ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ಒದಗಿಸುತ್ತಿರುವ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯು ಪ್ರತಿಷ್ಠಿತ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿರುವುದಾಗಿ ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಶಕ್ತಿ ಯೋಜನೆಯ ಅಡಿಯಲ್ಲಿ ಕಳೆದ ಎರಡು ವರ್ಷಗಳಲ್ಲಿ 500 ಕೋಟಿಗೂ ಹೆಚ್ಚು ಮಹಿಳೆಯರು ಪ್ರಯಾಣಿಸುವ ಮೂಲಕ ಈ ಯೋಜನೆಯ ಲಾಭ ಪಡೆದು ಪ್ರಯಾಣಿಸಿದ್ದಾರೆ. ಈ ಅಪಾರ ಯಶಸ್ಸಿನಿಂದಾಗಿ ಶಕ್ತಿ ಯೋಜನೆ “ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್” ನಲ್ಲಿ ಸ್ಥಾನ ಪಡೆದಿದೆ. ಶಕ್ತಿ ಯೋಜನೆ ರಾಜ್ಯದ ಆರ್ಥಿಕತೆ ಮತ್ತು ಮಹಿಳಾ ಸಬಲೀಕರಣಕ್ಕೆ ಕೊಡುಗೆ ನೀಡಿದೆ” ಎಂದು ತಿಳಿಸಿದ್ದಾರೆ.
ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಹಾಗೂ ಮಹಿಳಾ ಸಬಲೀಕರಣದ ದಿಟ್ಟ ಯೋಜನೆಯಾದ ಶಕ್ತಿ ಯೋಜನೆಯು Golden Book of World Records ನಲ್ಲಿ ಜೂನ್ 11, 2023ರಿಂದ ಜುಲೈ 25, 2025ರ ಅವಧಿಯಲ್ಲಿ ಐದು ಬಿಲಿಯನ್ , ನಲತ್ತೊಂಬತ್ತು ಮಿಲಿಯನ್, ನಾಲ್ಕು ನೂರ ಎಪ್ಪತ್ತಾರು ಸಾವಿರ, ನಾಲ್ಕು ನೂರ ಹದಿನಾರು ಮಹಿಳೆಯರು ಅಂದರೆ 500 ಕೋಟಿ ಮಹಿಳಾ ಪ್ರಯಾಣಿಕರ ಟಿಕೆಟ್ ಪ್ರಯಾಣವು ವಿಶ್ವ ದಾಖಲೆಯಲ್ಲಿ ಸ್ಥಾನ ಪಡೆದಿರುವುದಾಗಿ ತಿಳಿಸಿದ್ದಾರೆ.
ಶಕ್ತಿ ಯೋಜನೆಯು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಔದ್ಯೋಗಿಕವಾಗಿ ಮಹಿಳೆಯರನ್ನು ಸಬಲರನ್ನಾಗಿಸುತ್ತದೆ ಎಂದು ಬಲವಾಗಿ ನಂಬಿದ್ದವರು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು, ಮಾನ್ಯ ಉಪ ಮುಖ್ಯಮಂತ್ರಿ ಹಾಗೂ ಕೆ.ಪಿ.ಸಿ.ಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರು. ಈ ಚಾರಿತ್ರಿಕ ಸಾಧನೆಯು ಕೆ ಎಸ್ ಆರ್ ಟಿ ಸಿ, ಬಿ ಎಂ ಟಿ ಸಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಆಡಳಿತ ಮಂಡಳಿ, ಸಾರಿಗೆ ಸಂಸ್ಥೆಗಳ ಅಧ್ಯಕ್ಷರುಗಳು, ಉಪಾಧ್ಯಕ್ಷರುಗಳು, ಸಾರಿಗೆ ಇಲಾಖೆಯ ಕಾರ್ಯದರ್ಶಿ, ವ್ಯವಸ್ಥಾಪಕ ನಿರ್ದೇಶಕರುಗಳು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಸಮರ್ಪಿಸಲಾಗಿದೆ ಎಂದು ಸಾರಿಗೆ ಸಚಿವರು ತಿಳಿಸಿದ್ದಾರೆ.

