ಚುನಾವಣಾ ಪಟ್ಟಿಗಳನ್ನು ನಿಖರವಾಗಿಡಲು ಒಂದು ಆಡಳಿತಾತ್ಮಕ ಸಾಧನವಾಗಬೇಕಿದ್ದ ಮತ್ತು ಮತದಾರರ ಸೇರ್ಪಡೆ ಅಥವಾ ಅಳಿಸುವಿಕೆಗೆ ಆಕ್ಷೇಪಣೆ ಸಲ್ಲಿಸಲು ಬಳಸಲಾಗುವ ಫಾರ್ಮ್ 7- ಈಗ ಬಡವರನ್ನು ಪ್ರಜಾಪ್ರಭುತ್ವ/ಚುನಾವಣಾ ಪ್ರಕ್ರಿಯೆಯ ಭಾಗವಹಿಸುವಿಕೆಯಿಂದ ಹೊರಗಿಡುವ ಯಂತ್ರವಾಗಿ ಮಾರ್ಪಡಿಸಲಾಗಿದೆ.
ಅಮೆರಿಕ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಆಂಟನಿನ್ ಸ್ಕೇಲಿಯಾ ಅವರು ಪದೇ ಪದೆ ಒತ್ತಿಹೇಳಿದ್ದ ಒಂದು ಮಾತಿದೆ. ಅದು: ‘ಅಧಿಕಾರ ವಿಭಜನೆಯು ಸಂವಿಧಾನದ ಅತ್ಯಂತ ಪರಿಣಾಮಕಾರಿ ರಕ್ಷಣಾ ಕವಚವಾಗಿದೆ. ಇದು ದಬ್ಬಾಳಿಕೆಯನ್ನು ತಡೆಯುತ್ತದೆ. ಸಂವಿಧಾನವು ಅಧಿಕಾರಿಗಳ ಒಳ್ಳೆಯ ಉದ್ದೇಶಗಳ ಮೇಲೆ ಮಾತ್ರವೇ ಅವಲಂಬಿತವಾಗಿಲ್ಲ. ಬದಲಾಗಿ, ಅಧಿಕಾರದ ದುರ್ಬಳಕೆಯನ್ನು ತಡೆಯಲು ವಿವಿಧ ಸ್ತರಗಳಲ್ಲಿ ಅಧಿಕಾರ ವಿಭಜನೆಗೂ ಒತ್ತುಕೊಡುತ್ತದೆ’ ಎಂದು ಅವರು ಹೇಳಿದ್ದರು.
ಅವರು ಈ ಮಾತನ್ನು ಹೇಳಿದ್ದು 1988ರಲ್ಲಿ. ಅಂದರೆ, 37 ವರ್ಷಗಳ ಹಿಂದೆ. ಈ ಅಧಿಕಾರ ವಿಭಜನೆಯನ್ನು ಭಾರತಕ್ಕೆ ಹೋಲಿಸಿದರೆ, ಭಾರತದಲ್ಲಿ ಅಧಿಕಾರವು ಗ್ರಾಮ ಪಂಚಾಯತಿಯಿಂದ ಕೇಂದ್ರ ಸರ್ಕಾರದವರೆಗೆ ವಿಕೇಂದ್ರೀಕರಣಗೊಂಡಿದೆ. ಆದರೆ, ವಿವಿಧ ಹಂತಗಳ ಸ್ಥಳೀಯ ಸಂಸ್ಥೆಗಳು ಸ್ವತಂತ್ರವಾಗಿ ಕೆಲಸ ಮಾಡುತ್ತಿವೆಯೇ? –ಇಲ್ಲ. ಪ್ರಸ್ತುತ ದಿನಗಳಲ್ಲಿ ಗ್ರಾಮ ಪಂಚಾಯತಿ ಮೇಲಿನ ನಿಯಂತ್ರಣವನ್ನೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹಿಡಿತ ಸಾಧಿಸಿದೆ. ಗ್ರಾಮ ಮಟ್ಟದಲ್ಲಿ ಏನು ಆಗಬೇಕು ಎಂಬುದನ್ನು ಕೇಂದ್ರ ಸರ್ಕಾರ ನಿರ್ಧರಿಸುತ್ತಿದೆ. ಹೀಗಾಗಿ, ಜನರು ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಅದರಲ್ಲೂ, ಕೊಳಗೇರಿಗಳಲ್ಲಿ ವಾಸಿಸುತ್ತಿರುವವರು ಮತ್ತು ಮುಸ್ಲಿಮರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.
