ಕರ್ನಾಟಕದ ಬಂಜಾರ ಸಮುದಾಯಲ್ಲಿ ಕೇವಲ 14,05,272ರಷ್ಟು ಜನಸಂಖ್ಯೆ ಇರುವುದಾಗಿ ವರದಿಯಲ್ಲಿ ನೀಡಿರುವ ಅಂಕಿ-ಅಂಶವು ಸತ್ಯಕ್ಕೆ ದೂರವಾಗಿದ್ದು, ವಾಸ್ತವದಲ್ಲಿ ಈ ಸಮುದಾಯದ ಜನಸಂಖ್ಯೆ ಸಂಪೂರ್ಣವಾಗಿ ಕಡಿಮೆ ಪ್ರತಿನಿಧಿಸುತ್ತದೆ. ಅಲ್ಲದೆ ಪರಿಶಿಷ್ಟ ಜಾತಿಗೆ ಸೇರಿದ ಸಮುದಾಯಗಳಿಗೆ ಒಳಮೀಸಲಾತಿ ಹಂಚಿಕೆ ಬಗ್ಗೆ ನ್ಯಾಯಮೂರ್ತಿ ಎಚ್ ಎನ್ ನಾಗಮೋಹನ ದಾಸ್ ಆಯೋಗದ ವರದಿಯು ಗುರುತಿಸಿರುವ ಬಂಜಾರ ಸಮುದಾಯದ ಜನಸಂಖ್ಯೆ ಪ್ರಮಾಣ ಮತ್ತು ಮಾಡಿರುವ ಶಿಫಾರಸು, ಬಂಜಾರ ಸದಸ್ಯರಲ್ಲಿ ತೀವ್ರ ಕಳವಳವನ್ನು ಹುಟ್ಟುಹಾಕಿದೆ ಎಂದು ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಿ ರಾಮನಾಯಕ್ ಅಸಮಾಧಾನ ವ್ಯಕ್ತಪಡಿಸಿದರು.
ಈ ಕುರಿತು ಬೆಂಗಳೂರಿನಲ್ಲಿ ಪತ್ರಿಕೆ ಹೇಳಿಕೆ ನೀಡಿರುವ ಅವರು, “ಬಂಜಾರರು ಸಾಮಾನ್ಯವಾಗಿ ಇತರ ಸಮುದಾಯಗಳು ವಾಸಿಸುವ ಪಟ್ಟಣಗಳು ಮತ್ತು ಹಳ್ಳಿಗಳಿಂದ ಗಣನೀಯ ದೂರದಲ್ಲಿರುವ ತಾಂಡಾಗಳು ಎಂದು ಕರೆಯುವ ವಿಶೇಷ ವಸಾಹತುಗಳಲ್ಲಿ ವಾಸಿಸುತ್ತಾರೆ. ರಾಜ್ಯಾದ್ಯಂತ ಅಂತಹ 3,384 ತಾಂಡಾಗಳಿರುವುದಾಗಿ ಸರ್ಕಾರಿ ಸಮೀಕ್ಷೆಗಳು ದೃಢಪಡಿಸುತ್ತವೆ. ಈ ತಾಂಡಾಗಳ ವಿಸ್ತೀರ್ಣವು 50 ಕುಟುಂಬಗಳಿಂದ ಹಿಡಿದು 4,000 ಕುಟುಂಬಗಳು ವಾಸಮಾಡುವಷ್ಟು ವ್ಯಾಪಿಸಿವೆ. ಈ ಕುಟುಂಬಗಳ ಪೈಕಿ ಪ್ರತಿ ತಾಂಡಾಗೆ 200 ಕುಟುಂಬಗಳ ಸಂಪ್ರದಾಯವಾದಿ ಸರಾಸರಿಯನ್ನು ತೆಗೆದುಕೊಂಡರೂ ಕೂಡ ಒಟ್ಟು 6,76,800 ಕುಟುಂಬಗಳು ಬರುತ್ತವೆ.
