ಚುನಾವಣಾ ವಸ್ತಿಲಿನಲ್ಲಿರುವ ಬಿಹಾರದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆಗಾಗಿ ನಡೆಯುತ್ತಿರುವ ವಿವಾದಾತ್ಮಕ ವಿಶೇಷ ತೀವ್ರ ಪರಿಷ್ಕರಣೆ (Special Intensive Revision – SIR)ಯಲ್ಲಿ ಗಂಭೀರ ಲೋಪಗಳು ಎದ್ದುಕಾಣುತ್ತಿವೆ. ಚುನಾವಣಾ ಆಯೋಗವು ಮೃತಪಟ್ಟಿದ್ದಾರೆಂದು ಉಲ್ಲೇಖಿಸಿ ಮತದಾರರ ಪಟ್ಟಿಯಿಂದ ಕೈಬಿಟ್ಟಿದ್ದ ಮತದಾರರನ್ನು ಲೋಕಸಭೆ ವಿಪಕ್ಷ ನಾಯಕ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಭೇಟಿ ಮಾಡಿದ್ದಾರೆ. ಅವರಿಗೆ ಚಹಾ ಸೇವಿಸಿ, ಚರ್ಚೆ ನಡೆಸಿದ್ದಾರೆ. ‘ಮೃತ’ ಮತದಾರರೊಂದಿಗೆ ಚಹಾ ಕುಡಿಯವ ಸಂದರ್ಭ ಸೃಷ್ಟಿಸಿದ ಚುನಾವಣಾ ಆಯೋಗಕ್ಕೆ ಧನ್ಯವಾದಗಳು ಎಂದು ವ್ಯಂಗ್ಯವಾಡಿದ್ದಾರೆ.
ರಾಮಿಕ್‌ಬಾಲ್ ರಾಯ್, ಹರೇಂದ್ರ ರಾಯ್, ಲಾಲ್‌ಮುನಿ ದೇವಿ, ವಾಚಿಯಾ ದೇವಿ, ಲಾಲ್‌ವತಿ ದೇವಿ, ಪೂನಂ ಕುಮಾರಿ ಮತ್ತು ಮುನ್ನಾ ಕುಮಾರ್ ಎಂಬ ಈ 7 ಮತದಾರರನ್ನು ಚುನಾವಣಾ ಆಯೋಗವು ‘ಮೃತರು’ ಎಂದು ಘೋಷಿಸಿ ಮತದಾರರ ಪಟ್ಟಿಯಿಂದ ಕೈಬಿಟ್ಟಿತ್ತು. ಈ ಮತದಾರರು ರಾಷ್ಟ್ರೀಯ ಜನತಾ ದಳದ (RJD) ನಾಯಕ ತೇಜಸ್ವಿ ಯಾದವ್ ಪ್ರತಿನಿಧಿಸುವ ರಾಘೋಪುರ ಕ್ಷೇತ್ರದವರು. ಈ 7 ಮಂದಿಯನ್ನು ರಾಹುಲ್ ಗಾಂಧಿ, ಆಗಸ್ಟ್ 13ರಂದು ಭೇಟಿ ಮಾಡಿದ್ದಾರೆ. ಈ ಭೇಟಿಯ ಘಟನೆಯು ಚುನಾವಣಾ ಆಯೋಗದ ಕಾರ್ಯನಿರ್ವಹಣೆ ಮತ್ತು ಎಸ್‌ಐಆರ್ ಪ್ರಕ್ರಿಯೆಯಲ್ಲಿನ ಗಂಭೀರ ದೋಷಗಳ ಬಗ್ಗೆ ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ.
