದ ಮಹಾಪುರುಷರು. ಜಡ್ಡುಗಟ್ಟಿದ ಸಮಾಜವನ್ನು ಸಕ್ರಿಯಗೊಳಿಸಿ, ಮಾನವೀಯತೆಯುಳ್ಳ ಹೊಸ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಿದರು” ಎಂದು ಬಣ್ಣಿಸಿದರು.
ನುಡಿದಂತೆ ನಡೆಯಲು ಪ್ರಾಮಾಣಿಕ ಪ್ರಯತ್ನ
“ನಾವೆಲ್ಲರೂ ನುಡಿದಂತೆ ನಡೆಯಬೇಕು ಎಂಬ ವಿಚಾರವನ್ನು ಬಸವಾದಿ ಶರಣರು ನಮ್ಮ ಸಮಾಜಕ್ಕೆ ನೀಡಿದರು. ಈ ವಿಚಾರದಲ್ಲಿ ನಂಬಿಕೆಯಿರುವ ನಮ್ಮ ಸರ್ಕಾರ ನುಡಿದಂತೆ ನಡೆಯುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ, ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಗೃಹಲಕ್ಷ್ಮಿ ಯೋಜನೆಯನ್ನು ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ನೇತೃತ್ವದಲ್ಲಿ ಚಾಲನೆ ನೀಡಲಾಗುವುದು. ಈ ಕಾರ್ಯಕ್ರಮಕ್ಕೆ ಸುಮಾರು 30 ಸಾವಿರ ಕೋಟಿ ರೂ. ವೆಚ್ಚವಾಗಲಿದೆ” ಎಂದರು.