ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ದೇಶದ ಮಕ್ಕಳನ್ನು ನಾವು ಗುಡಿ, ಮಸೀದಿ, ಚರ್ಚುಗಳ ಪ್ರಭಾವದಿಂದ ದೂರವಿಡಬೇಕಾಗಿದೆ. ಮನೆಯೇ ಮಂದಿರ, ತಂದೆ–ತಾಯಿಯರೇ ದೇವರು ಎಂಬುದನ್ನು ಹೇಳಿ ಕೊಡಬೇಕಾಗಿದೆ. ಹಾಗಾದಾಗ ಮಾತ್ರ ನಾವು ಈ ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸಿಕೊಳ್ಳಬಹುದು ಎಂದು ಅಖಿಲ ಭಾರತ ವಕೀಲರ ಒಕ್ಕೂಟದ ಮಂಡ್ಯ ಜಿಲ್ಲಾಧ್ಯಕ್ಷ ಹಾಗೂ ನ್ಯಾಯವಾದಿ ಬಿ ಟಿ ವಿಶ್ವನಾಥ್ ಅಭಿಪ್ರಾಯಪಟ್ಟರು.
ಕರ್ನಾಟಕ ಸಂವಿಧಾನ ಸಂರಕ್ಷಣಾ ಸಮಿತಿ, ಎದ್ದೇಳು ಕರ್ನಾಟಕ, ಜನಶಕ್ತಿ ಮತ್ತು ಮಂಡ್ಯ ಜಿಲ್ಲೆಯ ಎಲ್ಲ ಪ್ರಗತಿಪರ ಸಂಘಟನೆಗಳು ಒಗ್ಗೂಡಿ ಮಂಡ್ಯ ನಗರದ ಜನಶಕ್ತಿ ಕಚೇರಿಯ ಸಭಾ ಭವನದಲ್ಲಿ ಆಚರಿಸಿದ ಸ್ವಾತಂತ್ರೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ದೇವರು ಧರ್ಮಗಳ ಗುತ್ತಿಗೆ ಪಡೆದ ಏಜೆಂಟರುಗಳು ದೇವಮಾನವರು, ರಾಜ್ಯದಲ್ಲಿ ಸೃಷ್ಟಿಸಿರುವ ಅವಾಂತರಗಳನ್ನೇ ನೋಡಿ ಅವರು ಹೇಗೆ ಸಮಾನಾಂತರ ಸಂವಿಧಾನಗಳಾಗಿ ರಾಜಕೀಯ ಪಕ್ಷಗಳನ್ನು ಹೆದರಿಸುತ್ತಿವೆ, ಅತ್ಯಾಚಾರ ಕೊಲೆಗಳನ್ನು ಮಾಡಿ ದಕ್ಕಿಸಿಕೊಳ್ಳುತ್ತಿವೆ. ಸಂವಿಧಾನದ ಆಶಯಗಳನ್ನು ಸೋಲಿಸುತ್ತಿವೆ. ಇನ್ನಾದರೂ ಗುಡಿ, ಮಸೀದಿ, ಚರ್ಚುಗಳ ಪ್ರಭಾವದಿಂದ ಮಕ್ಕಳನ್ನು ದೂರವಿಡಿ” ಎಂದರು.
“ದೇವರು ಧರ್ಮದ ಅಫೀಮಿಗೆ ಒಳಗಾದ ಈ ದೇಶದ ರಾಜರುಗಳು ದೇಶದ ಬಹುಸಂಖ್ಯಾತ ಕ್ಷುದ್ರರೂ ಮತ್ತು ದಲಿತರಿಗೆ ಭೂಮಿ ಹಕ್ಕು ಮತ್ತು ಶಸ್ತ್ರಗಳನ್ನು ಹಿಡಿಯುವ ಹಕ್ಕಿನಿಂದ ವಂಚಿಸಿದ್ದರಿಂದಲೇ ಈ ದೇಶ ಸಾವಿರಾರು ವರ್ಷ ವಿದೇಶಿ ಅತಿಕ್ರಮಣಕ್ಕೆ ದಾಸ್ಯಕ್ಕೆ ಒಳಗಾಗುವಂತಾಯಿತು” ಎಂದು ಹೇಳಿದರು.
“ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಯಬೇಕೆಂದರೆ ಮೊದಲು ಚುನಾವಣೆಗಳು ಪಾರದರ್ಶಕವಾಗಬೇಕು. ಮನೆಯ ಅಳಿಯನನ್ನಾಗಿ ಲಫಂಗನೊಬ್ಬನನ್ನು ಆರಿಸದ ನಾವು ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಕಾವಲುಗಾರರನ್ನಾಗಿ ಕ್ರಿಮಿನಲ್‌ಗಳು, ಉದ್ಯಮಿಗಳ ಚೇಲಾಗಳು ದೇವರು ಧರ್ಮಗಳ ಹೆಸರಿನಲ್ಲಿ ದೇಶ ಲೂಟಿ ಮಾಡುವ ಅಯೋಗ್ಯರ ಪಾದನೆಕ್ಕುವವರನ್ನು ಅವರು ನೀಡುವ ಗುಂಡು ತುಂಡು ಸೀರೆ ಮೂಗುಬಟ್ಟುಗಳಿಗಾಗಿ ಆರಿಸುವುದರಿಂದ ಆಗುವ ಅನಾಹುತಗಳನ್ನು ದೇಶ ಅನುಭವಿಸುತ್ತಿರುವುದನ್ನು ನೀವೆಲ್ಲರೂ ನೋಡುತ್ತಿದ್ದೀರಿ” ಎಂದರು.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | 261 ದೇಸಿ ಸಾಂಪ್ರದಾಯಿಕ ಬೆಳೆ, ತಳಿಗಳ ಸಂರಕ್ಷಣೆ
“ಜನರಿಂದ ಆಯ್ಕೆಯಾದ ಸರ್ಕಾರಗಳು ಸಂವಿಧಾನದ ಆರ್ಟಿಕಲ್ 51(ಎ) ಎಚ್ ರ ಆಶಯದಂತೆ ಆಡಳಿತದಲ್ಲಿ ವೈಚಾರಿಕತೆಯನ್ನು ಅಳವಡಿಸಿಕೊಳ್ಳುತ್ತಿಲ್ಲ” ಎಂದು ವಿಷಾದಿಸಿದರು.
ಜನಶಕ್ತಿಯ ಸಿದ್ದರಾಜು ಪ್ರಸ್ತಾವಿಕ ಮಾತುಗಳನ್ನಾಡಿದರು. ವಕೀಲ ಕಿಶೋರ್ ಸಂವಿಧಾನದ ಆಶಯಗಳನ್ನು ಕುರಿತು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ರೈತ ಸಂಘದ ಕೆಂಪೂಗೌಡ, ವಿಶ್ರಾಂತ ಅಧ್ಯಾಪಕ ಜಿ ಟಿ ವೀರಪ್ಪ, ಜಾಗೃತ ಕರ್ನಾಟಕದ ಮುಖಂಡ ಸಂತೋಷ್ ಜಿ, ಮಂಡ್ಯ ಮತ್ತು ಇತರ ತಾಲೂಕುಗಳ ಶ್ರಮಿಕ ನಗರದ ನಿವಾಸಿಗಳು ಈ ಸ್ವಾತಂತ್ರ್ಯೋತ್ಸವದಲ್ಲಿ ಭಾಗವಹಿಸಿದ್ದರು.