‘ಸಂಬಂಜ ಅನ್ನೋದು ದೊಡ್ಡದು ಕನಾ’; ದಲಿತ ಚಳವಳಿಯ ಹಿರಿಯರನ್ನು ಒಗ್ಗೂಡಿಸಿದ ಒಳಮೀಸಲಾತಿ ಹೋರಾಟ

Date:

Advertisements
ದೇವನೂರರ ಬಹಿರಂಗ ಪತ್ರಕ್ಕೆ ದಲಿತ ಚಳವಳಿ ಕಟ್ಟಿದ ಹಿರಿಯರು ಪ್ರತಿಕ್ರಿಯಿಸಿರುವ ರೀತಿ ಮಾತ್ರ ಮನೋಜ್ಞವಾಗಿದೆ. ಒಳಮೀಸಲಾತಿ ಹೋರಾಟದ ತೂಕ ಮತ್ತು ಸೌಂದರ್ಯ ಹಿರಿಯರ ಪರಸ್ಪರ ಪ್ರತಿಕ್ರಿಯೆಯಲ್ಲಿ ಹೊಳಪು ಕಂಡಿದೆ. ಅಸ್ಪೃಶ್ಯ ಸಮುದಾಯಗಳ ಅಂತರಾಳ ಬೆಸೆದು ಬುದ್ಧಪ್ರಜ್ಞೆ ಜಾಗೃತಗೊಂಡಿದೆ.

ಕರ್ನಾಟಕ ದಲಿತ ಚಳವಳಿಯ ಇತಿಹಾಸವನ್ನು ತೆರೆದು ನೋಡಿದರೆ ಅದೊಂದು ಎಡ-ಬಲ ಸೇರಿದಂತೆ ಹಲವು ನೊಂದ ಸಮುದಾಯಗಳ ಸಂಗಮವೆಂಬುದು ಸ್ಪಷ್ಟವಾಗುತ್ತದೆ. ಚಳವಳಿಯನ್ನು ಒಗ್ಗಟ್ಟಾಗಿ ಮುನ್ನಡೆಸಿದ್ದು ಇಲ್ಲಿನ ಎಡಗೈ ಮತ್ತು ಬಲಗೈ ಸಮುದಾಯಗಳ ನಾಯಕರೇ. ದುರಾದೃಷ್ಟವಶಾತ್ ಕಾಲಕ್ರಮೇಣ ಚಳವಳಿಯ ಮುಂದಾಳುಗಳಲ್ಲಿ ಕೆಲವೊಂದು ಭಿನ್ನಾಭಿಪ್ರಾಯ ಮೂಡಿದ್ದು ಸುಳ್ಳಲ್ಲ. ವೈಯಕ್ತಿಕ ಟೀಕಾಪ್ರಹಾರಗಳಿಗೂ ನಾಯಕರು ಸಾಕ್ಷಿಯಾದರು. ಆದರೆ ಕಾಲ ಸಾಕಷ್ಟು ಮುಂದಕ್ಕೆ ಹೋಗಿದೆ. ಹಿರಿಯರು ಒಗ್ಗೂಡಬೇಕೆಂಬ ಆಶಯ ಯುವತಲೆಮಾರಿನ ದಲಿತರಲ್ಲಿ ಮೂಡುತ್ತಿರುವ ಹೊತ್ತಿನಲ್ಲೇ, ಒಳಮೀಸಲಾತಿ ಎಂಬ ವಿದ್ಯಮಾನ ಅವರನ್ನೆಲ್ಲ ಒಂದು ನಿಲುವಿಗೆ ತಂದಿದೆ. ಪರಸ್ಪರ ಅಭಿಪ್ರಾಯಗಳನ್ನು ಸ್ವೀಕರಿಸುವ ಮೂಲಕ ದಲಿತ ಚಳವಳಿಯ ನಿಜ ಸತ್ವವನ್ನು ಬಡಿದೆಚ್ಚರಿಸಿದ್ದಾರೆ.

