ಜೋಳಿಗೆ | ʻಆಂದೋಲನʼದಲ್ಲಿ ನನ್ನ ತರಬೇತಿ- ಭಾಗ 1

Date:

Advertisements

ಪತ್ರಿಕೆಯ ಪೇಜ್ ಮೇಕಪ್ ಮಾಡುವುದರಲ್ಲಿ ರಾಜಶೇಖರ ಕೋಟಿಯವರದು ಬಹಳ ಅಂದಚಂದ, ಅಚ್ಚುಕಟ್ಟು. ಆ ಅಚ್ಚುಕಟ್ಟುತನವನ್ನೂ ರೂಢಿಸಿಕೊಂಡೆ. ಎಷ್ಟರಮಟ್ಟಿಗೆಂದರೆ, ಮುಂದೆ ನಾನು ʻಮುಂಜಾವುʼ ಪತ್ರಿಕೆ ಆರಂಭಿಸಿದಾಗ, ಅರ್ಧ ಕ್ರೌನ್ ಆಕಾರದ ನನ್ನ ಪತ್ರಿಕೆಯಲ್ಲಿದ್ದ ಕೇವಲ ನಾಲ್ಕು ಕಾಲಂಗಳಲ್ಲೇ ನೀಟಾಗಿ ಮೇಕಪ್ ಮಾಡುತ್ತಿದ್ದುದನ್ನು ನೋಡಿ ಕೋಟಿಯವರು ಒಂದಲ್ಲ ಹಲವು ಸಲ ಮೆಚ್ಚುಗೆಯ ಮಾತಾಡಿದ್ದರು!

ಮೈಸೂರಿನಲ್ಲಿ ನಮ್ಮ ಯುವ ತಂಡ ಹೊಸ ʻಕ್ರಾಂತಿಕಾರಿ ಪಕ್ಷʼ ಕಟ್ಟಿಕೊಂಡಿದ್ದೆಲ್ಲಾ ಸರಿ. ಅದನ್ನು ಬೆಳೆಸಲು ಅಷ್ಟೆಲ್ಲಾ ತಯಾರಿ, ಪ್ರಯತ್ನ ಮಾಡಿದ್ದೂ ಆಯಿತು. ಆದರೆ ತಂಡದ ಬೇರೆಲ್ಲರಿಗೂ 1980ರ ಏಪ್ರಿಲ್ ಹೊತ್ತಿಗೆ ಬೇರೆಬೇರೆ ಕಡೆ ಉದ್ಯೋಗ ದೊರೆತ ಫಲವಾಗಿ ನಮ್ಮ ಗುಂಪು ಬಹುಮಟ್ಟಿಗೆ ಚದುರಿಹೋಯಿತು. ಅದೇ ವೇಳೆಗೆ ಲಿಬರೇಶನ್ ಪಕ್ಷದ ಸಂಪರ್ಕವೂ ಕಡಿದುಹೋಯಿತು. ನಾವೊಂದು ತಂಡವಾಗಿ ಉಳಿಯಲಿಲ್ಲ. ಇದ್ದ ಕೆಲಸಕ್ಕೆ ರಾಜೀನಾಮೆ ಕೊಟ್ಟಿದ್ದ ನಾನು ಮತ್ತು ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿ ಹೇಮಾ ಒಂದು ರೀತಿ ಒಂಟಿಯಾಗಿ ಬಿಟ್ಟೆವು. ಮುಂದೇನು? ಎಂದು ಯೋಚಿಸಿದಾಗ, ಶೃಂಗೇರಿ, ಕೊಪ್ಪ, ನರಸಿಂಹರಾಜಪುರ, ಮೂಡಿಗೆರೆ, ತೀರ್ಥಹಳ್ಳಿ, ಹೊಸನಗರ ಸೇರಿದಂತೆ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ನಡುವಿನ ಆರೇಳು ತಾಲೂಕುಗಳ ಆಯಕಟ್ಟಿನ ಮಲೆನಾಡು ಪ್ರದೇಶದ ಒಂದು ಕಡೆ ನೆಲೆ ನಿಂತು ನಮ್ಮ ಕ್ರಾಂತಿಕಾರಿ ಯೋಜನೆಯನ್ನು ಮುಂದುವರಿಸಬೇಕು; ಅದಕ್ಕಾಗಿ ಪತ್ರಕರ್ತನ ವೃತ್ತಿ ಸೂಕ್ತವಾಗಿದ್ದು, ಮೈಸೂರಿನ ʻಆಂದೋಲನʼ ಪತ್ರಿಕೆಯಲ್ಲಿ ಒಂದು ವರ್ಷ ಉಚಿತವಾಗಿ ಕೆಲಸ ಮಾಡಿ ತರಬೇತಿ ಪಡೆಯಬೇಕು ಎಂದು ತೀರ್ಮಾನಿಸಿದೆವು. ʻಆಂದೋಲನʼ ಸಂಪಾದಕರಾಗಿದ್ದ ರಾಜಶೇಖರ ಕೋಟಿಯವರು ನನ್ನನ್ನು ʻತರಬೇತಿʼಗೆ ಸೇರಿಸಿಕೊಳ್ಳಲು ಸಂತೋಷದಿಂದ ಒಪ್ಪಿಕೊಂಡರು.