ಸಮಸ್ತ ಸಿಬ್ಬಂದಿಗಳ ಪರಿಶ್ರಮ, ಕಾರ್ಯತತ್ಪರತೆ ಮತ್ತು ಪ್ರಾಮಾಣಿಕ ಸೇವೆ ಅನನ್ಯ, ಅಭಿನಂದನೀಯ. ಇದರೊಂದಿಗೆ ಕಾರ್ಮಿಕ ಮುಖಂಡರುಗಳ ಸಹಕಾರವನ್ನು ಮರೆಯುವಂತಿಲ್ಲ. ಅವರಿಗೆ ನನ್ನ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಶಕ್ತಿ ಯೋಜನೆಯ ಪ್ರಾರಂಭದಿಂದಲೂ ಬೆಂಬಲ,ಪ್ರೋತ್ಸಾಹ ಹಾಗೂ ಸಕಾರಾತ್ಮಕ ಬದಲಾವಣೆಗಳಿಗೆ ಸಲಹೆ ನೀಡುತ್ತಾ ಬಂದಿರುವ ಮಾಧ್ಯಮದವರಿಗೂ ಧನ್ಯವಾದಗಳು ಸಲ್ಲಿಸುವುದಾಗಿ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಸಾರಿಗೆ ಸಚಿವನಾಗಿ ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡ ಕೂಡಲೇ ದೇಶದಲ್ಲೇ ಪ್ರಪ್ರಥಮ ಬಾರಿಗೆ ಜಾರಿಗೆ ತಂದ ಗ್ಯಾರಂಟಿ ಯೋಜನೆಯಾದ ಶಕ್ತಿ ಯೋಜನೆಯು ಅತ್ಯಂತ ಸವಾಲಿನಿಂದ ಕೂಡಿದ್ದಾಗಿತ್ತು. ಕಳೆದ ಐದಾರು ವರುಷಗಳಲ್ಲಿ ಸಾರಿಗೆ ಸಂಸ್ಥೆಗಳಲ್ಲಿ ಹೊಸ ಬಸ್ಸುಗಳ ಸೇರ್ಪಡೆಯಾಗಿಲ್ಲ, ಹೊಸ ನೇಮಕಾತಿ ಆಗಿಲ್ಲ, ಸಾರಿಗೆ ಸಂಸ್ಥೆಗಳು ಸಾಲದ ಸುಳಿಯಲ್ಲಿದ್ದವು. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಒಂದು ತಂಡವಾಗಿ ಕರ್ತವ್ಯ ನಿರ್ವಹಿಸಿ ಶಕ್ತಿ ಯೋಜನೆಯನ್ನು ಯಶಸ್ವಿಯಾಗಿ ಮುನ್ನಡೆಸಿರುವುದು ನನಗೆ ವೈಯಕ್ತಿಕವಾಗಿ ಸಂತೃಪ್ತಿ ತಂದಿದೆ. ಈ ಎರಡು ವರುಷಗಳ ಶಕ್ತಿ ಯೋಜನೆಯ ಹಾದಿಯಲ್ಲಿ ಸಾರಿಗೆ ಸಂಸ್ಥೆಗಳಲ್ಲಿ 5800 ಹೊಸ ಬಸ್ಸುಗಳ ಸೇರ್ಪಡೆ, 10000 ಹೊಸ ನೇಮಕಾತಿ, ಸಾಲ ಪಾವತಿಸಲು ಸರ್ಕಾರದಿಂದ 2000 ಕೋಟಿ ಸಹಾಯ, ಸಾರಿಗೆ ಸಂಸ್ಥೆಗಳ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ ಇತರೆ ಅಮೂಲಾಗ್ರ ಬದಲಾವಣೆಗೆ ಕಾರಣವಾಗಿದೆ. ಸಾರಿಗೆ ಸಂಸ್ಥೆಗಳಲ್ಲಿ ಹತ್ತು ಹಲವು ಸವಾಲುಗಳಿದ್ದು, ಎಲ್ಲವನ್ನು ನಾನು ಇತ್ಯರ್ಥ ಪಡಿಸಲು ಸಾಧ್ಯವಿಲ್ಲ ಆದರೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದ್ದೇನೆ ಎಂದು ಸಾರಿಗೆ ಸಚಿವರು ಇದೇ ವೇಳೆ ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸೌಜನ್ಯ ಕೇಸ್‌ನಲ್ಲಿ ಮತ್ತೆಮತ್ತೆ ಸಂತೋಷ್ ರಾವ್‌ನನ್ನು ಎಳೆತಂದು ಯಾರನ್ನು ರಕ್ಷಿಸಲಾಗುತ್ತಿದೆ?
Beyond Free Rides- ಎಂಬ ಹೆಸರಿನಲ್ಲಿ Sustainable Mobility Network ರವರು ದೇಶದ 10 ನಗರಗಳಲ್ಲಿ ಮಹಿಳೆಯರಿಗೆ ನೀಡಲಾಗುತ್ತಿರುವ ಉಚಿತ ಬಸ್ ಪ್ರಯಾಣದ ಬಗ್ಗೆ ನಡೆಸಿರುವ ಅಧ್ಯಯನದ ವರದಿಯು ಬೆಂಗಳೂರಿನಲ್ಲಿ 23% ಮತ್ತು ಹುಬ್ಬಳ್ಳಿ-ಧಾರವಾಡದಲ್ಲಿ 21% ಮಹಿಳಾ ಉದ್ಯೋಗಿಗಳ ಸಂಖ್ಯೆಯು ಶಕ್ತಿ ಯೋಜನೆಯಿಂದ ಹೆಚ್ಚಳವಾಗಿದೆಯೆಂದು ತಿಳಿಸಿದೆ. ಇದರಿಂದ ರಾಜ್ಯದ ತಲಾ ಆದಾಯವು ಹೆಚ್ಚಳವಾಗಲು ಕಾರಣವಾಗಿದೆ. ವಿಶ್ವ ದಾಖಲೆಗೆ ಸೇರ್ಪಡೆಯಾದ ಶಕ್ತಿ ಯೋಜನೆಯಲ್ಲಿ ತೊಡಗಿಸಿಕೊಂಡ ಪ್ರತಿಯೊಬ್ಬರಿಗೂ ಇಂದು ಹೆಮ್ಮೆ ಮತ್ತು ಗೌರವ. ಶಕ್ತಿ ಯೋಜನೆಯನ್ನು ದೇಶದ ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರು, ಬದಲಾವಣೆಗಳೊಂದಿಗೆ ಜಾರಿಗೆ ತರಲಾಗುತ್ತಿರುವುದೇ ನಮ್ಮ ಸರ್ಕಾರದ ಶಕ್ತಿ ಯೋಜನೆಯ ಯಶಸ್ಸಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿ ಹೇಳಿಕೆ ನೀಡಿದ್ದಾರೆ.
