ಸ್ವಾತಂತ್ತ್ಯ ಹೋರಾಟದಲ್ಲಿ ಕನ್ನಡಿಗರ ಪಾತ್ರ ದೊಡ್ಡದು. ಕಿತ್ತೂರು ರಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಗಂಗಾಧರ ರಾವ್ ದೇಶ ಪಾಂಡೆ, ನಿಜಲಿಂಗಪ್ಪ ಸೇರಿದಂತೆ ಹಲವರನ್ನು ಇಂದು ನಾವು ನೆನಪಿಸಿಕೊಳ್ಳಬೇಕಿದೆ. ಎಂದು ಕೃಷಿ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಚೆಲುವರಾಯಸ್ವಾಮಿ ಅವರು ಹೇಳಿದರು.
ಶುಕ್ರವಾರ ನಗರದ ಸರ್ ಎಂ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ನಮ್ಮ ಸರ್ಕಾರದ ಮೂಲ ಧ್ಯೇಯ ಸಮಾನತೆ ಮತ್ತು ಸಾಮಾಜಿಕ ನ್ಯಾಯ. ಅದರಲ್ಲೂ ಜನಸಾಮಾನ್ಯರ ಮತ್ತು ಹಿಂದುಳಿದ ವರ್ಗದವರ ಅಗತ್ಯತೆಗಳನ್ನು ಪೂರೈಸುವ ಆಶಯವನ್ನು ನಮ್ಮ ಸರ್ಕಾರ ಹೊಂದಿದೆ. ಆರ್ಥಿಕ ಸಬಲೀಕರಣ, ಮಹಿಳಾ ಸಬಲೀಕರಣ ಸಾಮಾಜಿಕ ನ್ಯಾಯ ಮತ್ತು ಸಮಾನತೆ ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ ಅನೇಕ ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಅದರಲ್ಲಿ ಮಹತ್ವ್ವಾಕಾಂಕ್ಷಿ 5 ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸುವ ಮೂಲಕ ನುಡಿದಂತೆ ನಡೆದಿದ್ದೇವೆ ಎಂಬ ಹೆಗ್ಗಳಿಕೆ ನಮ್ಮ ಸರ್ಕಾರದ ಹೆಮ್ಮೆ ಎಂದು ತಿಳಿಸಿದರು.

ಕೃಷ್ಣರಾಜಸಾಗರ ಜಲಾಶಯದ ಯೋಜನೆಯಡಿ ವಿ.ಸಿ.ನಾಲೆ ಎರಡನೇ ಹಂತದ ಆಧುನೀಕರಣ ಪ್ಯಾಕೇಜ್-1 ಕಾಮಗಾರಿ, ಮದ್ದೂರು ತಾಲ್ಲೂಕಿನಲ್ಲಿ ಬರುವ ಕೆಮ್ಮಣ್ಣುನಾಲೆ ಆಧುನೀಕರಣ ಕಾಮಗಾರಿ, ಲೋಕಸರ ಶಾಖಾ ನಾಲೆಯ ಆಧುನೀಕರಣ ಕಾಮಗಾರಿ, ಹೆಬ್ಬಕವಾಡಿ ಶಾಖಾ ನಾಲೆ ಕಾಮಗಾರಿ, ನಿಡಘಟ್ಟ ಶಾಖಾ ನಾಲೆ ಆಧುನೀಕರಣ ಕಾಮಗಾರಿ ಹಾಗೂ ಸಂಪರ್ಕ ನಾಲೆ ಅಭಿವೃದ್ಧಿ ಕಾಮಗಾರಿಗಳನ್ನು ಒಟ್ಟು ರೂ. 667.00 ಕೋಟಿಗಳ ಅಂದಾಜಿನಲ್ಲಿ ಕೈಗೆತ್ತಿಕೊಳ್ಳಲಾಗಿದೆ ಎಂದರು.
