ಶಿವಸೇನೆ-ಯುಬಿಟಿ ನಾಯಕ ಸಂಜಯ್ ರಾವತ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದು ಮಾಜಿ ಉಪಾಧ್ಯಕ್ಷ ಜಗದೀಪ್ ಧನಕರ್ ಎಲ್ಲಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಹಾಗೆಯೇ ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ, ಹಾಗಾಗಿ ಸ್ಥಳದ ಬಗ್ಗೆ ಮಾಹಿತಿ ನೀಡುವಂತೆ ಕೋರಿದ್ದಾರೆ.
ಜುಲೈ 21ರಂದು ಸಂಸತ್ತಿನ ಮಳೆಗಾಲದ ಅಧಿವೇಶನದ ಮೊದಲ ದಿನದಂದು ಧನಕರ್ ಅವರು ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಅಚ್ಚರಿಯ ಬೆಳವಣಿಗೆಯು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅದಾದ ಬಳಿಕ ಧನಕರ್ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಸಂಜಯ್ ರಾವತ್ ಹೇಳಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಮಾಜಿ ಪ್ರಧಾನಿ ವಾಜಪೇಯಿ ಎರಡನೇ ನೆಹರೂ: ಸಂಸದ ಸಂಜಯ್ ರಾವತ್
“ನಮ್ಮ (ಮಾಜಿ) ಉಪಾಧ್ಯಕ್ಷರು ಎಲ್ಲಿದ್ದಾರೆ ಎಂಬುದರ ಕುರಿತು ಯಾವುದೇ ಮಾಹಿತಿ ಇಲ್ಲ. ಅವರ ಪ್ರಸ್ತುತ ಯಾವ ಸ್ಥಳದಲ್ಲಿದ್ದಾರೆ? ಅವರ ಆರೋಗ್ಯ ಹೇಗಿದೆ? ಈ ವಿಷಯಗಳ ಬಗ್ಗೆ ಸ್ಪಷ್ಟತೆ ಇಲ್ಲ. ರಾಜ್ಯಸಭೆಯ ಕೆಲವು ಸದಸ್ಯರು ಧನಕರ್ ಅವರನ್ನು ಸಂಪರ್ಕಿಸುವ ಯತ್ನ ಮಾಡಿದ್ದಾರೆ. ಆದರೆ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ” ಎಂದು ಆಗಸ್ಟ್ 10ರಂದು ಅಮಿತ್ ಶಾ ಅವರಿಗೆ ಬರೆದ ಪತ್ರದಲ್ಲಿ ಸಂಜಯ್ ರಾವತ್ ಹೇಳಿದ್ದಾರೆ.
Hon.Home Minister
— Sanjay Raut (@rautsanjay61) August 11, 2025
Shri @AmitShah ji
Jay hind! pic.twitter.com/uxAgRKPUKk
ಸೋಮವಾರ ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾವತ್, ಧನಕರ್ ಅವರು ಸುರಕ್ಷಿತವಾಗಿಲ್ಲ ಎಂಬ ವದಂತಿಗಳು ದೆಹಲಿಯಲ್ಲಿ ಹರಡುತ್ತಿದೆ ಎಂದಿದ್ದಾರೆ. “ಧನಕರ್ ಅಥವಾ ಅವರ ಸಿಬ್ಬಂದಿ ಜೊತೆಗೆ ಯಾವುದೇ ಮಾತುಕತೆ ನಡೆದಿಲ್ಲ. ಇದು ಗಂಭೀರ ಕಳವಳಕಾರಿಯಾದ ವಿಷಯವಾಗಿದೆ” ಎಂದಿದ್ದಾರೆ.
ಇನ್ನು ಕಳೆದ ವಾರ ಗುರುವಾರ ಉಪರಾಷ್ಟ್ರಪತಿ ಎಲ್ಲಿದ್ದಾರೆ? ಈ ಬಗ್ಗೆ ಚರ್ಚೆ ನಡೆಯಬೇಕು ಎಂದು ಶಿವಸೇನೆ ನಾಯಕ, ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದರು. ಇನ್ನು ಮೇಲ್ಮನೆಯ ತಮ್ಮ ಕೆಲವು ಸಹೋದ್ಯೋಗಿಗಳು ಧನಕರ್ ಬಗ್ಗೆ ನಿಜವಾಗಿಯೂ ಚಿಂತಿತರಾಗಿದ್ದಾರೆ. ಆದ್ದರಿಂದ ಸುಪ್ರೀಂ ಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ರಿಟ್ ಅರ್ಜಿಯನ್ನು ಸಲ್ಲಿಸಲು ಮುಂದಾಗಿದ್ದೇವೆ ಎಂದು ಹೇಳಿದರು.
