- ಏಕರೂಪ ನಾಗರಿಕ ಸಂಹಿತೆ ಜಾರಿಗೆ ಮುಂದಾದ ಕೇಂದ್ರ ಸರ್ಕಾರ
- ‘40% ಕಮಿಷನ್ ಪಡೆದಿರುವುದಕ್ಕೆ ಬಿಜೆಪಿಯನ್ನು ಜನ ಕಿತ್ತೊಗೆದಿದ್ದಾರೆ’
ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಏಕರೂಪ ನಾಗರಿಕ ಸಂಹಿತೆಗೆ ನಮ್ಮ ಸರ್ಕಾರ ಕೂಡ ವಿರೋಧ ವ್ಯಕ್ತಪಡಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದರು.
ರಾಜ್ಯ ವಕೀಲರ ಪರಿಷತ್ ಆಯೋಜಿಸಿರುವ ರಾಜ್ಯಮಟ್ಟದ ಸಮ್ಮೇಳನದಲ್ಲಿ ಭಾಗವಹಿಸಲು ಶನಿವಾರ ಮೈಸೂರಿಗೆ ಆಗಮಿಸಿದ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
“ಕೇಂದ್ರ ಸರ್ಕಾರ ಐಪಿಸಿ ಸೆಕ್ಷನ್‌ಗಳ ಹೆಸರನ್ನು ಬದಲಾಯಿಸಿದೆ. 1861 ರಲ್ಲಿ ಜಾರಿಯಾದ ಕಾನೂನುಗಳನ್ನು ಬದಲಾಯಿಸಲು ಹೊರಟಿದೆ. ಏನು ಮಾಡಲಿದ್ದಾರೆ ಕಾದು ನೋಡೋಣ. ಇವರು ಬದಲಾಯಿಸುವ ಮೊದಲು ತಿದ್ದುಪಡಿ ಮಾಡಬೇಕಿತ್ತು” ಎಂದರು.
ತನಿಖೆ ನಂತರ ಸತ್ಯಾಸತ್ಯತೆ ತಿಳಿಯಲಿದೆ
“ಬಿಜೆಪಿಯವರು 40% ಕಮಿಷನ್ ಪಡೆದು ಈಗ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ನಮ್ಮ ಬಗ್ಗೆ ಮಾತನಾಡಲು ಯಾವ ನೈತಿಕತೆಯೂ ಅವರಲ್ಲಿ ಉಳಿದಿಲ್ಲ. ತನಿಖೆ ನಡೆಯುತ್ತಿದೆ. ನಂತರ ಎಲ್ಲ ಸತ್ಯಾಸತ್ಯತೆ ಗೊತ್ತಾಗಲಿದೆ” ಎಂದು ಹೇಳಿದರು.
ಎಸ್ಐಟಿ ತನಿಖೆಗೆ ವಹಿಸಿದ್ದೇವೆ
“ಬಿಜೆಪಿ ಸರ್ಕಾರ 40% ಕಮಿಷನ್ ಪಡೆದಿರುವುದಕ್ಕೆ ಜನ ಆ ಸರ್ಕಾರವನ್ನು ಕಿತ್ತೊಗೆದಿದ್ದಾರೆ. ನಾವು ಅಧಿಕಾರಕ್ಕೆ ಬಂದರೆ ತನಿಖೆ ಮಾಡಿಸುವುದಾಗಿ ಹೇಳಿದ್ದೆವು. ಹಾಗಾಗಿ ಗುತ್ತಿಗೆಯಲ್ಲಿ ನಡೆದಿರುವ ಅಕ್ರಮಗಳ ಕುರಿತು ಎಸ್ಐಟಿ ತನಿಖೆಗೆ ವಹಿಸಿದ್ದೇವೆ. ವರದಿ ಬಂದ ನಂತರ ಪ್ರಾಮಾಣಿಕವಾಗಿ ಕೆಲಸ ಮಾಡಿರುವ ಗುತ್ತಿಗೆದಾರರ ಹಣ ಬಿಡುಗಡೆ ಮಾಡುತ್ತೇವೆ” ಎಂದು ತಿಳಿಸಿದರು.
“ರಾಜ್ಯದಲ್ಲಿ ಅಧಿಕ ಮಳೆ ಆಗದ ಕಾರಣ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ. ಆದರೂ ಕಾವೇರಿ ಪ್ರಾಧಿಕಾರ ತಮಿಳುನಾಡಿಗೆ ನೀರು ಬಿಡಿ ಎಂದಿದೆ. ಈ ಬಗ್ಗೆ ಕಾವೇರಿ ಪ್ರಾಧಿಕಾರಕ್ಕೆ ಮನವರಿಕೆ ಮಾಡಿಕೊಡಲಾಗುವುದು” ಎಂದರು.
ಈ ಸುದ್ದಿ ಓದಿದ್ದೀರಾ? ತನಿಖೆಯಿಂದ ಬಿಜೆಪಿಯವರ ಕಮಿಷನ್ ಕರ್ಮಕಾಂಡ ಬಯಲಾಗಲಿದೆ: ದಿನೇಶ್ ಗುಂಡೂರಾವ್
ನ್ಯಾಯಾಲಯದ ಆದೇಶದ ಪ್ರಕಾರ ಚುನಾವಣೆ
“ಸ್ಥಳೀಯ ಸಂಸ್ಥೆಗಳಾದ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಹಾಗೂ ಬಿಬಿಎಂಪಿಗಳಿಗೆ ಚುನಾವಣೆ ನಡೆಸಲು ನಮ್ಮ ಸರ್ಕಾರ ಸಿದ್ಧವಿದ್ದು, ನ್ಯಾಯಾಲಯದ ಆದೇಶದ ಪ್ರಕಾರ ಚುನಾವಣೆ ನಡೆಸಲು ಸರ್ಕಾರ ಸಿದ್ಧವಿದೆ” ಎಂದು ತಿಳಿಸಿದರು.
ಪ್ರಾಣಕ್ಕೆ ತೊಂದರೆ ಇಲ್ಲ
“ಬಿಬಿಎಂಪಿಯಲ್ಲಿ ನಡೆದಿರುವ ಬೆಂಕಿ ಪ್ರಕರಣದಲ್ಲಿ 9 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರ ಪ್ರಕಾರ 30% ಗಾಯಗಳಾಗಿವೆ, ಪ್ರಾಣಕ್ಕೆ ತೊಂದರೆ ಇಲ್ಲ ಎಂದಿದ್ದಾರೆ. 48 ಗಂಟೆಗಳ ಕಾಲ ನಿಗಾವಹಿಸಬೇಕು, ನಂತರ ಆರೋಗ್ಯದ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದಿದ್ದಾರೆ. ಸದ್ಯ ಗಾಯಾಳುಗಳಿಗೆ ಉತ್ತಮ ರೀತಿಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ” ಎಂದು ಹೇಳಿದರು.