ಲಡಾಖ್ ಕೇಂದ್ರಾಡಳಿತ ಪ್ರದೇಶಕ್ಕೆ ರಾಜ್ಯ ಸ್ಥಾನಮಾನ ನೀಡಬೇಕು ಮತ್ತು ಆರನೇ ಪರಿಚ್ಛೇದ ವಿಸ್ತರಣೆ ಸೇರಿದಂತೆ ನಾಲ್ಕು ಬೇಡಿಕೆಗಳನ್ನು ಮುಂದಿಟ್ಟು ಶನಿವಾರ ಬೆಳಿಗ್ಗೆಯಿಂದ ಕಾರ್ಗಿಲ್‌ನಲ್ಲಿ ಮೂರು ದಿನಗಳ ಉಪವಾಸ ಸತ್ಯಾಗ್ರಹ ಆರಂಭವಾಗಿದೆ. ಪಟ್ಟಣದ ಹುಸ್ಸಾನಿ ಪಾರ್ಕ್‌ನಲ್ಲಿ ಕಾರ್ಗಿಲ್ ಡೆಮಾಕ್ರಟಿಕ್ ಅಲೈಯನ್ಸ್ (ಕೆಡಿಎ) ಮತ್ತು ಲೇಹ್ ಅಪೆಕ್ಸ್ ಬಾಡಿ (ಎಲ್‌ಎಬಿ) ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದೆ.
ಕೆಡಿಎ ಮತ್ತು ಎಲ್‌ಎಬಿ ಕಳೆದ ಐದು ವರ್ಷಗಳಿಂದ ಜಂಟಿಯಾಗಿ ಆಂದೋಲನವನ್ನು ಮುನ್ನಡೆಸುತ್ತಿವೆ. ಈಗಾಗಲೇ ಗೃಹ ಸಚಿವಾಲಯದೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿವೆ. ಆದರೆ ಯಾವುದೂ ಸಫಲವಾಗಿಲ್ಲ.
ಇದನ್ನು ಓದಿದ್ದೀರಾ? ಉಪವಾಸ ಸತ್ಯಾಗ್ರಹ ವೇಳೆ ಹದಗೆಟ್ಟ ದೆಹಲಿ ಸಚಿವೆ ಅತಿಶಿ ಆರೋಗ್ಯ; ಆಸ್ಪತ್ರೆಗೆ ದಾಖಲು
“ಲಡಾಖ್ ಅನ್ನು ಆಳುವ ಭವಿಷ್ಯವನ್ನು ನಾವು ಒಟ್ಟಾಗಿ ನಿರ್ಮಿಸಬಹುದು ಲಡಾಖ್‌ಗೆ ರಾಜ್ಯ ಸ್ಥಾನಮಾನ, ಸಂವಿಧಾನದ ಆರನೇ ಪರಿಚ್ಛೇದದ ಅಡಿಯಲ್ಲಿ ಸೇರ್ಪಡೆ, ಲೇಹ್ ಮತ್ತು ಕಾರ್ಗಿಲ್ ಪ್ರದೇಶಗಳಿಗೆ ಪ್ರತ್ಯೇಕ ಲೋಕಸಭಾ ಸ್ಥಾನಗಳು, ಸಾರ್ವಜನಿಕ ಸೇವಾ ಆಯೋಗ(PSC) ಸ್ಥಾಪನೆಗೆ ಆಗ್ರಹಿಸಿ ಮೂರು ದಿನಗಳ ಉಪವಾಸ ಸತ್ಯಾಗ್ರಹ” ಎಂದು ಉಪವಾಸ ಸತ್ಯಾಗ್ರಹದ ಸ್ಥಳದಲ್ಲಿ ಕೆಡಿಎ ಮತ್ತು ಎಲ್‌ಎಬಿ ಜಂಟಿಯಾಗಿ ಹಾಕಿರುವ ಬ್ಯಾನರ್‌ನಲ್ಲಿ ಬರೆಯಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಡಿಎ ಉಪಾಧ್ಯಕ್ಷ ಅಸ್ಗರ್ ಅಲಿ ಕರ್ಬಲೈ, “ನಮ್ಮ ನಾಲ್ಕು ಬೇಡಿಕೆಗಳಿಗೆ ಬೆಂಬಲ ನೀಡಿ ಉಪವಾಸ ಸತ್ಯಾಗ್ರಹ ನಡೆಯುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ನಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರಗಳು, ಉಪವಾಸ ಸತ್ಯಾಗ್ರಹ, ಪ್ರತಿಭಟನೆ, ಪಾದಯಾತ್ರೆ ಮೊದಲಾದವುಗಳನ್ನು ನಡೆಸಿದ್ದೇವೆ. ಕೇಂದ್ರದೊಂದಿಗೆ ಚರ್ಚಿಸಲಾಗಿದೆ, ಇನ್ನೂ ಅಧಿಕ ಚರ್ಚೆ ಅಗತ್ಯವಿದೆ” ಎಂದು ತಿಳಿಸಿದ್ದಾರೆ.
“ಮೇ ತಿಂಗಳಲ್ಲಿ ನಾವು ನಡೆಸಿದ ಕೊನೆಯ ಚರ್ಚೆಯಲ್ಲಿ, ಎಚ್‌ಪಿಸಿ ಅಧ್ಯಕ್ಷ ಮತ್ತು ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರೈ ಮುಂದಿನ ತಿಂಗಳಿನಿಂದ ರಾಜ್ಯತ್ವ ಮತ್ತು ಆರನೇ ಪರಿಚ್ಛೇದದ ಕುರಿತು ಚರ್ಚೆ ಪ್ರಾರಂಭವಾಗಲಿದೆ ಎಂದು ಭರವಸೆ ನೀಡಿದ್ದರು. ಆದರೆ ಇನ್ನೂ ಯಾವುದೇ ಚರ್ಚೆ ಪ್ರಾರಂಭವಾಗಿಲ್ಲ. ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿರುವಂತೆ ಕಾಣುತ್ತಿದೆ” ಎಂದು ಅಸ್ಗರ್ ಅಲಿ ಆರೋಪಿಸಿದ್ದಾರೆ.
ಹಾಗೆಯೇ ಸರ್ಕಾರ ಪ್ರತಿಕ್ರಿಯಿಸಲು ವಿಫಲವಾದರೆ ಇಡೀ ಲಡಾಖ್‌ನಲ್ಲಿ ಆಂದೋಲನ ನಡೆಯಲಿದೆ. ಎರಡೂ ಸಂಸ್ಥೆಗಳ ಸಮಿತಿ ಚರ್ಚಿಸಿ ಮುಂದಿನ ಕ್ರಮವನ್ನು ನಿರ್ಧರಿಸುತ್ತದೆ.
ಕೆಡಿಎಯ ಮತ್ತೊಬ್ಬ ಪ್ರಮುಖ ನಾಯಕ ಸಜ್ಜದ್ ಕಾರ್ಗಿಲ್, ಮುಂದಿನ ಸುತ್ತಿನ ಮಾತುಕತೆಯಲ್ಲಿ ಸರ್ಕಾರ ತನ್ನ ಭರವಸೆಯನ್ನು ಉಳಿಸಿಕೊಳ್ಳಲು ವಿಫಲವಾಗಿದೆ ಎಂದು ಆರೋಪಿಸಿದರು.
