ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿಅವಘಡ ಸಂಭವಿಸಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದರು.
ನಗರ್ತಪೇಟೆಯಲ್ಲಿ ಅಗ್ನಿಅವಘಡ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ, ಘಟನೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
“ಎಫ್‌ಎಸ್‌ಎಲ್‌ನವರು ಸ್ಥಳಕ್ಕೆ ಭೇಟಿ ನೀಡಿ ಸ್ಯಾಂಪಲ್ ಸಂಗ್ರಹಿಸಿದ್ದಾರೆ. ವರದಿ ನಂತರ ಘಟನೆಯ ಬಗ್ಗೆ ಗೊತ್ತಾಗಲಿದೆ. ಸಂತ್ರಸ್ತರ ಕುಟುಂಬಸ್ಥರಿಗೆ ಸರ್ಕಾರದಿಂದ ಪರಿಹಾರ ನೀಡುವ ಬಗ್ಗೆ ಮುಖ್ಯಮಂತ್ರಿಯವರೊಂದಿಗೆ ಮಾತನಾಡುತ್ತೇನೆ. ಇವತ್ತು ಬೆಳಗ್ಗೆ 3.15 ಗಂಟೆ ಸುಮಾರಿಗೆ ಕೃಷ್ಣ ಕಾಂಪ್ಲೆಕ್ಸ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. 38 ವರ್ಷದ ಮದನ್ ಎಂಬ ವ್ಯಕ್ತಿ ಮೃತಪಟ್ಟಿದ್ದಾನೆ” ಎಂದು ಹೇಳಿದರು.
“ಮೊದಲು ನೆಲಮಹಡಿಯಲ್ಲಿ ಬೆಂಕಿ ತಗುಲಿದೆ. ತದನಂತರ ಎರಡನೇ ಮಹಡಿ, ಮೂರನೇ ಮಹಡಿವರೆಗೆ ಬೆಂಕಿ ಹಬ್ಬಿದೆ. ಮೇಲೆ ವಾಸವಿದ್ದವರು ತೀರಿಕೊಂಡಿದ್ದಾರೆ. ತನಿಖೆಯ ನಂತರ ಘಟನೆಗೆ ಕಾರಣ ಏನೆಂಬುದು ಗೊತ್ತಾಗಲಿದೆ ಎಂದು ಹೇಳಿದರು. ಪ್ಲಾಸ್ಟಿಕ್ ವಸ್ತುಗಳು, ರಬ್ಬರ್ ಮ್ಯಾಟ್‌ಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ಶೇಖರಿಸಿಟ್ಟಿದ್ದರು. ಬೆಂಕಿ ತಗುಲಿದ ನಂತರ ಮೇಲೆ ಹೋಗಲು ಆಗಿಲ್ಲ. ಕೆಳ ಮಹಡಿಯಲ್ಲಿ ಸತ್ತಿರುವ ಮದನ್ ಎಂಬಾತ ಮೇಲ್ಮಹಡಿಯ ತನ್ನ ಮನೆಗೆ ಬೀಗ ಹಾಕಿಕೊಂಡು ಬಂದಿದ್ದ. ಇದರಿಂದ ಅವರು ಹೊರಬರಲು ಸಾಧ್ಯವಾಗಿಲ್ಲ. ಘಟನೆಯಲ್ಲಿ ಒಟ್ಟು ಐವರು ತೀರಿಕೊಂಡಿದ್ದಾರೆ” ಎಂದರು.
