ಆಗಸ್ಟ್ 12 ವಿಶ್ವ ಯುವ ದಿನ. ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ 1999ರ ಡಿಸೆಂಬರ್ 17ರಂದು ಮಾಡಿದ ಘೋಷಣೆಯಂತೆ ಪ್ರತಿ ವರ್ಷ ಆಗಸ್ಟ್ 12ಅನ್ನು ‘ಅಂತಾರಾಷ್ಟ್ರೀಯ ಯುವ ದಿನ’ವಾಗಿ ಆಚರಿಸಲಾಗುತ್ತಿದೆ. ಈ ದಿನ ಯುವಜನರ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಸಮಾಜದಲ್ಲಿ ಅವರ ಕೊಡುಗೆಗಳನ್ನು ಗುರುತಿಸಲು ಮೀಸಲಾಗಿದೆ. ಆದರೆ ಇಂದಿಗೂ ಯುವಜನರ ಹಲವು ಬೇಡಿಕೆಗಳು ಬೇಡಿಕೆಯಾಗಿಯೇ ಉಳಿದಿವೆ. ಅವುಗಳಲ್ಲಿ ಒಂದು ಯುವಜನ ಆಯೋಗ.
ರಾಜ್ಯದಲ್ಲಿ ‘ಯುವಜನ ಆಯೋಗ’ ರಚನೆ ಸೇರಿದಂತೆ ಯುವಕರಿಗೆ ನಾನಾ ಸೌಲಭ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ ಸಂವಾದ ಯುವ ಸಂಪನ್ಮೂಲ ಕೇಂದ್ರ ಹಾಗೂ ಯುವ ಮುನ್ನಡೆ ತಂಡ ಹಲವು ವರ್ಷಗಳಿಂದ ಅಭಿಯಾನ ನಡೆಸುತ್ತಲೇ ಬಂದಿವೆ. ಅದರ ಭಾಗವಾಗಿ ಇದೇ ಆಗಸ್ಟ್ 14ರಂದು ಬೆಂಗಳೂರಿನ ಗಾಂಧಿಭವನದಲ್ಲಿ ಯುವಾಧಿವೇಶನ ನಡೆಯಲಿದೆ. ಯುವಜನರ ಶಿಕ್ಷಣ, ಆರೋಗ್ಯ ಮತ್ತು ಜೀವನೋಪಾಯದ ಸವಾಲುಗಳು ಎಂಬ ವಿಚಾರದಲ್ಲಿ ಒಂದು ಅಧಿವೇಶನ ಹಾಗೂ ಯುವಜನರ ಹಕ್ಕುಗಳ ಸಾಕಾರ ಮತ್ತು ಯುವಜನ ಆಯೋಗ ಸ್ಥಾಪನೆ ಬಗ್ಗೆ ಪ್ರತ್ಯೇಕ ಅಧಿವೇಶನ ನಡೆಯಲಿದೆ. ಯುವಜನ ದಿನ ಆಚರಣೆಯ ಜೊತೆಗೆ ತಮ್ಮ ಬೇಡಿಕೆಗಳನ್ನು ಈ ಯುವಾಧಿವೇಶದಲ್ಲಿ ಮುಂದಿಡಲಾಗುತ್ತದೆ.
ಇದನ್ನು ಓದಿದ್ದೀರಾ? ಬೆಂಗಳೂರು | 30 ವರ್ಷದ ಸಂವಾದ ಸಂಭ್ರಮ; ‘ಯುವನಡೆ’ ವಿಶೇಷ ಕಾರ್ಯಕ್ರಮ
ಏನಿದು ಯುವ ದಿನ?