ಪ್ರತಿ ಕುಟುಂಬದಲ್ಲಿ ನಾಲ್ಕು ಸದಸ್ಯರಂತೆ (“ನಾವು ಇಬ್ಬರು, ನಮಗಿಬ್ಬರು ಎಂಬ ಸೂತ್ರದಂತೆ”) ಲೆಕ್ಕ ಹಾಕಿದರೆ ಬಂಜಾರರ ಜನಸಂಖ್ಯೆಯು ಸರಿಸುಮಾರು 27,07,200ರಷ್ಟು ಜನಸಂಖ್ಯೆಯಾಗಿರುತ್ತದೆ. ಅಂದರೆ ಇದು ಆಯೋಗದ ವರದಿಯಲ್ಲಿ ದಾಖಲಾಗಿರುವ ಅಂಕಿ ಅಂಶಕ್ಕಿಂತ ಎರಡು ಪಟ್ಟು ಹೆಚ್ಚು. ಆಯೋಗದ ವರದಿಯಲ್ಲಿ ಸರಿಯಾದ ಜನಸಂಖ್ಯೆ ದಾಖಲಾಗದಿರಲು ಹಲವಾರು ಕಾರಣಗಳಿವೆ. ಒಂದು ಪ್ರಮುಖ ಅಂಶವೆಂದರೆ, ಬಹುತೇಕ ಬಂಜಾರರು ತಮ್ಮ ಜೀವನೋಪಾಯಕ್ಕಾಗಿ ಕೆಲಸ ಹುಡುಕುತ್ತ ಗುಳೆ ಹೋಗುವ ಪ್ರವೃತ್ತಿ ಹೊಂದಿದ್ದಾರೆ. ಇದರಿಂದಾಗಿ ಜನಗಣತಿದಾರರು ಈ ಬಹು ಸಂಖ್ಯಾತರನ್ನು ದಾಖಲಿಸುವ ಗೋಜಿಗೆ ಹೋಗದಿರುವುದು ಸ್ಪಷ್ಟವಾಗಿ ಕಾಣುತ್ತದೆ.
ಜನಗಣತಿದಾರರಿಂದಾದ ತಪ್ಪು ವರ್ಗೀಕರಣವೂ ಬಹು ಮುಖ್ಯ ಪಾತ್ರವನ್ನು ವಹಿಸಿದೆ. ಉದಾಹರಣೆಗೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ನಾಗಲಾಪುರ ಪಂಚಾಯಿತಿಯ ಹೆಗ್ಗಲಪುರ ತಾಂಡಾದಲ್ಲಿ 50 ಬಂಜಾರ ಕುಟುಂಬಗಳನ್ನು ಆದಿ ಆಂಧ್ರ ಎಂದು ನೋಂದಾಯಿಸಿದ ಪ್ರಕರಣ ನಡೆದಿದ್ದು, ತಪ್ಪಿತಸ್ಥರೆಂದು ಕಂಡುಬಂದ ಹಿನ್ನೆಲೆಯಲ್ಲಿ ಜನಗಣತಿ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಹೀಗೆ ಇನ್ನೆಷ್ಟು ಗುಪ್ತ ಪ್ರಕರಣಗಳು ಇರಬಹುದು ಎಂಬುದನ್ನು ಊಹಿಸಲಸಾಧ್ಯವಾಗಿದೆ.
ತಾಂಡಾಗಳ ಭೌಗೋಳಿಕ ಪ್ರತ್ಯೇಕತೆಯು ನಿಖರವಾದ ದತ್ತಾಂಶ ಸಂಗ್ರಹಣೆಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ. ತಾಂಡಾಗಳು ಸಾಮಾನ್ಯವಾಗಿ ಗುಡ್ಡಗಾಡು, ದೂರದ ಪ್ರದೇಶಗಳಲ್ಲಿ ನೆಲೆಗೊಂಡಿವೆ. ಅನೇಕ ತಾಂಡಾಗಳಿಗೆ ಸರಿಯಾದ ಇಂಟರ್ನೆಟ್ ಸಂಪರ್ಕ ಇಲ್ಲದಿರುವುದರಿಂದ ಸಮರ್ಪಕ ಡಿಜಿಟಲ್ ಎಣಿಕೆಗೆ ಅಡ್ಡಿಯಾಗಿರುವುದು ಮುಖ್ಯ ಕಾರಣಗಳಲ್ಲೊಂದು. ಇದರಿಂದಲೂ ಗಣತಿಕಾರ್ಯಕ್ಕೆ ತೊಂದರೆ ಉಂಟಾಗಿದೆಯೆಂದು ಬಹುತೇಕ ತಾಂಡಾದವರು ದೂರಿದ್ದಾರೆ. ಇನ್ನು ಹಲವಾರು ಕಾರಣಗಳಿಂದ ನೂರಕ್ಕೆ ನೂರರಷ್ಟು ಜನಗಣತಿ ಆಗದಿರುವುದು ಬಂಜಾರರ ಜನಸಂಖ್ಯೆ ಕಡಿಮೆಯಾಗಲು ಕಾರಣ.
