ಎಸ್ ಸಿ ಎಸ್ ಟಿ ದೌರ್ಜನ್ಯ ಕಾಯ್ದೆಯಡಿಯಲ್ಲಿ ಸಂತ್ರಸ್ತರಿಗೆ ಜಿಲ್ಲಾಡಳಿತ ಮತ್ತು ಸರಕಾರಗಳು ಇದುವರೆಗೂ ನೆರವು ಒದಗಿಸಿಲ್ಲ ಎಂದು ಆರೋಪಿಸಿ, ಕೂಡಲೇ ನೆರವನ್ನು ಒದಗಿಸಲು ಆಗ್ರಹಿಸಿ ದಸಂಸ ನೇತೃತ್ವದಲ್ಲಿ ನಡೆಸುತ್ತಿರುವ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕೋನಿಗರಹಳ್ಳಿ, ದೊಡ್ಡಬೀರನಹಳ್ಳಿಯ ದೌರ್ಜನ್ಯಕ್ಕೊಳಗಾದ ಎಸ್ ಸಿ ಎಸ್ ಟಿ ದೌರ್ಜನ್ಯ ಕಾಯ್ದೆಯ ಸಂತ್ರಸ್ತರ ಹೋರಾಟ 8ನೇ ದಿನಕ್ಕೆ ಕಾಲಿಟ್ಟ ವೇಳೆ ಆಕ್ರೋಶಕ್ಕೆ ತಿರುಗಿದ್ದು ಚಳ್ಳಕೆರೆ ತಾಲೂಕು ಕಚೇರಿ ಮುಂಭಾಗದಲ್ಲಿ ರಸ್ತೆ ಬದಿಯಲ್ಲಿ ಆಹಾರ ತಯಾರಿಸಿ ಸಂತ್ರಸ್ತರ ನೋವಿನ ಊಟ ಸಿದ್ಧವಿದೆ ಎಂದು ಕೂಗಿ ಹೇಳುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ..

ತಾಲೂಕು ಕಚೇರಿ ಮುಂಭಾಗದ ರಸ್ತೆ ಪಕ್ಕದ ಪಾದಾಚಾರಿ ಮಾರ್ಗದಲ್ಲಿ ಸಂತ್ರಸ್ತ ಕುಟುಂಬಗಳು ಸೌದೆ ಒಲೆಯ ಮೇಲೆ ಅಡುಗೆ ಮಾಡುವುದರ ಮೂಲಕ ವಿನೂತನವಾಗಿ ತಾಲೂಕು ಆಡಳಿತಕ್ಕೆ ಹಾಗೂ ಜಿಲ್ಲಾ ಆಡಳಿತಕ್ಕೆ ಬಿಸಿ ಮುಟ್ಟಿಸಿದರು. ಅಡುಗೆ ಮಾಡಿ ಫುಟ್ ಬಾತ್ ನಲ್ಲಿಯೇ ಸ್ಥಳದಲ್ಲಿ ಊಟ ಮಾಡುವುದರ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.
“ಹೋರಾಟ ಪ್ರಾರಂಭಿಸಿ ಎಂಟು ದಿನಗಳಾದರೂ ನಮ್ಮ ಸಂಕಷ್ಟ ಕೇಳಲು ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬಂದಿಲ್ಲ . ಸಂತ್ರಸ್ತರ ಕುಟುಂಬಗಳ ಬೇಡಿಕೆಗಳನ್ನು ಈಡೇರಿಸುವವರೆಗೂ ಹೋರಾಟ ಮುಂದುವರಿಯಲಿದೆ” ಎಂದು ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಟಿಡಿ.ರಾಜಗಿರಿ ಆಕ್ರೋಶ ವ್ಯಕ್ತಪಡಿಸಿದರು.

“ಕಳೆದ ಎಂಟು ದಿನಗಳಿಂದ ಮಳೆ, ಗಾಳಿ, ಚಳಿ ಎನ್ನದೆ ನ್ಯಾಯಕ್ಕಾಗಿ ಧರಣಿ ಮಾಡುತ್ತಿದ್ದೇವೆ. ಆದರೆ ಜಿಲ್ಲಾಡಳಿತ, ತಾಲೂಕು ಆಡಳಿತ ಇತ್ತ ಕಡೆ ಗಮನಹರಿಸಿಲ್ಲ. ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ದೊರೆತಿಲ್ಲ. ಇಲ್ಲಿನ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ” ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು.
‘ಸಂತ್ರಸ್ತರ ನೋವಿನ ಊಟ ಸಿದ್ಧವಿದೆ. ಇನ್ನು ಜಿಲ್ಲಾಧಿಕಾರಿ ಬರುವಿಕೆಗಾಗಿ ರಸ್ತೆ ಪಕ್ಕದ ಫುಟ್ ಬಾತ್ ಮೇಲೆ ಅಡಿಗೆ ತಯಾರಿಸಿದ್ದೇವೆ’ ಎಂದು ಧರಣಿ ನಿರತ ಮಹಿಳೆಯರು ಅಳಲು ತೋಡಿಕೊಂಡರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ವೇತನ ಹೆಚ್ಚಳ ಹಾಗೂ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಧರಣಿ
ದಲಿತ ಸಂಘರ್ಷ ಸಮಿತಿಯ ತಿಮ್ಮಪ್ಪ, ಕೆ ಎಂ ಎಸ್ ಹರೀಶ್ ಕೊನಿಗಾರಹಳ್ಳಿ, ಹನುಮಂತ, ಹಾಗೂ ಬೀರನಹಳ್ಳಿಯ ತಿಪ್ಪೇಸ್ವಾಮಿ, ರತ್ನಮ್ಮ, ಸೇರಿದಂತೆ ಹಲವರು ಹೋರಾಟದಲ್ಲಿ ಭಾಗವಹಿಸಿದ್ದರು.