ಗಡ್ಡ ಕತ್ತರಿಸುವಂತೆ, ‘ಜೈ ಶ್ರೀ ರಾಮ್’ ಮತ್ತು ‘ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗುವಂತೆ ಒತ್ತಡ ಹೇರಿ ವೃದ್ದ ಮುಸ್ಲಿಂ ವ್ಯಕ್ತಿಯ ಮೇಲೆ ಮೂವರು ಕೋಮುವಾದಿಗಳ ಗುಂಪೊಂದು ಹಲ್ಲೆ ನಡೆಸಿದ ಘಟನೆ ಉತ್ತರಾಖಂಡದ ಪೌರಿ ಗಢವಾಲ್ ಜಿಲ್ಲೆಯ ಶ್ರೀನಗರದಲ್ಲಿ ಆಗಸ್ಟ್ 14ರಂದು ನಡೆದಿದೆ. 60 ವರ್ಷದ ರಿಜ್ವಾನ್ ಅಹಮ್ಮದ್ ಶ್ರೀನಗರದಲ್ಲಿ ರೈಲ್ವೇ ಹಳಿ ನಿರ್ಮಾಣದಲ್ಲಿ ಕೆಲಸ ಮಾಡುತ್ತಿದ್ದರು. ಆ ಸಂದರ್ಭ ಅಮಲಿನಲ್ಲಿದ್ದ ಅವರ ಮೂವರು ಸಹೋದ್ಯೋಗಿಗಳು ಅಹಮ್ಮದ್ ಅವರ ಗಡ್ಡವನ್ನು ಎಳೆಯುತ್ತಾ ಹಲ್ಲೆ ನಡೆಸಲು ಆರಂಭಿಸಿದ್ದಾರೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ಮೂವರು ಮಹಮ್ಮದ್ ಅವರ ಗಡ್ಡವನ್ನು ಎಳೆಯುತ್ತಾ ʼಮುಲ್ಲಾʼ, ʼಕಟ್ಟಾʼ ಎಂದು ನಿಂದಿಸುವುದು ಕಂಡು ಬಂದಿದೆ. ಸಾಲದ್ದಕ್ಕೆ ʼಜೈ ಶ್ರೀ ರಾಮ್ʼ ಮತ್ತು ʼಭಾರತ್ ಮಾತಾ ಕಿ ಜೈʼ ಎಂದು ಘೋಷಣೆ ಹಾಕುವಂತೆ ಒತ್ತಾಯಿಸುತ್ತಾ ʼಇದು ಹಿಂದೂಗಳ ಆಡಳಿತʼ ಎಂದು ಗಟ್ಟಿಯಾಗಿ ಘೋಷಣೆ ಕೂಗಿದ್ದಾರೆ. ಆರೋಪಿಗಳು ಕೊಡಲಿಯನ್ನು ತೆಗೆದುಕೊಂಡು ಅಹಮ್ಮದ್‌ನ ತಲೆಯನ್ನು ಕತ್ತರಿಸಲೂ ಮುಂದಾಗಿದ್ದಾರೆ.
ಇದನ್ನು ಓದಿದ್ದೀರಾ? ಮಸೀದಿ ಬಳಿ ಜೈ ಶ್ರೀರಾಮ್ ಕೂಗಿದರೆ ತಪ್ಪಲ್ಲ: ಕರ್ನಾಟಕ ಹೈಕೋರ್ಟ್
“ನನ್ನ ಮೇಲೆ ಹಲ್ಲೆಯಾಗಲು ನನ್ನ ಗಡ್ಡವೇ ಕಾರಣ. 2013ರ ಮುಜಾಫರ್‌ನಗರ ಗಲಭೆಗಳು ಇನ್ನೂ ಅವರ ಮನಸ್ಸಿನಲ್ಲಿವೆ ಎಂದು ಅನಿಸುತ್ತಿದೆ. ಆ ವ್ಯಕ್ತಿಗಳು ಬಜರಂಗದಳದವರಂತೆ ಕಂಡುಬಂದರು. ನಾನು ಕಳೆದ ಐದು ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದೇನೆ, ಆದರೆ ಈ ರೀತಿ ಘಟನೆಯನ್ನು ಹಿಂದೆ ಎಂದೂ ನಾನು ಎದುರಿಸಿರಲಿಲ್ಲ. ಸ್ಥಳೀಯ ಪ್ರದೇಶದಿಂದ ಒಬ್ಬ ಯುವಕ ಬಂದು ರಕ್ಷಿಸದೇ ಇದ್ದರೆ ಹಲ್ಲೆಕೋರರು ನನ್ನನ್ನು ಕೊಲ್ಲುತ್ತಿದ್ದರು” ಎಂದು ಸಂತ್ರಸ್ತ ಅಹಮ್ಮದ್ ಹೇಳಿಕೊಂಡಿದ್ದಾರೆ.