ರಸಗೊಬ್ಬರ ಲಭ್ಯತೆಯ ಬಗ್ಗೆ ಗೊಂದಲಗಳನ್ನು ಅನಗತ್ಯವಾಗಿ ಸೃಷ್ಟಿಸಲಾಗುತ್ತಿದೆ. ಆದರೆ, ರಸಗೊಬ್ಬರದ ಬೇಡಿಕೆಗೆ ಅನುಗುಣವಾಗಿ ಪೂರೈಕೆ ಮಾಡಲು ಕ್ರಮವಹಿಸಲಾಗುತ್ತಿದೆ. ಮಂಡ್ಯ ಜಿಲ್ಲೆಯಲ್ಲಿ ಮುಂಗಾರಿಗೆ ಒಟ್ಟು 28607 ಮೆಟ್ರಿಕ್ ಟನ್ ವಿವಿಧ ರಸಗೊಬ್ಬರಗಳ ದಾಸ್ತಾನು ಲಭ್ಯವಿರುತ್ತದೆ. ಇದರಲ್ಲಿ ಯೂರಿಯಾ ಒಟ್ಟು 4421 ಮೆಟ್ರಿಕ್ ಟನ್ ಲಭ್ಯವಿರುತ್ತದೆ. ಆದ್ದರಿಂದ ರೈತರಿಗೆ ಯಾವುದೇ ತೊಂದರೆಯಾಗದAತೆ ರಸಗೊಬ್ಬರ ಪೂರೈಸಲು ಕ್ರಮವಹಿಸಲಾಗುತ್ತದೆ ಎಂದರು.
ಜಿಲ್ಲೆಯ 5 ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬು ಅರೆಯುವ ಕಾರ್ಯ ಪ್ರಾರಂಭಿಸಲಾಗಿದೆ. ಇದುವರೆಗೂ ಜಿಲ್ಲೆಯ ಎಲ್ಲಾ ಸಕ್ಕರೆ ಕಾರ್ಖಾನೆಗಳಲ್ಲಿ 5,13,921 ಮೆಟ್ರಿಕ್ ಟನ್ ಕಬ್ಬು ನುರಿಸಲಾಗಿರುತ್ತದೆ ಎಂದು ಮಾಹಿತಿ ನೀಡಿದರು.
ಮೈ-ಶುಗರ್ ಸಕ್ಕರೆ ಕಾರ್ಖಾನೆಯನ್ನು ಯಶಸ್ವಿಯಾಗಿ ಮುನ್ನಡೆಸುವ ದೃಷ್ಟಿಯಿಂದ ನಮ್ಮ ಸರ್ಕಾರದಿಂದ ರೂ.10.00 ಕೋಟಿ ಆರ್ಥಿಕ ನೆರವು ನೀಡಲಾಗಿದೆ. ಅಲ್ಲದೇ, ಸಂಬಂಧಿಸಿದಂತೆ, 2023-24 ನೇ ಸಾಲಿನರವರೆಗೆ ಹಲವು ವರ್ಷಗಳಿಂದ ಬಾಕಿ ಇದ್ದ ರೂ.53 ಕೋಟಿ ವಿದ್ಯುತ್ ಬಿಲ್ಲನ್ನು ನಮ್ಮ ಸರ್ಕಾರ ಮನ್ನಾ ಮಾಡಿದೆ. 2023-24 ನೇ ಸಾಲಿನಲ್ಲಿ ಮೈ-ಶುಗರ್ ಸಕ್ಕರೆ ಕಾರ್ಖಾನೆ ಪ್ರಪ್ರಥಮ ಬಾರಿಗೆ 1.51 ಕೋಟಿ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಿದ್ದು, 71 ಲಕ್ಷ ಯುನಿಟ್ ವಿದ್ಯುತ್ ಅನ್ನು ಮಾರಾಟ ಮಾಡುವ ಮೂಲಕ ರೂ 4.5 ಕೋಟಿ ಉಳಿತಾಯ ಮಾಡಿರುತ್ತದೆ ಹಾಗೂ ಹಲವು ವರ್ಷಗಳಿಂದ ಕಾರ್ಮಿಕರಿಗೆ ನೀಡಬೇಕಾಗಿದ್ದ ಬಾಕಿ ವೇತನವನ್ನು ಪರಿಷ್ಕರಿಸಿ, ರೂ.4.0 ಕೋಟಿಗಳ ವೇತನವನ್ನು ಪಾವತಿಸಲಾಗಿದೆ ಎಂದು ಹೇಳಿದರು.

