ದಾವಣಗೆರೆ ತಾಲೂಕಿನ ಕುರ್ಕಿ ಬಳಿ ಹಾದುಹೋಗಿರುವ ಭದ್ರಾ ನಾಲೆಯ ಸೇತುವೆ ಕುಸಿದ ಘಟನಾ ಸ್ಥಳಕ್ಕೆ ಶಾಸಕ ಕೆ.ಎಸ್. ಬಸವಂತಪ್ಪ ಇಂಜಿನಿಯರ್ ಗಳೊಂದಿಗೆ ಭೇಟಿ ಪರಿಶೀಲನೆ ನಡೆಸಿ ಹೊಸ ಸೇತುವೆ ನಿರ್ಮಾಣ ಮಾಡುವವರೆಗೆ ತಾತ್ಕಾಲಿಕ ದುರಸ್ತಿಗೊಳಿಸಲು, ಉತ್ತಮ ಮಳೆ, ಹವಾಮಾನ ಹಿನ್ನೆಲೆಯಲ್ಲಿ ಭತ್ತದ ನಾಟಿ ಕಾರ್ಯ ನಡೆಯುತ್ತಿದ್ದು, ರೈತರಿಗೆ ನೀರಿನ ಕೊರತೆ ಉಂಟಾಗದಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ, ಇಂಜಿನಿಯರ್ಗಳಿಗೆ ಸೂಚನೆ ನೀಡಿದರು.

ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಕುರ್ಕಿ ಬಳಿ ಹಾದು ಹೋಗಿರುವ ಭದ್ರಾ ಮುಖ್ಯ ನಾಲೆಯ ಸೇತುವೆ ನಿರಂತರವಾಗಿ ಸುರಿದ ಮಳೆಯಿಂದಾಗಿ ಕುಸಿದು ಬಿದ್ದಿರುವ ಘಟನಾ ಸ್ಥಳಕ್ಕೆ ಶನಿವಾರ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗುರುವಾರ ಸೇತುವೆ ಕುಸಿದು ಬಿದ್ದ ಸಂದರ್ಭದಲ್ಲಿ ಶಾಸಕ ಕೆ.ಎಸ್.ಬಸವಂತಪ್ಪ ಮುಂಗಾರು ಅಧಿವೇಶನದಲ್ಲಿ ಭಾಗವಹಿಸಿದ್ದರಿಂದ ಇಂದು ಇಂಜಿನಿಯರ್ ಗಳ ಜೊತೆಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ, “3.50 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಮಳೆಗಾಲ ಮುಗಿಯುವವರೆಗೆ ತಾತ್ಕಾಲಿಕವಾಗಿ ತುರ್ತು ದುರಸ್ತಿಗೊಳಿಸಿ ನೀರು ಪೋಲಾಗದಂತೆ ತಡೆಯಬೇಕು” ಎಂದು ಇಂಜಿನಿಯರ್ ಗೆ ಸೂಚನೆ ನೀಡಿದರು.

“ಸುಮಾರು 69 ವರ್ಷಗಳ ಹಿಂದೆ ಸೇತುವೆ ನಿರ್ಮಾಣ ಮಾಡಲಾಗಿದೆ. ಅಲ್ಲದೇ ಮಾಯಕೊಂಡ ಕ್ಷೇತ್ರದ ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಸೇತುವೆಗಳು, ಕಾಲುವೆಗಳು ಶಿಥಿಲಗೊಂಡಿದ್ದು, ಈ ಬಗ್ಗೆ ಹಿಂದಿನ ಅಧಿವೇಶನಗಳಲ್ಲಿ ಸೇತುವೆಗಳು, ಕಾಲುವೆಗಳನ್ನು ಹೊಸದಾಗಿ ನಿರ್ಮಾಣ ಮಾಡುವಂತೆ ಸಾಕಷ್ಟು ಬಾರಿ ಪ್ರಸ್ತಾಪ ಮಾಡಿ ಸರ್ಕಾರದ ಮೇಲೆ ಒತ್ತಡ ಹಾಕಲಾಗಿತ್ತು. ಮುಖ್ಯಮಂತ್ರಿಗಳು ಮತ್ತು ಜಲಸಂಪನ್ಮೂಲ ಸಚಿವರು ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಶಿಥಿಲಗೊಂಡ ಕಾಲುವೆ, ಸೇತುವೆಗಳನ್ನು ನಿರ್ಮಾಣ ಮಾಡಲು ಕ್ರಮ ತೆಗೆದುಕೊಂಡಿದ್ದಾರೆ. ಮುಂದಿನ ಬೇಸಿಗೆಯಲ್ಲಿ ಹಂತ ಹಂತವಾಗಿ ಅಭಿವೃದ್ಧಿಗೊಳಿಸಲಾಗುವುದು” ಎಂದು ಭರವಸೆ ನೀಡಿದರು.

“ಉತ್ತಮ ಮಳೆ ಹವಾಮಾನದಿಂದಾಗಿ ಈಗಾಗಲೇ ರೈತರು ಭತ್ತದ ನಾಟಿಯಲ್ಲಿ ತೊಡಗಿದ್ದು, ಈ ಸಂದರ್ಭದಲ್ಲಿ ರೈತರಿಗೆ ನೀರಿನ ತೊಂದರೆ ಆಗಬಾರದು. ಕೂಡಲೇ ಕುಸಿದು ಬಿದ್ದ ಸೇತುವೆಯನ್ನು ತಾತ್ಕಾಲಿಕವಾಗಿ ದುರಸ್ತಿಗೊಳಿಸಿ ರೈತರಿಗೆ ನೆರವಾಗಬೇಕು” ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸ್ವಾತಂತ್ರ್ಯೋತ್ಸವ ದಿನ ಒಳಮೀಸಲಾತಿ ವಿಳಂಬ ವಿರೋಧಿಸಿ ಕಪ್ಪು ಬಟ್ಟೆ ಧರಿಸಿ ಆಕ್ರೋಶ; ದಲಿತ ಮುಖಂಡರ ಬಂಧನ
ಈ ಸಂದರ್ಭದಲ್ಲಿ ನೀರಾವರಿ ಇಲಾಖೆಯ ಎಇಇ ವಿಕಾಸ್, ನೀರಾವರಿ ಇಲಾಖೆ ಎಂಜಿನಿಯರ್ ಮನೋಜ್, ಪರಮೇಶ್ವರಪ್ಪ, ಮುಖಂಡರಾದ ಗ್ರಾ ಪಂ ಸದಸ್ಯ ನಂದೀಶ್, ಕೃಷ್ಣಮೂರ್ತಿ, ನಟರಾಜ್, ಜಿಲ್ಲಾ ಹಿರಿಯ ಕಾಂಗ್ರೆಸ್ ಉಪಾಧ್ಯಕ್ಷರಾದ ಡಿ ತಿಪ್ಪಣ್ಣ,ರೈತ ಮುಖಂಡರುಗಳು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹಾಜರಿದ್ದರು.