“ದುಷ್ಕರ್ಮಿಗಳು ನನ್ನನ್ನು ಕೊಂದು ಬಳಿಕ ನದಿಯಲ್ಲಿ ಎಸೆಯಲು ಸಂಚು ರೂಪಿಸಿದ್ದರು. ಹಾಗೊಂದು ವೇಳೆ ಆಗಿದ್ದರೆ ಯಾರಿಂದಲೂ ನನ್ನನ್ನು ರಕ್ಷಿಸಲು ಸಾಧ್ಯವಾಗುತ್ತಿರಲಿಲ್ಲ” ಎಂದು ತಮ್ಮ ಆತಂಕ ಹಂಚಿಕೊಂಡಿದ್ದಾರೆ.
ಘಟನೆಯ ವಿಡಿಯೋಗಳು ಎಲ್ಲೆಡೆ ಹರಿದಾಡಿದ ಬಳಿಕ ಉತ್ತರಾಖಂಡದ ಮುಸ್ಲಿಂ ಸೇವಾ ಸಂಘಟನಾ ಸಂಸ್ಥೆ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಅಹ್ಮದ್ ಅವರ ದೂರಿನ ಆಧಾರದ ಮೇಲೆ ಶ್ರೀನಗರ ಪೊಲೀಸ್ ಠಾಣೆಯಲ್ಲಿ ಹಲ್ಲೆಕೋರರಾದ ಮುಖೇಶ್ ಭಟ್, ಮನೀಶ್ ಬಿಷ್ಟ್, ಮತ್ತು ನವೀನ್ ಭಂಡಾರಿ ಅವರನ್ನು ಬಂಧಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 115(2), 196, 299, 351(2), ಮತ್ತು 352 ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ಈ ಮೂವರೂ ಆರೋಪಿಗಳು ಇದಕ್ಕೂ ಮೊದಲು ಮತ್ತೊಬ್ಬ ಮುಸ್ಲಿಂ ವ್ಯಕ್ತಿ ಮುಖ್ತಿಯಾರ್ ಅವರಿಗೆ ‘ಜೈ ಶ್ರೀ ರಾಮ್’ ಹೇಳುವಂತೆ ಬಲವಂತಪಡಿಸಿದ್ದರು. ಉತ್ತರಾಖಂಡ ಪೊಲೀಸರು ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಈ ಬಗ್ಗೆ ಹೇಳಿಕೆ ನೀಡಿದ್ದು, “ವೈರಲ್ ಆದ ವಿಡಿಯೋವನ್ನು ಸ್ವಯಂಪ್ರೇರಿತವಾಗಿ ಗಮನಿಸಿ, ಪೌರಿ ಜಿಲ್ಲೆಯ ಹಿರಿಯ ಪೊಲೀಸ್ ಅಧೀಕ್ಷಕ ಲೋಕೇಶ್ವರ್ ಸಿಂಗ್ ಅವರು ತಕ್ಷಣ ಕ್ರಮ ಕೈಗೊಳ್ಳಲು ಸೂಚಿಸಿದರು. ತಂಡವು ಹಲ್ಲೆಕೋರರನ್ನು ಬಂಧಿಸಿದೆ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ರಾಮಮಂದಿರ ಉದ್ಘಾಟನೆಯ ದಿನ ಜೈ ಶ್ರೀರಾಮ್ ಪಠಿಸಲು ಮುಸ್ಲಿಮರಿಗೆ ಆರ್‌ಎಸ್‌ಎಸ್ ನಾಯಕ ಮನವಿ
ಈ ಘಟನೆಯು ನಗರದಲ್ಲಿ ಆತಂಕ ಸೃಷ್ಟಿಸಿದ್ದು, ಕೋಮು ಸೌಹಾರ್ದತೆಯನ್ನು ಕದಡುವ ಪ್ರಯತ್ನಗಳಿಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಪೊಲೀಸರು ಸಾರ್ವಜನಿಕರಲ್ಲಿ ಯಾವುದೇ ಗಲಭೆಗಳಿಗೆ ಅವಕಾಶ ನೀಡದೆ ಶಾಂತಿ ಕಾಪಾಡುವಂತೆ ಸೂಚಿಸಿದ್ದಾರೆ.
