ಸ್ವಾತಂತ್ರ್ಯ ದಿನದಂದು ತಾಲೂಕು ಕೇಂದ್ರಗಳಲ್ಲಿ ಶಾಸಕರು ಧ್ವಜಾರೋಹಣ ಮಾಡಬೇಕು. ಆದರೆ, ಕೆ.ಆರ್ ಪೇಟೆಯಲ್ಲಿ ಶಾಸಕರಿಗೆ ಅವಕಾಶ ನೀಡಲಾಗಿಲ್ಲ. ಇದು ಜನರ ಹೋರಾಟ ಮತ್ತು ಪ್ರಜಾಪ್ರಭತ್ವದ ಆಡಳಿತಕ್ಕೆ ವಂಚನೆ ಮಾಡುತ್ತದೆ. ಅಲ್ಲದೆ, ಜನಪ್ರತಿನಿಧಿಗಳ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಕೆ.ಆರ್ ಪೇಟೆಯ ಶಾಸಕ ಎಚ್.ಟಿ ಮಂಜು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೇಶಾದ್ಯಂತ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆ ನಡೆಯುತ್ತಿದೆ. ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆಯಲ್ಲಿಯೂ ತಾಲೂಕು ಮಟ್ಟದ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ತಹಶೀಲ್ದಾರ್ ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಈ ಬಗ್ಗೆ ಅಸಮಾಧಾನಗೊಂಡಿರುವ ಶಾಸಕ ಎಚ್.ಟಿ ಮಂಜು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಧ್ವಜಾರೋಹಣವನ್ನು ಆಯಾ ಕ್ಷೇತ್ರಗಳ ಶಾಸಕರೇ ನೆರವೇರಿಸಬೇಂದು ಆದೇಶ ಹೊರಡಿಸುವಂತೆ ಮನವಿ ಮಾಡಿದ್ದಾರೆ.
“ಸ್ವಾತಂತ್ರ್ಯ ದಿನದಂದು ರಾಜ್ಯದಲ್ಲಿ ಮುಖ್ಯಮಂತ್ರಿಗಳು, ಜಿಲ್ಲಾ ಕೇಂದ್ರಗಳಲ್ಲಿ ಉಸ್ತುವಾರಿ ಸಚಿವರು ಧ್ವಜಾರೋಹಣ ನೆರವೇರಿಸುತ್ತಾರೆ. ಅದೇ ರೀತಿ ತಾಲೂಕು ಹಂತದಲ್ಲಿ ಶಾಸಕಾಂಗದ ಪ್ರತಿನಿಧಿಗಳಾದ ಶಾಸಕರು ಧ್ವಜಾರೋಹಣ ಮಾಡಬೇಕು. ಆದರೆ, ಕೆ.ಆರ್ ಪೇಟೆಯಲ್ಲಿ ತಹಶೀಲ್ದಾರ್ ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದು ಆಹ್ವಾನ ಪತ್ರಿಕೆಯಲ್ಲಿ ತಿಳಿಸಲಾಗಿದೆ. ಇದು ಪ್ರಜಾಪ್ರಭುತ್ವ ಆಡಳಿತಕ್ಕೆ ವಂಚನೆ ಯಾಗಿದೆ ಮತ್ತು ಜನಪ್ರತಿನಿಧಿಗಳ ಹಕ್ಕುಗಳ ಉಲ್ಲಂಘನೆಯಾಗಿದೆ” ಎಂದು ಪತ್ರದಲ್ಲಿ ಬರೆದಿದ್ದಾರೆ.
“ಕೆ.ಆರ್ ಪೇಟೆಯಲ್ಲಿ ಕೆಲವು ವರ್ಷಗಳಿಂದ ಹೀಗೆಯೇ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಮುಖ್ಯಮಂತ್ರಿಗಳು ಮಧ್ಯ ಪ್ರವೇಶ ಮಾಡಿ, ತಾಲೂಕು ಹಂತದಲ್ಲಿ ಧ್ವಜಾರೋಹಣವನ್ನು ಆಯಾ ಕ್ಷೇತ್ರದ ಶಾಸಕರು ನೆರವೇರಿಸಬೇಕೆಂಬ ಆದೇಶ ಹೊರಡಿಸಬೇಕು. ಆ ಮೂಲಕ ಜನಪ್ರತಿನಿಧಿಗಳು ಹಕ್ಕು ಮತ್ತು ಘಟನೆಯನ್ನು ರಕ್ಷಿಸಬೇಕು” ಎಂದು ಮನವಿ ಮಾಡಿದ್ದಾರೆ.