ಒಂದೇ ಸೂರಿನಡಿ ಕೃಷಿ ಹಾಗೂ ಕೃಷಿ ಸಂಬಂಧಿತ ಯೋಜನೆಗಳು ಹಾಗೂ ತಾಂತ್ರಿಕತೆಗಳ ಮಾಹಿತಿ ಒಳಗೊಂಡ ಸುಸಜ್ಜಿತ ರೈತ ಸಂಪರ್ಕ ಕೇಂದ್ರ ಕಟ್ಟಡ ನಿರ್ಮಾಣ ಮಾಡಲು ಪ್ರತಿ ಕೇಂದ್ರಕ್ಕೆ ರೂ 2 ಕೋಟಿಯಂತೆ ಒಟ್ಟು 8 ರೈತ ಸಂಪರ್ಕ ಕೇಂದ್ರಗಳ ಕಟ್ಟಡ ನಿರ್ಮಾಣಕ್ಕಾಗಿ ಒಟ್ಟು ರೂ.16 ಕೋಟಿ ಮಂಜೂರು ಮಾಡಲಾಗಿರುತ್ತದೆ ಎಂದು ತಿಳಿಸಿದರು.
ಕೃಷಿ ಪ್ರಧಾನವಾದ ಮೈಸೂರು ಪ್ರಾಂತ್ಯದ ಪ್ರಮುಖ ಬೇಡಿಕೆಯಂತೆ, ಅನೇಕ ಕೃಷಿ ಸಂಶೋಧನೆಯ ಅನಿವಾರ್ಯತೆಯನ್ನು ಮನಗಂಡ ಸರ್ಕಾರ, ಮಂಡ್ಯ, ಮೈಸೂರು, ಹಾಸನ, ಕೊಡಗು, ಚಾಮರಾಜನಗರ ಜಿಲ್ಲೆಗಳಿಗೆ ಅನುಕೂಲವಾಗುವಂತೆ ಮಂಡ್ಯ ಜಿಲ್ಲೆಯಲ್ಲಿ “ಕೃಷಿ ವಿಶ್ವವಿದ್ಯಾನಿಲಯ”ವನ್ನು ಸ್ಥಾಪಿಸಲು ಮಂಜೂರಾತಿ ನೀಡಿ, ರೂ.25.00 ಕೋಟಿ ಅನುದಾನವನ್ನು ಅಭಿವೃದ್ಧಿಗಾಗಿ ನೀಡಿದೆ. ಅಲ್ಲದೇ ನಮ್ಮ ಸರ್ಕಾರ ಘೋಷಿಸಿದಂತೆ, ವಿಶ್ವ ವಿದ್ಯಾನಿಲಯದ ಆಡಳಿತ ಕಟ್ಟಡ ನಿರ್ಮಾಣಕ್ಕೆ ಆರ್ ಐ ಡಿ ಎಫ್ ಯೋಜನೆಯಡಿಯಲ್ಲಿ ರೂ.70.70 ಕೋಟಿ ಅನುದಾನ ಮಂಜೂರಾತಿ ನೀಡಲಾಗಿದೆ ಎಂದರು.
ನಾಗಮಂಗಲ ತಾಲೂಕಿನ ಬೀರೇಶ್ವರ ಗ್ರಾಮದಲ್ಲಿ 37.75 ಕೋಟಿ ವೆಚ್ಚದಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ನೂತನ ಶ್ರಮಿಕ ಶಾಲೆ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದ್ದು ಕಾರ್ಮಿಕ ಮಕ್ಕಳಿಗೆ ಗುಣಮಟ್ಟದ ವಸತಿಯುತ ಶಿಕ್ಷಣ ಲಭ್ಯವಾಗಲಿದೆ ಎಂದು ಹೇಳಿದರು.