ಹೀಗೆ 1980ರ ಮೇ ತಿಂಗಳಲ್ಲಿ ʻಆಂದೋಲನʼದಲ್ಲಿ ಕೆಲಸಕ್ಕೆ ಸೇರಿಕೊಂಡ ನಂತರ ವರದಿಗಾರಿಕೆಯ ಜೊತೆಜೊತೆಗೆ, ಅಚ್ಚುಮೊಳೆ ಜೋಡಿಸುವುದು (ಕಂಪೋಸಿಂಗ್), ಪೇಜ್ ಮೇಕಪ್, ಪ್ರಿಂಟಿಂಗ್ ಈ ಎಲ್ಲ ಕೆಲಸಗಳನ್ನೂ ಕಲಿತುಕೊಂಡೆ. ಈಗಿನಂತೆ ಆಗ ಕಂಪ್ಯೂಟರ್ನಲ್ಲಿ ಕಂಪೋಸ್ (ಟೈಪ್) ಮಾಡಿ ಅಲ್ಲೇ ಪೇಜ್ ಮೇಕಪ್ ಮಾಡುವುದು ಇದೆಲ್ಲ ಇರಲಿಲ್ಲವಲ್ಲ. ಅಚ್ಚುಮೊಳೆಗಳನ್ನು ಉದ್ದುದ್ದಕ್ಕೆ ಕಾಲಂಗಟ್ಟಲೆ ಜೋಡಿಸಿಕೊಂಡು, ನಂತರ ಕಬ್ಬಿಣದ ತಗಡಿನ ಟ್ರೇ(ಗ್ಯಾಲಿ)ಗಳಲ್ಲಿಟ್ಟು ಕಾಲಂವಾರು ಜೋಡಿಸಿ ಮುದ್ರಣದ ಫ್ರೇಂನಲ್ಲಿ ಕೂರಿಸಿ ʻಲಾಕ್ʼ ಮಾಡಿ ನಂತರ ಮೆಶಿನ್ನಲ್ಲಿ ಕೂರಿಸಿ ಪ್ರಿಂಟ್ ಮಾಡಬೇಕಾಗಿತ್ತು. ಇದೆಲ್ಲವನ್ನೂ ಅಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಲೇ ಕಲಿತುಕೊಂಡೆ.

ಇದಕ್ಕೆ ಸ್ವಲ್ಪ ಮೊದಲು 1979ರಲ್ಲಿ, ಲಿಬರೇಶನ್ ಪಕ್ಷದ ಅಖಿಲ ಭಾರತ ಸಮ್ಮೇಳನದ ರಾಜಕೀಯ ದಸ್ತಾವೇಜನ್ನು ಕನ್ನಡಕ್ಕೆ ಅನುವಾದಿಸಿ ಅದನ್ನು ಮುದ್ರಿಸಲು ಬೆಂಗಳೂರಿನಲ್ಲೊಂದು ಸಣ್ಣ ಪ್ರೆಸ್ಸಿನವರಿಗೆ ವಹಿಸಿದ್ದೆವು; ಅದು ಅರ್ಧ ಆಗುವ ಹೊತ್ತಿಗೆ ಅದರ ವಯೋವೃದ್ಧ ಮಾಲೀಕರಿಗೆ ತೀವ್ರ ಅನಾರೋಗ್ಯವುಂಟಾಗಿ ಕೆಲಸ ನಿಂತು ಹೋಗಿತ್ತು. ಕೊನೆಗೆ ನಾನೇ ಒಂದೊಂದಾಗಿ ಕೆಲಸ ಕಲಿತು ಮುದ್ರಣವನ್ನೂ ಮುಗಿಸಬೇಕಾಗಿ ಬಂದಿತ್ತು. ಹೀಗಾಗಿ ಅಚ್ಚುಮೊಳೆ ಜೋಡಣೆ ಮತ್ತು ಕಾಲಿನಿಂದ ದೊಡ್ಡ ಪೆಡಲ್ನಂಥದ್ದೊಂದನ್ನು ತುಳಿದು ಮುದ್ರಣ ಮಾಡುವ ʻಟ್ರೆಡಲ್ʼ ಮೆಶಿನ್ನಲ್ಲಿ ಪ್ರಿಂಟ್ ಮಾಡುವುದನ್ನು ತಕ್ಕಮಟ್ಟಿಗೆ ಕಲಿತಿದ್ದೆ, ಅದನ್ನಿಲ್ಲಿ ಇನ್ನಷ್ಟು ಸುಧಾರಿಸಿಕೊಂಡೆ. ಪತ್ರಿಕೆಯ ಪೇಜ್ ಮೇಕಪ್ ಮಾಡುವುದರಲ್ಲಿ ರಾಜಶೇಖರ ಕೋಟಿಯವರದು ಬಹಳ ಅಂದಚಂದ, ಅಚ್ಚುಕಟ್ಟು. ಆ ಅಚ್ಚುಕಟ್ಟುತನವನ್ನೂ ರೂಢಿಸಿಕೊಂಡೆ. ಎಷ್ಟರಮಟ್ಟಿಗೆಂದರೆ, ಮುಂದೆ ನಾನು ʻಮುಂಜಾವುʼ ಪತ್ರಿಕೆ ಆರಂಭಿಸಿದಾಗ, ಅರ್ಧ ಕ್ರೌನ್ ಆಕಾರದ ನನ್ನ ಪತ್ರಿಕೆಯಲ್ಲಿದ್ದ ಕೇವಲ ನಾಲ್ಕು ಕಾಲಂಗಳಲ್ಲೇ ನೀಟಾಗಿ ಮೇಕಪ್ ಮಾಡುತ್ತಿದ್ದುದನ್ನು ನೋಡಿ ಕೋಟಿಯವರು ಒಂದಲ್ಲ ಹಲವು ಸಲ ಮೆಚ್ಚುಗೆಯ ಮಾತಾಡಿದ್ದರು!

