ರಾಜ್ಯದಲ್ಲಿ ಅಧಿಕ ಮಳೆ : 4 ತಿಂಗಳಲ್ಲಿ 101 ಜನ, 843 ಜಾನುವಾರು ಸಾವು; 15 ಸಾವಿರ ಹೆಕ್ಟೇರ್‌ ಬೆಳೆ ಹಾನಿ

Date:

Advertisements

ರಾಜ್ಯದಲ್ಲಿ 2025ರ ಏಪ್ರಿಲ್ 1 ರಿಂದ ಆಗಸ್ಟ್‌ 1ರ ನಡುವೆ ಪೂರ್ವ ಮುಂಗಾರು ಹಾಗೂ ಮುಂಗಾರು ಅವಧಿಯಲ್ಲಿ ಅಧಿಕ ಮಳೆಯಾಗಿದ್ದು, ಮಳೆ ಸಂಬಂಧಿತ ಅನಾಹುತದಿಂದ ಒಟ್ಟು 101 ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಕಂದಾಯ ಇಲಾಖೆಯಿಂದ ʼಈದಿನ.ಕಾಮ್‌ʼ ಗೆ ದೊರೆತ ಮಾಹಿತಿ ಪ್ರಕಾರ 2025ರ ಏಪ್ರಿಲ್‌ 1 ರಿಂದ ಆಗಸ್ಟ್‌ 1 ರವರೆಗೆ ಅಧಿಕ ಮಳೆಯಿಂದಾಗಿ 101 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ ಸಿಡಿಲಿಗೆ 49 ಜನ ಬಲಿಯಾದರೆ, 17 ಮಂದಿ ನೀರಿನಲ್ಲಿ ಮುಳುಗಿ ಜೀವ ಕಳೆದುಕೊಂಡಿದ್ದಾರೆ.

ಇನ್ನು ಮನೆ ಕುಸಿತ, ವಿದ್ಯುತ್‌ ಅವಘಡ, ಭೂ ಕುಸಿತ, ಮರ ಬಿದ್ದು 35 ಜನರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಮಳೆ ಮೃತರ ಎಲ್ಲ ಕುಟುಂಬಗಳಿಗೆ ಈಗಾಗಲೇ ಪರಿಹಾರ ಪಾವತಿಸಲಾಗಿದೆ ಎಂದು ಕಂದಾಯ ಇಲಾಖೆ ಮಾಹಿತಿ ನೀಡಿದೆ

Advertisements

843 ಜಾನುವಾರು ಸಾವು, 5,174 ಮನೆಗಳಿಗೆ ಹಾನಿ :

ಮಳೆಯಿಂದಾಗಿ ಒಟ್ಟು 5,174 ಮನೆಗಳಿಗೆ ಹಾನಿಯಾಗಿದ್ದು, ಈ ಪೈಕಿ 294 ಮನೆಗಳು ಸಂಪೂರ್ಣ ಹಾನಿಗೀಡಾಗಿದ್ದು, 4,880 ಮನೆಗಳು ಭಾಗಶಃ ಹಾನಿಯಾಗಿವೆ. ಹಾನಿಗೀಡಾದ ಮನೆಗಳಿಗೆ ಮುಂಗಾರು ಹಂಗಾಮಿನಲ್ಲಿ ಸೂಚಿಸಿರುವಂತೆ ಈಗಾಗಲೇ ಒಟ್ಟು ₹1227.53 ಲಕ್ಷ ಪರಿಹಾರ ಮೊತ್ತ ಒದಗಿಸಲಾಗಿದೆ.

ಪೂರ್ವ ಮುಂಗಾರು ಅವಧಿಯಲ್ಲಿ ಬೆಳೆಯಲಾದ ವಿವಿಧ ಬೆಳೆಗಳು ಭಾರಿ ಮಳೆಯಿಂದಾಗಿ 20,244 ರೈತರ ಒಟ್ಟು 15,494 ಹೆಕ್ಟೇರ್‌ ಪ್ರದೇಶದ ಬೆಳೆ ಹಾನಿಯಾಗಿದ್ದು, ಈ ಪೈಕಿ 11,887 ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ ಬೆಳೆ ಹಾಗೂ 3,607 ತೋಟಗಾರಿಕಾ ಬೆಳೆ ಹಾನಿಯಾಗಿದೆ. ರಾಜ್ಯದ ದಕ್ಷಿಣ ಕನ್ನಡ (1,310), ಉತ್ತರ ಕನ್ನಡ (425), ಉಡುಪಿ (614) ಹಾಗೂ ಹಾಸನ (343) ಜಿಲ್ಲೆಗಳಲ್ಲಿ ಅಧಿಕ ಮಳೆಯಿಂದಾಗಿ ಹೆಚ್ಚು ಮನೆಗಳು ಹಾನಿಗೀಡಾದ ಬಗ್ಗೆ ವರದಿಯಾಗಿದೆ.