ಕೊಳಗೇರಿಗಳನ್ನು ಧ್ವಂಸದಿಂದ ರಕ್ಷಿಸಲು ನಿರಂತರ ಹೋರಾಟಗಳನ್ನು ನಡೆಸಬೇಕಾಗಿದೆ. ತಮ್ಮ ಹಕ್ಕುಗಳು ಮತ್ತು ರಕ್ಷಣೆಗಾಗಿ ಕೊಳಗೇರಿ ನಿವಾಸಿಗಳು ದಿನನಿತ್ಯ ಹೋರಾಟ ನಡೆಸುತ್ತಲೇ ಇದ್ದಾರೆ. ಈಗ, ಒಂದು ಭಯಾನಕ ಮಾದರಿಯನ್ನು ಆಳುವವರು ಅನುಸರಿಸುತ್ತಿದ್ದಾರೆ. ಇದರ ಹಿಂದೆ ಒಂದು ಆಳವಾದ, ಹೆಚ್ಚು ಕೆಡುಕಾದ ಉದ್ದೇಶವಿದೆ. ಅದು, ಸಂವಿಧಾನದ 326ನೇ ವಿಧಿಯಡಿ ಭಾರತೀಯ ಪೌರರಿಗೆ ನೀಡಲಾಗಿರುವ ಮತದಾನದ ಸಾಂವಿಧಾನಿಕ ಹಕ್ಕನ್ನು ಕಿತ್ತುಕೊಳ್ಳುವ ಕ್ರೌರ್ಯ.
ಸೈದ್ಧಾಂತಿಕವಾಗಿ, 326ನೇ ವಿಧಿಯಡಿಯ ವಯಸ್ಕರ ಸಾರ್ವತ್ರಿಕ ಮತದಾನವು ಮತದಾರರ ವಸತಿ ಪರಿಸ್ಥಿತಿಯಿಂದ ಹೊರಗಿದೆ. ಭಾರತೀಯ ಪೌರರು ಕೋಟೆಯಲ್ಲಿ ವಾಸಿಸುತ್ತಿರಲಿ, ಜೈಲಿನಲ್ಲಿ ಇರಲಿ, ವಸತಿ ರಹಿತನೇ ಆಗಿರಲಿ ಅಥವಾ ಕೋಟ್ಯಾಧಿಪತಿಯೇ ಆಗಿರಲಿ, ಅವರ ವಯಸ್ಸು 18 ವರ್ಷ ದಾಟಿದ್ದರೆ, ಅವರು ಮತದಾನ ಮಾಡುವ ಹಕ್ಕನ್ನು ಹೊಂದಿರುತ್ತಾರೆ. ಮತದಾನ ಹಕ್ಕು ಪಡೆಯಲು ಅವರು ಎಲ್ಲಿ (ಮನೆ) ವಾಸಿಸುತ್ತಿದ್ದಾರೆ ಎಂಬುದು ಮುಖ್ಯವಲ್ಲ.