ಉತ್ತರಪ್ರದೇಶದ ಮುಜಫರ್ ನಗರದಲ್ಲಿ ಮತೀಯವಾದಿ ಗಲಭೆಗಳು ನಡೆದು ಪ್ರಸಕ್ತ ಸಂದರ್ಭಕ್ಕೆ ಹನ್ನೆರಡು ವರ್ಷಗಳಾಯಿತು. 2013ರ ಆಗಸ್ಟ್ 24ರಂದು ಹಿಂದೂ ಮತ್ತು ಮುಸ್ಲಿಂ ನಡುವೆ ಕ್ಷುಲಕ ಕಾರಣಕ್ಕೆ ಆರಂಭವಾದ ಈ ಗಲಭೆ ತದನಂತರದಲ್ಲಿ ಧಾರ್ಮಿಕ ಬಣ್ಣವನ್ನು ಪಡೆದುಕೊಂಡು ನಿಯಂತ್ರಣವನ್ನು ಕಳೆದುಕೊಂಡಿತು.
ಈ ಘಟನೆಯಲ್ಲಿ ಒಟ್ಟು 162 ಮಂದಿ ಮೃತಪಟ್ಟಿದ್ದು ಅದರಲ್ಲಿ 10 ಮಂದಿ ಹಿಂದೂಗಳು ಹಾಗೂ 150 ಮಂದಿ ಮುಸ್ಲಿಂ ಸಮುದಾಯದವರಾಗಿದ್ದರು. ಮತ್ತು ಸಾವನ್ನಪ್ಪಿದ್ದ ಇಬ್ಬರ ಗುರುತನ್ನು ಪತ್ತೆಹಚ್ಚಲಾಗಿಲ್ಲ. ಏಳುನೂರಕ್ಕೂ ಅಧಿಕ ಜನರು ಗಾಯಗೊಂಡಿರುವುದು ಮಾತ್ರವಲ್ಲದೇ 50 ಸಾವಿರಕ್ಕೂ ಅಧಿಕ ಮಂದಿ ಮುಸ್ಲಿಮರು ಗಲಭೆ ಪ್ರದೇಶಗಳಿಂದ ಸ್ಥಳಾಂತರಗೊಂಡಿದ್ದಾರೆ.
ಸ್ವಾತಂತ್ರ್ಯೋತ್ತರ ಭಾರತದಲ್ಲಿ ನಡೆದ ಮತೀಯ ಗಲಭೆಗಳಿಗೆ, ಕೋಮು ಹಿಂಸಾಚಾರಗಳಿಗೆ ಲೆಕ್ಕವಿಲ್ಲ. 1947ರಲ್ಲಿ ನಡೆದ ಜಮ್ಮು ಹತ್ಯಾಕಾಂಡಗಳಿಂದ ಹಿಡಿದು ಇಂದಿಗೂ ನಡೆಯತ್ತಿರುವ ಕೋಮು ಸಂಘರ್ಷಗಳಿಗೆ ಒಂದು ತಾತ್ವಿಕ ಅಂತ್ಯ ಸಿಗದೇ ಇರುವುದು ದುರಾದೃಷ್ಟಕರ.