ಪೋರ್ಚುಗಲ್‌ನ ಲಿಸ್ಬನ್‌ನಲ್ಲಿ 1998ರಲ್ಲಿ, ವಿಶ್ವ ಯುವ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಹಲವು ದೇಶಗಳ ಪ್ರತಿನಿಧಿಗಳು ಭಾಗಿಯಾಗಿದ್ದು ಅಂತಾರಾಷ್ಟ್ರೀಯ ಯುವ ದಿನವನ್ನು ಆಚರಿಸುವ ಪ್ರಸ್ತಾಪ ಕೇಳಿಬಂದಿತ್ತು. ಅದಾದ ಬಳಿಕ ಅಂತಾರಾಷ್ಟ್ರೀಯ ಯುವ ದಿನವನ್ನು ಆಚರಿಸುವ ಪ್ರಸ್ತಾಪವನ್ನು 1999 ಡಿಸೆಂಬರ್ 17ರಂದು ಅನುಮೋದಿಸಲಾಗಿದೆ. ಅಂದಿನಿಂದ ಪ್ರತಿ ವರ್ಷ ಆಗಸ್ಟ್ 12ರಂದು ಅಂತಾರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುತ್ತಿದೆ. ರಾಜ್ಯದಲ್ಲಿ ಯುವ ದಿನವನ್ನು ಆಚರಿಸುತ್ತಿರುವ ಯುವಜನರ ಸಂಸ್ಥೆ ಯುವ ಮುನ್ನಡೆ ಯುವ ಆಯೋಗದ ಬೇಡಿಕೆಯನ್ನು ಹಲವು ವರ್ಷಗಳಿಂದ ಸರ್ಕಾರದ ಮುಂದಿಡುತ್ತಿದೆ.

ಏನಿದು ಯುವಜನ ಆಯೋಗ, ಜಾರಿ ಹೇಗೆ?
ಮಾನವ ಹಕ್ಕುಗಳ ಆಯೋಗದ ಮಾದರಿಯಲ್ಲಿ ಯುವ ಆಯೋಗವು ತನ್ನ ಅಧಿಕಾರ ವ್ಯಾಪ್ತಿಯಲ್ಲಿರುವ ಎಲ್ಲಾ ಯುವಜನರ ಹಕ್ಕುಗಳನ್ನು ಉತ್ತೇಜಿಸುವ ಮತ್ತು ರಕ್ಷಿಸುವ ಅಧಿಕಾರವನ್ನು ಹೊಂದಿರುತ್ತದೆ. ಯುವಜನರ ಹಕ್ಕುಗಳ ರಕ್ಷಣೆ, ಯುವಜನರ ಶಿಕ್ಷಣ ಮತ್ತು ಸಬಲೀಕರಣವು ಯುವಜನ ಆಯೋಗದ ಉದ್ದೇಶ. ಆಯೋಗದ ಗುರಿ ಉದ್ದೇಶಗಳು, ಸಂರಚನೆ ಮತ್ತು ಕಾರ್ಯಕಲಾಪಗಳು ಏನಿರುತ್ತವೆ ಎಂಬುದನ್ನು ಇದಕ್ಕೆ ಸಂಬಂಧಿತ ಕಾಯಿದೆಯಲ್ಲಿ ವಿವರಿಸಲ್ಪಟ್ಟಿರುತ್ತದೆ. ರಾಜ್ಯ ಯುವಜನ ಆಯೋಗವನ್ನು ಸ್ಥಾಪಿಸಬೇಕಾದರೆ ಸರ್ಕಾರವು ವಿಧಾನಮಂಡಲದಲ್ಲಿ ‘ಯುವಜನ ಆಯೋಗ ಕಾಯಿದೆ’ ಅಥವಾ ಸಂಬಂಧಿತ ಕಾಯಿದೆ ಕರಡು ರೂಪಿಸಿ ಉಭಯ ಸದನಗಳಲ್ಲಿ ಅದನ್ನು ಮಂಡಿಸಬೇಕು. ವಿಧಾನಸಭೆ ಮತ್ತು ವಿಧಾನಪರಿಷತ್ ಯಾವುದಾದರೂ ಒಂದರಲ್ಲಿ ಮೂರನೇ ಎರಡು ಬಹುಮತ ಸಿಕ್ಕರೆ ಕಾಯಿದೆಯಾಗಿ ರೂಪುಗೊಳಿಸಬಹುದು. ಬಳಿಕ ಸೂಕ್ತ ನಿಯಮಗಳನ್ನು ರೂಪಿಸಿ ಕಾಯಿದೆಯನ್ನು ಜಾರಿಗೊಳಿಸಬೇಕು. ಸಾಮಾನ್ಯವಾಗಿ ಯುವಜನ ಅಭಿವೃದ್ಧಿ ಕ್ಷೇತ್ರದ ತಜ್ಞರು ಆಯೋಗದ ಅಧ್ಯಕ್ಷರಾಗಿರುತ್ತಾರೆ ಮತ್ತು ಶಿಕ್ಷಣ, ಆರೋಗ್ಯ ಮುಂತಾದ ಸಂಬಂಧಿತ ಕ್ಷೇತ್ರದ ತಜ್ಞರುಗಳು ಸದಸ್ಯರಾಗಿ ನೇಮಕಗೊಳ್ಳುತ್ತಾರೆ.