ಜಸ್ಟಿಸ್ ಎಚ್.ಎನ್.ನಾಗಮೋಹನ ದಾಸ್ ಆಯೋಗದ ವರದಿ ಸಲ್ಲಿಕೆಯಾದ ಮೇಲೆ ಅದರಲ್ಲಿರುವ ಅಂಶಗಳು ಹೊರಬಿದ್ದು, ಹೊಲೆಯ ಸಮುದಾಯದ ಒಂದು ಗುಂಪು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸುತ್ತಿದೆ. ಪರಯ ಸೇರಿದಂತೆ ಹಲವು ಬಲಗೈ ಸಮುದಾಯಗಳನ್ನು ‘ಸಿ’ ಗುಂಪಿಗೆ ಸೇರಿಸಬೇಕಿತ್ತು ಎಂಬುದು ಹಲವರ ವಾದ. ಇಂತಹ ಹೊತ್ತಿನಲ್ಲಿ ಪರಯ ಸಮುದಾಯದ ಹಿರಿಯ ಜೀವ ಹಾಗೂ ದಲಿತ ಚಳವಳಿಯ ಕಟ್ಟಾಳುಗಳಲ್ಲಿ ಒಬ್ಬರಾದ ಕೋಟಿಗಾನಹಳ್ಳಿ ರಾಮಯ್ಯನವರು ಮುಂದೆ ಬಂದು, “ಜಸ್ಟಿಸ್ ದಾಸ್ ಆಯೋಗದ ವರದಿ ತಾತ್ವಿಕವಾಗಿ ಸರಿ ಇದೆ. ತಾಂತ್ರಿಕವಾಗಿ ಸರಿಪಡಿಸಬೇಕಾಗಿದೆ. ಒಟ್ಟಾರೆ ವರದಿ ಜಾರಿಯಾಗಬೇಕಿದೆ” ಎಂಬ ಮಾತನ್ನು ಹೇಳಿದರು.

ಮುಂದುವರಿದು, “ದಾಸ್ ಅವರ ಏಕ ಸದಸ್ಯ ಆಯೋಗದ ವರದಿಯನ್ನು ಸುಟ್ಟು ಹಾಕಿರುವುದು ದುರದೃಷ್ಟಕರ. ಸಂವಿಧಾನದಲ್ಲಿ ಸಹೋದರತೆ ಬಹುದೊಡ್ಡ ಸಂಗತಿ. ಸಹೋದರತೆಗೂ ನಮಗೂ ಕಿಂಚಿತ್ತು ಸಂಬಂಧವೂ ಇಲ್ಲ, ಸ್ಪರ್ಶವೂ ಇಲ್ಲ ಎನ್ನುವುದನ್ನು ವರದಿಯ ವಿರೋಧದಲ್ಲಿ ಕಾಣುತ್ತಿದ್ದೇವೆ. ಜನಸಂಖ್ಯಾ ಆಧಾರದಲ್ಲಿ ಸೌಲಭ್ಯಗಳು ದೊರಕಬೇಕು ಎಂಬ ಆಗ್ರಹಗಳು ಪ್ರಜಾತಾಂತ್ರಿಕವಾಗಿ ಸರಿ. ಆದರೆ ಸಮಸ್ಯೆ ಇರುವುದು ಎಲ್ಲಿ ಎಂದು ನೋಡಬೇಕು. ಖಂಡಿತವಾಗಿಯೂ ನಾವು ಹೋಮೋಜೀನಿಯಸ್‌ ಆಗಿ ಇಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು” ಎಂದರು. ಜೊತೆಗೆ ದಾಸ್ ವರದಿ ಅನ್ವಯ ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಆಹೋರಾತ್ರಿ‌ ನಡೆದ ‘ಸಾಂಸ್ಕೃತಿಕ ಪ್ರತಿರೋಧ- ನಟ್ಟಿರುಳ ನಾದ ತಳಸಮುದಾಯಗಳ ಸಾಂಸ್ಕೃತಿಕ ಐಕ್ಯತೆ’ ಕಾರ್ಯಕ್ರಮದ ನೇತೃತ್ವ ವಹಿಸಿ ಚಳವಳಿಯನ್ನು ಮುನ್ನಡೆಸಿದರು.