“ಇದೊಂದು ದುರದೃಷ್ಟಕರ ಘಟನೆ. ಈ ರೀತಿ ಆಗಬಾರದಾಗಿತ್ತು. ಚಿಕ್ಕ ಜಾಗದಲ್ಲಿ ನಾಲ್ಕೈದು ಮಹಡಿಯ ಕಟ್ಟಡಗಳನ್ನು ಕಟ್ಟಿದ್ದಾರೆ. ಈ ಭಾಗದಲ್ಲಿ ಸಾವಿರಾರು ಬಿಲ್ಡಿಂಗ್‌ಗಳು ಇದೇ ರೀತಿ ಇವೆ. ಈ ಬಗ್ಗೆ ಬಿಬಿಎಂಪಿ ಯವರು ಗಮನಹರಿಸಬೇಕು. ಟ್ರೇಡ್ ಲೈಸೆನ್ಸ್ ಕೊಡುವವರು ಬಿಬಿಎಂಪಿಯವರು. ಇಂತಹ ಅವಘಡಗಳಾದ ನಮಗೆ ಗೊತ್ತಾಗುತ್ತದೆ. ಬಹುತೇಕರು ಗೋಡನ್ ರೀತಿ ಮಾಡಿಕೊಂಡು, ಅಲ್ಲೇ ವಾಸವಿದ್ದಾರೆ” ಎಂದು ಹೇಳಿದರು.

ದುರಂತ ಸ್ಥಳಕ್ಕೆ ಜಮೀರ್ ಅಹಮದ್ ಖಾನ್ ಭೇಟಿ
ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು ವಿಲ್ಸನ್ ಗಾರ್ಡನ್ ನ ಚಿನ್ನಯ್ಯನ ಪಾಳ್ಯದಲ್ಲಿ ಸಿಲಿಂಡರ್ ಸ್ಫೋಟ ಗೊಂಡು ದುರಂತ ನಡೆದ ಸ್ಥಳ ಹಾಗೂ ನಗರ್ತಪೇಟೆಯಲ್ಲಿ ಅಗ್ನಿ ಅವಘಡ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿ ವೈಯಕ್ತಿಕ ವಾಗಿ ಪರಿಹಾರ ನೀಡಿದರು.
ವಿಲ್ಸನ್ ಗಾರ್ಡನ್ ಚೆನ್ನಯ್ಯನ ಪಾಳ್ಯದಲ್ಲಿ ಸಿಲಿಂಡರ್ ಸ್ಫೋಟ ಸಂಭವಿಸಿ ಮನೆಗಳು ಹಾನಿ ಯಾದ ಸ್ಥಳಕ್ಕೆ ಭೇಟಿ ನೀಡಿ ಮೃತ ಬಾಲಕನ ಕುಟುಂಬಕ್ಕೆ ಐದು ಲಕ್ಷ ರೂ., ತಾಯಿ-ಮಗಳು ಗಾಯಳು ಕುಟುಂಬಕ್ಕೆ ಎರಡು ಲಕ್ಷ ರೂ., ಇಬ್ಬರು ಗಾಯಾಳು ಕುಟುಂಬಕ್ಕೆ ಎರಡು ಲಕ್ಷ ಹಾಗೂ ಸಣ್ಣ ಪುಟ್ಟ ಗಾಯಗೊಂಡವರಿಗೆ ತಲಾ 25 ಸಾವಿರ ರೂ. ನೀಡಿದರು. ಕೆ ಎಂ ಡಿಸಿ ಅಧ್ಯಕ್ಷ ಅಲ್ತಾಫ್ ಖಾನ್ ಉಪಸ್ಥಿತರಿದ್ದರು.
ನಂತರ ಬೆಂಗಳೂರು ನಗರ್ತ ಪೇಟೆಯಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕ ನಡೆದ ಸ್ಥಳಕ್ಕೆ ಭೇಟಿ ನೀಡಿದ ಸಚಿವರೂ ಮೃತರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ಮದನ್, ಸುರೇಶ್ ಕುಟುಂಬಕ್ಕೆ ವೈಯಕ್ತಿಕವಾಗಿ ತಲಾ ಐದು ಲಕ್ಷ ರೂ. ಪರಿಹಾರ ನೀಡುವುದಾಗಿ ತಿಳಿಸಿದರು. ಮುಖಂಡ ಯುವರಾಜ್ ಉಪಸ್ಥಿತರಿದ್ದರು.