WhatsApp Image 2025 08 18 at 1.32.30 PM
ಬೀದರ್‌ ಜಿಲ್ಲೆಯ ಔರಾದ್‌ ತಾಲೂಕಿನಲ್ಲಿ ಸುರಿದ ಭಾರಿ ಮಳೆಯಿಂದ ಹಾನಿಗೀಡಾದ ಸೇತುವೆ, ಬೆಳೆ ಹಾನಿ ಪ್ರದೇಶಕ್ಕೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಭೇಟಿ ನೀಡಿ ಪರಿಶೀಲಿಸಿದರು.

2025ರ ಏಪ್ರಿಲ್‌ 1 ರಿಂದ ಆಗಸ್ಟ್‌ 6ತನಕ ಪೂರ್ವ ಮುಂಗಾರು ಹಾಗೂ ಮುಂಗಾರು ಅವಧಿಯಲ್ಲಿ ನಡೆಸ ಮಳೆ ಸಂಬಂಧಿತ ಅನಾಹುತದಿಂದ ಒಟ್ಟು 843 ಜಾನುವಾರು ಜೀವ ಕಳೆದುಕೊಂಡಿವೆ. ಈ ಪೈಕಿ ದೊಡ್ಡ ಜಾನುವಾರು 303 ಹಾಗೂ 540 ಸಣ್ಣ ಜಾನುವಾರು ಮೃತಪಟ್ಟಿವೆ. ಮೃತ ಜಾನುವಾರುಗಳ ಮಾಲೀಕರಿಗೆ ಇಲ್ಲಿಯವರೆಗೆ ಒಟ್ಟು ₹129.38 ಲಕ್ಷ ಪರಿಹಾರ ಪಾವತಿ ಮಾಡಲಾಗಿದೆ.

ಕಲ್ಯಾಣ ಕರ್ನಾಟಕ : ಸಿಡಿಲಿಗೆ 23 ಜನ ಸಾವು

ರಾಜ್ಯದಲ್ಲಿ ಕಳೆದ ಏಪ್ರಿಲ್‌ ತಿಂಗಳಿಂದ ಆಗಸ್ಟ್‌ ಮೊದಲ ವಾರದವರೆಗೆ ಬೇಸಿಗೆ ಹಾಗೂ ಪೂರ್ವ ಮುಂಗಾರು, ಮುಂಗಾರು ಅವಧಿಯಲ್ಲಿ ಸುರಿದ ಅಧಿಕ ಮಳೆಯಿಂದಾಗಿ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಹೆಚ್ಚು ಮಾನವ ಜೀವ ಹಾನಿ, ಜಾನುವಾರು ಜೀವ ಹಾನಿ ಹಾಗೂ ಕೃಷಿ ಬೆಳೆ ಹಾನಿಯಾಗಿರುವ ಬಗ್ಗೆ ವರದಿಯಾಗಿದ್ದು ಗಮನಾರ್ಹ ಸಂಗತಿ.

ಮಳೆ ಸಂಬಂಧಿತ ಅನಾಹುತದಿಂದ ರಾಜ್ಯದಲ್ಲಿ ಒಟ್ಟು 101 ಜನ ಮೃತಪಟ್ಟಿದ್ದಾರೆ. ಈ ಪೈಕಿ ಅತಿ ಹೆಚ್ಚು ಮೃತಪಟ್ಟಿರುವುದು ಬೆಳಗಾವಿ (13) ಹಾಗೂ ರಾಯಚೂರು (12). ಇನ್ನು ಒಟ್ಟು 101 ಮೃತರಲ್ಲಿ ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿಯೇ 35 ಜನ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಿಡಿಲಿನಿಂದ ಪ್ರಾಣ ಕಳೆದುಕೊಂಡ 49 ಜನರಲ್ಲಿ 23 ಜನ ಕಲ್ಯಾಣ ನಾಡಿನ ಜಿಲ್ಲೆಯವರೇ ಎಂಬುದು ಆತಂಕ ಮೂಡಿಸಿದೆ.