1950ರ ಜನಪ್ರತಿನಿಧಿಗಳ ಕಾಯಿದೆ(ಆರ್‌ಪಿ ಕಾಯಿದೆ)ಯ 19ನೇ ವಿಧಿಯಡಿ, ಮತದಾರರಿಗೆ ಮತದಾರ ಗುರುತಿನ ಚೀಟಿ ಪಡೆಯಲು ‘ಸಾಮಾನ್ಯ ವಿಳಾಸ’ದ ದಾಖಲೆ ಮಾತ್ರ ಅಗತ್ಯವಿರುತ್ತದೆ. ಈ ಸಾಮಾನ್ಯ ವಿಳಾಸವು ಅವರು ಯಾವ ಕ್ಷೇತ್ರದಲ್ಲಿ ಮತದಾನಕ್ಕೆ ಅರ್ಹರು ಎಂಬುದನ್ನು ನಿರ್ಧರಿಸುತ್ತದೆ. 326ನೇ ವಿಧಿ ಅಡಿ ಮತದಾನದ ಹಕ್ಕು ನೀಡಲಾಗುತ್ತದೆ. ಆ ವ್ಯಕ್ತಿಯು ಸಂವಿಧಾನದ ಅಡಿಯಲ್ಲಿ ಅಥವಾ ಸೂಕ್ತ ಶಾಸಕಾಂಗದಿಂದ ರಚಿತವಾದ ಕಾನೂನಿನ ಅಡಿಯಲ್ಲಿ ಆತ ಭಾರತೀಯರಲ್ಲದಿದ್ದರೆ, ಮಾನಸಿಕ ಅಸ್ವಸ್ಥರಾಗಿದ್ದರೆ, ಕಾನೂನುಬಾಹಿರ ಚಟುವಟಿಕೆಯ ಆಧಾರದಲ್ಲಿ ಅನರ್ಹನಾಗಿದ್ದರೆ ಮಾತ್ರ ಅವರಿಗೆ ಮತದಾನದ ಹಕ್ಕು ನೀಡಲಾಗುವುದಿಲ್ಲ.
ಹೀಗಾಗಿ, ಚುನಾವಣಾ ಆಯೋಗವು, ‘ಎಕ್ಸ್’ನಲ್ಲಿ ಮಾಡಿದ್ದ ಪೋಸ್ಟ್‌ನಲ್ಲಿ: ”ಕ್ಷೇತ್ರ ಪರಿಶೀಲನೆಯ ಮೂಲಕ ವಸತಿರಹಿತ ಪೌರರನ್ನೂ ಮತದಾರರ ಪಟ್ಟಿಗೆ ಸೇರಿಸಿಕೊಳ್ಳಲಾಗುತ್ತದೆ” ಎಂದು ಸ್ಪಷ್ಟಪಡಿಸಿತ್ತು. ಆದರೆ, ಈಗ ವಾಸ್ತವದಲ್ಲಿ, ಈ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ವಸತಿ ದಾಖಲೆಗಳನ್ನು ತೋರಿಸದ ಪೌರರ ಮತದಾನದ ಹಕ್ಕನ್ನು ಬೂತ್ ಲೆವೆಲ್ ಅಧಿಕಾರಿಗಳು ಕಸಿದುಕೊಳ್ಳುತ್ತಿದ್ದಾರೆ.
ಆರ್‌ಪಿ ಕಾಯಿದೆಯ 21ನೇ ವಿಧಿ– ಚುನಾವಣಾ ರೋಲ್‌ಗಳನ್ನು ವಾರ್ಷಿಕವಾಗಿ ನವೀಕರಣ ಮಾಡಬೇಕು ಎಂಬುದನ್ನು ಕಡ್ಡಾಯಗೊಳಿಸುತ್ತದೆ. ಆದರೆ, 1960ರ ಮತದಾರರ ನೋಂದಣಿ ನಿಯಮಗಳಡಿ ಫಾರ್ಮ್ 7, ಮತದಾರರ ಸೇರ್ಪಡೆ ಅಥವಾ ಅಳಿಸುವಿಕೆಗೆ ಆಕ್ಷೇಪಣೆಗಳನ್ನು ನಿಯಂತ್ರಿಸುತ್ತದೆ. ಇದರಲ್ಲಿ ನಿಯಮ 19- ಸ್ವಾಭಾವಿಕ ನ್ಯಾಯವನ್ನು ಎತ್ತಿಹಿಡಿಯಲು ವಿಚಾರಣೆ ನಡೆಸಬೇಕೆಂದು ಸೂಚಿಸುತ್ತದೆ.