ಚುನಾವಣಾ ಆಯೋಗವು ಬಿಜೆಪಿಯ ಕೈಗೊಂಬೆಯಂತೆ ಕೆಲಸ ಮಾಡುತ್ತಿದೆ. ಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲವಾಗುವಂತೆ ಮತದಾರರ ಪಟ್ಟಿಯನ್ನು ಪರಿಷ್ಕರಿಸುತ್ತಿದೆ ಎಂದು ವಿಪಕ್ಷಗಳು ನಿರಂತರವಾಗಿ ಆರೋಪಿಸುತ್ತಿವೆ. ಜೊತೆಗೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ‘ಮತಗಳ್ಳತನ’ ನಡೆದಿದೆ ಎಂದು ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ಹಲವು ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಇದೇ ಸಮಯದಲ್ಲಿ, ಬದುಕಿರುವವರು ಮೃತರೆಂದು ಮತದಾರರ ಪಟ್ಟಿಯಿಂದ ಚುನಾವಣಾ ಆಯೋಗವು ಕೈಬಿಟ್ಟಿರುವುದು ರಾಹುಲ್ ಅವರ ಆರೋಪವನ್ನು ಮತ್ತಷ್ಟು ತೀವ್ರಗೊಳಿಸಿದೆ.
“ಚುನಾವಣಾ ಆಯೋಗದ ಈ ತಪ್ಪನ್ನು ಕೇವಲ ಪರಿಷ್ಕರಣೆಯ ತಪ್ಪು ಎಂದು ಕರೆಯಲು ಸಾಧ್ಯವಿಲ್ಲ. ಇದು ರಾಜಕೀಯ ದುರುದ್ದೇಶದಿಂದ ಕೂಡಿದೆ ಮತ್ತು ಮತದಾನದ ಹಕ್ಕನ್ನು ಕಸಿದುತ್ತಿಕೊಳ್ಳುತ್ತಿದೆ” ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಚುನಾವಣಾ ಆಯೋಗವು ತನ್ನ ಎಸ್‌ಐಆರ್ ಪ್ರಕ್ರಿಯೆಯ ಮೂಲಕ ಬಿಹಾರದ ಮತದಾರರ ಪಟ್ಟಿಯಿಂದ ಸುಮಾರು 65 ಲಕ್ಷ ಮತದಾರರನ್ನು ಹೊರಹಾಕಿದೆ ಎಂಬ ಗಂಭೀರ ಆರೋಪಗಳಿವೆ. ಈ ಬೃಹತ್ ಪ್ರಮಾಣದ ಹೊರಹಾಕುವಿಕೆಯಲ್ಲಿ ‘ಮೃತ’, ‘ಸ್ಥಳಾಂತರ’ ಅಥವಾ ‘ಅನರ್ಹತೆ’ಯನ್ನು ಕಾರಣವಾಗಿ ಆಯೋಗ ಉಲ್ಲೇಖಿಸಿದೆ. ಆದರೆ, ಈ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ನಿಖರತೆ ಇಲ್ಲವೆಂವು ವಿಪಕ್ಷಗಳು ಆರೋಪಿಸವಿಎ.
ಚುನಾವಣಾ ಆಯೋಗವು ‘ಮೃತ’ ಅಥವಾ ‘ಸ್ಥಳಾಂತರಗೊಂಡವರು’ ಎಂದು ಗುರುತಿಸಲಾದವರ ಪಟ್ಟಿಯನ್ನು ಸಾರ್ವಜನಿಕವಾಗಿ ಪ್ರಕಟಿಸಿಲ್ಲ. ರಾಹುಲ್ ಭೇಟಿ ಮಾಡಿದ ಈ ಏಳು ಮತದಾರರನ್ನು ಕಾಂಗ್ರೆಸ್ ಕಾರ್ಯಕರ್ತರು ಕೆಲವು ಮತಗಟ್ಟೆಗಳಲ್ಲಿ ನಡೆಸಿದ ಆಂತರಿಕ ಪರಿಶೀಲನೆ ವೇಳೆ ಗುರುತಿಸಿದ್ದಾರೆ ಇಂತಹ ಸಾವಿರಾರು ಮತದಾರರು ಬಿಹಾರದಾದ್ಯಂತ ಇದ್ದಾರೆ. ಆದರೆ, ಕೈಬಿಟ್ಟವರ ಪಟ್ಟಿಯನ್ನು ಪ್ರಕಟಿಸಿದ ಆಯೋಗವು ರಹಸ್ಯವಾಗಿ ಇಟ್ಟುಕೊಂಡಿದೆ.