Advertisements

ಇದಾದ ಮೇಲೆ ಸಂಚಲನ ಸೃಷ್ಟಿಸಿದ್ದು ಹಿರಿಯ ಸಾಹಿತಿ, ಕರ್ನಾಟಕದ ಸಾಕ್ಷಿಪ್ರಜ್ಞೆ ‘ದೇವನೂರ ಮಹಾದೇವ’ ಅವರ ಬಹಿರಂಗ ಪತ್ರ. ಮುಖ್ಯಮಂತ್ರಿಯವರನ್ನು ಉದ್ದೇಶಿಸಿ ಬರೆದಿದ್ದ ಅವರು, ಜಸ್ಟಿಸ್ ದಾಸ್ ವರದಿ ಜಾರಿಗೆ ಆಗ್ರಹಿಸಿದರು. ಬಲಗೈ ಸಮುದಾಯಕ್ಕೆ ಸೇರಿದ ದೇವನೂರರು, ಇತ್ತೀಚಿನ ವರ್ಷಗಳಿಂದ ಒಳಮೀಸಲಾತಿ ಅಗತ್ಯ ಎಂಬುದನ್ನು ಬಲವಾಗಿ ಪ್ರತಿಪಾದಿಸುತ್ತಾ ಬಂದಿದ್ದಾರೆ. ಒಳಮೀಸಲಾತಿ ವಿಚಾರದಲ್ಲಿ ಸಕಾರಾತ್ಮಕವಾದ ನಿಲುವನ್ನು ದೇವನೂರರು ಹೊಂದಿಲ್ಲವೆಂಬ ಅಭಿಪ್ರಾಯ ಕೆಲವು ವರ್ಷಗಳ ಹಿಂದೆ ಬಲವಾಗಿ ಪ್ರಚಾರದಲ್ಲಿತ್ತು. ಆ ಕಾರಣಕ್ಕೆ ಎಡಗೈ ಸಮುದಾಯವು ಒಂದು ಮಟ್ಟಿಗಿನ ಗುಮಾನಿಯನ್ನು ದೇವನೂರರ ಮೇಲೆ ಇರಿಸಿಕೊಂಡಿದ್ದು ಸುಳ್ಳಲ್ಲ. ಆದರೆ ದೇವನೂರರು ಜಸ್ಟಿಸ್ ದಾಸ್ ಅವರ ಆಯೋಗದ ವರದಿಗೆ ಸಮ್ಮತಿ ಸೂಚಿಸುವ ಮೂಲಕ ತಮ್ಮ ಮೇಲಿನ ಅಪವಾದವನ್ನು ಕಳೆದುಕೊಂಡಿದ್ದಾರೆ.

ಇದನ್ನೂ ಓದಿರಿ: Breaking | ಒಳಮೀಸಲಾತಿ ಕುರಿತ ಆ.16ರ ವಿಶೇಷ ಸಂಪುಟ ಸಭೆ ಮಂಗಳವಾರಕ್ಕೆ ಮುಂದೂಡಿಕೆ