2010ರಲ್ಲಿ ದೆಹಲಿ ಹೈಕೋರ್ಟ್, ಸುದಾಮ ಸಿಂಗ್ v/s ದೆಹಲಿ ಎನ್‌ಸಿಟಿ ಸರ್ಕಾರ ಪ್ರಕರಣದ ಐತಿಹಾಸಿಕ ತೀರ್ಪಿನಲ್ಲಿ; ಪೂರ್ವ ಪುನರ್ವಸತಿಯಿಲ್ಲದ ಒಕ್ಕಲೆಬ್ಬಿಸುವಿಕೆಯು 21ನೇ ವಿಧಿಯ ಜೀವನ ಮತ್ತು ಘನತೆಯ ಖಾತರಿಯನ್ನು ಉಲ್ಲಂಘಿಸುತ್ತದೆ ಎಂದು ಹೇಳಿತ್ತು. ಅಂತೆಯೇ, ದೆಹಲಿ ಶೆಲ್ಟರ್ ಬೋರ್ಡ್‌ನ 2015ರ ಪುನರ್ವಸತಿ ನೀತಿಯು ವಸತಿ ಪ್ರದೇಶದಿಂದ ಜನರನ್ನು ಒಕ್ಕಲೆಬ್ಬಿಸುವ ಸಂದರ್ಭದಲ್ಲಿ ಸ್ಥಳೀಯ ಪುನರ್ವಸತಿ ಮತ್ತು ಸ್ಥಳಾಂತರವನ್ನು ಕಡ್ಡಾಯಗೊಳಿಸಿದೆ.
ಆದರೆ, ಇತ್ತೀಚೆಗೆ ದೆಹಲಿಯಲ್ಲಿ ನಡೆಯುತ್ತಿರುವ ಧ್ವಂಸ ಪ್ರಕರಣಗಳಲ್ಲಿ ‘ದೆಹಲಿ ಅಭಿವೃದ್ಧಿ ಪ್ರಾಧಿಕಾರ'(ಡಿಡಿಎ)ಯು ಯಾವುದೇ ಪುನರ್ವಸತಿ ಒದಗಿಸದೆ, ಬಡವರ ಮನೆಗಳನ್ನು ಧ್ವಂಸಗೊಳಿಸಿದೆ. ಮನೆ ಕಳೆದುಕೊಂಡವರು ಅಧಿಕಾರಿಗಳು ಕೇಳುವ ಎಲ್ಲ ದಾಖಲೆಗಳನ್ನು ಒದಗಿಸಿದರೆ, ಅವರಿಗೆ ದೆಹಲಿಯ ದೂರದ ಹೊರಭಾಗದ ಪ್ರದೇಶಗಳಲ್ಲಿ ಇಡಬ್ಲ್ಯೂಎಸ್ ಒದಗಿಸುವ ಫ್ಲಾಟ್‌ಗಳಲ್ಲಿ ಪರ್ಯಾಯ ವಸತಿ ಪಡೆಯಬಹುದು. ಇಲ್ಲಿ, ದೆಹಲಿಯ ಒಂದು ಭಾಗದ ಮತದಾರರ ಮನೆಗಳನ್ನು ಧ್ವಂಸಗೊಳಿಸಲಾಗಿದೆ. ಅವರು ಸ್ಥಳಾಂತರಗೊಂಡಿದ್ದಾರೆ ಎಂಬ ಆಧಾರದ ಮೇಲೆ ಚುನಾವಣಾ ಪಟ್ಟಿಯಿಂದ ಅವರನ್ನು ತೆಗೆದುಹಾಕಬಹುದು. ಆದರೆ, ಮತ್ತೆ ಅವರು ಮತದಾನದ ಹಕ್ಕು ಪಡೆಯುವುದು ಸುಲಭದ ಮಾತಲ್ಲ.
ಚುನಾವಣಾ ಪಟ್ಟಿಗಳನ್ನು ನಿಖರವಾಗಿಡಲು ಒಂದು ಆಡಳಿತಾತ್ಮಕ ಸಾಧನವಾಗಬೇಕಿದ್ದ ಮತ್ತು ಮತದಾರರ ಸೇರ್ಪಡೆ ಅಥವಾ ಅಳಿಸುವಿಕೆಗೆ ಆಕ್ಷೇಪಣೆ ಸಲ್ಲಿಸಲು ಬಳಸಲಾಗುವ ಫಾರ್ಮ್ 7- ಈಗ ಬಡವರನ್ನು ಪ್ರಜಾಪ್ರಭುತ್ವ/ಚುನಾವಣಾ ಪ್ರಕ್ರಿಯೆಯ ಭಾಗವಹಿಸುವಿಕೆಯಿಂದ ಹೊರಗಿಡುವ ಯಂತ್ರವಾಗಿ ಮಾರ್ಪಡಿಸಲಾಗಿದೆ.
