“ಸ್ವಾತಂತ್ರ್ಯವು ಕೇವಲ ರಾಜಕೀಯ ಸ್ವಾತಂತ್ರ್ಯವಲ್ಲ, ಅದು ಹೊಣೆಗಾರಿಕೆಯೂ ಹೌದು. ನಾವೆಲ್ಲರೂ ನಮ್ಮ ದೇಶವನ್ನು ಶಾಂತಿ, ಪ್ರಗತಿ ಮತ್ತು ಏಕತೆಯ ಮಾರ್ಗದಲ್ಲಿ ಮುಂದುವರಿಸಬೇಕಾದ ಜವಾಬ್ದಾರಿ ಹೊಂದಿದ್ದೇವೆ” ಎಂದು ದಾವಣಗೆರೆ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಕರೆನೀಡಿದರು.

ದಾವಣಗೆರೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತದ
ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ “‘ಬ್ರಿಟೀಷರೇ ಭಾರತ ಬಿಟ್ಟು ತೊಲಗಿ’ ಚಳುವಳಿ ಸ್ವಾತಂತ್ರ್ಯ ತರುವುದರಲ್ಲಿ ಪ್ರಮುಖ ಘಟ್ಟವಾಗಿತ್ತು. ದಾವಣಗೆರೆಯಲ್ಲಿಯೂ ಈ ಚಳುವಳಿ ನಡೆದಿತ್ತು. ನಗರದಲ್ಲಿ ಹಳ್ಳೂರು ನಾಗಪ್ಪ, ಅಕ್ಕಸಾಲೆ ವಿರೂಪಾಕ್ಷಪ್ಪ, ಬಿದಿರಕುಂದಿ ನಿಂಗಪ್ಪ, ಹಮಾಲಿ ತಿಮ್ಮಣ್ಣ, ಹದಡಿ ನಿಂಗಪ್ಪ, ಮಾಗಾನಹಳ್ಳಿ ಹನುಮಂತಪ್ಪ ಅವರುಗಳು ಈ ಚಳವಳಿಯಲ್ಲಿ ಬ್ರಿಟಿಷರ ಗುಂಡಿಗೆ ಪ್ರಾಣಾರ್ಪಣೆ ಮಾಡಿ ಹುತಾತ್ಮರಾಗಿದ್ದನ್ನು ನಾವಿಂದು ಸ್ಮರಿಸಬೇಕಾಗಿದೆ” ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.

“ಭಾರತವು ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ ಮತ್ತು ಕ್ರೀಡೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ವಿಶ್ವದ ಗಮನ ಸೆಳೆಯುತ್ತಿದೆ. ಆದರೆ, ಭ್ರಷ್ಟಾಚಾರ, ಅಸಮಾನತೆ, ಪರಿಸರ ಮಾಲಿನ್ಯ, ನಿರುದ್ಯೋಗ ಮುಂತಾದ ಸವಾಲುಗಳನ್ನು ನಿವಾರಿಸಲು ನಾವು ಒಟ್ಟಾಗಿ ಪ್ರಯತ್ನಿಸುವ ಅಗತ್ಯವಿದೆ. ಸಂಸ್ಕೃತಿ, ಭಾಷೆ, ಪರಂಪರೆಗಳನ್ನು ಕಾಪಾಡಿಕೊಂಡು, ಅಭಿವೃದ್ಧಿಯತ್ತ ಸಾಗೋಣ. ಈ ಸ್ವಾತಂತ್ರೋತ್ಸವ ದಿನದಂದು ಪ್ರತಿಯೊಬ್ಬರೂ ‘ನನ್ನ ದೇಶ, ನನ್ನ ಹೆಮ್ಮ’ ಎಂಬ ಭಾವನೆ ಹೊಂದಿ ಕಾರ್ಯನಿರ್ವಹಿಸೋಣ” ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಧ್ವಜಾರೋಹಣ ಬಳಿಕ ಕ್ರೀಡಾಂಗಣದಲ್ಲಿ ಪಥಸಂಚಲನ ನಡೆಯಿತು. ಪೊಲೀಸರು, ಗೃಹರಕ್ಷರು, ಪೌರಕಾರ್ಮಿಕರು,
ವಿದ್ಯಾರ್ಥಿಗಳು, ಸೌಟ್ಸ್ ಮತ್ತು ಗೈಡ್ ದಳ ಸೇರಿದಂತೆ ವಿವಿಧ ತುಕಡಿಗಳಿಂದ ಸಚಿವರು ಗೌರವ ವಂದನೆ ಸ್ವೀಕರಿಸಿದರು. ಬೆಳಿಗ್ಗೆಯಿಂದ ಮಳೆ ಬಿಡುವು ನೀಡಿದ್ದರಿಂದ ಸ್ವಾತಂತ್ರೋತ್ಸವ ಕಳೆಗಟ್ಟಿತ್ತು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸ್ವಾತಂತ್ರ್ಯೋತ್ಸವ ದಿನ ಒಳಮೀಸಲಾತಿ ವಿಳಂಬ ವಿರೋಧಿಸಿ ಕಪ್ಪು ಬಟ್ಟೆ ಧರಿಸಿ ಆಕ್ರೋಶ; ದಲಿತ ಮುಖಂಡರ ಬಂಧನ
ಕಾರ್ಯಕ್ರಮದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠಲರಾವ್ ಸೇರಿದಂತೆ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸಾರ್ವಜನಿಕರು ಹಾಜರಿದ್ದರು.