ಶಿವಮೊಗ್ಗ, ಯುವಕರು ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು. ಸ್ಪರ್ಧಾತ್ಮಕ ಗುಣದೊಂದಿಗೆ ಕ್ರೀಡೆಗಳಲ್ಲಿ ಭಾಗವಹಿಸಿ ರಾಷ್ಟ್ರಮಟ್ಟಕ್ಕೆ ತಲುಪಬೇಕು ಎಂದು ಶಾಸಕರಾದ ಎಸ್.ಎನ್.ಚನ್ನಬಸಪ್ಪ ಕ್ರೀಡಾಪಟುಗಳಿಗೆ ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ನಗರದ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 2025-26 ನೇ ಸಾಲಿನ ಶಿವಮೊಗ್ಗ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಆರೋಗ್ಯಕರ ಬದುಕಿಗೆ ಕ್ರೀಡೆ ಅತ್ಯವಶ್ಯಕ. ಹಾಗಾಗಿ ಯುವಕರು ಕ್ರೀಡೆಯಲ್ಲಿ ತೊಡಗಿಕೊಳ್ಳಬೇಕು. ಇದರಿಂದ ದೇಹ ಮತ್ತು ಮನಸ್ಸು ಸದೃಢವಾಗುತ್ತದೆ ಎಂದರು.
ಸಮಾರಂಭ ಉದ್ಘಾಟನೆ ನೆರವೇರಿಸಿದ ಸಂಸದರಾದ ಬಿ.ವೈ ರಾಘವೇಂದ್ರ ಮಾತನಾಡಿ, ಯುವಕರು ಈ ದೇಶದ ಭವಿಷ್ಯ. ಅವರು ಸದೃಢವಾಗಿದ್ದರೆ ದೇಶವು ಸದೃಢವಾಗಿರುತ್ತದೆ. ಹಾಗಾಗಿ ಕ್ರೀಡೆಯನ್ನು ಬದುಕಿನಲ್ಲಿ ಅಳಡಿಸಿಕೊಳ್ಳಬೇಕು. ಆ ಮೂಲಕ ಕ್ರೀಡೆಯಲ್ಲಿ ಹೆಚ್ಚೆಚ್ಚು ಸಾಧನೆ ಮಾಡಿ ಈ ದೇಶಕ್ಕೆ ಗೌರವ ತರುವಂತಾಗಬೇಕು ಎಂದರು.
ವಿಧಾನ ಪರಿಷತ್ ಶಾಸಕರಾದ ಡಾ.ಧನಂಜಯ ಸರ್ಜಿ ಮಾತನಾಡಿ, ಕ್ರೀಡೆಯಲ್ಲಿ ಸೋಲು ಗೆಲುವಿಗಿಂತ ಭಾಗವಹಿಸುವಿಕೆ ಮುಖ್ಯ. ಕ್ರೀಡೆ ಹಾಗೂ ನಿಯಮಿತವಾದ ವ್ಯಾಯಾಮ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮಗೊಳ್ಳುತ್ತದೆ ಎಂದರು.
ಸಮಾರಂಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೇಖ್ಯಾ ನಾಯ್ಕ್ ಹಾಗೂ ವಿವಿಧ ಶಾಲಾ, ಕಾಲೇಜುಗಳ ಕ್ರೀಡಾಪಟುಗಳು ಹಾಜರಿದ್ದರು.