ಬಂಜಾರರು ಪಡೆದಿರುವ ಶಿಕ್ಷಣ, ಉದ್ಯೋಗ ಹಾಗೂ ರಾಜಕೀಯ ಪ್ರಾತಿನಿಧ್ಯಗಳ ಸಂಪೂರ್ಣ ಮಾಹಿತಿಯಿದೆ. ಅವರ ಒಟ್ಟಾರೆ ಜನಸಂಖ್ಯೆಯನ್ನು ಪರಿಗಣಿಸಿದಾಗ ಮೇಲಿನ ಕ್ಷೇತ್ರಗಳಲ್ಲಿ ಅವರ ಪ್ರಾತಿನಿಧ್ಯ ಯಾವ ಮಾನದಂಡಗಳಿಗೂ ಒಳಪಡದಷ್ಟು ಕನಿಷ್ಠ ಪ್ರಮಾಣದಲ್ಲಿದೆ. ಆದರೆ ಬಂಜಾರರು ಸ್ಪೃಶ್ಯರು ಹಾಗೂ ಮುಂದುವರೆದವರೆಂದು ಒಂದು ರೀತಿಯ ಹುಸಿ ವೈಭವವನ್ನು(ಹೈಪ್) ಸೃಷ್ಟಿ ಮಾಡಿದ್ದಾರೆ. ಆದರೆ ವಾಸ್ತವವಾಗಿ ಅವರಿನ್ನೂ ಬಹಳ ದುಃಸ್ಥಿತಿಯಲ್ಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ಉಡುಪಿ | ಒಳಮೀಸಲಾತಿ ವರದಿ ಅವೈಜ್ಞಾನಿಕ – ಜಯನ್ ಮಲ್ಪೆ
ಜತೆಗೆ ತಾಂಡಾ ನಿಗಮದ ದೂರದೃಷ್ಟಿಯ ಹಾಗೂ ಕಾರ್ಯ ತತ್ಪರತೆಯ ಕೊರತೆ, ಮೀಸಲಾತಿ ಒಕ್ಕೂಟದ ನಿಷ್ಕ್ರಿಯತೆ ಮತ್ತು ಸಮಾಜದ ಕೆಲವು ರಾಜಕೀಯ ಮುಖಂಡರುಗಳ ಉದಾಸೀನತೆ ಇವೆಲ್ಲವೂ ಜನಗಣತಿಯನ್ನು ಸಮುದಾಯದ ಒಂದು ಆಂದೋಲನವಾಗಿ ರೂಪಿಸಿ ನಿಖರ ಜನಸಂಖ್ಯೆ ತೋರಿಸುವಲ್ಲಿ ವಿಫಲರಾಗಿರುವುದೂ ಕೂಡ ಮತ್ತೊಂದು ಕಾರಣವಾಗಿದೆ. ಇಂತಹ ದೋಷಪೂರಿತ ಅಂಕಿ ಅಂಶವನ್ನು ತಿದ್ದುಪಡಿ ಮಾಡದೆ ಸ್ವೀಕರಿಸಿದರೆ, ಅದು ಒಳಮೀಸಲಾತಿಯ ಆಧಾರವನ್ನು ತೀವ್ರವಾಗಿ ವಿರೂಪಗೊಳಿಸುತ್ತದೆ. ಶಿಕ್ಷಣ, ಉದ್ಯೋಗ ಮತ್ತು ಕಲ್ಯಾಣ ಪ್ರಯೋಜನಗಳಲ್ಲಿ ಬಂಜಾರರು ತಮಗೆ ಯುಕ್ತವಾಗಿ ಸಲ್ಲಬೇಕಾದ ಪಾಲನ್ನು ಪಡೆಯದೇ ವಂಚಿತರಾಗುತ್ತಾರೆ.