ದೆಹಲಿಯ ಸುಂದರ್ ನರ್ಸರಿ ಬಳಿ 2023ರ ನವೆಂಬರ್‌ನಲ್ಲಿ ಅಲ್ಲಿನ ಪಾಲಿಕೆಯು ಕೊಳಗೇರಿಯನ್ನು ಧ್ವಂಸಗೊಳಿತು. ದೆಹಲಿ ಹೈಕೋರ್ಟ್‌ನ ಆದೇಶವನ್ನು ಉಲ್ಲೇಖಿಸಿ 1,000ಕ್ಕಿಂತ ಹೆಚ್ಚು ಕುಟುಂಬಗಳನ್ನು ಬೀದಿಗೆ ದೂಡಲಾಯಿತು. ಮನೆ ಕಳೆದುಕೊಂಡವರು 2006ರ ಜನವರಿ 1ರ ನಂತರ ಆ ಪ್ರದೇಶಕ್ಕೆ ಬಂದು ಅತಿಕ್ರಮಣ ಮಾಡಿ ಮನೆ ಕಟ್ಟಿಕೊಂಡಿದ್ದಾರೆ ಎಂದು ‘ದೆಹಲಿ ಅರ್ಬನ್ ಶೆಲ್ಟರ್ ಇಂಪ್ರೂವ್‌ಮೆಂಟ್ ಬೋರ್ಡ್’ ಸಲ್ಲಿಸಿದ ಗೂಗಲ್ ಮ್ಯಾಪ್ ಚಿತ್ರಗಳನ್ನು ಆಧರಿಸಿ ವಾದ ಮಂಡಿಸಲಾಗಿತ್ತು. ಆ ವಾದದ ಆಧಾರದ ಮೇಲೆ ಸ್ಥಳಾಂತರಕ್ಕೆ ಹೈಕೋರ್ಟ್ ಆದೇಶ ನೀಡಿತು.
ಈ ಧ್ವಂಸವನ್ನು ಕೆಲವರು ವಂಚನೆಯೆಂದು ವಾದಿಸಿದರು. ಮಾತ್ರವಲ್ಲದೆ, ಜಂಗ್‌ಪುರ ಕ್ಷೇತ್ರದ ಚುನಾವಣಾ ಪ್ರಕ್ರಿಯೆಯ ಮೇಲೂ ಪರಿಣಾಮ ಬೀರಿತು. ಸುಂದರ್ ನರ್ಸರಿ ಪ್ರದೇಶದಿಂದ ಹೊರಹಾಕಲ್ಪಟ್ಟ ಅನೇಕ ನಿವಾಸಿಗಳು 2024ರ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿದ್ದರು. ಆದರೆ, 2025ರ ದೆಹಲಿ ವಿಧಾನಸಭಾ ಚುನಾವಣೆಯಿಂದ ಅವರನ್ನು ಹೊರಗಿಡಲಾಯಿತು.
ಆರ್‌ಪಿ ಕಾಯಿದೆಯಡಿಯ ಫಾರ್ಮ್ 7ರ ದುರ್ಬಳಕೆಯೊಂದಿಗೆ, 628 ಮತದಾರರನ್ನು ಚುನಾವಣಾ ಪಟ್ಟಿಯಿಂದ ಕಿತ್ತುಹಾಕಲಾಯಿತು. ಮತದಾನದ ಹಕ್ಕನ್ನು ಕಳೆದುಕೊಂಡ ಬಡವರು, ತಮ್ಮ ಹಕ್ಕನ್ನು ಪಡೆಯಲು ಅಗತ್ಯ ಪ್ರಕ್ರಿಯೆಗಳನ್ನು ನಿರ್ವಹಿಸಲಾಗಲಿಲ್ಲ. ಈ ಪರಿಸ್ಥಿತಿಯನ್ನು ಆಳುವವರು/ಚುನಾವಣಾ ಅಧಿಕಾರಿಗಳು ದುರುಪಯೋಗ ಮಾಡಿಕೊಂಡರು. ಅವರನ್ನು ಧ್ವಂಸದ ನಂತರ ‘ಸ್ಥಳಾಂತರಗೊಂಡವರು’ ಎಂದು ಪಟ್ಟಿ ಮಾಡಲಾಯಿತು. ಆದರೆ, ಅವರೆಲ್ಲರೂ, ಹತ್ತಿರದ ಶಿಬಿರಗಳಲ್ಲಿಯೇ ಉಳಿದಿದ್ದರು.
