ಜಮ್ಮು ಕಾಶ್ಮೀರದ ಕಿಶ್ತ್ವಾರ್‌ನಲ್ಲಿ ಸಂಭವಿಸಿದ ಬೃಹತ್ ಮೇಘಸ್ಫೋಟದಲ್ಲಿ ಮೃತರ ಸಂಖ್ಯೆಯು 60ಕ್ಕೆ ಏರಿಕೆಯಾಗಿದೆ. ಎರಡನೇ ದಿನವೂ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಇನ್ನೂ ನೂರಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ ಎಂದು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ.
ಹಿಮಾಲಯದ ಮಾತಾ ಚಂಡಿ ದೇಗುಲಕ್ಕೆ ಹೋಗುವ ಮಚೈಲ್ ಮಾತಾ ಯಾತ್ರಾ ಮಾರ್ಗದಲ್ಲಿ ಹಠಾತ್ ಪ್ರವಾಹ ಉಂಟಾಗಿ ನೂರಾರು ಜನರು ನಾಪತ್ತೆಯಾಗಿದ್ದಾರೆ, ಹಲವರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ಇದೆ. ಈವರೆಗೆ 167 ಮಂದಿಯನ್ನು ರಕ್ಷಿಸಲಾಗಿದೆ. 38 ಮಂದಿ ಸ್ಥಿತಿ ಗಂಭೀರವಾಗಿದೆ.
ಇದನ್ನು ಓದಿದ್ದೀರಾ? ಜಮ್ಮು ಕಾಶ್ಮೀರದಲ್ಲಿ ಮೇಘಸ್ಫೋಟ: 40 ಮಂದಿ ಸಾವು, 200ಕ್ಕೂ ಹೆಚ್ಚು ನಾಪತ್ತೆ
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) ತಂಡ ಶುಕ್ರವಾರ ಮೇಘಸ್ಫೋಟ ಪೀಡಿತ ಗ್ರಾಮವನ್ನು ತಲುಪಿದ್ದು, ಇನ್ನೂ ಎರಡು ತಂಡಗಳು ತಮ್ಮ ಕಾರ್ಯಾಚರಣೆಯಲ್ಲಿ ತೊಡಗಿವೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಲು ಸೇನೆಯು ಮತ್ತೊಂದು ತುಕಡಿಯನ್ನು ನಿಯೋಜಿಸಿದೆ. ರಾಷ್ಟ್ರೀಯ ರೈಫಲ್ಸ್ ಪಡೆಗಳು ಕಾರ್ಯಾಚರಣೆಯಲ್ಲಿ ಸೇರಿಕೊಂಡಿವೆ.
ರಕ್ಷಣಾ ಮತ್ತು ಶೋಧ ಕಾರ್ಯಾಚರಣೆ ಮುಂದುವರಿದಂತೆ ಸಾವುನೋವುಗಳ ಸಂಖ್ಯೆಯೂ ಹೆಚ್ಚಾಗಬಹುದು ಎಂದು ಅಧಿಕಾರಿಗಳು ಹೇಳುತ್ತಾರೆ. ಪ್ರವಾಹ ಉಂಟಾಗಿ ಕನಿಷ್ಠ 16 ವಸತಿ ಮನೆಗಳು ಮತ್ತು ಸರ್ಕಾರಿ ಕಟ್ಟಡಗಳು, ಮೂರು ದೇವಾಲಯಗಳಿಗೆ, ಒಂದು ಡಜನ್‌ಗೂ ಅಧಿಕ ವಾಹನಗಳಿಗೆ ಹಾನಿ ಉಂಟಾಗಿದೆ.
ಇನ್ನು ಪ್ರವಾಹದ ಕಾರಣ ಜಿಲ್ಲಾಡಳಿತವು ಕಿಶ್ತ್ವಾರ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ರದ್ದುಗೊಳಿಸಿದೆ. ಸಮಾರಂಭವನ್ನು ಧ್ವಜಾರೋಹಣ ಮತ್ತು ರಾಷ್ಟ್ರಗೀತೆಗೆ ಸೀಮಿತಗೊಳಿಸಬೇಕು. ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ಅಥವಾ ಮನೆಯಲ್ಲಿ ಔತಣವ ನ್ನು ನಡೆಸಬಾರದು ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