ಈ ಬಗ್ಗೆ ಈದಿನ ಡಾಟ್ ಕಾಮ್ ಜೊತೆ ಮಾತನಾಡಿದ ಸಹಯಾನ ಸಂವಾದದ ಪ್ರೋಗ್ರಾಂ ಲೀಡ್ ರಾಮಕ್ಕ, “ಯುವ ಆಯೋಗ ಆಗಬೇಕು ಎಂಬ ಬೇಡಿಕೆಯನ್ನು ಸುಮಾರು ಐದಾರು ವರ್ಷಗಳಿಂದ ಸಂವಾದ, ಯುವಜನರು ಅಭಿಯಾನ ನಡೆಸುತ್ತಿದ್ದಾರೆ. ಇದು ಬಹಳ ದೀರ್ಘವಾದ ಅಭಿಯಾನ. ಒಂದು ಕಡೆ ಪರಿಸರವನ್ನು ಉಳಿಸಬೇಕು, ಜೊತೆಗೆ ಸುಸ್ಥಿರವಾದಂತಹ ಸೌಹಾರ್ದ ಜಗತನ್ನು ನಿರ್ಮಿಸಬೇಕು ಎಂಬ ನಿಟ್ಟಿನಲ್ಲಿ ಇಡೀ ಜಗತ್ತಿನಾದ್ಯಂತ ಯುವಜನರು ಧ್ವನಿ ಎತ್ತುತ್ತಿದ್ದಾರೆ. ಈ ಜಗತ್ತಿನಲ್ಲಿ ಆಗುತ್ತಿರುವ ಎಲ್ಲಾ ತೀರ್ಮಾನಗಳಲ್ಲಿ ಭಾಗಿಯಾಗಲು ಮುಂದಾಗಿದ್ದಾರೆ. ಅವರಿಗೆ ಸಿಗಬೇಕಾದ ಅವಕಾಶಗಳು ಏನಿದೆ ಅದನ್ನು ತಮ್ಮ ಹಕ್ಕುಗಳ ನೆಲೆಯಿಂದಲೂ ಕೇಳುತ್ತಿದ್ದಾರೆ. ಯುವಜನರು ಮತ್ತು ಯುವಜನರ ಸಂಘ ಸಂಸ್ಥೆಗಳ ಮೂಲಕ ಆಂದೋಲನಗಳು ರೂಪುಗೊಳ್ಳುತ್ತಿದೆ. ಅವರ ಪ್ರಕಾರ ಯುವಜನರಿಗೂ ಹಕ್ಕುಗಳಿದೆ ಮತ್ತು ಆ ಹಕ್ಕುಗಳನ್ನು ಘೋಷಿಸಬೇಕು, ರಕ್ಷಿಸಬೇಕು, ಸಬಲೀಕರಣಕ್ಕಾಗಿ ಸಾಂಸ್ಥಿಕ ವ್ಯವಸ್ಥೆಗಳನ್ನು ಮಾಡಬೇಕು” ಎಂದಿದ್ದಾರೆ.
“ಯುವಜನರು ಎಂದ ತಕ್ಷಣವೇ ಒಂದು ನಕಾರಾತ್ಮಕ ಭಾವನೆ ಹಲವು ಮಂದಿಯಲ್ಲಿದೆ. ಆ ನಕಾರಾತ್ಮಕ ಭಾವನೆಯಿಂದ ಹೊರಬಂದು ಯುವಜನರು ಅಂದ್ರೆ ಯಾರು ಅರ್ಥ ಮಾಡಿಕೊಳ್ಳುವುದಕ್ಕಾಗಿಯೇ ಒಂದು ಸಂವಾದವನ್ನು ಶುರು ಮಾಡಬೇಕಾಗಿದೆ. ಕರ್ನಾಟಕದಲ್ಲಿ ಯುವಜನರ ಹಕ್ಕುಗಳ ರಕ್ಷಣೆಗಾಗಿ, ಯುವಜನ ಸಬಲೀಕರಣಕ್ಕೆ ಬೇಕಾಗಿರುವಂತಹ ಸಂಸ್ಥೆಗಳು ಸ್ಥಾಪನೆಯಾಗಬೇಕು. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಶಾಶ್ವತವಾದ ಯುವಜನ ಆಯೋಗ ಅಸ್ತಿತ್ವಕ್ಕೆ ಬರಬೇಕು. ಹಕ್ಕುಗಳು ಘೋಷಣೆಯಾಗಬೇಕು. ಯುವಜನ ಆಯೋಗ ರಚಿಸಲು ಕಾಂಗ್ರೆಸ್ ಸರ್ಕಾರ ಮುಂದಾಗಬೇಕು” ಎಂದು ಆಗ್ರಹಿಸಿದ್ದಾರೆ.