ಆ ಕೊಳಗೇರಿಯ ನಿವಾಸಿಗಳು ಹಿಂದಿನ ಆಡಳಿತವನ್ನು (ದೆಹಲಿ ರಾಜ್ಯ ಸರ್ಕಾರ) ಬೆಂಬಲಿಸಿದ್ದಾರೆ ಎಂಬ ಗ್ರಹಿಕೆ ಇದೆ. ಈ ಬಾರಿಯೂ ಈ ನಿವಾಸಿಗಳು ಅವರನ್ನೇ ಬೆಂಬಲಿಸುತ್ತಾರೆ ಎಂಬ ಕಾರಣಕ್ಕಾಗಿ ಅವರನ್ನು ಮತದಾನದಿಂದ ಹೊರಗಿಡಲಾಯಿತು ಎಂಬ ಗಂಭೀರ ಆರೋಪಗಳಿವೆ. ಅಂದಹಾಗೆ, ಈ 628 ಬಡವರು ಮತದಾರರಾಗಿದ್ದ ಜಂಗ್‌ಪುರ ವಿಧಾನಸಭಾ ಕ್ಷೇತ್ರದಲ್ಲಿ, ಬಿಜೆಪಿಯ ತಾರ್ವಿಂದರ್ ಸಿಂಗ್ ಮಾರ್ವಾಹ್ ಕೇವಲ 675 ಮತಗಳಿಂದ ಎಎಪಿಯ ಮನೀಶ್ ಸಿಸೋಡಿಯಾ ವಿರುದ್ಧ ಗೆದ್ದರು. 628 ಮತ್ತು ಇತರರ ಮತಗಳ ಅಳಿಸುವಿಕೆಯು ಫಲಿತಾಂಶವನ್ನು ಬದಲಿಸಿತು ಎನ್ನಲಾಗಿದೆ.
ಅಂತೆಯೇ, 2023-24ರಲ್ಲಿ ಅಸ್ಸಾಂನಲ್ಲಿ ಮಿಯಾ ಮುಸ್ಲಿಮರನ್ನು ಗುರಿಯಾಗಿರಿಸಿಕೊಂಡು ಸಾವಿರಾರು ಬೆಂಗಾಲಿ ಭಾಷಿಕರನ್ನು (ಮುಸ್ಲಿಮರ ಸೇರಿದಂತೆ) ‘ಅತಿಕ್ರಮಣಕಾರರು’ ಎಂದು ಹಣೆಪಟ್ಟಿ ಕಟ್ಟಿ, ಅವರ ನಿವಾಸಗಳನ್ನು ಧ್ವಂಸಗೊಳಿಸಲಾಗಿದೆ.
2021 ಮತ್ತು 2023ರ ನಡುವೆ ಧಲ್‌ಪುರದಲ್ಲಿ, 2,000 ಕುಟುಂಬಗಳನ್ನು ಒಕ್ಕಲೆಬ್ಬಿಸಲಾಯಿತು. 2024ರಲ್ಲಿ, ಕಚುತಾಲಿಯಲ್ಲಿ 1,000 ಮತದಾರರು ಒಕ್ಕಲೆಬ್ಬಿಸಲಾಗಿದೆ. ಮಾತ್ರವಲ್ಲ, ಅವರನ್ನು ಮತದಾರ ಪಟ್ಟಿಯಿಂದಲೂ ಕಿತ್ತುಹಾಕಲಾಯಿತು. ಆದರೆ, ಈ ಜನರು ಅದೇ ವಿಧಾನಸಭಾ ಕ್ಷೇತ್ರದ ಮತ್ತೊಂದು ಪ್ರದೇಶದಲ್ಲಿಯೇ ನೆಲೆಸಿದ್ದರು. ಆದರೂ, ಅವರನ್ನು ಸ್ಥಳಾಂತರಗೊಂಡವರು ಎಂದು ಉಲ್ಲೇಖಿಸಿ ಪಟ್ಟಿಯಿಂದ ಹೊರಹಾಕಲಾಗಿದೆ ಎಂಬುದು ಗಮನಾರ್ಹ.
