ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರವರೆಗಿನ 19.50 ಕಿ.ಮೀ. ವಿಸ್ತಾರದ ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಇಂದು(ಆಗಸ್ಟ್ 10) ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಹಲವು ನಾಯಕರುಗಳಿಗೆ ಈಗಾಗಲೇ ಆಹ್ವಾನ ನೀಡಲಾಗಿದೆ. ಆದರೆ ವಿಪಕ್ಷ ನಾಯಕ, ಬಿಜೆಪಿಯ ಹಿರಿಯ ನಾಯಕ ಆರ್ ಅಶೋಕ್ ಅವರಿಗೆ ವೇದಿಕೆಯಲ್ಲಿ ಸ್ಥಾನವೇ ನೀಡಿಲ್ಲ. ಈ ವಿಚಾರದಲ್ಲಿ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ವ್ಯಂಗ್ಯವಾಡಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪ್ರಿಯಾಂಕ್ ಅವರು, “ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ಸ್ವಪಕ್ಷದವರು ವಿರೋಧಿಸುವ ನಾಯಕನಾಗಿದ್ದಾರೆಯೇ! ಬೆಂಗಳೂರು ಮೆಟ್ರೋ ಫೇಸ್ 2 ಉದ್ಘಾಟನೆ ಕಾರ್ಯಕ್ರಮ ಆಯೋಜಿಸಿರುವ ಕೇಂದ್ರ ಸರ್ಕಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರಿಗೇ ವೇದಿಕೆಯಲ್ಲಿ ಜಾಗ ನೀಡುವುದನ್ನು ನಿರಾಕರಿಸಿದೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಆಗಸ್ಟ್ 10ರಂದು ಪ್ರಧಾನಿ ಚಾಲನೆ
“ಕೇಂದ್ರ ಸರ್ಕಾರ ಪ್ರೊಟೋಕಾಲ್ ಮರೆತಿದೆಯೇ? ಅಥವಾ ಉದ್ದೇಶಪೂರ್ವಕ ಕಡೆಗಣನೆಯೇ? ಮೊದಲ ಬಾರಿ ಶಾಸಕರಾಗಿರುವ ಹಾಗೂ ಬೆಂಗಳೂರಿನ ಶಾಸಕರಲ್ಲದಿರುವ ಬಿ ವೈ ವಿಜಯೇಂದ್ರ ಅವರಿಗೆ ಸಿಕ್ಕ ಅವಕಾಶ ಅಶೋಕ್ ಅವರಿಗಿಲ್ಲ” ಎಂದು ಪ್ರಿಯಾಂಕ್ ಉಲ್ಲೇಖಿಸಿದ್ದಾರೆ.
ಹಾಗೆಯೇ, “ಮಾನ್ಯ ಅಶೋಕ್ ಅವರೇ, ತಾವು ಬೆಂಗಳೂರು ಶಾಸಕರಾಗಿದ್ದರೂ, ವಿರೋಧ ಪಕ್ಷದ ನಾಯಕನಾಗಿದ್ದರೂ, ಬಿಜೆಪಿಯ ಹಿರಿಯ ನಾಯಕ ಎನಿಸಿಕೊಂಡಿದ್ದರೂ, ಹಲವು ಬಾರಿ ಆಯ್ಕೆ ಆಗಿದ್ದರೂ ನಿಮ್ಮನ್ನು ಕಡೆಗಣಿಸಲಾಗಿದೆ ಎಂದರೆ ನಿಮ್ಮ ಕುರ್ಚಿ ಕಿತ್ತುಕೊಳ್ಳುವ ಸಂದೇಶ ಬಂದಿದೆ ಎಂದು ಭಾವಿಸೋಣವೇ” ಎಂದು ಪ್ರಶ್ನಿಸಿದ್ದಾರೆ.
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಸ್ವಪಕ್ಷದವರು ವಿರೋಧಿಸುವ ನಾಯಕನಾಗಿದ್ದಾರೆಯೇ!
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) August 9, 2025
ಬೆಂಗಳೂರು ಮೆಟ್ರೋ ಫೇಸ್ 2 ಉದ್ಘಾಟನೆ ಕಾರ್ಯಕ್ರಮ ಆಯೋಜಿಸಿರುವ ಕೇಂದ್ರ ಸರ್ಕಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರಿಗೇ ವೇದಿಕೆಯಲ್ಲಿ ಜಾಗ ನೀಡುವುದನ್ನು ನಿರಾಕರಿಸಿದೆ.
ಕೇಂದ್ರ ಸರ್ಕಾರ ಪ್ರೊಟೋಕಾಲ್ ಮರೆತಿದೆಯೇ?
ಅಥವಾ ಉದ್ದೇಶಪೂರ್ವಕ… pic.twitter.com/AtXS9Lg2M0
“ಯಾರು ಯಾರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿಲ್ಲ ಎಂದು ತಲೆಕೆಡಿಸಿಕೊಂಡು ಕುಳಿತಿದ್ದ ತಮಗೆ ಈಗ ‘ನನಗೇಕೆ ಆಹ್ವಾನವಿಲ್ಲ’ ಎಂದು ತಲೆಕೆಡಿಸಿಕೊಂಡು ಕೂರುವ ಸಮಯ ಬಂದಿದೆ. ಇನ್ನಾದರೂ ಇತರರ ಮನೆ ಇಣುಕುವ ಬದಲು ನಿಮ್ಮ ಬುಡ ಅಲ್ಲಾಡುತ್ತಿರುವುದನ್ನು ಗಮನಿಸಿದರೆ ಒಳ್ಳೆಯದು” ಎಂದು ತಿಳಿಸಿದ್ದಾರೆ.
ಈ ಹಿಂದೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನಿಷ್ಠ ಪಕ್ಷ ಒಂದು ಟ್ವೀಟ್ ಮಾಡಿಯೂ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿಲ್ಲ. ಒಬ್ಬರ ಮುಖ ಒಬ್ಬರು ನೋಡಲಾಗದ ಈ ನಾಯಕರು ರಾಜ್ಯವನ್ನು ಹೇಗೆ ಮುನ್ನಡೆಸುತ್ತಾರೆ ಎಂದು ಆರ್ ಅಶೋಕ್ ಪ್ರಶ್ನಿಸಿದ್ದರು. ಆದರೆ ಈಗ ವಿಪಕ್ಷ ನಾಯಕರಾದರೂ ಅಶೋಕ್ ಅವರಿಗೆ ಸ್ಥಾನ ನೀಡದಿರುವುದನ್ನು ಕಾಂಗ್ರೆಸ್ ಅಶೋಕ್ ಟೀಕೆಗೆ ಬಳಸಿಕೊಳ್ಳುತ್ತಿದೆ.