ಈದಿನ ಡಾಟ್ ಕಾಮ್‌ಗೆ ಪ್ರತಿಕ್ರಿಯಿಸಿದ ಬದುಕು ಸೆಂಟರ್ ಫಾರ್ ಲೈವಲಿಹುಡ್ ಲರ್ನಿಂಗ್‌ನ ಡೆವಲಪ್ಮೆಂಟ್ ಪ್ರೊಫೆಷನಲ್ ಕೊರ್ಸ್ ವಿದ್ಯಾರ್ಥಿ ನಾಗಾರ್ಜುನ ಹೊಸಮನಿ, “ಭಾರತ ತನ್ನ ಜನಸಂಖ್ಯೆಯ ಅರ್ಧದಷ್ಟು ಯುವ ಸಂಪನ್ಮೂಲವನ್ನು ಹೊಂದಿರುವ ರಾಷ್ಟ್ರ. ಆದರೆ ನಮ್ಮ ದೇಶದಲ್ಲಿ ಆಡಳಿತಕ್ಕೆ ಬರುವ ಸರ್ಕಾರಗಳು ಯುವ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ವಿಫಲವಾಗುತ್ತಿರುವುದು ಬೇಸರದ ಸಂಗತಿ. ರಾಷ್ಟ್ರ ಮಟ್ಟದಲ್ಲಿ ಯುವಜನರ ಪ್ರಾತಿನಿಧ್ಯ ಹೆಚ್ಚಾಗಬೇಕು, ಮುನ್ನೆಲೆಗೆ ಬರಬೇಕು. ರಾಜಕೀಯದಲ್ಲಿಯೂ ಕೂಡಾ ಯುವಜನರ ಅಗತ್ಯವಿದೆ. ಯುವಜನರ ಹೊಸ ಆಲೋಚನೆಗಳು ದೇಶವನ್ನಾಳುವ 70-80 ವಯಸ್ಸಿನ ಆಸುಪಾಸಿನ ನಾಯಕರಲ್ಲಿ ನಿರೀಕ್ಷಿಸುವುದು ಕಷ್ಟ. ಆದರಿಂದ ಯುವಜನರ ರಾಜಕೀಯ ಪ್ರವೇಶ ಮುಖ್ಯ” ಎಂದು ಅಭಿಪ್ರಾಯಿಸಿದ್ದಾರೆ.
ಇದನ್ನು ಓದಿದ್ದೀರಾ? ತುಮಕೂರು | ಕೊಳಗೇರಿ ಪ್ರದೇಶಗಳಲ್ಲಿ ಬೀದಿ ಸಭೆಗಳ ಮೂಲಕ ಮತದಾನ ಜಾಗೃತಿಗೆ ನಿರ್ಣಯ
“ಅಂತಾರಾಷ್ಟ್ರೀಯ ಯುವ ದಿನಾಚರಣೆಯನ್ನು ಪ್ರತಿ ವರ್ಷ ಆಗಸ್ಟ್ 12ರಂದು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ. ಇದು ಯುವ ಜನರ ಶಕ್ತಿ, ಸೃಜನಶೀಲತೆ ಮತ್ತು ಸಮಾಜದಲ್ಲಿ ಅವರ ಪಾತ್ರವನ್ನು, ಯುವ ಜನರ ಕನಸು, ಶಕ್ತಿ ಮತ್ತು ನಾಯಕತ್ವವನ್ನು ಗುರುತಿಸು ದಿನ. ಈ ದಿನವು ಯುವಕರಿಗೆ ಎದುರಾಗಿರುವ ಸವಾಲುಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಸಮಾಜದ ಅಭಿವೃದ್ಧಿಯಲ್ಲಿ ಯುವ ಜನರ ಪಾತ್ರ ಮಹತ್ವದ್ದು ಎಂಬ ಸಂದೇಶವನ್ನು ಹರಡುವುದು ಇದರ ಮುಖ್ಯ ಉದ್ದೇಶ. ಯುವ ಜನರ ಕೌಶಲ್ಯ ಮತ್ತು ಉತ್ಸಾಹವು ಸಮಾಜದ ಅಭಿವೃದ್ಧಿಗೆ ಪ್ರೇರೇಪಿಸುತ್ತದೆ. ಯುವಕರಾಗಿ ನಾವು ಈ ದಿನವನ್ನು ಬಳಸಬೇಕು” ಎಂದು ಬದುಕು ಸಂಸ್ಥೆಯ ವಿದ್ಯಾರ್ಥಿನಿ ಡಿ ವಿದ್ಯಾ ತಿಳಿಸಿದ್ದಾರೆ.