ತಮ್ಮ ಪತ್ರದಲ್ಲಿ ದೇವನೂರರು, “ಇಂತಹ ಪರಿಸ್ಥಿತಿಯಲ್ಲಿ ನನಗೆ ತೋರುತ್ತಿರುವ ಪರಿಹಾರ ಇದು. ಒಂದು, ಜಸ್ಟಿಸ್ ನಾಗಮೋಹನ್‌ ದಾಸ್ ಆಯೋಗದ ವರದಿಯನ್ನು ಯಥಾವತ್ತಾಗಿ ಅನುಷ್ಠಾನ ಮಾಡುವ ನಿರ್ಧಾರವನ್ನು ಸರ್ಕಾರ ಕೈಗೊಳ್ಳಬೇಕು. ಇದರ ಜೊತೆಗೇನೆ, ಇಂದು ದಲಿತ ಸಮುದಾಯವೂ ದಿನದಿನಕ್ಕೂ ಚಲನಶೀಲತೆ ಪಡೆದುಕೊಂಡು ಬದಲಾವಣೆಯಾಗುತ್ತಿರುವುದರಿಂದ ಅದಕ್ಕೆ ತಕ್ಕಂತೆ ಮೀಸಲಾತಿ ಪ್ರಾತಿನಿಧ್ಯವನ್ನು ಸಮತೋಲನ ಮಾಡುವುದಕ್ಕಾಗಿ ಹಾಗೂ ಕಾಲಕಾಲಕ್ಕೆ ಹೊಸ ದತ್ತಾಂಶಗಳಿಂದ ಒಳ ಮೀಸಲಾತಿಯ ಪ್ರಮಾಣವನ್ನು ಪರಿಷ್ಕರಿಸಲು, ಹಿಂದುಳಿದ ವರ್ಗಗಳಿಗೆ ಇರುವಂತೆಯೇ, ಪರಿಶಿಷ್ಟ ಜಾತಿಗಳ ಆಯೋಗಕ್ಕೂ ಅಧಿಕಾರ ಮತ್ತು ಕಾರ್ಯವ್ಯಾಪ್ತಿಯನ್ನು ಒದಗಿಸಬೇಕು ಎಂಬುದು ನನ್ನ ಭಾವನೆ. ಈ ರೀತಿಯಾದರೆ ಆ ಆಯೋಗದ ಮುಂದೆ, ಜಸ್ಟಿಸ್ ನಾಗಮೋಹನ್ ದಾಸ್ ಅವರ ವರದಿಯ ಬಗ್ಗೆ ಇರಬಹುದಾದ ಯಾವುದೇ ಆಕ್ಷೇಪಣೆಗಳನ್ನು ಸಲ್ಲಿಸಲು ಹಾಗೂ ಪರಿಹಾರ ಕಂಡುಕೊಳ್ಳಲು ಸಾಧ್ಯತೆ ಹೆಚ್ಚುತ್ತದೆ. ಈ ಹಿಂದೆ, ಮೀಸಲಾತಿ ಹೆಚ್ಚಳ ಆಯೋಗದ ಅಧ್ಯಕ್ಷರಾಗಿ ಜಸ್ಟಿಸ್ ನಾಗಮೋಹನ ದಾಸ್ ಅವರು ಸಲ್ಲಿಸಿದ ವರದಿಯಲ್ಲಿ ‘ಪರಿಶಿಷ್ಟ ಜಾತಿ ಸಮುದಾಯವು 17.98%, ಪರಿಶಿಷ್ಟ ಪಂಗಡವು 7.41% ಜನಸಂಖ್ಯೆ ಇರುವುದರಿಂದ ಎಸ್‌ಸಿಗೆ 18% ಹಾಗೂ ಎಸ್‌ಟಿಗೆ 7.50% ನೀಡುವುದು ಸೂಕ್ತ’ ಎಂದಿದ್ದರು. (ಆದರೆ, ಅಂದು ಆ ಆಯೋಗದ ಮುಂದೆ 17%ಗೆ ಏರಿಸುವ ವಿಚಾರವಷ್ಟೇ ಇದ್ದುದರಿಂದ, ಶಿಫಾರಸ್ಸು ಅಷ್ಟಕ್ಕೆ ಸೀಮಿತವಾಗಿತ್ತು). ತಾವು 1% ಹೆಚ್ಚಳದ ನಿರ್ಧಾರ ಕೈಗೊಂಡರೆ ಹೆಚ್ಚುವರಿಯಾಗಿ ಸಿಗುವ 1% ನಿಂದ ಇಂದಿನ ಗೊಂದಲಗಳನ್ನು ಪರಿಹರಿಸಿಕೊಳ್ಳಬಹುದಾದ ಸಾಧ್ಯತೆ ಇದೆ. ಇದು ಸರ್ಕಾರದ ಕೈಯಲ್ಲೇ ಇದೆ ಎಂದುಕೊಂಡಿದ್ದೇನೆ. ನೀವು ಈ ಕುರಿತು ಆಶ್ವಾಸನೆ ನೀಡಿದರೂ ದಲಿತ ಸಮುದಾಯ ನಂಬುತ್ತದೆ” ಎಂದಿದ್ದಾರೆ.

ಮುಂದುವರಿದು ಸುಪ್ರೀಂಕೋರ್ಟ್‌ನ ತೀರ್ಪಿನ್ನು ಪ್ರಸ್ತಾಪಿಸಿ, ಈಗ ಎದ್ದಿರುವ ಆಕ್ಷೇಪಗಳಿಗೆ ಉತ್ತರಿಸುವ ಕೆಲಸ ಮಾಡಿದ್ದಾರೆ.  “01-08-2024ರ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಪರಿಶಿಷ್ಟ ಜಾತಿಗಳು ವೈವಿಧ್ಯಮಯ ಭಿನ್ನರೂಪತೆಯ (Heterogeneous) ಗುಂಪುಗಳಾಗಿವೆ ಎಂದು ಅಭಿಪ್ರಾಯ ನೀಡಿದೆ. ವರ್ಗೀಕರಣ ನಿರ್ಧರಿಸುವಾಗ ಸರ್ವಾಂಗೀಣ ಹಿಂದುಳಿದಿರುವಿಕೆಯನ್ನೂ ಪರಿಗಣಿಸಿ ನಿರ್ಧರಿಸಬೇಕಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಜಸ್ಟಿಸ್ ನಾಗಮೋಹನ ದಾಸ್‌ರವರ ವರದಿಯನ್ನು ಗಮನಿಸಿದರೆ ಅದು ಸುಪ್ರೀಂ ಕೋರ್ಟ್ ಆಶಯಕ್ಕೆ ತಕ್ಕಂತೆಯೇ ಇರುವಂತೆ ಕಾಣಿಸುತ್ತದೆ” ಎಂದಿದ್ದಾರೆ ದೇಮ.