Advertisements
ರಾಜಶೇಖರ ಕೋಟಿ
ಆಂದೋಲನ ಸಂಪಾದಕ ರಾಜಶೇಖರ ಕೋಟಿ

ವಿ.ವಿ.ಮೊಹಲ್ಲಾದಲ್ಲಿ ಆಗಿನ ಅಂಚೆ ಕಚೇರಿಯ ಪಕ್ಕದಲ್ಲಿ ರಸ್ತೆಯ ಆಚೆ ಮಗ್ಗಲಿಗೆ ಕೃಷ್ಣಮೂರ್ತಿ ಎಂಬವರ ಪ್ರಿಂಟಿಂಗ್ ಪ್ರೆಸ್ಸಿನಲ್ಲಿ ಆಂದೋಲನ ಅಚ್ಚಾಗುತ್ತಿತ್ತು. ಅಲ್ಲೇ ಒಳಗಡೆ ಎರಡು ಪ್ರತ್ಯೇಕ ಕೊಠಡಿಗಳಲ್ಲಿ ಅದರ ಕಂಪೋಸಿಂಗ್ ವಿಭಾಗ ಮತ್ತು ಬರವಣಿಗೆಯ ವಿಭಾಗ ಕೂಡ ಇತ್ತು. ಕೋಟಿಯವರು ಬೆಳಿಗ್ಗೆ ಹತ್ತು ಗಂಟೆಗೆ ಆಫೀಸಿಗೆ ಬಂದೊಡನೆ ಅಂದಿನ ಅಂಚೆಯನ್ನೆಲ್ಲ ನೋಡಿ, ವರದಿ ಮಾಡಬೇಕಾದುದನ್ನು ನನಗೆ ನೀಡುತ್ತಿದ್ದರು. ಯಾವುದಾದರೂ ವರದಿಯ ಕುರಿತು ಏನಾದರೂ ಸೂಚನೆ ನೀಡುವುದಿದ್ದರೆ ನೀಡುತ್ತಿದ್ದರು. ಕೆಲವು ಮಾಮೂಲಿ ಆ-ಈ ಕಾರ್ಯಕ್ರಮಗಳ ವರದಿಯನ್ನು ನೇರವಾಗಿ ಅಕ್ಷರ ಜೋಡಣೆಗೆ ಕೊಟ್ಟುಬಿಡುತ್ತಿದ್ದರು. ಮುಖ್ಯ ಕಂಪೋಜಿಟರ್ ಹರೀಶ್ ಮತ್ತು ಇಬ್ಬರು ಹುಡುಗಿಯರು ಕಂಪೋಸಿಂಗ್ ಮಾಡಮಾಡುತ್ತಲೇ ಅವುಗಳಿಗೆ ವರದಿಯ ರೂಪ ಕೊಡುವಷ್ಟು ಎಕ್ಸ್ಪರ್ಟ್ಗಳಾಗಿದ್ದರು. (ಅವರಲ್ಲಿ ಅನುರಾಧಾ ಎಂಬವರು ಮುಂದೆ ಹರೀಶರನ್ನು ಮದುವೆಯಾದರು. ಹರೀಶ್ ಕೆಲ ವರ್ಷಗಳ ನಂತರ, ಡೆಕ್ಕನ್ ಹೆರಾಲ್ಡ್ ಕರೆಸ್ಪಾಂಡೆಂಟ್ ಆಗಿ ನಿವೃತ್ತರಾಗಿದ್ದ ಕೃಷ್ಣ ವಟ್ಟಂ ಎಂಬವರೊಡನೆ ಸೇರಿ ಸ್ವಂತ ದಿನಪತ್ರಿಕೆ ಆರಂಭಿಸಿದರು).