BREAKING : Rahul Gandhi met ‘dead people’ as declared by ECI 😂
— Ankit Mayank (@mr_mayank) August 13, 2025
“I have had many experiences in life but for the first time, I am having tea with the dead” 🤣
GOAT level Roasting by RaGa 🗿🔥 pic.twitter.com/iHRwDdzRfE
ರಾಹುಲ್ ಗಾಂಧಿಯವರು ಚುನಾವಣಾ ಆಯೋಗವು ಬಿಜೆಪಿಯೊಂದಿಗೆ ‘ಕೈಜೋಡಿಸಿದೆ; ಎಂದು ಆರೋಪಿಸಿದ್ದಾರೆ. ಕರ್ನಾಟಕ ಮತ್ತು ಮಹಾರಾಷ್ಟ್ರದ ಚುನಾವಣೆಗಳಲ್ಲಿ ಈಗಾಗಲೇ ಮತದಾರರ ಪಟ್ಟಿಯಲ್ಲಿ ಅಕ್ರಮಗಳು ನಡೆದಿವೆ. ಈಗ, ಬಿಹಾರದಲ್ಲಿಯೂ ಇದೇ ರೀತಿಯ ಅಕ್ರಮ ಎಸಗುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಎಸ್‌ಐಆರ್ ಪ್ರಕ್ರಿಯೆಯು ಕೇವಲ ತಾಂತ್ರಿಕ ತಪ್ಪುಗಳಿಂದ ಕೂಡಿಲ್ಲ. ಬದಲಿಗೆ ದಲಿತರು, ಬಡವರು, ಕೃಷಿಕರು ಹಾಗೂ ವಿರೋಧ ಪಕ್ಷಗಳನ್ನು ಬೆಂಬಲಿಸುತ್ತಿರುವ ತಳ ಸಮುದಾಯಗಳ ಮತದಾನರ ಮತದಾನದ ಹಕ್ಕನ್ನು ಕಿತ್ತುಕೊಳ್ಳುವ ಕೃತ್ಯವಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ವಿಶೇಷ ತೀವ್ರ ಪರಿಷ್ಕರಣೆ (SIR) ಮೂಲಕ ಮತದಾರರ ಪಟ್ಟಿಯನ್ನು ಶುದ್ಧೀಕರಿತ್ತೇವೆಂದು ಆಯೋಗ ಹೇಳಿಕೊಂಡಿತ್ತು. ಆದರೆ, ಬಿಹಾರದಲ್ಲಿ ಈ ಪ್ರಕ್ರಿಯೆಯು ಜೀವಂತವಾಗಿರುವ ಮತದಾರರನ್ನು ‘ಮೃತ’ ಎಂದು ಗುರುತಿಸಿದೆ. ರಾಘೋಪುರ ಕ್ಷೇತ್ರದ ಒಂದೇ ಪಂಚಾಯತಿ ವ್ಯಾಪ್ತಿಯಲ್ಲಿ 50ಕ್ಕೂ ಹೆಚ್ಚು ಜನರನ್ನು ತಪ್ಪಾಗಿ ‘ಮೃತರು’ ಎಂದು ಗುರುತಿಸಲಾಗಿದೆ.
ಇದು, ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪಟ್ಟಿಯಿಂದ ಮತದಾರರನ್ನು ತೆಗೆದುಹಾಕುವ ಮೊದಲು ಸರಿಯಾದ ಪರಿಶೀಲನೆ ನಡೆಸಿಲ್ಲ. ಮತದಾರರು ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದರೂ, ಅವರನ್ನು ಪಟ್ಟಿಯಿಂದ ಹೊರಹಾಕಲಾಗಿದೆ ಎಂದು ರಾಹುಲ್ ಗಾಂಧಿಯನ್ನು ಭೇಟಿ ಮಾಡಿದ ಮತದಾರರು ಆರೋಪಿಸಿದ್ದಾರೆ.