- ಪ್ರಗತಿಯಲ್ಲಿರುವ ಕಾಮಗಾರಿ ಕಾರ್ಯ ವೀಕ್ಷಿಸಿದ ಬೆಂಗಳೂರು ನಗರಾಭಿವೃದ್ಧಿ ಸಚಿವ
- ಬಡಾವಣೆಯ ಬಳಿ ಐ.ಟಿ. ಹಬ್ ಮಾಡಲು ಜಾಗ ಮೀಸಲಿಡುವಂತೆ ಆದೇಶ
ಬೆಂಗಳೂರು ನಗರಾಭಿವೃದ್ಧಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಯಲಹಂಕದಲ್ಲಿರುವ ಡಾ. ಕೆ. ಶಿವರಾಮ ಕಾರಂತ ಬಡಾವಣೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಪ್ರಗತಿಯಲ್ಲಿರುವ ಕಾಮಗಾರಿಯ ಕಾರ್ಯವನ್ನು ವೀಕ್ಷಿಸಿದ ಅವರು, ಕೆಲವೊಂದು ಮಾರ್ಪಾಡು ಮಾಡುವ ಬಗ್ಗೆ ಸಲಹೆಗಳನ್ನು ನೀಡಿದರು.
ಶಿವರಾಮ ಕಾರಂತ ಬಡಾವಣೆಯಲ್ಲಿ ಜಮೀನು ನೀಡಿರುವ ರೈತರು, ಭೂಮಾಲೀಕರುಗಳಿಗೆ ಆದ್ಯತೆಯ ಮೇರೆಗೆ ಪರಿಹಾರವನ್ನು ನೀಡುವ ಬಗ್ಗೆಯೂ ಸೂಚನೆ ನೀಡಿದರು.
ಬಡಾವಣೆಯಲ್ಲಿ ವಸತಿ ಬೆಳವಣಿಗೆಯೊಂದಿಗೆ ವಾಣಿಜ್ಯ ಚಟುವಟಿಕೆಗಳಿಗೂ ಅವಕಾಶವನ್ನು ಕಲ್ಪಿಸಿಕೊಡುವಂತೆ ಸೂಚಿಸಿದ ಅವರು, ಉದ್ಯಾನವನ, ನಾಗರಿಕ ಸೌಲಭ್ಯ ನಿವೇಶನ ಹಾಗೂ ಕ್ರೀಡಾಂಗಣಕ್ಕೆ ಮೀಸಲಿಟ್ಟಿರುವ ಸುಮಾರು 45 ಎಕರೆ ಜಾಗವು ವಾಣಿಜ್ಯ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ರಸ್ತೆ ಅಗಲೀಕರಣಗೊಳಿಸುವಂತೆ ಸೂಚಿಸಿದರು.
45 ಮೀಟರ್ ರಸ್ತೆ ಸಮೀಪ ಯಾರಿಗೂ ನಿವೇಶನವನ್ನು ಹಂಚಿಕೆ ಮಾಡದೇ, ವಾಣಿಜ್ಯ ಉದ್ದೇಶಕ್ಕೆ ಭೂಮಿ ಬಳಕೆ ಆಗಬೇಕು. ಅಲ್ಲದೇ, ಈ ಬಡಾವಣೆಯಲ್ಲಿ ಪೆರಿಫೆರಲ್ ರಿಂಗ್ ರಸ್ತೆ ಹಾದುಹೋಗುವ ಮಾರ್ಗವನ್ನು ಕೂಡ ಪರಿಶೀಲಿಸಿದರು.
ಬಡಾವಣೆಯ ಬಳಿ ಐ.ಟಿ. ಹಬ್ ಮಾಡಲು ಜಾಗವನ್ನು ಮೀಸಲಿಡುವಂತೆ ಉಪಮುಖ್ಯಮಂತ್ರಿ ಆದೇಶಿಸಿದರು.
ಈ ಸಂದರ್ಭದಲ್ಲಿ ಪ್ರಾಧಿಕಾರದ ಅಧ್ಯಕ್ಷ ರಾಕೇಶ್ ಸಿಂಗ್, ಆಯುಕ್ತ ಜಿ. ಕುಮಾರ ನಾಯಕ, ಡಿಸಿಎಂ ಕಾರ್ಯದರ್ಶಿ ರಾಜೇಂದ್ರ ಚೋಳನ್, ಅಭಿಯಂತರ ಸದಸ್ಯರಾದ ಶಾಂತರಾಜಣ್ಣ, ವೈ.ಬಿ. ಶಾಂತರಾಜು, ವಿಶೇಷ ಭೂಸ್ವಾಧೀನಾಧಿಕಾರಿಗಳಾದ ಕವಿತಾ ಯೋಗಪ್ಪನವರ್, ನಿಖಿತಾ ಎಂ. ಚಿನ್ನಸ್ವಾಮಿ, ಡಾ. ಹರೀಶ್ ನಾಯ್ಕ, ಎಸ್.ಎಂ. ಸಹನಾ, ಕೆ.ಎನ್. ಪ್ರವೀಣ್, ಡಾ. ನಂದಿನಿ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.