ರಾಜ್ಯದಲ್ಲಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿ ಯೋಜನೆಗಳು ಬಡವರಿಗೆ ಬಹಳ ನೆರವಾಗಿದ್ದು, ಜನ ನೆಮ್ಮದಿಯಿಂದ ಬದುಕುವಂತಾಗಿದೆ. ಸಿದ್ದರಾಮಯ್ಯ ಅವರ ಕೈ ಬಲಪಡಿಸಲು ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಂ ಎಲ್ ಅನಿಲ್ ಕುಮಾರ್ ತಿಳಿಸಿದರು.
ತಾಲೂಕಿನ ವೇಮಗಲ್ ಗ್ರಾಮದಲ್ಲಿ ಪಟ್ಟಣ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಗ್ಯಾರೆಂಟಿಗಳು ಚುನಾವಣೆಯ ಗಿಮಿಕ್ ಎಂದು ವಿರೋಧ ಪಕ್ಷದವರು ಟೀಕಿಸಿದ್ದರು. ಆದರೆ, ರಾಜ್ಯ ಸರ್ಕಾರ ಎಲ್ಲ ಗ್ಯಾರೆಂಟಿಗಳನ್ನು ಜಾರಿಗೆ ತಂದಿದೆ. ಇದರಿಂದ ರಾಜ್ಯವೇನೂ ದಿವಾಳಿ ಆಗಿಲ್ಲ. ಅಭಿವೃದ್ಧಿ ಕೆಲಸಗಳು ಮುಂದುವರೆದಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅನುಭವಿ ರಾಜಕಾರಣಿ. ಅನೇಕ ಬಜೆಟ್‌ಗಳನ್ನು ಮಂಡಿಸಿದ್ದಾರೆ. ಹಣಕಾಸು ಸಚಿವರೂ ಆಗಿರುವ ಅವರು ರಾಜ್ಯದ ಜನರನ್ನು ಸಂಕಷ್ಟಕ್ಕೆ ದೂಡುವುದಿಲ್ಲ” ಎಂದು ಹೇಳಿದರು.
“ವೇಮಗಲ್ ಹಿಂದೆ ಗ್ರಾಮ ಪಂಚಾಯಿತಿಯಾಗಿತ್ತು. ಇವತ್ತು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಈ ಭಾಗದಲ್ಲಿ ಅಭಿವೃದ್ಧಿಗೆ ಸಾಕಷ್ಟು ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಕಾಂಗ್ರೆಸ್ ಪಕ್ಷವು ಎಲ್ಲ ಜಾತಿ ಧರ್ಮಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗಿದೆ. ಕಾಂಗ್ರೆಸ್ ಪಕ್ಷದ ಬಗ್ಗೆ ಅಪಪ್ರಚಾರ ಮಾಡಲು ಜೆಡಿಎಸ್ ಮತ್ತು ಬಿಜೆಪಿ ಹೊರಟಿದ್ದಾರೆ. ಸಿಎಂ ಸಿದ್ದರಾಮಯ್ಯ ಆಡಳಿತದ ಬಗ್ಗೆ ಜನಪ್ರಿಯ ಕಾರ್ಯಕ್ರಮಗಳ ಬಗ್ಗೆ ಮನೆ ಮನೆಗೆ ಹೋಗಿ ಮನವರಿಕೆ ಮಾಡಿಕೊಡಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಮತ ಹಾಕಿಸಬೇಕಾಗಿದೆ” ಎಂದರು.
ಮಾಜಿ ಸಭಾಪತಿ ವಿ ಆರ್ ಸುದರ್ಶನ್ ಮಾತನಾಡಿ, “ಪಟ್ಟಣ ಪಂಚಾಯಿತಿಯಾಗಿ ಮೊದಲ ಬಾರಿಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಬೇಕಾಗಿದೆ. ಜತೆಗೆ ಪಕ್ಕದ ವಾರ್ಡ್‌ಗಳಲ್ಲಿರುವ ಸಂಬಂಧಿಕರು ಸ್ನೇಹಿತರಿಗೆ ಮನವರಿಕೆ ಮಾಡಿ ಮತ ಹಾಕಿಸಬೇಕಾಗಿದೆ. ಸಿದ್ದರಾಮಯ್ಯನವರು ಆಶ್ವಾಸನೆ ನೀಡಿದಂತೆ ನಡೆದುಕೊಂಡಿದ್ದು, ಅವುಗಳನ್ನು ಗ್ಯಾರೆಂಟಿ ಮೂಲಕ ಜಾರಿ ಮಾಡಿದ್ದಾರೆ. ಜನರ ಪರವಾದ ಸರ್ಕಾರ ಮಾಡಿದ್ದಾರೆ. ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಬೇಕಾಗಿದೆ” ಎಂದು ಕೋರಿದರು.
ಈ ಸುದ್ದಿ ಓದಿದ್ದೀರಾ? ಚಿಂತಾಮಣಿ | ಕುಂಬಾರರು ಸಮಾಜದ ಮುಖ್ಯ ವಾಹನಿಗೆ ಬರಬೇಕೆಂದರೆ ಒಗ್ಗಟ್ಟು ಮುಖ್ಯ: ಆರ್ ವೆಂಕಟಾಚಲಪತಿ
ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ನಾಗನಾಳ ಸೋಮಣ್ಣ, ಕೋಮುಲ್ ನಿರ್ದೇಶಕ ಚಂಜಿಮಲೆ ಬಿ ರಮೇಶ್, ಜಿಲ್ಲಾ ಗ್ಯಾರೆಂಟಿ ಸಮಿತಿ ಅಧ್ಯಕ್ಷ ವೈ ಶಿವಕುಮಾರ್, ತಾಲೂಕು ಅಧ್ಯಕ್ಷ ಮುನಿಯಪ್ಪ, ಸೀಸಂದ್ರ ಗೋಪಾಲಗೌಡ, ಮೈಲಾಂಡಹಳ್ಳಿ ಮುರಳಿ, ಜನಪನಹಳ್ಳಿ ನವೀನ್, ಅಂಬರೀಶ್, ಕುರುಬರಹಳ್ಳಿ ಕುಮಾರ್, ಮೂರ್ತಿ, ಬಿ ನಾಗರಾಜ್, ಅಭ್ಯರ್ಥಿಗಳಾದ ಮಂಜುಳಾ ಸುರೇಶ್, ದೀಪ, ಅಂಜಲಿ ಪ್ರಕಾಶ್, ಶಶಿಕಲಾ ನಾಗೇಶ್, ವನಿತಾ, ರವಿಚಂದ್ರ, ಮುಂತಾದವರು ಇದ್ದರು.