ಭಾರತದಲ್ಲಿ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಪ್ರಜೆಗೂ ಮತದಾನದ ಶಾಸನಬದ್ಧ ಹಕ್ಕನ್ನು ಸಂವಿಧಾನ ನೀಡಿದೆ. ಆದರೆ, ಬಿಹಾರದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ನಡೆಸಿರುವ ಚುನಾವಣಾ ಆಯೋಗವು ಬರೋಬ್ಬರಿ 65 ಲಕ್ಷ ಮತದಾರರನ್ನು ಮತಪಟ್ಟಿಯಿಂದ ಕೈಬಿಟ್ಟಿದೆ. ಆದರೆ, ಕಾರಣಗಳನ್ನು ನೀಡಿಲ್ಲ. ಮಾತ್ರವಲ್ಲದೆ, ಕೈಬಿಡಲಾದ ಮತದಾರರ ಹೆಸರುಗಳನ್ನು ಬಹಿರಂಗಗೊಳಿಸಿಲ್ಲ. ಪಟ್ಟಿಯಿಂದ ಹೊರಹಾಕಲಾದವರ ಹೆಸರನ್ನು ರಹಸ್ಯವಾಗಿ ಇಟ್ಟಿರುವ ಚುನಾವಣಾ ಆಯೋಗವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಪಟ್ಟಿಯಿಂದ ತೆಗೆದು ಹಾಕಲಾದ 65 ಲಕ್ಷ ಮತದಾರರ ಹೆಸರು ಮತ್ತು ಕಾರಣಗಳನ್ನು ತನ್ನ ವೆಬ್‌ಸೈಟ್‌ನಲ್ಲಿ ಸಾರ್ವಜನಿಕವಾಗಿ ಅಪ್‌ಲೋಡ್ ಮಾಡುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ವಿಚಾರಣೆ ವೇಳೆ ವಾದ ಮಂಡಿಸಿದ ಆಯೋಗವು, ಮತದಾರರ ಪಟ್ಟಿಯಿಂದ ಕಿತ್ತುಹಾಕಲಾದ ಮತದಾರರ ವಿವರಗಳನ್ನು ಬಹಿರಂಗಪಡಿಸಬೇಕು ಎಂಬ ಯಾವುದೇ ಕಾನೂನು ನಿಯಮವಿಲ್ಲ ವಾದಿಸಿದೆ. ಈ ವಾದವನ್ನು ತಳ್ಳಿಹಾಕಿದ ಸುಪ್ರೀಂ ಕೋರ್ಟ್, “ಮತದಾರರ ಪಟ್ಟಿ ಪರಿಷ್ಕರಣೆಗೆ ಬಗ್ಗೆ ಕೇಳಿ ಬರುತ್ತಿರುವ ವ್ಯಾಪಕ ಆರೋಪಗಳ ಹಿನ್ನಲೆಯಲ್ಲಿ ಪಾರದರ್ಶಕತೆಯ ಅವಶ್ಯಕತೆಯಿದೆ. ಆದ್ದರಿಂದ ಚುನಾವಣಾ ಆಯೋಗ ತನ್ನ ನಿಲುವನ್ನು ಬದಲಾಯಿಸಿಕೊಳ್ಳಬೇಕು” ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠವು ಸೂಚಿಸಿದೆ.
ಮತಪಟ್ಟಿಯಲ್ಲಿ ಕಿತ್ತುಹಾಕಲಾದ 65 ಲಕ್ಷ ಹೆಸರುಗಳಲ್ಲಿ 22 ಲಕ್ಷ ಜನರು ಮೃತಪಟ್ಟಿದ್ದಾರೆ ಎಂಬ ಚುನಾವಣಾ ಆಯೋಗದ ಹೇಳಿಕೆಯನ್ನು ಗಮನಸಿದ ಪೀಠವು, “ಈವರೆಗೆ ಈ ಮಾಹಿತಿಯನ್ನು ಬೂತ್‌ಮಟ್ಟದಲ್ಲಿ ಏಕೆ ಇವುಗಳನ್ನು ಬಹಿರಂಗಪಡಿಸಿಲ್ಲ” ಎಂದು ಪ್ರಶ್ನಿಸಿದೆ.
ಈ ಲೇಖನ ಓದಿದ್ದೀರಾ?: ಕ್ಯೂಬಾ ಕ್ರಾಂತಿಯ ಕಿಡಿ, ಬಂಡವಾಳಿಗರ ದುಸ್ವಪ್ನ ಫಿಡೆಲ್ ಕ್ಯಾಸ್ಟ್ರೋ
“ಚುನಾವಣಾ ಆಯೋಗ ಹೊಂದಿರುವ ಅಧಿಕಾರದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಬದಲಾಗಿ ಮತಪಟ್ಟಿ ಪರಿಷ್ಕರಣೆಯು ಸಂಪೂರ್ಣವಾಗಿ ಪಾರದರ್ಶಕತೆಯಿಂದ ನಡೆಯಬೇಕು ಎಂಬುವುದು ನಮ್ಮ ಉದ್ದೇಶ. ಮತಪಟ್ಟಿಯಿಂದ ತೆಗೆದುಹಾಕಲಾದ ಮತದಾರರ ಗುರುತು ಮತ್ತು ಸಕಾರಣಗಳನ್ನು ನೀಡಿದರೆ, ಆ ವ್ಯಕ್ತಿಗೆ ಪರಿಹಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲು ನ್ಯಾಯಯುತ ಅವಕಾಶ ಕಲ್ಪಿಸಿದಂತಾಗುತ್ತದೆ. ಚುನಾವಣಾ ಆಯೋಗವು ತನ್ನ ಮೇಲಿರುವ ಆರೋಪಗಳಿಗೆ ಉತ್ತರ ನೀಡಿದಂತಾಗುತ್ತದೆ” ಎಂದು ನ್ಯಾಯಾಲಯವು ತಿಳಿಸಿದೆ.
“2025ರ ಪರಿಷ್ಕೃತ ಪಟ್ಟಿಯಲ್ಲಿ ಹೆಸರಿದ್ದು ಕರಡು ಪಟ್ಟಿಯಲ್ಲಿ ಸೇರಿಸದ 65 ಲಕ್ಷ ಮತದಾರರ ಹೆಸರುಗಳು ಮತ್ತು ಕಾರಣಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು. ಪತ್ರಿಕೆ, ದೂರದರ್ಶನ ಹಾಗೂ ಚುನಾವಣಾ ಅಧಿಕಾರಿ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಹೊಂದಿದ್ದರೆ ಅವುಗಳಲ್ಲಿ ಈ ಬಗ್ಗೆ ಪ್ರಚಾರ ನೀಡಬೇಕು. ಎಲ್ಲ ಪಂಚಾಯತ್ ಭವನ, ಬ್ಲಾಕ್ ಅಭಿವೃದ್ದಿ ಹಾಗೂ ಪಂಚಾಯತ್ ಕಚೇರಿಗಳ ಸೂಚನಾ ಫಲಕಗಳಲ್ಲಿ ಪ್ರಕಟಿಸಬೇಕು” ಎಂದು ಆಯೋಗಕ್ಕೆ ಕೋರ್ಟ್ ಸೂಚಿಸಿದೆ.