ಇದರ ಜೊತೆಗೆ ಕೆಲವು ಪರಿಹಾರ ಕ್ರಮಗಳನ್ನು ಸೂಚಿಸಿರುವ ಅವರು ಜಸ್ಟಿಸ್ ದಾಸ್ ಅವರ ವರದಿ ತುರ್ತಾಗಿ ಜಾರಿಯಬೇಕೆಂದು ಆಶಿಸಿದ್ದಾರೆ. ದೇವನೂರರ ಬಹಿರಂಗ ಪತ್ರಕ್ಕೆ ದಲಿತ ಚಳವಳಿ ಕಟ್ಟಿದ ಹಿರಿಯರು ಪ್ರತಿಕ್ರಿಯಿಸಿರುವ ರೀತಿ ಮಾತ್ರ ಮನೋಜ್ಞವಾಗಿದೆ. ಒಳಮೀಸಲಾತಿ ಹೋರಾಟದ ತೂಕ ಮತ್ತು ಸೌಂದರ್ಯ ಹಿರಿಯರ ಪರಸ್ಪರ ಪ್ರತಿಕ್ರಿಯೆಯಲ್ಲಿ ಹೊಳಪು ಕಂಡಿದೆ. ಅಸ್ಪೃಶ್ಯ ಸಮುದಾಯಗಳ ಅಂತರಾಳ ಬೆಸೆದು ಬುದ್ಧಪ್ರಜ್ಞೆ ಜಾಗೃತಗೊಂಡಿದೆ.

ದಲಿತ ಸಂಘರ್ಷ ಸಮಿತಿಯ ಹಿರಿಯ ನಾಯಕರಾದ ಎನ್.ವೆಂಕಟೇಶ್ ಪ್ರತಿಕ್ರಿಯಿಸಿ, “ನನ್ನ 50 ವರ್ಷಗಳ ಸ್ನೇಹಿತ ದೇವನೂರ ಮಹಾದೇವ ಒಳಮೀಸಲಾತಿ ಜಾರಿಗೊಳಿಸಲು ಮುಖ್ಯಮಂತ್ರಿಯವರಿಗೆ ಬರೆದಿರುವ ಪತ್ರದ ಒತ್ತಾಸೆಯನ್ನು ನಾನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ. ಜಸ್ಟಿಸ್ ನಾಗಮೋಹನ ದಾಸ್ ವರದಿ ಸಾಕಷ್ಟು ವೈಜ್ಞಾನಿಕವಾಗಿದೆ. ಇದರ ಆಧಾರದಲ್ಲಿ ಒಳಮೀಸಲಾತಿ ಜಾರಿಗೊಳಿಸುವ ಮೂಲಕ ಸರ್ಕಾರ ಅಸ್ತಿತ್ವ ಉಳಿಸಿಕೊಳ್ಳಬೇಕು. ನನ್ನ ಹೊಲೆಯ ಬಾಂಧವರು ಕೂಡ ಇದಕ್ಕೆ ಸಹಮತ ವ್ಯಕ್ತಪಡಿಸುತ್ತಾರೆ ಎಂಬ ನಂಬಿಕೆ ನನಗಿದೆ. ಇರುಳು ಸರಿದು ಬೆಳಕು ಮೂಡಿಯೇ ಮೂಡುತ್ತದೆ. ಬುದ್ಧ-ಬಸವ- ಅಂಬೇಡ್ಕರ್ ಅವರ ಸೈದ್ಧಾಂತಿಕ ನಿಲುವಿನ ಮೈತ್ರಿ ಭಾವ ನಮ್ಮನ್ನು ಗಟ್ಟಿ ಮಾಡಲಿ” ಎಂದಿದ್ದಾರೆ. ಈ ಸಮುದಾಯಗಳ ಅಂತಃಕರಣದಲ್ಲಿ ಹಾಸುಹೊಕ್ಕಿರುವ ಮೈತ್ರಿಯ ಬಗ್ಗೆ ಗಡ್ಡಂ ವೆಂಕಟೇಶ್‌ ಅವರು ನೆನಪಿಸಿದ್ದಾರೆ. ಇದಕ್ಕಿಂತಲೂ ಮುಖ್ಯವಾಗಿ ಸಂಚಲನ ಸೃಷ್ಟಿಸಿರುವುದು ಪ್ರೊ.ಎಚ್. ಗೋವಿಂದಯ್ಯನವರ ಹೇಳಿಕೆ.

