ಬೋರ್ಡಿಂಗ್ ಮತ್ತು ಲಾಡ್ಜಿಂಗ್ ತೆರೆಯಲು ‘ಸಿಎಲ್7’ ಪರವಾನಗಿ ನೀಡಲು ಮಂಡ್ಯ ಅಬಕಾರಿ ಇಲಾಖೆಯ ಜಿಲ್ಲಾಧಿಕಾರಿ ಬರೋಬ್ಬರಿ 60 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆಯ ಸುಂದರ್ ಎಂಬವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಮಂಡ್ಯ ಅಬಕಾರಿ ಇಲಾಖೆಯ ಜಿಲ್ಲಾಧಿಕಾರಿ ನಾಗಾಶಯನ ಅವರು CL7 ಲೈಸೆನ್ಸ್ ನೀಡಲು 60ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎಂದು ಸುಂದರ್ ಆರೋಪಿಸಿದ್ದಾರೆ.
ಲೋಕಾಯುಕ್ತಕ್ಕೆ ದೂರು ನೀಡಿರುವ ಸುಂದರ್, “ನಾನು ಕೆ.ಆರ್ ಪೇಟೆಯ ಸೋಮನಹಳ್ಳಿ ಗ್ರಾಮದಲ್ಲಿ MBS ಬೋರ್ಡಿಂಗ್ & ಲಾಡ್ಜಿಂಗ್ ಹೆಸರಿನಲ್ಲಿ ಕಟ್ಟಡ ನಿರ್ಮಿಸಿದ್ದೇನೆ. ಬ್ಯಾಂಕಿನಿಂದ ಸಾಲ ಪಡೆದು ಕಾನೂನಾತ್ಮಕವಾಗಿ 1.20 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಿದ್ದೇವೆ. ನನ್ನ ತಂದೆಯ ಹೆಸರಲ್ಲಿ CL7 ಪರವಾನಗಿ ಪಡೆಯಲು ಅರ್ಜಿ ಸಲ್ಲಿಸಿದ್ದೆ. ಪರವಾನಗಿ ಸಲ್ಲಿಸಲು ಎನ್‌ಸ್ಪೆಕ್ಟರ್ ಮತ್ತು ಡೆಪ್ಯೂಟಿ ಸೂಪರಿಂಟೆಂಡೆಂಟ್ ಶಿಫಾರಸು ಮಾಡಿದರೂ, ವಿನಾಕಾರಣ ತಡೆಹಿಡಿಯಲಾಗಿದೆ. ಪರವಾನಗಿ ನೀಡಲು ಅಬಕಾರಿ ಇಲಾಖೆಯ ಡಿಸಿ ನಾಗಾಶಯನ 60 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಲಂಚ ಕೊಡದೇ ಇರುವುದಕ್ಕೆ ಪರವಾನಗಿ ನೀಡದೆ, ವಿಳಂಬ ಮಾಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಸ್ವಾತಂತ್ರ್ಯ ದಿನ ವಿಶೇಷ | ಕುಗ್ಗುತ್ತಿರುವ ಪ್ರಜಾಪ್ರಭುತ್ವದ ನಡುವೆ ನಾಗರಿಕ ಜಾಗೃತಿಯ ಆಶಾಕಿರಣ
ನಾಗಾಶಯನ ಅವರ ಜೊತೆಗಿನ ಫೋನ್ ಕರೆಯ ಆಡಿಯೋ ರೆಕಾರ್ಡ್‌ಅನ್ನು ಸುಂದರ್ ಅವರು ಲೋಕಾಯುಕ್ತಕ್ಕೆ ಸಲ್ಲಿಸಿದ್ದಾರೆ. ಅದರಲ್ಲಿ; “ನೀವು ಜೆಡಿಎಸ್‌ನಲ್ಲಿ ಇದ್ದರೆ, ನಿಮಗೆ ಲೈಸೆನ್ಸ್ ಸಿಗುವುದು ಕಷ್ಟ. ನಿಮ್ಮೂರಿನ ಕುರುಬ ನಾಯಕರನ್ನು ಸಿಎಂ ಸಿದ್ದರಾಮಯ್ಯ, ಅವರ ಮಗ ಯತೀಂದ್ರ ಬಳಿಗೆ, ಒಕ್ಕಲಿಗ ನಾಯಕರನ್ನು ಚಲುವರಾಯಸ್ವಾಮಿ ಬಳಿಗೆ ಕರೆದುಕೊಂಡು ಹೋಗಿ ಮನವಿ ಸಲ್ಲಿಸಿ, ಆಗ ಲೈಸೆನ್ಸ್ ಸಿಗುತ್ತದೆ” ಎಂದು ಡಿಸಿ ನಾಗಾಶಯನ ಹೇಳಿರುವುದು ಸೆರೆಯಾಗಿದೆ ಎಂದು ತಿಳಿದುಬಂದಿದೆ.
ನಾಗಾಶಯನ ಅವರ ಆಡಿಯೋ ವೈರಲ್ ಆದ ಬೆನ್ನಲ್ಲೇ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರು ಅಬಕಾರಿ ಡಿಸಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಇಲಾಖೆ ಕಾರ್ಯದರ್ಶಿ ಸೂಚಿಸಲು ಮುಂದಗಿದ್ದಾರೆ ಎಂದು ವರದಿಯಾಗಿದೆ.