ಈ ವರ್ಷ (2025) ಧುಬ್ರಿಯಲ್ಲಿ, ಜುಲೈ 8ರಂದು ಮನೆಗಳನ್ನು ಧ್ವಂಸಗೊಳಿಸಲಾಯಿತು. ಈ ಬೆನ್ನಲ್ಲೇ, ಜುಲೈ 15ರಂದು ಚುನಾವಣಾ ಪಟ್ಟಿಯಿಂದ ಅವರ ಹೆಸರುಗಳನ್ನು ಅಳಿಸಿ ಹಾಕಲಾಯಿತು. ಅಂತೆಯೇ, ಗೋಲ್ಪಾರ ಮತ್ತು ನಲ್ಬಾರಿಯಲ್ಲಿಯೂ ಬಡ ಕೊಳಗೇರಿ/ಕೊಳಗೇರಿ/ಮುಸ್ಲಿಂ ನಿವಾಸಿಗಳನ್ನು ಒಕ್ಕಲೆಬ್ಬಿಸಲಾಗಿದೆ. ಅವರಿಗೆ ಪುನರ್ವಸತಿಯನ್ನೂ ನೀಡಲಾಗಿದೆ. ಮತದಾರ ಪಟ್ಟಿಯಿಂದಲೂ ಕಿತ್ತುಹಾಕಲಾಗಿದೆ. ಈಗ, ಅವರೆಲ್ಲೂ, ಪೌರತ್ವವನ್ನೂ ಕಳೆದುಕೊಳ್ಳಬಹುದಾದ ಆತಂಕದಲ್ಲಿದ್ದಾರೆ.
ಈ ಲೇಖನ ಓದಿದ್ದೀರಾ?: 1947 – ಅಂದು ಭಾರತವು ಸ್ವಾತಂತ್ರ್ಯ ಗಳಿಸಿತು; ಇಂದು ಜಾತ್ಯತೀತ ಸಂಸ್ಕೃತಿಯನ್ನು ಕಳೆದುಕೊಳ್ಳುತ್ತಿದೆ!
ಉತ್ತರ ಪ್ರದೇಶದ ಲಕ್ನೋದಲ್ಲಿರುವ ಅಕ್ಬರ್ ನಗರದಲ್ಲಿ 1,800 ಬಡ ಕುಟುಂಬಗಳ ಮನೆಗಳನ್ನು ಲಕ್ನೋ ಅಭಿವೃದ್ಧಿ ಪ್ರಾಧಿಕಾರವು 2024ರ ಜೂನ್‌ನಲ್ಲಿ ಧ್ವಂಸಗೊಳಿಸಿತು. ಅಲ್ಲಿದ್ದ 10,000 ನಿವಾಸಿಗಳನ್ನು (ಹೆಚ್ಚಿನವರು ಮುಸ್ಲಿಮರು) ಸ್ಥಳಾಂತರಗೊಳಿಸಿತು. ಇಲ್ಲಿದ್ದ ಬಹುಸಂಖ್ಯಾತರು ದೀರ್ಘಕಾಲದಿಂದ ಅಲ್ಲಿಯೇ ನೆಲೆಸಿದ್ದವರು. ವಿದ್ಯುತ್ ಬಿಲ್, ಮತದಾರ ಗುರುತಿನ ಚೀಟಿ, ಆಧಾರ್ ಕಾರ್ಡ್‌ಗಳನ್ನು ಹೊಂದಿದ್ದರು. ಆದರೂ, ಅವರನ್ನು ಎತ್ತಂಗಡಿ ಮಾಡಲಾಯಿತು. ಅವರೆಲ್ಲರನ್ನೂ, ಪ್ರವಾಹ ಪೀಡಿತ ಪ್ರದೇಶವಾದ ಶಕ್ತಿ ನಗರದ ಭಾಗಕ್ಕೆ ದೂಡಲಾಯಿತು.