ನಂತರ ಕೋಟಿಯವರು ಸಾಮಾನ್ಯವಾಗಿ ಹೊರಗೆ ಹೋಗಿ, ಸಂಜೆ ನಾಲ್ಕು-ಐದರ ಹೊತ್ತಿಗೆ ವಾಪಸ್ ಬರುತ್ತಿದ್ದರು. ಒಬ್ಬರು ಹಿರಿಯರು ಸಹ – ಅವರ ಹೆಸರು ನೆನಪಾಗುತ್ತಿಲ್ಲ – ಬಂದು ಬೆಳಗಿನಿಂದ ಮಧ್ಯಾಹ್ನದವರೆಗೆ ಬರವಣಿಗೆ ಮಾಡಿ ಹೊರಟು ಹೋಗುತ್ತಿದ್ದರು. ಫ್ರೀಲಾನ್ಸರ್ ಒಬ್ಬರು ಪ್ರತೀ ಗುರುವಾರ ಸಿನಿಮಾ ವರದಿಗಳನ್ನು ಬರೆದು ತಂದುಕೊಟ್ಟು ಹೋಗುತ್ತಿದ್ದರು, ಅದು ಎಲ್ಲಾ ಪತ್ರಿಕೆಗಳಲ್ಲಿನ ರೂಢಿಯಂತೆ ಶುಕ್ರವಾರದ ಸಂಚಿಕೆಯಲ್ಲಿ ಪ್ರಕಟವಾಗುತ್ತಿತ್ತು. ಇವರಲ್ಲದೆ ಶಿವರಾಮ ಐತಾಳ ಎಂಬ ಒಬ್ಬ ಹಿರಿಯ ಲೇಖಕರೂ ಆಗಾಗ ಬಂದು ಏನಾದರೂ ವಿಶೇಷ ಬರಹಗಳನ್ನು ಬರೆಯುತ್ತಿದ್ದರು. ಕೋಟಿಯವರು ಆಫೀಸಿನಲ್ಲಿದ್ದರೆ ಏನಾದರೂ ಪ್ರಸ್ತುತ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಯುವುದು ಸಾಮಾನ್ಯವಾಗಿತ್ತು. ಅವರು ಹೊರಗೆ ಹೋದರೆ ಸಂಜೆ ಬಂದ ಕೂಡಲೆ ಮೊದಲಿಗೆ ಪ್ರಮುಖವಾದ ವರದಿಗಳ ಮೇಲೊಮ್ಮೆ ಕಣ್ಣಾಡಿಸಿ, ಏನಾದರೂ ತಿದ್ದುಪಡಿಗಳಿದ್ದರೆ ಮಾಡುತ್ತಿದ್ದರು. ನಂತರ ತಾವು ಬರೆಯಬೇಕಾದ ವರದಿಗಳನ್ನು ಸರಸರನೇ ಬರೆದು ಅಕ್ಷರ ಜೋಡಣೆಗೆ ಕೊಡುತ್ತಿದ್ದರು. ಕಂಪೋಜಿಟರ್ ಹುಡುಗಿಯರು ಸಂಜೆ ಐದು-ಐದೂವರೆತನಕ ಕೆಲಸ ಮಾಡುತ್ತಿದ್ದರು. ನಾನು ಸಂಜೆ ಆರು ಗಂಟೆಯ ನಂತರ ಮನೆಗೆ ಹೋಗುತ್ತಿದ್ದೆ. ಪತ್ರಿಕೆಯ ಬರವಣಿಗೆ ಮತ್ತು ಕಂಪೋಸಿಂಗ್ ಸಾಮಾನ್ಯವಾಗಿ ರಾತ್ರಿ ಎಂಟು-ಒಂಬತ್ತರವರೆಗೂ ಮುಂದುವರಿಯುತ್ತಿತ್ತು. ನಂತರ ಹರೀಶ್ ಮತ್ತು ಕೋಟಿಯವರು ಸೇರಿ ಪುಟ ಜೋಡಣೆ ಮಾಡಿ ಮುದ್ರಣಕ್ಕೆ ಸಿದ್ಧಪಡಿಸಿ ಇಡುತ್ತಿದ್ದರು. ರಾತ್ರಿ ಒಬ್ಬ ಪ್ರಿಂಟರ್ ಬಂದು ಪ್ರಿಂಟ್ ಮಾಡಿಟ್ಟು ಹೋಗುತ್ತಿದ್ದರು. ಬೆಳಿಗ್ಗೆ ಇನ್ನೊಬ್ಬ ಹುಡುಗ ಬಂದು ಅವನ್ನೆಲ್ಲ ಬಂಡಲ್ ಕಟ್ಟಿ ಜಿಲ್ಲೆಯ ವಿವಿಧ ಸ್ಥಳಗಳಿಗೆ ಬಸ್‌ಗಳಲ್ಲಿ ರವಾನಿಸಲು ಒಯ್ಯುತ್ತಿದ್ದ.

ಮುಖ್ಯವಾದ ಪತ್ರಿಕಾಗೋಷ್ಠಿಗಳಿಗಾಗಲಿ, ಯಾವುದಾದರೂ ವರದಿಗೋಸ್ಕರ ಅಥವಾ ಸ್ಪಷ್ಟೀಕರಣಕ್ಕೋಸ್ಕರ ಯಾರಾದರೂ ಅಧಿಕಾರಿ ಅಥವಾ ರಾಜಕಾರಣಿಯ ಭೇಟಿಗಾಗಲಿ, ಜಾಹೀರಾತು ತರುವುದಕ್ಕಾಗಲಿ ಹೊರಗೆ ಹೋಗುವಾಗ ಅನೇಕ ಸಲ ನನ್ನನ್ನೂ ಕರೆದುಕೊಂಡು ಹೋಗುತ್ತಿದ್ದರು. ಕ್ಲಿಷ್ಟವಾದ ಇಲ್ಲವೇ ವಿವಾದಿತ ವಿಚಾರಗಳ ಕುರಿತ ಪತ್ರಿಕಾ ಗೋಷ್ಠಿಗಳಿಗೆ ಅಥವಾ ವರದಿ ಸಂಗ್ರಹಕ್ಕೆ ಮೊದಮೊದಲು ನನ್ನೊಬ್ಬನನ್ನೇ ಕಳಿಸದೆ ತಾವೂ ಜೊತೆಗೆ ಬರುತ್ತಿದ್ದರು. ಅಂದಿನ ವಿಚಾರದ ಹಿನ್ನೆಲೆಯನ್ನು, ಒಳ ಮರ್ಮವನ್ನು ಮೊದಲೇ ನನಗೆ ವಿವರಿಸಿರುತ್ತಿದ್ದರು, ಇದು ವಿಷಯವನ್ನು ಸರಿಯಾದ ದೃಷ್ಟಿಯಿಂದ ಗ್ರಹಿಸಿ ವರದಿ ತಯಾರಿಸಲು ಬಹಳ ನೆರವಾಗುತ್ತಿತ್ತು. ಹೀಗೆ, ನನ್ನನ್ನು ಅತ್ಯಂತ ಸಮಾನಸ್ಕಂಧನಂತೆ ಕಾಣುವ ಹೊತ್ತಿನಲ್ಲೇ ವರದಿಗಾರಿಕೆಯನ್ನು ಒಬ್ಬ ಅಪ್ರೆಂಟೈಸ್ಗೆ ಕಲಿಸುವಷ್ಟೇ ಮುತುವರ್ಜಿಯೊಂದಿಗೆ ಕಲಿಸಿಕೊಟ್ಟರು. (ಅವರಿಗಿಂತ ನಾಲ್ಕೈದು ವರ್ಷ ಕಿರಿಯನಾಗಿದ್ದ ನನ್ನನ್ನು ಬಹುವಚನದಲ್ಲಿ ಮಾತ್ರವಲ್ಲ, ಹೆಚ್ಚಾಗಿ ಎಲ್ಲರನ್ನೂ ಮಾತಾಡಿಸುವಂತೆ ʻಸಾರ್ʼ ಎಂಬ ಸಂಬೋಧನೆಯೊಂದಿಗೇ ಅವರು ಮಾತಾಡಿಸುತ್ತಿದ್ದುದು).