ಜಮೀನಿನಲ್ಲಿ ಕೃಷಿ ಕೆಲಸ, ಕುರಿ ಮೇಯಿಸಲು ಹೋದ ವೇಳೆ ಸಿಡಿಲು ಬಡಿದು ಐವತ್ತು ವರ್ಷ ಆಸುಪಾಸಿನ ಇಬ್ಬರು ಮಹಿಳೆಯರು ಮೃತಪಟ್ಟಿರುವ ಘಟನೆ ರಾಯಚೂರು ತಾಲೂಕಿನ ಉಡಮಗಲ್ ಹಾಗೂ ಮರ್ಚಾಟ್ಹಾಳ ಗ್ರಾಮದಲ್ಲಿ ಕಳೆದ ಏಪ್ರಿಲ್‌ ತಿಂಗಳಲ್ಲಿ ನಡೆದಿತು. ಹೊಲದಲ್ಲಿ ಇದ್ದ ವೇಳೆ ಸಂಜೆ ಬಡಿದ ಸಿಡಿಲಿಗೆ ಇಬ್ಬರು ರೈತರು ಬಲಿಯಾದ ಘಟನೆ ಏಪ್ರಿಲ್‌ ತಿಂಗಳಲ್ಲಿ ಕೊಪ್ಪಳದಲ್ಲಿ ನಡೆದಿತು. ಹೀಗೆ ಸಿಡಿಲಿಗೆ ಬಲಿಯಾಗುವುರಲ್ಲಿ ಬಹುತೇಕರು ಕೃಷಿಕರು, ಕೂಲಿಕಾರ್ಮಿಕರೇ ಆಗಿರುತ್ತಾರೆ.

ಕಳೆದ ನಾಲ್ಕು ತಿಂಗಳಲ್ಲಿ ಪ್ರಕೃತಿ ವಿಕೋಪದಿಂದ ರಾಜ್ಯದಲ್ಲಿ ಮೃತಪಟ್ಟಿರುವ ಒಟ್ಟು 843 ಜಾನುವಾರುಗಳಲ್ಲಿ ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ 418 ಜಾನುವಾರುಗಳ ಜೀವ ಹೋಗಿರುವುದು ವರದಿಯಾಗಿದೆ. ಅದೇ ಅವಧಿಯಲ್ಲಿ ಮಳೆಯಿಂದ ಹಾನಿಗೀಡಾದ ಒಟ್ಟು 5,174ರ ಪೈಕಿ ಕಲ್ಯಾಣ ಭಾಗದ ಜಿಲ್ಲೆಗಳಲ್ಲಿ 762 ಮನೆಗಳಿಗೆ ಹಾನಿಯಾಗಿದ್ದು, ಮನೆ ಕಳೆದುಕೊಂಡ ಕುಟುಂಬಸ್ಥರು ಆಸರೆ ಇಲ್ಲದೆ ಪರದಾಡುವಂತಾಗಿದೆ.

