ಚಳ್ಳಕೆರೆಯಲ್ಲಿ ಯೂರಿಯಾ ಗೊಬ್ಬರ ಸಿಗದೇ ರೈತರು ಪರದಾಡುವ ಸ್ಥಿತಿ ಎದುರಾಗಿದ್ದು, ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನಲ್ಲಿ ರಸಗೊಬ್ಬರ ಕೊರತೆ ಎದುರಾಗಿದೆ. ಈರೀತಿ ಗೊಬ್ಬರಕ್ಕಾಗಿ ನೂಕು ನೂಗ್ಗಲಿನ ಪರಿಸ್ಥಿತಿ ನೋಡಿರಲಿಲ್ಲ ಎಂದು ರೈತರು ಆತಂಕ ವ್ಯಕ್ತಪಡಿಸಿದರು.

ಇದುವರೆಗೂ ಹವಾಮಾನದ ಕಾರಣದಿಂದ, ಮಳೆಯ ಕಣ್ಣಾಮುಚ್ಚಾಲೆ ಆಟದಿಂದಾಗಿ ಬಿತ್ತನೆ ಕಾರ್ಯ ಕುಂಠಿತವಾಗಿತ್ತು. ಕಳೆದ ತಿಂಗಳು ಜುಲೈ ಅಂತ್ಯದಲ್ಲಿ ಉತ್ತಮ ಮಳೆ ಆರಂಭವಾಗಿದ್ದು ಸಾಕಷ್ಟು ರೈತರು ಬಿತ್ತನೆ ಕಾರ್ಯ ಕೈಗೊಂಡಿದ್ದು ಪ್ರಗತಿಯಲ್ಲಿದೆ. ಜುಲೈ ಕೊನೆಯಲ್ಲಿ ಬಿತ್ತನೆ ಮಾಡಿದ ರೈತರಿಗೆ ಈಗ ರಸಗೊಬ್ಬರ ಯೂರಿಯಾ ಅವಶ್ಯಕತೆ ಇದ್ದು ಸಾಕಷ್ಟು ಯೂರಿಯಾ ದಾಸ್ತಾನು ಇಲ್ಲದ ಕಾರಣ ಗೊಬ್ಬರ ಸಿಗದೇ ರೈತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಗೊಬ್ಬರ ಸಿಗುತ್ತದೋ ಇಲ್ಲವೋ ಎಂದು ಗೊಂದಲ ಉಂಟಾಗಿದೆ ಎಂದು ಸರತಿಯಲ್ಲಿ ನಿಂತು ಕಾಯುತ್ತಿರುವ ರೈತರು ಅಳಲು ತೋಡಿಕೊಂಡರು.

ಜನತಾ ಬಜಾರ್ ಹಾಗೂ ಇತರೆಡೆ ಅಂಗಡಿಗಳಲ್ಲಿದ್ದ ಅಲ್ಪಸ್ವಲ್ಪ ರಸಗೊಬ್ಬರವನ್ನು ಪೊಲೀಸ್ ಸರ್ಪಗಾವಲಿನಲ್ಲಿ ವಿತರಣೆ ಮಾಡಲಾಯಿತು. ಚಳ್ಳಕೆರೆಯಲ್ಲಿ ಗೊಬ್ಬರ ಕೊರತೆಯಿಂದ ಜನತಾ ಬಜಾರ್ ನಲ್ಲಿ ರೈತರು ಕಾದು ಕುಳಿತಿದ್ದರು.
ಕಳೆದ ಎರಡು ತಿಂಗಳಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಯೂರಿಯಾ ರಸಗೊಬ್ಬರ ಕೊರತೆ ಎದುರಾಗಿದ್ದು, ತೀವ್ರ ಪ್ರತಿಭಟನೆಗಳು ನಡೆದವು. ಕೆಲವೆಡೆ ರಸ್ತೆ ತಡೆ, ಕೃಷಿ ಇಲಾಖೆಗೆ ಬೀಗ ಜಡಿದು ರೈತ ಮುಖಂಡರು ಬಿಸಿ ಮುಟ್ಟಿಸಿದ್ದರು. ಆಗ ಚಳ್ಳಕೆರೆ ತಾಲೂಕಿನಲ್ಲಿ ಗೊಬ್ಬರದ ಅವಶ್ಯಕತೆ ಇಲ್ಲದೆ ಶಾಂತವಾಗಿತ್ತು. ಜುಲೈನಲ್ಲಿ ಉತ್ತಮ ಹವಾಮಾನ, ಮಳೆ ನಂತರ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಈ ಸಮಯದಲ್ಲಿ ಬೆಳೆಗಳಿಗೆ ಬೆಳವಣಿಗೆಗೆ ಪೋಷಕಾಂಶಭರಿತ ಯೂರಿಯಾ ಅಗತ್ಯ ಹೆಚ್ಚು. ಆದರೆ ಸಾಕಷ್ಟು ಗೊಬ್ಬರ ಸರಬರಾಜು ಇಲ್ಲದೇ ಗೊಬ್ಬರ ಅಂಗಡಿ ಮುಂಬಾಗ ರೈತರು ನೂಕುನುಗ್ಗಲು ಎದುರಾಗಿದೆ.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ನರೇಗಾದಲ್ಲಿ ಕಡ್ಡಾಯ ನೂರು ದಿನಗಳ ಕೆಲಸ, ಬೇಡಿಕೆಗಳ ಈಡೇರಿಕೆಗಾಗಿ ಗ್ರಾಕೂಸ್ ಮನವಿ
ಈ ಬಗ್ಗೆ ಮಾಹಿತಿ ನೀಡಿದ ಸ್ಥಳೀಯ ಪತ್ರಕರ್ತ ಮುರಳಿ ಮತ್ತು ಕರವೇ ಮುಖಂಡ ಭೋಜರಾಜ್,”ಇತಿಹಾಸದಲ್ಲಿ ಇದೇ ಮೊದಲು ಗೊಬ್ಬರ ಕೊರತೆ ಚಳ್ಳಕೆರೆ ತಾಲೂಕಿನಲ್ಲಿ ಉಂಟಾಗಿದೆ ಎನ್ನಬಹುದು. ಬೇರೆ ಭಾಗಗಳಲ್ಲಿ ರಸಗೊಬ್ಬರ ಕೊರತೆ ಸುದ್ದಿ ಇದೆ ಎಂದು ಸುದ್ದಿ ಓದುತ್ತಿದ್ದೆವು. ಆದರೆ ಮಂಗಳವಾರ ಬೆಳ್ಳಂಬೆಳಗ್ಗೆ ಗೊಬ್ಬರ ಸಿಗದೇ ರೈತರು ಪರದಾಡುವ, ನೂಕಾಟ, ವಾಗ್ಯುದ್ದ ನಡೆದುದನ್ನು ಕಣ್ಣಾರೆ ಕಂಡಿದ್ದೇವೆ. ರೈತರಿಗೆ ಅಗತ್ಯವಾದ ರಸಗೊಬ್ಬರವನ್ನು ಕೂಡಲೇ ಕೃಷಿ ಇಲಾಖೆ ಒದಗಿಸಬೇಕು” ಎಂದು ಒತ್ತಾಯಿಸಿದ್ದಾರೆ.