ಕಝಾಕಿಸ್ತಾನದ ಶಿಮ್ಕೆಂಟ್ನಲ್ಲಿ ನಡೆದ ಏಷ್ಯನ್ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್ ಕಂಚಿನ ಪದಕ ಗೆದ್ದಿದ್ದಾರೆ. ಒಲಿಂಪಿಕ್ನಲ್ಲಿ ಮನು ಭಾಕರ್ ಎರಡು ಪದಕವನ್ನು ಗೆದ್ದಿದ್ದರು.
ಫೈನಲ್ ಪಂದ್ಯಕ್ಕೂ ಮುನ್ನ ಆಗಸ್ಟ್ 19ರ ಮಂಗಳವಾರ ನಡೆದ ಪಂದ್ಯದಲ್ಲಿ ಮನು ಭಾಕರ್ ತಮ್ಮ ಜೀವನದ ಒಂಬತ್ತನೇ ಪದಕವನ್ನು ಪಡೆದಿದ್ದಾರೆ. ಅವರ ಸಹಚರರಾದ ಸುರುಚಿ ಸಿಂಗ್ ಮತ್ತು ಪಾಲಕ್ ಫೈನಲ್ ತಲುಪುವಲ್ಲಿ ವಿಫಲವಾದರು.
ಇದನ್ನು ಓದಿದ್ದೀರಾ? ಭೀಕರ ಅಪಘಾತ; ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್ ಅಜ್ಜಿ, ಚಿಕ್ಕಪ್ಪ ಸಾವು
ಭಾಕರ್, ಸುರುಚಿ ಮತ್ತು ಪಾಲಕ್ ತ್ರಿವಳಿ ತಂಡವು ಒಟ್ಟು 1730 ಅಂಕಗಳೊಂದಿಗೆ ಸ್ಫರ್ಧೆಯಲ್ಲಿ ಮೂರನೇ ಸ್ಥಾನ ಗಳಿಸಿತು. ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ಚೀನಾದ ಕ್ವಿಯಾಂಕೆ ಮಾ 243.2 ಅಂಕಗಳೊಂದಿಗೆ ಚಿನ್ನದ ಪದಕವನ್ನು ಗೆದ್ದರೆ, ಕೊರಿಯಾದ ಜಿಯಿನ್ ಯಾಂಗ್ ಅವರು 241.6 ಅಂಕಗಳೊಂದಿಗೆ ಬೆಳ್ಳಿ ಪಡೆದರು.
ಭಾಕರ್ ಅರ್ಹತಾ ಸುತ್ತಿನಲ್ಲಿ 584 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದ ನಂತರ ಫೈನಲ್ ಪ್ರವೇಶಿಸಿದರು. ಈ ವರ್ಷ ಮೂರು ವಿಶ್ವಕಪ್ ಚಿನ್ನದ ಪದಕಗಳನ್ನು ಗೆದ್ದು ಏಷ್ಯನ್ ಚಾಂಪಿಯನ್ಶಿಪ್ಗೆ ಪ್ರವೇಶಿಸಿದ್ದ ಸುರುಚಿ, 574 ಅಂಕಗಳೊಂದಿಗೆ 12 ನೇ ಸ್ಥಾನ ಪಡೆದು ಫೈನಲ್ನಿಂದ ಹೊರಗುಳಿದರು. ಪಾಲಕ್ 573 ಅಂಕಗಳೊಂದಿಗೆ 17 ನೇ ಸ್ಥಾನ ಪಡೆದರು.
ಕಳೆದ ವರ್ಷ ಪ್ಯಾರಿಸ್ ಒಲಿಂಪಿಕ್ಸ್ನ ಎರಡು ಪದಕ ಗೆದ್ದ ಬಳಿಕ ಭಾಕರ್ ಸ್ಥಿರತೆ ಕಾಯ್ದುಕೊಂಡಿದ್ದಾರೆ. ಏಪ್ರಿಲ್ನಲ್ಲಿ ನಡೆದ ವಿಶ್ವಕಪ್ನ ಲಿಮಾ ಲೆಗ್ನಲ್ಲಿ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾಕರ್ ಬೆಳ್ಳಿ ಗೆದ್ದರು. ಜೂನ್ನಲ್ಲಿ ನಡೆದ ಮ್ಯೂನಿಚ್ ವಿಶ್ವಕಪ್ನಲ್ಲಿ ಭಾಕರ್ ಆರನೇ ಸ್ಥಾನ ಪಡೆದಿದ್ದು, ಪದಕ ಕೈ ತಪ್ಪಿತ್ತು.