ಗುಡುಗು ಸಿಡಿಲು

ರಾಯಚೂರು, ಬೆಳಗಾವಿ ಹಾಗೂ ವಿಜಯಪುರ ಜಿಲ್ಲೆಯಲ್ಲಿ ಕಳೆದ ನಾಲ್ಕು ತಿಂಗಳಲ್ಲಿ ತಲಾ ಏಳು ಜನ ಮೃತಪಟ್ಟಿದ್ದಾರೆ. ನಂತರದ ಸ್ಥಾನದಲ್ಲಿ ವಿಜಯನಗರ (5), ಹಾವೇರಿ (5) ಹಾಗೂ ಕಲಬುರಗಿ (4) ಜಿಲ್ಲೆಗಳಿವೆ. ರಾಜ್ಯದಲ್ಲಿ ಪ್ರಕೃತಿ ವಿಕೋಪಕ್ಕೆ ಬಲಿಯಾದ ಒಟ್ಟು 843ರ ಪೈಕಿ ಸರಾಸರಿ ಶೇ 50ರಷ್ಟು ಅಂದರೆ 425 ಜಾನುವಾರು ಕಲ್ಯಾಣ ಕರ್ನಾಟಕ ಭಾಗದಲ್ಲಿ ವರದಿಯಾಗಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಅದರಲ್ಲೂ ಇಡೀ ರಾಜ್ಯದಲ್ಲಿ ಹೆಚ್ಚು ಜಾನುವಾರು ಪ್ರಾಣ ಕಳೆದುಕೊಂಡಿದ್ದು ಕೊಪ್ಪಳ (148) ಜಿಲ್ಲೆಯಲ್ಲಿ ಎಂಬುದು ಸರ್ಕಾರದ ಅಂಕಿ-ಅಂಶಗಳಿಂದ ಗೊತ್ತಾಗಿದೆ.

ʼಮಾನವ ಜೀವಹಾನಿ, ಜಾನುವಾರು, ಬೆಳೆ ಹಾನಿಗೆ ಸರ್ಕಾರಗಳು ಸಕಾಲಕ್ಕೆ ಪರಿಶೀಲನೆ ನಡೆಸಿ ಪರಿಹಾರ ಒದಗಿಸುವುದು ಅಗತ್ಯವಾಗಿದೆ. ಜೊತೆಗೆ ಇಂತಹ ಅವಘಡಗಳು ನಿಗದಿತ ಪ್ರದೇಶ, ಜಿಲ್ಲೆಗಳಲ್ಲಿಯೇ ಹೆಚ್ಚು ಘಟಿಸಿದೆ ಎಂಬುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಘಟನೆಗೆ ಮೂಲ ಕಾರಣ ಹುಡುಕಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ನಿರ್ಲಕ್ಷಿಸದೆ ಜನಪರ ಕಾಳಜಿಯೊಂದಿಗೆ ತಮ್ಮ ಜವಾಬ್ದಾರಿ ನಿಭಾಯಿಸಬೇಕುʼ ಎಂಬುದು ರೈತ ಮುಖಂಡರ ಅಭಿಪ್ರಾಯ.

ʼಕಲ್ಯಾಣʼದಲ್ಲೇ ಹೆಚ್ಚು ಬೆಳೆ ಹಾನಿ:

ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ರೈತರ ಬದುಕಿಗೆ ಕೃಷಿಯೇ ಪ್ರಧಾನ. ಇಲ್ಲಿನ ಕೆಲ ಜಿಲ್ಲೆಗಳಲ್ಲಿ ಸಿಮೆಂಟ್‌ ಕಾರ್ಖಾನೆಗಳು ಬಿಟ್ಟರೆ ಹೆಚ್ಚು ಜನರಿಗೆ ಉದ್ಯೋಗ ಒದಗಿಸಲು ಹೇಳಿಕೊಳ್ಳುವಂತಹ ಯಾವುದೇ ಬೃಹತ್‌ ಕಂಪನಿಗಳಿಲ್ಲ. ಹೀಗಾಗಿ ಕೆಲಸ ಅರಸಿ ಬೆಂಗಳೂರು, ಹೈದರಾಬಾದ್‌ ಸೇರಿದಂತೆ ನೆರೆಯ ಮಹಾರಾಷ್ಟ್ರದ ಜಿಲ್ಲೆಗಳಿಗೆ ವಲಸೆ ಹೋಗುವುದು ಈ ಪ್ರದೇಶದ ಜನರು ಅಧಿಕ ಸಂಖ್ಯೆಯಲ್ಲಿದ್ದಾರೆ ಎಂಬುದು ಅಲ್ಲಗಳೆಯುವಂತಿಲ್ಲ.