6 Janapada Seva Trust

ನನ್ನ ಕೆಲವು ಪ್ರಮುಖ ವರದಿಗಳನ್ನು ನೆನಪಿಸಿಕೊಳ್ತೀನಿ. ಆ ಸಮಯದಲ್ಲಿ ಹಿರಿಯ ಗಾಂಧೀವಾದಿ ಮತ್ತು ವಿನೋಬಾ ಭಾವೆಯವರ ಅನುಯಾಯಿಯಾಗಿದ್ದ ಸುರೇಂದ್ರ ಕೌಲಗಿಯವರು ಗಾಂಧೀಜಿಯ ಗ್ರಾಮ ಸ್ವರಾಜ್ಯ ದೃಷ್ಟಿಕೋನಕ್ಕೆ ಅನುಗುಣವಾಗಿ ಮೇಲುಕೋಟೆಯಲ್ಲಿ ಜನಪದ ಸೇವಾ ಟ್ರಸ್ಟ್ ಎಂಬೊಂದು ಸೇವಾ ಸಂಸ್ಥೆಯನ್ನು ಸ್ಥಾಪಿಸಿ ಅನೇಕ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಒಮ್ಮೆ ಅಲ್ಲಿ ಅಖಿಲ ಭಾರತ ಕರಕುಶಲ ವಸ್ತುಪ್ರದರ್ಶನವೊಂದನ್ನು ಏರ್ಪಡಿಸಿದ್ದರು. ಅದನ್ನು ವರದಿ ಮಾಡಲು ಕೋಟಿಯವರು ನನ್ನನ್ನು ಕಳಿಸಿದರು. ಬಹುಶಃ ಪ್ರಮುಖವಾದ ಕಾರ್ಯಕ್ರಮವೊಂದರ ವರದಿಗೆ ನನ್ನನ್ನು ಸ್ವತಂತ್ರವಾಗಿ ಕಳಿಸಿದ್ದು ಅದೇ ಮೊದಲು ಇರಬೇಕು. ಅದರ ವರದಿಯನ್ನು ಮೆಚ್ಚಿಕೊಂಡು ಪ್ರಕಟಿಸಿದರು. ನಂತರ ಶ್ರೀರಂಗಪಟ್ಟಣದಲ್ಲಿ ರಾಜ್ಯ ಮಟ್ಟದ ಜನಪದ ಕಲಾ ಮೇಳವೊಂದು ಜರುಗಿತು. ಅದನ್ನು ವರದಿ ಮಾಡಲು ನನಗೆ ಹೋಗಲು ಹೇಳಿದಾಗ, ನನಗೆ ಕಲೆಗಳ ವಿಚಾರದಲ್ಲಿ ಏನೂ ಗೊತ್ತಿಲ್ಲ ಸಾರ್ ಎಂದು ನಾನು ಹಿಂಜರಿದೆ. “ಅದರಲ್ಲಿ ಹಿಂಜರಿಯಲಿಕ್ಕೇನಿದೆ ಸಾರ್? ಎಲ್ಲವನ್ನೂ ಗಮನಿಸಿ. ನಿಮ್ಮ ಮನಸ್ಸಿಗೆ ಯಾವುದು ಹೇಗೆ ತೋರುತ್ತೋ ಹಾಗೆಯೇ ಬರೆಯಿರಿ ಸಾಕು. ಚೆನ್ನಾಗಿಯೇ ಬರುತ್ತೆ. … ಹೋಗಿ ಬನ್ನಿ…” ಅಂತ ನನ್ನನ್ನು ಹುರಿದುಂಬಿಸಿ ಕಳಿಸಿಕೊಟ್ಟರು. ಮೇಳ ಅದ್ಭುತವಾಗಿತ್ತು. ಸೊರಬದ ಡೊಳ್ಳುಕುಣಿತ, ತರೀಕೆರೆ ಕಡೆಯ ವೀರಗಾಸೆ ನೃತ್ಯ, ಪಟದ ಕುಣಿತ, ಕರಡಿ ಮಜಲು, ಮೈಸೂರಿನಲ್ಲಿ ಅತ್ಯಂತ ಜನಜನಿತರಾಗಿದ್ದ ಕಂಸಾಳೆ ಮಹದೇವಯ್ಯನವರ ಕಂಸಾಳೆ ನೃತ್ಯ, ಇಂತಹ ಅನೇಕ ಅಪರೂಪದ ಕಲಾ ಪ್ರಕಾರಗಳು ಒಂದಕ್ಕಿಂತೊಂದು ಅಮೋಘವಾಗಿದ್ದವು. ಎಲ್ಲವನ್ನೂ ಬೆರಗಿನಿಂದ, ಖುಷಿಯಿಂದ ಆಸ್ವಾದಿಸಿದೆ. ವಾಪಸ್ ಪ್ರೆಸ್ಸಿಗೆ ಬಂದು ಅದೇ ಬೆರಗು ಸಂಭ್ರಮಗಳಿಂದ ಬರೆದೆ. ಹಿರಿಯರ ಬಳುವಳಿಯಾಗಿ ನನ್ನ ಕನ್ನಡ ಭಾಷಾ ಜ್ಞಾನ/ಬರವಣಿಗೆ ಸ್ವಚ್ಛವಾಗಿ ಸಾಕಷ್ಟು ಚೆನ್ನಾಗಿತ್ತು. ಅಂದು ಸ್ವಲ್ಪ ತಡವಾಗಿ ಪ್ರೆಸ್ಸಿಗೆ ಹಿಂದಿರುಗಿದ ಕೋಟಿಯವರು ನನ್ನ ಬರಹ ನೋಡಿ, “ಏನ್ಸಾರ್? ನನಗೇನೂ ಗೊತ್ತಿಲ್ಲ ಅನ್ನುತ್ತಿದ್ದಿರಲ್ಲ? ಒಳ್ಳೇ ಕಲಾ ವಿಮರ್ಶಕರಂತೆ ಎಷ್ಟು ಸೊಗಸಾಗಿ ಬರೆದಿದ್ದೀರಿ ನೋಡಿ!” ಅಂತ ಸ್ವಲ್ಪ ಹೆಚ್ಚೇ ಮೆಚ್ಚುಗೆ ವ್ಯಕ್ತಪಡಿಸಿ ಅದನ್ನೊಂದು ಪ್ರಮುಖ ಐಟಂ ಆಗಿ ಪ್ರಕಟಿಸಿದರು.