n venkaesh

ದಲಿತ ಸಂಘರ್ಷ ಸಮಿತಿ ರಾಜ್ಯಮಟ್ಟದಲ್ಲಿ ರೂಪುಗೊಳ್ಳುವಲ್ಲಿ ಮತ್ತು ದಲಿತ ಚಳವಳಿಯಲ್ಲಿ ಪ್ರಮುಖ ಪಾತ್ರವಹಿಸಿದ ಬರೆಹಗಾರರಲ್ಲಿ ದೇವನೂರರು ಪ್ರಮುಖರಾದಂತೆಯೇ ಎಡಗೈ ಸಮುದಾಯದ  ಪ್ರೊ.ಎಚ್. ಗೋವಿಂದಯ್ಯ ಅಗ್ರಗಣ್ಯರು. ಆದರೆ ದೇವನೂರು ಮತ್ತು ಗೋವಿಂದಯ್ಯನವರ ನಡುವೆ ಯಾವುದೋ ಕಾಲದಲ್ಲಿ, ಯಾವುದೋ ಕೆಟ್ಟ ಘಳಿಗೆಯಲ್ಲಿ ಭಿನ್ನಾಭಿಪ್ರಾಯಗಳು ಮೂಡಿದ್ದು ಸುಳ್ಳಲ್ಲ. ಗೋವಿಂದಯ್ಯನವರು ಹಲವೆಡೆ ಬಹಿರಂಗವಾಗಿಯೇ ದೇವನೂರರ ಮೇಲೆ ವಾಗ್ದಾಳಿಯನ್ನೂ ನಡೆಸಿದ್ದರು. ಇಂತಹ ಸನ್ನಿವೇಶದಲ್ಲಿ ಕೆಲವು ಸಂಘಿ ಸೈತಾನಗಳು ಗೋವಿಂದಯ್ಯನವರನ್ನು ಕಟ್ಟರ್‌ ದೇವನೂರು ವಿರೋಧಿ ಎಂಬಂತೆ ಚಿತ್ರಿಸಲು ಯತ್ನಿಸಿದ್ದವು. ದಲಿತ ಮುಖಂಡರು ಕಿತ್ತಾಡಿಕೊಂಡರೆ ಮನುವಾದಿ ಸಂತಾನಗಳಿಗೆ ಸಂತಸವಾಗದೆ ಇರುತ್ತದೆಯೇ? ಹೀಗಾಗಿ ಈ ಬೆಳವಣಿಗೆಗಳನ್ನು ಕಂಡು ಅನೇಕ ಯುವ ತಲೆಮಾರಿನ ಹೋರಾಟಗಾರರು ಕಸಿವಿಸಿಗೊಂಡಿದ್ದರು. ಆದರೆ ಕಾಲಕ್ಕೆ ಎಲ್ಲವನ್ನೂ ಮರೆಸುವ ಶಕ್ತಿ ಇದೆ. ಸಾಮಾಜಿಕ ನ್ಯಾಯದ ವಿಚಾರ ಬಂದಾಗ ದಲಿತ ಚಳವಳಿಯ ನಿಜಸತ್ವ ಮರುಜೀವ ಪಡೆದು ನಿಂತಿದೆ. ಗೋವಿಂದಯ್ಯನವರು ದೇವನೂರರ ಪತ್ರವನ್ನು ಮುಕ್ತಕಂಠದಿಂದ ಹಾಡಿಹೊಗಳಿದ್ದಾರೆ.