ಯಾದಗಿರಿ ಜಿಲ್ಲೆಯ ಸುರಪುರ, ಹುಣಸಗಿ, ಶಹಾಪುರ ಸೇರಿದಂತೆ ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ಹೆಚ್ಚು ನೀರಾವರಿ ಪ್ರದೇಶವಿದೆ. ಕಲಬುರಗಿ, ಬೀದರ್‌ ಜಿಲ್ಲೆಗಳಲ್ಲಿ ರೈತರು ಹೆಚ್ಚು ಮಳೆಯಾಶ್ರಿತ ಕೃಷಿ ಅಳವಡಿಸಿಕೊಂಡರೆ, ಯಾದಗಿರಿ, ರಾಯಚೂರು, ಕೊಪ್ಪಳ ಇತರೆ ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಬೇಸಿಗೆಯಲ್ಲೂ ವಿವಿಧ ಬೆಳೆ ಬೆಳೆಯುತ್ತಾರೆ. ಹೀಗಾಗಿ ಅತಿವೃಷ್ಟಿ-ಅನಾವೃಷ್ಟಿಯಿಂದ ಈ ಪ್ರದೇಶದ ರೈತರು ಬೆಳೆ ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ತುತ್ತಾಗುವುದು ಅನಿವಾರ್ಯ ಎಂಬಂತಾಗಿದೆ.

WhatsApp Image 2025 08 18 at 5.23.09 PM
ಅಧಿಕ ಮಳೆಯಿಂದ ಬೆಳೆ ಹೊಲದಲ್ಲಿ ನೀರು ನಿಂತಿರುವುದು.

ಈ ಬಾರಿಯೂ ಮಳೆಯಿಂದಾಗಿ ಪೂರ್ವ ಮುಂಗಾರು ಅವಧಿಯಲ್ಲಿ ಬೆಳೆ ಕೃಷಿ ಹಾಗೂ ತೋಟಗಾರಿಕೆಯ ಅಧಿಕ ಬೆಳೆ ಹಾನಿಯಾಗಿದ್ದು ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ. ಅದರಲ್ಲೂ ರಾಯಚೂರು (ಕೃಷಿ -5,690, ತೋಟಗಾರಿಕೆ-7), ಕೊಪ್ಪಳ ( ಕೃಷಿ -4,408, ತೋಟಗಾರಿಕೆ-329 ), ಯಾದಗಿರಿ (ಕೃಷಿ -1,123 ತೋಟಗಾರಿಕೆ-13) ಜಿಲ್ಲೆಗಳಲ್ಲಿ ಅತಿ ಹೆಚ್ಚು ಕೃಷಿ ಹಾಗೂ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಹೆಚ್ಚು ತೋಟಗಾರಿಕೆ ಬೆಳೆ ಹಾನಿಯಾಗಿದ್ದು ಕೋಲಾರ (1,502), ಬೀದರ್‌ (451), ಚಾಮರಾಜನಗರ (242) ಹಾಗೂ ಚಿತ್ರದುರ್ಗ (200) ಜಿಲ್ಲೆಯ ರೈತರದ್ದು.

ಕರ್ನಾಟಕ ಪ್ರಾಂತ ರೈತ ಸಂಘ ಕಲಬುರಗಿ ಜಿಲ್ಲಾಧ್ಯಕ್ಷ ಶರಣಪ್ಪಾ ಮಮಶೆಟ್ಟಿ ಮಾತನಾಡಿ, ʼಕಲ್ಯಾಣ ಕರ್ನಾಟಕ ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿ ಹೊಂದಿದೆ. ಈ ಭಾಗದ ರೈತರಿಗೆ ಕೃಷಿಯೇ ಬದುಕಿಗೆ ಮೂಲಧಾರ. ಈ ಭಾಗದಲ್ಲಿ ಹರಿಯುವ ಭೀಮಾ, ಕೃಷ್ಣ, ತುಂಗಾಭದ್ರ ಹಾಗೂ ಆಲಮಟ್ಟಿ ನದಿಗಳು ನೀರಾವರಿಗೆ ಪೂರಕವಾಗಿವೆ. ಪ್ರಕೃತಿ ವಿಕೋಪಕ್ಕೆ ಈ ಭಾಗದ ಜನರು ಹೆಚ್ಚು ಬಲಿಯಾಗುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿ. ಬೇರೆ ಭಾಗಕ್ಕೆ ಹೋಲಿಸಿದರೆ ಈ ಭಾಗದಲ್ಲಿ ಹೆಚ್ಚು ಜನರು ಸಿಡಿಲಿನಿಂದ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧ್ಯಯನ ನಡೆಸಬೇಕು. ರೈತರ ಆತ್ಮಹತ್ಯೆ ತಡೆಯಬೇಕಾದರೆ ಸರ್ಕಾರ ʼಸಾಲ ಋಣ ಮುಕ್ತ ಕಾಯ್ದೆʼ ಜಾರಿಗೊಳಿಸಬೇಕುʼ ಎಂದು ಆಗ್ರಹಿಸಿದರು.

