ಖ್ಯಾತ ನಟಿ, ಮಾಜಿ ಸಂಸದೆ ಜಯಪ್ರದಾ ಅವರು ನಡೆಸುತ್ತಿದ್ದ ಚಿತ್ರಮಂದಿರದ ಕೆಲಸಗಾರರಿಗೆ ಸೂಕ್ತ ಇಎಸ್ಐ ಹಣ ನೀಡಿಲ್ಲ ಎಂದು ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಚೆನ್ನೈ ನ್ಯಾಯಾಲಯವು, ಆರು ತಿಂಗಳು ಜೈಲು ಶಿಕ್ಷೆ ಜತೆಗೆ ₹5 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ಜಯಪ್ರದಾ ಅವರು ಚೆನ್ನೈನಲ್ಲಿ ರಾಮ್ ಕುಮಾರ್ ಮತ್ತು ರಾಜ ಬಾಬು ಜತೆಗೆ ಸೇರಿ ಎರಡು ಚಿತ್ರಮಂದಿರ ನಡೆಸುತ್ತಿದ್ದರು. ಚಿತ್ರಮಂದಿರದಲ್ಲಿ ಕೆಲಸ ಮಾಡುವ ಕಾರ್ಮಿಕರ ಸಂಬಳದಲ್ಲಿ ಚಿತ್ರಮಂದಿರದ ಆಡಳಿತ ಮಂಡಳಿಯವರು ಇಎಸ್ಐ ಹಣ ಕಡಿತ ಮಾಡಿಕೊಳ್ಳುತ್ತಿದ್ದರು. ಆದರೆ, ಅದನ್ನು ಸರ್ಕಾರಿ ಕಾರ್ಮಿಕರ ವಿಮಾ ನಿಗಮಕ್ಕೆ ಪಾವತಿ ಮಾಡುತ್ತಿರಲಿಲ್ಲ.
ತಮ್ಮ ಪಾಲಿನ ಇಎಸ್ಐ ಸಿಗುತ್ತಿಲ್ಲ ಎಂದು ಕಾರ್ಮಿಕರೊಬ್ಬರು ಆರೋಪಿಸಿ, ರಾಜ್ಯ ವಿಮಾ ನಿಗಮದ ವಿರುದ್ಧ ದೂರು ದಾಖಲಿಸಿದ್ದರು. ಬಳಿಕ ಸರ್ಕಾರಿ ಕಾರ್ಮಿಕರ ವಿಮಾ ನಿಗಮವು ಜಯಪ್ರದಾ ವಿರುದ್ಧ ಚೆನ್ನೈನ ಎಗ್ಮೋರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ದಾಖಲಿಸಿತ್ತು.
ಈ ಹಿಂದೆ ಜಯಪ್ರದಾ ಸೇರಿದಂತೆ ಮೂವರು ಮದ್ರಾಸ್ ಹೈಕೋರ್ಟ್‌ನಲ್ಲಿ ಈ ಪ್ರಕರಣವನ್ನು ಸಮರ್ಥಿಸಿಕೊಂಡಿದ್ದರು. ಆದರೆ, ಚೆನ್ನೈ ಎಗ್ಮೋರ್ ನ್ಯಾಯಾಲಯವು ಜಯಪ್ರದಾ ಅವರಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ಈ ಸುದ್ದಿ ಓದಿದ್ದೀರಾ? ಪತ್ರಕರ್ತರಲ್ಲಿ ಪ್ರಶ್ನೆ ಮಾಡುವ ಸೂಕ್ಷ್ಮತೆ ಕ್ಷೀಣ: ಹಿರಿಯ ಪತ್ರಕರ್ತ ರುದ್ರಣ್ಣ ಹರ್ತಿಕೋಟೆ
ಜಯಪ್ರದಾ ಮತ್ತು ಇತರ ಇಬ್ಬರಿಗೆ ತಲಾ ₹5000 ದಂಡ ಹಾಗೂ 6 ತಿಂಗಳು ಜೈಲು ವಿಧಿಸಿದೆ.
ಈ ಹಿಂದೆಯೂ ಕೂಡ ಜಯಪ್ರದಾ ಅವರು ಥಿಯೇಟರ್ ಕಾಂಪ್ಲೆಕ್ಸ್ಗೆ ಸಂಬಂಧಿಸಿದಂತೆ ಸುಮಾರು ₹20 ಲಕ್ಷ ತೆರಿಗೆ ಹಣವನ್ನು ಪಾವತಿ ಮಾಡಿರಲಿಲ್ಲ. ಆಗ ಸಿಟಿ ಸಿವಿಲ್ ನ್ಯಾಯಾಲಯದ ಆದೇಶದಂತೆ ಪಾಲಿಕೆ ಅಧಿಕಾರಿಗಳು ಥಿಯೇಟರಿನ ಕುರ್ಚಿ, ಪ್ರೊಜೆಕ್ಟರ್ಗಳನ್ನು ಜಪ್ತಿ ಮಾಡಿದ್ದರು.
ಜಯಪ್ರದಾ ಅವರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ರಾಜಕೀಯದಲ್ಲಿಯೂ ಸಕ್ರೀಯವಾಗಿದ್ದರು.