“ಒಳಮೀಸಲಾತಿ ಕುರಿತಂತೆ ದೇವನೂರ ಮಹಾದೇವ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವ ಮೂಲಕ ತಳೆದಿರುವ ನಿಲುವನ್ನು ನಾನು ಸ್ವಾಗತಿಸುತ್ತೇನೆ. ಮತ್ತು ಅದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ. ಇದೇ ರೀತಿ ಮುಂದೆಯೂ ಅವರು ದಲಿತ ಸಮುದಾಯಗಳನ್ನು ಒಗ್ಗೂಡಿಸುತ್ತಾ ಮುನ್ನಡೆಸಲಿ. ಎಲ್ಲ ಜನಸಮುದಾಯಗಳನ್ನು ಒಗ್ಗೂಡಿಸಿಕೊಂಡು ನಡೆಯುವುದು ಇಲ್ಲಿನ ನೆಲದ ಗುಣ. ದಲಿತ ಚಳವಳಿಗೆ ಭೇದ, ಇಬ್ಭಾಗ ಮಾಡುವ ಗುಣ ಆಗಿಬರುವುದಿಲ್ಲ. ಒಳಮೀಸಲಾತಿ ದಲಿತ ಸಮುದಾಯಗಳನ್ನು ಮತ್ತಷ್ಟು ಒಗ್ಗಟ್ಟಿನ ಕಡೆಗೆ ನಡೆಸುವಂತಾಗಲಿ” ಎಂದಿದ್ದಾರೆ ಗೋವಿಂದಯ್ಯ.

govindayya

ಗೋವಿಂದಯ್ಯನವರ ಹೇಳಿಕೆ ಹೊರಬಿದ್ದ ಬಳಿಕ ನಿಜಕ್ಕೂ ಸಂಭ್ರಮಿಸುತ್ತಿರುವುದು ಎಡ ಮತ್ತು ಬಲ ಸಮುದಾಯಗಳ ಯುವತಲೆಮಾರು ಎಂಬುದನ್ನು ಗಮನಿಸಬೇಕು. ಸಾಮಾಜಿಕ ಮಾಧ್ಯಮಗಳಲ್ಲಿ  ಗೋವಿಂದಯ್ಯ ಮತ್ತು ವೆಂಕಟೇಶ್ ಅವರ ಹೇಳಿಕೆಗಳನ್ನು ವ್ಯಾಪಕವಾಗಿ ಹಂಚಿಕೊಂಡು, ಬರೆಯುತ್ತಿರುವ ಟಿಪ್ಪಣಿಗಳೇ ಎಲ್ಲವನ್ನೂ ಹೇಳುತ್ತಿವೆ.

ಇದನ್ನೂ ಓದಿರಿ: ದಾವಣಗೆರೆ | ಸ್ವಾತಂತ್ರ್ಯೋತ್ಸವ ದಿನ ಒಳಮೀಸಲಾತಿ ವಿಳಂಬ ವಿರೋಧಿಸಿ ಕಪ್ಪು ಬಟ್ಟೆ ಧರಿಸಿ ಆಕ್ರೋಶ; ದಲಿತ ಮುಖಂಡರ ಬಂಧನ

ಗೋವಿಂದಯ್ಯನವರ ಮಾತನ್ನು ಹಂಚಿಕೊಂಡಿರುವ ಬರೆಹಗಾರ ಹುಲಿಕುಂಟೆ ಮೂರ್ತಿ, “ಇದು ಕರ್ನಾಟಕ ರಾಜ್ಯದ ದಲಿತ ವಿವೇಕದ ಮೈಲಿಗಲ್ಲು. ಇದಕ್ಕೆ ನಾವು ಸಾಕ್ಷಿಯಾಗುತ್ತಿರುವುದು ಹೆಮ್ಮೆಯ ವಿಷಯ” ಎಂದಿದ್ದಾರೆ. ಕುಸುಮಬಾಲೆ ಕಾದಂಬರಿಯ ಸಾಲನ್ನು ನೆನೆದಿರುವ ರಂಗಕರ್ಮಿ ಕೆ.ಪಿ.ಲಕ್ಷ್ಮಣ್, “ಈ ಜೀವವೇ ಆ ಜೀವಕ ನಡೀ” ಎಂದು ಬರೆದು ಪೋಸ್ಟರ್ ಹಂಚಿಕೊಂಡಿದ್ದಾರೆ. “ರಾಜ್ಯದ ದಲಿತ ಅಸ್ಮಿತೆಗಳ ಸಹೋದರತೆಯ ಒಗ್ಗೂಡುವಿಕೆಗೆ ಮುನ್ನುಡಿ” ಎಂದು ದಲಿತ ಮುಖಂಡ ಡಿ.ಟಿ.ವೆಂಕಟೇಶ್ ಬರೆದುಕೊಂಡಿದ್ದಾರೆ.

