ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ,ಇತಿಹಾಸ ತಜ್ಞ ಡಾ. ಉದಯ ಬಾರ್ಕೂರು(59) ಶುಕ್ರವಾರ ಸಂಜೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಅನಾರೋಗ್ಯದ ಹಿನ್ನೆಲೆಯಲ್ಲಿ ಮಂಗಳೂರಿನ ದೇರಳಕಟ್ಟೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಇಂದು ಸಂಜೆ 5.30ರ ಸುಮಾರಿಗೆ ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಅವರ ಸ್ನೇಹಿತರೋರ್ವರು ಈ ದಿನ.ಕಾಮ್‌ಗೆ ತಿಳಿಸಿದರು.
ರಾಜ್ಯದ ಅತ್ಯುತ್ತಮ ಇತಿಹಾಸಕಾರರಲ್ಲೋರ್ವರಾಗಿದ್ದ ಉದಯ ಬಾರ್ಕೂರು, ಇತ್ತೀಚೆಗೆ ಮಂಗಳೂರು ವಿವಿಯ ನೆಹರೂ ಚಿಂತನ ಕೇಂದ್ರದ ನಿರ್ದೇಶಕರಾಗಿ ಕೂಡ ಆಯ್ಕೆಯಾಗಿದ್ದರು.
ಟಿಪ್ಪು ಸುಲ್ತಾನ್ ಕುರಿತಂತೆ ಹೆಚ್ಚು ಅಧ್ಯಯನ ನಡೆಸಿದ್ದ ರಾಜ್ಯದ ಬೆರಳೆಣಿಕೆಯ ಇತಿಹಾಸಕಾರರಲ್ಲಿ ಉದಯ್ ಬಾರ್ಕೂರು ಕೂಡ ಒಬ್ಬರಾಗಿದ್ದರು. ‘ಟಿಪ್ಪು- ಹೈದರಾಲಿ : ಇತಿಹಾಸ ಕಥನ’ ಎಂಬ ಅವರ ಕೃತಿ ಬಹಳ ಅಮೂಲ್ಯವಾದುದಾಗಿತ್ತು. ಇದಲ್ಲದೇ ಸುಮಾರು ಹತ್ತರಷ್ಟು ಅಮೂಲ್ಯ ಇತಿಹಾಸ ಗ್ರಂಥಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ.
ಉಡುಪಿ ಜಿಲ್ಲೆಯ ಬಾರ್ಕೂರು ನಿವಾಸಿಯಾಗಿದ್ದ ಇವರು, ದೇರಳಕಟ್ಟೆಯ ನಾಟೇಕಲ್ ಸಮೀಪ ಕುಟುಂಬದೊಂದಿಗೆ ವಾಸವಿದ್ದರು. 33 ವರ್ಷ ಇತಿಹಾಸ ಪ್ರಾಧ್ಯಾಪರಾಗಿ ಸೇವೆ ಸಲ್ಲಿಸುತ್ತಿದ್ದರು. ಮಧ್ಯಕಾಲೀನ ಭಾರತೀಯ ಇತಿಹಾಸ, ಮಧ್ಯಕಾಲೀನ ಕರ್ನಾಟಕ ಮತ್ತು ಕರಾವಳಿಯ ಸಾಮಾಜಿಕ ಇತಿಹಾಸದ, ಎಪಿಗ್ರಫಿ ಸೇರಿದಂತೆ ಸಮಗ್ರ ಜ್ಞಾನ ಹೊಂದಿದ್ದ ಇವರು, ಆಕ್ಸ್‌ಫರ್ಡ್ ವಿವಿಯಿಂದ ಪೊಸ್ಟರಲ್ ಡಾಕ್ಟರೇಟ್ ಪದವಿ ಕೂಡ ಪಡೆದಿದ್ದರು. ಅಲ್ಲದೇ, ಕಾಮನ್ವೆಲ್ತ್ ಫೆಲೋಶಿಪ್ ಕೂಡ ಪಡೆದಿದ್ದರು.
ಮೃತರು ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.