ಹೀಗೆ ಸರಾಗವಾಗಿ ನಡೆಯುತ್ತಿದ್ದ ನನ್ನ ʻತರಬೇತಿʼಯ ನಡುವೆ ಸಣ್ಣದೊಂದು ತನಿಖಾ ವರದಿಯ ಅವಕಾಶ ತಂತಾನೇ ಒದಗಿತು. ಕೆಆರ್‌ಎಸ್‌ ಗೆ ಹೋಗುವ ರಸ್ತೆಯಲ್ಲಿ ವಿ.ವಿ.ಮೊಹಲ್ಲಾದಿಂದ ಮುಂದಿನ ಇಳಿಜಾರಿನ ಬಲಗಡೆ ಒಂದು ದೊಡ್ಡ ಸರ್ಕಾರಿ ಖಾಲಿ ಜಾಗಿವಿತ್ತು. ಅಲ್ಲಿ ಇದ್ದಕ್ಕಿದ್ದಂತೆ ಒಂದೆರಡು ದಿನಗಳ ಅಂತರದಲ್ಲಿ, ದಪ್ಪದಪ್ಪನೆ ಕಟ್ಟಿಗೆಯ ಬೃಹತ್ತಾದ ರಾಶಿಯೊಂದು ತಲೆಯೆತ್ತಿತು. ಹಗಲಿನಲ್ಲಿ ಯಾವುದೇ ಓಡಾಟವಿರದೆ ರಾತೋರಾತ್ರಿ ಟ್ರಕ್ಕುಗಳು ಬಂದು ಕಟ್ಟಿಗೆ ರಾಶಿ ಪೇರಿಸಿದ್ದು, ಅಲ್ಲಿನ ಸಂಶಯಾಸ್ಪದ ಎನ್ನಿಸುವಂತಿದ್ದ ವಿದ್ಯಮಾನಗಳೆಲ್ಲ ಅಲ್ಲೇನೋ ಗೋಲ್ಮಾಲ್ ಇರಬೇಕೆನ್ನುವ ಅನುಮಾನ ಹುಟ್ಟಿಸಿದವು. ಇದನ್ನು ಕೋಟಿಯವರಿಗೆ ಹೇಳಿದೆ. ʻಹೋಗಿ ವಿಚಾರಣೆ ಮಾಡಿ, ಆದರೆ ಸ್ವಲ್ಪ ಹುಷಾರಾಗಿ ಇರಿ. ಏನಾದರೂ ಅಪಾಯವಿದೆ ಅನ್ನಿಸಿದರೆ ಕೂಡಲೇ ವಾಪಸ್ ಬಂದುಬಿಡಿʼ ಎಂದು ಹೇಳಿ ಕೆಲವು ಟಿಪ್ಸ್ ಹೇಳಿಕೊಟ್ಟರು. ನಾನು ಹೋಗಿ ಅಲ್ಲಿನ ಸಿಬ್ಬಂದಿಗಳೊಂದಿಗೆ ವಿಚಾರಣೆ ನಡೆಸತೊಡಗಿದಾಗ ಯಾವುದೇ ಸರಿಯಾದ ವಿವರಣೆ ಬರಲಿಲ್ಲ. ಅಲ್ಲಿಗೆ ಸಂಬಂಧಪಟ್ಟವರ ವಿಳಾಸ, ಫೋನ್ ನಂಬರ್ ಇತ್ಯಾದಿ ಕೇಳಿದಾಗ ಅದನ್ನೂ ಕೊಡಲಿಲ್ಲ. ಅಷ್ಟೇ ಅಲ್ಲ, ಅಲ್ಲಿದ್ದ ಒಬ್ಬಿಬ್ಬರು ಸಿಬ್ಬಂದಿಯೂ ಬೈಕ್ ಹತ್ತಿ ತರಾತುರಿಯಲ್ಲಿ ಹೊರಹೋಗಿಬಿಟ್ಟರು. ಅದನ್ನು ಅದೇ ರೀತಿಯಲ್ಲಿ ʻಇಲ್ಲೇನು ನಡೆಯುತ್ತಿದೆ?ʼ ಎಂದು ಅರಣ್ಯ ಮತ್ತು ಪೊಲೀಸ್ ಇಲಾಖೆಯವರಿಗೆ ಗುರಿ ಮಾಡಿ ವರದಿ ಮಾಡಿದೆವು. ಅಂದೇ ರಾತೋರಾತ್ರಿ ಆ ರಾಶಿ ಮಾಯವಾಗಿ ಬಿಟ್ಟಿತು! ಮುಂದೆ ಅದನ್ನು ಬೆನ್ನು ಹತ್ತಿದೆವೋ ಇಲ್ಲವೋ ನನಗೀಗ ನೆನಪಿಲ್ಲ. ಆದರೆ ಅಪಾಯದ ಸಾಧ್ಯತೆಯ ನಡುವೆಯೂ ಹೋಗಿ ʻತಪಾಸಣೆʼ ನಡೆಸಿದ್ದು, ಅಲ್ಲಿನ ಸಿಬ್ಬಂದಿ ತಬ್ಬಿಬ್ಬಾಗಿ ಓಡಿಹೋಗಿದ್ದು ಇವೆಲ್ಲ ನನ್ನಲ್ಲಿ ಒಂದು ರೀತಿ ರೋಮಾಂಚನ ಹುಟ್ಟಿಸಿದ್ದವು.