ಪರ್ಯಾಯ ವಸತಿ ನೀಡಲಾಗಿದೆ ಎಂಬ ವಾದವನ್ನು ಗಮನಿಸಿದ ಸುಪ್ರೀಂ ಕೋರ್ಟ್, ಧ್ವಂಸ ಪ್ರಕ್ರಿಯೆಯನ್ನು ಎತ್ತಿಹಿಡಿಯಿತು. ಆದರೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಅಡಿಯಲ್ಲಿ ಪುನರ್ವಸತಿ ಒದಗಿಸಬೇಕೆಂದು ಆದೇಶಿಸಿತು. ಆದರೆ, ಈವರೆಗೆ ಅವರಿಗೆ ಮನೆಗಳು ದೊರೆತಿಲ್ಲ.
ಆದಾಗ್ಯೂ, ಸ್ಥಳಾಂತರದ ನೆಪದಲ್ಲಿ ಸಾವಿರಾರು ಮತದಾರರ ನೋಂದಣಿಯನ್ನು ರದ್ದುಗೊಳಿಸಲಾಗಿದೆ. ಈ ಸಾವಿರಾರು ಜನರು ಉತ್ತರ ಪ್ರದೇಶದಲ್ಲಿ ನಡೆಯಲಿರುವ 2027ರ ವಿಧಾನಸಭಾ ಚುನಾವಣೆಗಳಲ್ಲಿ ಮತದಾನದಿಂದ ಹೊರಬೀಳಲಿದ್ದಾರೆ.
ಈ ಬುಲ್ಡೋಜರ್ ಧ್ವಂಸಗಳು ಹೊಸ ನೀತಿಯ ಭಾಗವಾಗಿ ತೋರುತ್ತಿವೆ. ಇದು ಆಳುವವರಿಗೆ ಅನಾನುಕೂಲವೆಂದು ಕಾಣುವ ಮತದಾರರನ್ನು, ವಿಶೇಷವಾಗಿ ಬಡ ವರ್ಗಗಳ ಜನರನ್ನು ಸ್ಥಳಾಂತರಗೊಳಿಸಿ, ಅವರ ಸಾಮಾನ್ಯ ವಿಳಾಸವನ್ನು ಕಿತ್ತುಕೊಂಡು, ಫಾರ್ಮ್ 7ಅನ್ನು ದುರ್ಬಳಕೆ ಮಾಡಿ, ಅವರನ್ನು ಮತದಾನದಿಂದ ಹೊರಹಾಕಲಾಗುತ್ತಿದೆ.
ಇಲ್ಲಿ, ಎರಡು ಹಂತಗಳು ನಡೆಯುತ್ತಿವೆ. ಒಂದು, ಧ್ವಂಸಗೊಳಿಸಿ ಹೊರಹಾಕುವಿಕೆ. 2ನೇ ಹಂತದಲ್ಲಿ, ಮತದಾರ ಪಟ್ಟಿಯಿಂದ ಕಿತ್ತುಹಾಕುವಿಕೆ. ಇದು, 326ನೇ ವಿಧಿ ಒದಗಿಸಿರುವ ಸಾರ್ವತ್ರಿಕ ಮತದಾನದ ಹಕ್ಕನ್ನು ಉಲ್ಲಂಘಿಸುತ್ತದೆ. ಸಾಂವಿಧಾನಿಕ ನೈತಿಕತೆಗೆ ವಿರುದ್ಧವಾಗಿದೆ. ಆದರೂ, ನಗರ ಯೋಜನೆಯನ್ನು ಚುನಾವಣಾ ಸಾಧನವಾಗಿ ಶಸ್ತ್ರೀಕರಣಗೊಳಿಸಲಾಗಿದೆ.