ಬೀದರ್ ಜಿಲ್ಲಾದ್ಯಂತ ಕಳೆದ ಎರಡು ದಿನಗಳಿಂದ ಆಗೊಮ್ಮೆ ಈಗೊಮ್ಮೆ ಎನ್ನುವಂತೆ ದಿನವಿಡಿ ಮಳೆ ಬರುತ್ತಿದ್ದು, ಹೊಲಗಳಲ್ಲಿ ಮಳೆ ನೀರು ನಿಂತು ಬೆಳೆ ಹಾನಿಯಾಗುವ ಆತಂಕ ರೈತರಲ್ಲಿ ಶುರುವಾಗಿದೆ. ಇದೇ ರೀತಿ ಮಳೆ ಮುಂದುವರಿದರೆ ಬೆಳೆ ಹಾನಿಯಾಗುವ ಭೀತಿ ಎದುರಾಗಿದೆ.
ಸತತ ಸುರಿಯುತ್ತಿರುವ ಮಳೆಯಿಂದ ತಗ್ಗು ಪ್ರದೇಶದಲ್ಲಿ ಇರುವ ಹೊಲಗಳಲ್ಲಿ ಮಳೆ ನೀರು ನಿಂತಿದೆ. ಹೆಸರು, ಉದ್ದು, ತೊಗರಿ ಸೇರಿದಂತೆ ಕಬ್ಬು ತೋಟಗಾರಿಕೆ ಬೆಳೆಗಳು ನೀರಿನಲ್ಲಿ ಮುಳುಗುತ್ತಿವೆ. ಬಿತ್ತನೆಯಾದ ಕೆಲ ದಿನಗಳ ವೇಳೆ ಮಳೆ ಬಾರದಕ್ಕೆ ರೈತರು ಎದುರು ನೋಡುತ್ತಿದ್ದರು. ಇದೀಗ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಬೆಳೆಗಳು ಹಚ್ಚಹಸಿರಿನಿಂದ ನಳನಳಿಸುವ ದೃಶ್ಯ ಒಂದು ಕಡೆಯಾದರೆ, ಬೆಳೆ ಹಾನಿಯ ಚಿಂತೆ ಮತ್ತೊಂದೆಡೆ ರೈತರನ್ನು ಕಾಡುತ್ತಿದೆ.

ಬಿಡುವು ನೀಡದ ಮಳೆಯಿಂದ ರೈತರ ಕೃಷಿ ಚಟುವಟಿಕೆ ಸ್ತಬ್ಧಗೊಂಡಿವೆ. ಹೆಸರು ಮತ್ತು ಉದ್ದು ಬೆಳೆಗಳಿಗೆ ಕೀಟಗಳ ಹಾವಳಿ ನಿಯಂತ್ರಣಕ್ಕೆಂದು ಕೀಟನಾಶಕ ಸಿಂಪಡಿಸುವ ಕೆಲಸ ನಿಂತಿದೆ. ಕೆಲವೆಡೆ ಹೆಸರು ಕಟಾವಿಗೆ ಬಂದರೆ, ಇನ್ನೂ ಹಲವು ಕಡೆ ಕಾಯಿಯಾಗಿರುವ ಹಂತದಲ್ಲಿದೆ.
ಭಾರಿ ಮಳೆ ಬರುತ್ತಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಹೊಲಗಳಲ್ಲಿ ತೇವಾಂಶ ಅಧಿಕಗೊಂಡು ಕೆಸರು ಗದ್ದೆಯಾಗಿ ಮಾರ್ಪಟ್ಟಿವೆ. ನದಿ, ಜಲಾಶಯ, ಕೆರೆ, ಹಳ್ಳಕೊಳ್ಳಗಳು ಮೈದುಂಬಿ ಹರಿಯುತ್ತಿವೆ.
ಇದನ್ನೂ ಓದಿ : ಬೀದರ್ | ಅಂಗವಿಕಲ ಸಹೋದರಿಯರಿಗೆ ಕೆಎಲ್‌ಇ ಸೊಸೈಟಿಯಿಂದ ʼಸಹಾಯ ಹಸ್ತʼ
‘ಕಾರಂಜಾ ಜಲಾಶಯ ಹರಿವು ಹೆಚ್ಚಾದ ಹಿನ್ನೆಲೆ ನೀರು ಹರಿಸಲಾಗುತ್ತಿದ್ದು, ಇದರಿಂದ ಜೋಳದಾಬಕಾ, ಗೋಧಿ ಹಿಪ್ಪರಗಾ ಸೇರಿದಂತೆ ವಿವಿಧೆಡೆ ಜಮೀನುಗಳಲ್ಲಿ ನೀರು ಸಂಗ್ರಹವಾಗಿದೆ. ಸರ್ಕಾರ ಶೀಘ್ರ ಸಮೀಕ್ಷೆ ನಡೆಸಿ ಬೆಳೆ ಪರಿಹಾರ ನೀಡಲು ಕ್ರಮಕೈಗೊಳ್ಳಬೇಕು’ ಎಂದು ಭಾಲ್ಕಿ ತಾಲೂಕಿನ ರೈತ ಸಿದ್ದು ಜಮಾದರ ಆಗ್ರಹಿಸಿದ್ದಾರೆ.