ಇದನ್ನೂ ಓದಿ ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ರಾಜ್ಯ ರಾಜಕಾರಣದಲ್ಲಿ ಬಹುತೇಕ ಕಾಂಗ್ರೆಸ್ಸಿನದೇ ದರ್ಬಾರು. ಮೈಸೂರಿನಲ್ಲೂ ಬಹಳಷ್ಟು ಮಂದಿ ಕಾಂಗ್ರೆಸ್ ಎಂಎಲ್ಎಗಳೇ ಇದ್ದಿದ್ದು. ಆಗ ಕಾಂಗ್ರೆಸ್ ಈಗಿನಿಂತೆ ಹೀನಾಯ ಸ್ಥಿತಿಯಲ್ಲಿರಲಿಲ್ಲ. ಎಲ್ಲಾ ತಾಲೂಕು, ಹೋಬಳಿ, ಗ್ರಾಮ ಮಟ್ಟಗಳಲ್ಲೂ ಗುರುತಿಸಬಹುದಾದ ಕಾಂಗ್ರೆಸ್ ಕಾರ್ಯಕರ್ತರು ಸಾಕಷ್ಟು ಮಂದಿ ಇರುತ್ತಿದ್ದರು. ಅವರಲ್ಲಿ ಬಹಳಷ್ಟು ಮಂದಿ ಸಜ್ಜನರೂ ಇದ್ದರು. ಅವರೆಲ್ಲ ಜಿಲ್ಲಾ ಕೇಂದ್ರ ಮೈಸೂರಿಗೆ ಬಂದರೆ ಕಾಂಗ್ರೆಸ್ ಪಕ್ಷದ ಕಚೇರಿಗಿಂತಲೂ ಹೆಚ್ಚಾಗಿ, ಲ್ಯಾನ್ಸ್ಡೌನ್ ಕಟ್ಟಡದಲ್ಲಿದ್ದ ಖಾದಿ ಗ್ರಾಮೋದ್ಯೋಗ ಕೇಂದ್ರದ ಮಳಿಗೆಯಲ್ಲೇ ಅಡ್ಡಾ ಹಾಕುತ್ತಿದ್ದುದು. ಕೋಟಿಯವರೂ ಅಲ್ಲಿಗೆ ಪ್ರತಿದಿನ ತಪ್ಪದೆ ಹೋಗಿ ಸಾಕಷ್ಟು ಹೊತ್ತು ಕಳೆಯುತ್ತಿದ್ದರು. ಅವರು ಸಮಾಜವಾದಿಗಳು, ಸಮಾಜವಾದಿಗಳಿಗೆ ಕಾಂಗ್ರೆಸ್ಸು ಬಹುದೊಡ್ಡ ಶತ್ರು, ಇದೆಲ್ಲ ಹೌದಾದರೂ ಕೋಟಿಯವರಿಗೆ ಅವರೆಲ್ಲರೊಂದಿಗೆ ನಿಕಟವಾದ ಸ್ನೇಹವಿತ್ತು ಸಲಿಗೆಯೂ ಇತ್ತು. ಅನೇಕ ತಾಲೂಕು ಹೋಬಳಿಗಳಲ್ಲಿ ಅವರುಗಳೇ ಆಂದೋಲನ ಪತ್ರಿಕೆಗೆ ಏಜೆಂಟರೂ ವರದಿಗಾರರೂ ಆಗಿರುತ್ತಿದ್ದರು.

ಅದೇ ರೀತಿ ಜನತಾ ಪಕ್ಷ ಮತ್ತು ಬಿಜೆಪಿ ಪಕ್ಷಗಳ ನಾಯಕರು-ಕಾರ್ಯಕರ್ತರೊಂದಿಗೂ ಅವರಿಗೆ ಒಳ್ಳೆಯ ಸ್ನೇಹ-ಸಲಿಗೆ ಇತ್ತು. ರಾಜ್ಯದ, ದೇಶದ ಬಹಳಷ್ಟು ವಿದ್ಯಮಾನಗಳ ಕುರಿತಂತೆ ವರದಿಗೆ ಒಗ್ಗುವಂತಹ ಆಸಕ್ತಿದಾಯಕವಾದ ಅನೇಕಾನೇಕ ವಿಷಯಗಳು ಅಲ್ಲಿ ದೊರೆಯುತ್ತಿದ್ದವು. ಈ ಸ್ಥಳಗಳು ಬಹಳಷ್ಟು ಪತ್ರಕರ್ತರಿಗೂ ಸುದ್ದಿಯ ಮೂಲಗಳಾಗಿದ್ದವು.

