ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಕೇಂದ್ರ ಕಚೇರಿಯ ಗುಣನಿಯಂತ್ರಣ ಮತ್ತು ಪ್ರಯೋಗಾಲಯ ವಿಭಾಗದಲ್ಲಿ ಶುಕ್ರವಾರ ಮಧ್ಯಾಹ್ನ ಅಗ್ನಿ ಅವಘಡ ಸಂಭವಿಸಿದೆ.
ಈ ದುರಂತದಲ್ಲಿ 9 ಸಿಬ್ಬಂದಿ ಗಾಯಗೊಂಡಿದ್ದಾರೆ. ದುರಂತ ನಡೆದು ಅರ್ಧ ಗಂಟೆಯಾದರೂ ಅಲ್ಲಿಗೆ ಅಗ್ನಿಶಾಮಕ ಸಿಬ್ಬಂದಿ ತಲುಪಿಲ್ಲ ಎಂಬ ಆರೋಪ ಕೇಳಿಬಂದಿದೆ. ತಡವಾಗಿ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ.
ಅಗ್ನಿ ಅನಾಹುತಕ್ಕೆ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಪ್ರಯೋಗಾಲಯದಲ್ಲಿ ಯಾವುದೊ ಒಂದು ವಸ್ತು ಸ್ಪೋಟವಾಗಿ ದುರಂತ ಸಂಭವಿಸಿದೆ. ಸ್ಥಳದಲ್ಲಿ 9 ಜನ ಇದ್ದರು ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.
ಸ್ಫೋಟ ಸಂಭವಿಸಿದ ಬಳಿಕ ಪ್ರಯೋಗಾಲಯದ ಒಳಗೆ ಬೆಂಕಿ ತೀವ್ರವಾಗಿ ಕಾಣಿಸಿಕೊಂಡಿದೆ. ಈ ವೇಳೆ, ಒಳಗಿದ್ದವರು ಹೊರಗೆ ಬರುವುದಕ್ಕೂ ಹರಸಾಹಸ ಪಡಬೇಕಾಯಿತು. ಹೊರಗೆ ಬಂದವರು ಬೆಂಕಿಗೆ ಸಿಲುಕಿ ಗಂಭೀರ ಗಾಯಗೊಂಡಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಗುಣ ನಿಯಂತ್ರಣ ಪ್ರಯೋಗಾಲಯದಲ್ಲಿ ಬೆಂಕಿ ಅವಘಡದಿಂದ ಒಟ್ಟು 9 ಮಂದಿಗೆ ಗಾಯವಾಗಿದೆ. ಈ ಪೈಕಿ 2 ಮಹಿಳೆಯರು, 7 ಪುರುಷರಿಗೆ ಗಾಯವಾಗಿದೆ. ಮುಖ್ಯ ಅಭಿಯಂತರರಾದ ಶಿವಕುಮಾರ್ ರವರನ್ನು ನೇರವಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆ ನೀಡಲು ಕರೆತರಲಾಗಿದೆ. ಉಳಿದ 8 ಮಂದಿಗೆ ಮಾರ್ಥಾಸ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಆಂಬುಲೆನ್ಸ್ ಗಳ ಮೂಲಕ ವಿಕ್ಟೋರೊಯಾ ಆಸ್ಪತ್ರೆಗೆ ರವಾನಿಸಲಾಯಿಗೆ ಎಂದು ಬಿಬಿಎಂಪಿ ತಿಳಿಸಿದೆ.
ಬೆಂಕಿ ಅವಘಡದಿಂದ ಗಾಯಗೊಂಡವರು
- ಶಿವಕುಮಾರ್, ಮುಖ್ಯ ಅಭಿಯಂತರರು.
- ಕಿರಣ್, ಕಾರ್ಯಪಾಲಕ ಅಭಿಯಂತರರು.
- ಸಂತೋಷ್ ಕುಮಾರ್, ಕಾರ್ಯಪಾಲಕ ಅಭಿಯಂತರರು.
- ವಿಜಯಮಾಲ, ಕಾರ್ಯಪಾಲಕ ಅಭಿಯಂತರರು.
- ಶ್ರೀಧರ್, ಸಹಾಯಕ ಕಾರ್ಯಪಾಲಕ ಅಭಿಯಂತರರು.
- ಸಿರಾಜ್, ಪ್ರಥಮ ದರ್ಜೆ ಸಹಾಯಕರು.
- ಜ್ಯೋತಿ, ಆಪರೇಟರ್.
- ಶ್ರಿನಿವಾಸ್, ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್.
- ಮನೋಜ್, ಗಣಕಯಂತ್ರ ನಿರ್ವಾಹಕರು.
ಘಟನೆಯ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, “ಬೆಂಕಿಯು ತೀವ್ರವಾಗಿ ಹತ್ತಿಕೊಂಡಿದೆ. ಸುಮಾರು ಎಂಟು ಜನ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿಕಿತ್ಸೆ ನೀಡಲಾಗುತ್ತಿದೆ. ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಬಂದಿದ್ದಾರೆ. ಬೆಂಕಿ ಹೇಗೆ ಹತ್ತಿಕೊಂಡಿದೆ ಎಂಬ ಬಗ್ಗೆ ತಿಳಿದಿಲ್ಲ. ತುಂಬಾ ನಷ್ಟವಾಗಿದೆ. ಈ ಬಗ್ಗೆ ತನಿಖೆ ನಡೆಸಲಿದ್ದೇವೆ” ಎಂದು ತಿಳಿಸಿದರು.