ಬರೆಹಗಾರ ಅಪೂರ್ವ ಡಿಸಿಲ್ವಾ ಅವರು, “ಇದೊಂದು ಹೃದಯ ತುಂಬಿ ಬರುವ ಗಳಿಗೆ. ಹೇಗೆ ನೋಡಿದರೂ ಗೋವಿಂದಯ್ಯನವರ ‘ಓ ಮರವೇ ಅರಳಿ ಮರ್ಮರವೇ ಎಲ್ಲಿ ಮಾರ ನನ್ನಯ್ಯ ಮಾರ’ ಆಗಲಿ, ಕಪ್ಪು ಜನರ ಕೆಂಪು ಕಾವ್ಯವಾಗಲಿ, ಈ ಕಡೆ ದೇವನೂರರ ಒಡಲಾಳ, ಕುಸುಮಬಾಲೆಯಾಗಲಿ ಮರೆಯಲು ಸಾಧ್ಯವೆ? ಇಬ್ಬರೂ ಎಲ್ಲೇ ಸಿಕ್ಕರೂ ಪ್ರೀತಿಯಿಂದ ಮಾತಾಡಿಸಿದಾಗ ಏನೋ ರೋಮಾಂಚನ; ಯಾಕೋ ಇವರು ಮುನಿದು ಕೊಂಡಾಗ ಎಲ್ಲೋ ಏನೋ ಕೃತಕತೆ! ಈಗ ಮತ್ತೆ ಎರಡು ಶಕ್ತಿಗಳು ಒಂದಾಗಿವೆ. ಎಂಥ ಅದ್ಭುತ ಘಳಿಗೆ. ನಿಜಕ್ಕೂ ದಲಿತ ಚಳವಳಿಗೆ ಮರುಜೀವ ಬಂದಂತೆ” ಎಂದಿದ್ದಾರೆ.

ದಲಿತ ಚಳವಳಿಯ ಹಿರಿಯರು ಒಂದಾಗಿ ನಿಂತರೆ ಯಾವುದೇ ಹೋರಾಟಕ್ಕೆ ಸಿಗುವ ನೈತಿಕ ಬಲವೇ ಎಲ್ಲವನ್ನೂ ಹೇಳುತ್ತಿದೆ. ಒಡೆದು ಹೋಗಿದ್ದ ಮನಸ್ಸುಗಳು ಒಂದಾಗುವ ಕಾಲವನ್ನು ಒಳಮೀಸಲಾತಿಯ ಅಂತಿಮ ಹೋರಾಟ ಸೃಷ್ಟಿಸಿದಂತೂ ಸುಳ್ಳಲ್ಲ. ಹೀಗಾಗಿ ‘ಸಂಬಂಜ ಅನ್ನೋದು ದೊಡ್ಡದು ಕನಾ’ ಅಂತ ಒಳಮೀಸಲಾತಿ ಹೋರಾಟಗಾರರು ಭಾವುಕರಾಗಿದ್ದಾರೆ.

yathiraj 2
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025ಕ್ಕೆ ವಿಧಾನ ಪರಿಷತ್ತಿನಲ್ಲೂ ಅಂಗೀಕಾರ

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025 ಕ್ಕೆ ವಿಧಾನ ಪರಿಷತ್ತಿನಲ್ಲಿ...

ಸರ್ಕಾರಿ ಶಾಲೆಗಳನ್ನು ಮುಚ್ಚಿ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸರ್ಕಾರದಿಂದಲೇ ಷಡ್ಯಂತ್ರ: ಪ್ರೊ. ಮುರಿಗೆಪ್ಪ

"ತನ್ನ ಮೇಲಿನ ಭಾರವನ್ನು ಇಳಿಸಿಕೊಳ್ಳಲು ಸರ್ಕಾರಿ ಶಾಲೆಗಳನ್ನು ಮುಚ್ಚಿ ಖಾಸಗಿ ಶಾಲೆಗಳಿಗೆ...

Download Eedina App Android / iOS

X