ರಾಜ್ಯದಲ್ಲಿ 36 ಕಡೆ ಗುಡ್ಡ, ಭೂ ಕುಸಿತ :

ಪ್ರಸಕ್ತ ವರ್ಷದಲ್ಲಿ ಮಳೆ ಆರಂಭವಾದ ನಂತರ ರಾಜ್ಯದಲ್ಲಿ 36 ಕಡೆಗಳಲ್ಲಿ ಗುಡ್ಡ, ಭೂ ಕುಸಿತವಾಗಿದ್ದು, ಕುಸಿತಕ್ಕೆ ಕಾರಣಗಳೇನು ಎಂಬುದರ ಬಗ್ಗೆ ಅಧ್ಯಯನ ವರದಿಯನ್ನು ಕೇಂದ್ರ ಸರ್ಕಾರದ ಭೂ ಸರ್ವೇಕ್ಷಣ ಇಲಾಖೆಯಿಂದ ನಿರೀಕ್ಷಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ.

ಇದನ್ನೂ ಓದಿ : ರಾಜ್ಯದಲ್ಲಿ 31 ತಿಂಗಳಲ್ಲಿ 10,510 ಪೋಕ್ಸೋ ಪ್ರಕರಣ : 162 ಮಂದಿಗಷ್ಟೇ ಶಿಕ್ಷೆ!

ʼಬೆಳೆ ಹಾನಿಯ ಬಗ್ಗೆ ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಂದ ಜಂಟಿ ಸಮೀಕ್ಷೆ ಕಾರ್ಯ ಕೈಗೊಂಡು ಸಲ್ಲಿಸುವ ವರದಿ ಅನ್ವಯ ಪರಿಹಾರ ತಂತ್ರಾಂಶದಲ್ಲಿ ಅಳವಡಿಸಿದ ಬಳಿಕ ಅರ್ಹ ಫಲಾನುಭವಿಗಳಿಗೆ ಕೇಂದ್ರ ಸರ್ಕಾರದ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಹಾಗೂ ರಾಜ್ಯ ವಿಪತ್ತು ಪರಿಹಾರ ನಿಧಿಯನ್ನು ಫಲಾನುಭವಿಗಳ ಖಾತೆಗಳಿಗೆ ಆಯಾ ಜಿಲ್ಲಾಧಿಕಾರಿಗಳ ಹಂತದಲ್ಲಿಯೇ ನೇರ ವರ್ಗಾವಣೆ ಮೂಲಕ ಹಣ ಪಾವತಿಸುತ್ತಾರೆ. ಈವರೆಗೆ ಬೆಳೆ ಹಾನಿಯಾದ ರೈತರಿಗೆ ಒಟ್ಟು ₹2,193.01 ಲಕ್ಷ ಪರಿಹಾರ ಮೊತ್ತ ವಿತರಿಸಲಾಗಿದೆʼ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

WhatsApp Image 2025 02 06 at 11.55.32 e1738823214905
ಬಾಲಾಜಿ ಕುಂಬಾರ್
+ posts

ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025ಕ್ಕೆ ವಿಧಾನ ಪರಿಷತ್ತಿನಲ್ಲೂ ಅಂಗೀಕಾರ

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025 ಕ್ಕೆ ವಿಧಾನ ಪರಿಷತ್ತಿನಲ್ಲಿ...

ಸರ್ಕಾರಿ ಶಾಲೆಗಳನ್ನು ಮುಚ್ಚಿ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸರ್ಕಾರದಿಂದಲೇ ಷಡ್ಯಂತ್ರ: ಪ್ರೊ. ಮುರಿಗೆಪ್ಪ

"ತನ್ನ ಮೇಲಿನ ಭಾರವನ್ನು ಇಳಿಸಿಕೊಳ್ಳಲು ಸರ್ಕಾರಿ ಶಾಲೆಗಳನ್ನು ಮುಚ್ಚಿ ಖಾಸಗಿ ಶಾಲೆಗಳಿಗೆ...

Download Eedina App Android / iOS

X