ಅವರುಗಳು ವರದಿಗಾರರು/ಏಜೆಂಟರು ಆಗಿರುತ್ತಿದ್ದುದೇನೋ ಸರಿ. ಆದರೆ ಅನೇಕರು ಏಜೆನ್ಸಿ ಹಣವನ್ನು ಪದೇಪದೇ ಜ್ಞಾಪಿಸಿದರೂ ಸಕಾಲದಲ್ಲಿ ತಲುಪಿಸುತ್ತಿರಲಿಲ್ಲ. ಹಾಗಂತ ಪತ್ರಿಕೆ ನಿಲ್ಲಿಸಿ ಮತ್ತೊಬ್ಬರನ್ನು ನೇಮಿಸುವುದೂ ಕಷ್ಟ. ಹೀಗಿದ್ದಾಗ, ಕೆ.ಆರ್. ನಗರದ ಏಜೆಂಟ್ ಆಗಿದ್ದ ತಾಲೂಕು ಮಟ್ಟದ, ಹೆಸರು ಮಾಡಿದ್ದ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ನೂರಾರು ರೂಪಾಯಿ (ಅಂದಿಗೆ ಅದು ಇಂದಿನ ಹತ್ತಾರು ಸಾವಿರ ರೂಪಾಯಿಗೆ ಸಮನಾಗಿತ್ತು) ಬಾಕಿ ಉಳಿಸಿಕೊಂಡಿದ್ದರು. ಹ್ಯಾಗಪ್ಪಾ ವಸೂಲಿ ಮಾಡುವುದು! ಕೋಟಿಯವರ ತಲೆಯಲ್ಲಿ ಒಂದು ಕೀಟಲೆಯ ಉಪಾಯ ಹೊಳೆಯಿತು. ಒಂದು ದಿನ ಪತ್ರಿಕೆಯ ಮುಖಪುಟದ ಮೂಲೆಯೊಂದರಲ್ಲಿ ಸಣ್ಣದಾಗಿ ನಾಲ್ಕೇ ನಾಲ್ಕು ಸಾಲಿನಲ್ಲಿ ಬಾಕ್ಸ್ ಮಾಡಿ, “ಕೆ.ಆರ್.ನಗರದ ಏಜೆಂಟರಾದ ಗೆಳೆಯ ʻಸೋ ಅಂಡ್ ಸೋʼ (ಅವರ ಹೆಸರು ಹಾಕಿ) ಅವರು ಕೂಡಲೇ ಪತ್ರಿಕೆ ಕಚೇರಿಗೆ ಭೇಟಿ ಕೊಡಬೇಕಾಗಿ ವಿನಂತಿ. – ಸಂ.” ಅಂತ ಪ್ರಕಟಿಸಿಬಿಟ್ಟರು! ಮಾರನೇ ದಿನವೇ ಆ ಗೆಳೆಯರು ಎದ್ದೆನೋ ಬಿದ್ದೆನೋ ಎಂದು ಓಡಿಬಂದು ಬಾಕಿ ತೀರಿಸಿದರು. ಅಡ್ಡಾದಲ್ಲಿ ಎಲ್ಲರೂ ಹೊಟ್ಟೆತುಂಬ ನಕ್ಕಿದ್ದೇ ನಕ್ಕಿದ್ದು. ಇದಾಗುತ್ತಲೇ ಬಾಕಿ ಉಳಿಸಿಕೊಂಡಿದ್ದ ಇತರರೂ ಬೇಗಬೇಗ ಬಾಕಿ ತೀರಿಸಿಬಿಟ್ಟರು! ಎಲ್ಲರೂ ಇದನ್ನೊಂದು ಹಾರ್ದಿಕವಾದ ತಮಾಷೆಯಾಗಿಯೇ ಸ್ವೀಕರಿಸಿದರು, ಯಾರೂ ಮನಸ್ತಾಪ ಮಾಡಿಕೊಳ್ಳಲಿಲ್ಲ ಎನ್ನುವುದು ವಿಶೇಷ. ಎಲ್ಲರೊಂದಿಗೆ ಕೋಟಿಯವರಿಗಿದ್ದ ಸ್ನೇಹಪೂರ್ಣ ಒಡನಾಟ ಅಂಥದ್ದು.

(ಆಟೋ ಡ್ರೈವರುಗಳ ವಿರುದ್ಧ ಎಸ್ಪಿ ರೇವಣಸಿದ್ದಯ್ಯ ಅವರ ʻಸರ್ಪ ಯಾಗʼ! – ಮುಂದಿನ ಕಂತಿನಲ್ಲಿ…)

ಸಿರಿಮನೆ ನಾಗರಾಜ್
ಸಿರಿಮನೆ ನಾಗರಾಜ್‌
+ posts

ಲೇಖಕ, ಸಾಮಾಜಿಕ ಚಿಂತಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಸಿರಿಮನೆ ನಾಗರಾಜ್‌
ಸಿರಿಮನೆ ನಾಗರಾಜ್‌
ಲೇಖಕ, ಸಾಮಾಜಿಕ ಚಿಂತಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

ನುಡಿಯಂಗಳ | ನುಡಿದಂತೆ ಬರೆವ, ಬರೆದಂತೆ ನುಡಿವ ಭಾಷೆ ʼಕನ್ನಡʼ

‘ನುಡಿದಂತೆ ಬರೆವ, ಬರೆದಂತೆ ನುಡಿವ’ ಕನ್ನಡ ಭಾಷೆಯ ಒಂದು ವಿಶಿಷ್ಟ ಸಮಸ್ಯೆ...

ದಿಲ್ಲಿ ಮಾತು | ಅಜ್ಞಾನಿಗಳ ನಾಡಿನಲ್ಲಿ ʼಡಾಯನ್‌ʼ ಎಂಬ ಕ್ರೂರ ಪದ್ಧತಿ  

ಮಹಿಳೆಯರನ್ನು ಮಾಟಗಾತಿ, ಡಾಕಿನಿ ಎಂದು ಅಂಧವಿಶ್ವಾಸದಿಂದ ಬಿಂಬಿಸಿ ಆ ಮಹಿಳೆಗೆ ಹಿಂಸೆ ನೀಡುವ,...

Download Eedina App Android / iOS

X