ವಿಶ್ವ ಯುವ ದಿನವಾದ ಇಂದು(ಆಗಸ್ಟ್ 12) ದೇಶ ವಿದೇಶಗಳಲ್ಲಿ ಯುವ ಸಂಘಟನೆಗಳು ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಸಂವಾದವು ಈ ದಿನದ ಭಾಗವಾಗಿ ಆಗಸ್ಟ್ 14ರಂದು ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. “ಯುವಜನರು ಮೌಲ್ಯಯುತ, ವೈಜ್ಞಾನಿಕ ಶಿಕ್ಷಣದಿಂದ ವಂಚಿತರಾಗುತ್ತಾ, ಜೀವನದ ಹಲವು ಮಗ್ಗಲುಗಳನ್ನು ಎದುರಿಸುವ ಸಾಮರ್ಥ್ಯ, ಸಹಕಾರ, ಆತ್ಮವಿಶ್ವಾಸಗಳನ್ನು ಕಳೆದುಕೊಳ್ಳುವಂತಾಗುತ್ತಿದೆ. ಕುಂದುತ್ತಿರುವ ಮೌಲ್ಯಗಳು, ಕೌಶಲ ರಹಿತ ಶಿಕ್ಷಣ ಮಾತ್ರವಲ್ಲ ಜೀವನೋಪಾಯವನ್ನು ಕಂಡುಕೊಳ್ಳಲೂ ಹರಸಾಹಸ ಪಡುತ್ತಿದ್ದಾರೆ. ಸವಾಲುಗಳನ್ನು ಮೆಟ್ಟಿನಿಂತು ಸರಿಯಾದ ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳಲು ಕಲಿಸಬೇಕಾದ ಶಿಕ್ಷಣ ಬದಲಾಗಿ, ಆತ್ಮಹತ್ಯೆಗಳು ಹೆಚ್ಚುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದೆ. ದಿಕ್ಸೂಚಿ ಇಲ್ಲದ ಬದುಕಿನಲ್ಲಿ ಹಲವು ನಿರೀಕ್ಷೆಗಳು, ಕಷ್ಟಗಳು, ಒತ್ತಡಗಳು, ಗೊಂದಲ, ಆತಂಕಗಳು ತುಂಬಿಹೋಗಿವೆ. ಇವುಗಳನ್ನು ಅರ್ಥೈಸಿಕೊಂಡು, ಬದುಕು ಬದಲಿಸಿಕೊಳ್ಳಲು ಸಮಯಕ್ಕೆ ಸರಿಯಾಗಿ ಯುವಜನರ ಮೌನವನ್ನು, ಆಕ್ರಂದನವನ್ನು ಕೇಳಲು ಸರಿಯಾದ ಕಿವಿಗಳು ಬೇಕಿವೆ. ಸಮಾಲೋಚನೆ ಮಾಡಬೇಕಿದೆ” ಎನುತ್ತದೆ ಸಂವಾದ.
ಈಗಾಗಲೇ ಮಿಜೋರಾಂ, ಕೇರಳ ಮತ್ತು ಅಸ್ಸಾಂ ರಾಜ್ಯಗಳು ಕ್ರಮವಾಗಿ 2008, 2014 ಮತ್ತು 2022ರಿಂದ ಯುವ ಆಯೋಗಗಳನ್ನು ಹೊಂದಿವೆ. ಇತ್ತೀಚೆಗೆ 2025ರ ಜುಲೈ ತಿಂಗಳಲ್ಲಿ ಬಿಹಾರ ಸರ್ಕಾರವೂ ಆಯೋಗವನ್ನು ಅನುಮೋದಿಸಿದೆ. ಕರ್ನಾಟಕದಲ್ಲಿಯೂ ಕಾಂಗ್ರೆಸ್ ಸರ್ಕಾರ ಯುವ ಆಯೋಗ ಜಾರಿಯತ್ತ ಗಮನ ಕೊಡಬೇಕು ಎಂಬುದು ಸಂವಾದ ಸಂಸ್ಥೆಯ ಆಗ್ರಹ.