ಪ್ರಧಾನ ಮಂತ್ರಿ ಭೀಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಯಡಿಯಲ್ಲಿ ನೋಂದಣಿ ಅಭಿಯಾನವನ್ನು ಯಶಸ್ವಿಯಾಗಿ ಮಾಡಿದ್ದು, ರಾಜ್ಯದಲ್ಲಿಯೇ ಅತಿ ಹೆಚ್ಚು ನೋಂದಣಿ ಮಾಡುವ ಮೂಲಕ ಮಂಡ್ಯ ಜಿಲ್ಲೆ ಪ್ರಥಮ ಸ್ಥಾನ ಗಳಿಸಿರುವುದಕ್ಕೆ ಸಂತೋಷವಾಗಿದೆ. ಇದಕ್ಕೆ ಕಾರಣರಾದ ಸಮಿತಿಯ ಸದಸ್ಯರು ಹಾಗೂ ಎಲ್ಲಾ ಅಧಿಕಾರಿ ವರ್ಗದವರಿಗೆ ಅಭಿನಂದನೆ ಸಲ್ಲಿಸಿದರು.
ನಮ್ಮ ಸರ್ಕಾರ ನೀರಾವರಿ ಹಾಗೂ ಕೃಷಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು ಇತ್ತೀಚಿಗೆ ರೂ.560 ಕೋಟಿ ವೆಚ್ಚದಲ್ಲಿ ನಾಗಮಂಗಲ ಶಾಖಾ ನಾಲೆ ಮರುವಿನ್ಯಾಸ ಕಾಮಗಾರಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ತಿಳಿಸಿದರು.
ಮಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳ ಜೊತೆಯಲ್ಲಿ ಬರುವ ಆರೈಕೆದಾರರು ತಂಗುವುದಕ್ಕಾಗಿ ಸಿ.ಎಸ್.ಆರ್ ಯೋಜನೆಯಡಿಯಲ್ಲಿ ರೂ. 30.00 ಲಕ್ಷಗಳಲ್ಲಿ ಆರೋಗ್ಯಧಾಮವನ್ನು ನಿರ್ಮಿಸಲಾಗಿದೆ. ಮತ್ತು ರೂ.40.00 ಲಕ್ಷಗಳ ವೆಚ್ಚದಲ್ಲಿ ಹೈ-ಟೆಕ್ ಶೌಚಾಲಯವನ್ನು ನಿರ್ಮಿಸಲಾಗಿದ್ದು, ಸಾರ್ವಜನಿಕರಿಗೆ ಇದರ ಸದುಪಯೋಗವಾಗುತ್ತಿದೆ ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಸ್ವಾತಂತ್ರ್ಯ ದಿನಾಚರಣೆ | ಪೋಸ್ಟರ್‌ನಲ್ಲಿ ಗಾಂಧಿಗಿಂತ ಹೆಚ್ಚು ಸಾವರ್ಕರ್‌ಗೆ ಪ್ರಾಮುಖ್ಯತೆ ನೀಡಿದ ಕೇಂದ್ರ; ತೀವ್ರ ಆಕ್ರೋಶ
ಕಾರ್ಯಕ್ರಮದಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ರವಿಕುಮಾರ್, ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ, ಮುಡಾ ಅಧ್ಯಕ್ಷ ನಯೀಮ್, ನಗರಸಭೆ ಅಧ್ಯಕ್ಷ ಪ್ರಕಾಶ್, ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ: ಹೆಚ್ ಕೃಷ್ಣ, ಜಿಲ್ಲಾಧಿಕಾರಿ ಡಾ ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ ಆರ್ ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಬಿ.ಸಿ ಶಿವಾನಂದ ಮೂರ್ತಿ, ಉಪ ವಿಭಾಗಾಧಿಕಾರಿ ಶಿವಮೂರ್ತಿ, ಮಂಡ್ಯ ತಹಶೀಲ್ದಾರ್ ವಿಶ್ವನಾಥ್, ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
