ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಯುವಕನೊಬ್ಬ ಬೆಂಗಳೂರಿನಲ್ಲಿ ಆಟೋ ಚಾಲಕ ವೃತ್ತಿ ಮಾಡುತ್ತಿದ್ದು, ಅಪಘಾತದಲ್ಲಿ ಗಾಯಗೊಂಡು, ಮೆದುಳು ನಿಷ್ಕ್ರಿಯಗೊಂಡ ನಂತರ ತನ್ನ ಅಂಗಾಂಗ ದಾನ ಮಾಡುವ ಮೂಲಕ ಎಂಟು ಜನರ ಬದುಕಿಗೆ ಬೆಳಕಾಗಿದ್ದಾರೆ. ತಮ್ಮ ಸಾವಿನಲ್ಲೂ ಜೀವ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಸಿದ್ದಾಪುರ ತಾಲೂಕಿನ ಶಿರಳಗಿ ಮೂಲದ ವಿನಾಯಕ ವೆಂಕಟೇಶ್ ನಾಯ್ಕ ಅವರು ಜುಲೈ 27ರಂದು ಬೆಂಗಳೂರಿನ ಸೀತಾ ಸರ್ಕಲ್ ಬಳಿ ತಮ್ಮ ಆಟೋರಿಕ್ಷಾ ನಿಲ್ಲಿಸಿದ್ದಾಗ, ವೇಗವಾಗಿ ಬಂದ ಬಿಎಂಟಿಸಿ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಆಟೋ ಚಾಲಕ ವಿನಾಯಕ ಕೋಮಾಕ್ಕೆ ಜಾರಿದ್ದರು.
ಕಳೆದ 13 ದಿನಗಳಿಂದ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸಿದರೂ, ಅವರ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡುಬಂದಿರಲಿಲ್ಲ. ವೈದ್ಯರು ವಿನಾಯಕ ಅವರ ಮೆದುಳು ನಿಷ್ಕ್ರಿಯವಾಗಿದೆ ಎಂದು ಘೋಷಿಸಿದರು. ಈ ನೋವಿನ ಸನ್ನಿವೇಶದಲ್ಲಿಯೂ ಕುಟುಂಬ ಸದಸ್ಯರು ಧೈರ್ಯ ತೋರಿ ವಿನಾಯಕ ಅವರ ಆಸೆಯಂತೆ ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದರು. ಈ ಹಿನ್ನೆಲೆಯಲ್ಲಿ ಬೇರೆ ಬೇರೆ ಎಂಟು ಜನರಿಗೆ ಅವರ ಅಂಗಾಂಗಗಳನ್ನು ದಾನ ಮಾಡಲಾಗಿದೆ.
ಈ ಸುದ್ದಿ ಓದಿದ್ದೀರಾ? ತುಮಕೂರು | ಸಿಪಿಐ ಜನಪರ ಹೋರಾಟಕ್ಕೆ ಜನರ ಬೆಂಬಲ ಬೇಕು : ಡಾ. ಜಿ ರಾಮಕೃಷ್ಣ
ತಮ್ಮ ಸಾವಿನಲ್ಲೂ ಇನ್ನೊಬ್ಬರ ಜೀವನಕ್ಕೆ ದಾರಿ ತೋರಿಸಿದ ವಿನಾಯಕ ಅವರ ಈ ನಿರ್ಧಾರ ಇಡೀ ಸಮಾಜಕ್ಕೆ ಮಾದರಿಯಾಗಿದೆ. ಅವರ ಪಾರ್ಥೀವ ಶರೀರವನ್ನು ಇಂದು ಸಿದ್ದಾಪುರದ ಶಿರಳಿಗೆ ತರಲಾಗಿದ್ದು, ಅವರ ಅಂತಿಮ ದರ್ಶನದ ನಂತರ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ವಿನಾಯಕ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕುಟುಂಬಸ್ಥರು, ಸ್ನೇಹಿತರು ಮತ್ತು ಸಾರ್ವಜನಿಕರು ಪ್ರಾರ್ಥಿಸಿದ್ದಾರೆ.